IPL 2020: ಐಪಿಎಲ್​ ಆರಂಭಕ್ಕೂ ಮೊದಲು ಕೊಹ್ಲಿ, ಧೋನಿ, ರೋಹಿತ್​ಗೆ ವಿಶೇಷ ಪರೀಕ್ಷೆ!

ಸೆಪ್ಟೆಂಬರ್​ 19ರಿಂದ ನವೆಂಬರ್​ 10ವರೆಗೆ ಯುನೈಟೆಡ್ ಅರಬ್​ ಎಮಿರೇಟ್ಸ್​ನಲ್ಲಿ ಐಪಿಎಲ್​ ನಡೆಯುತ್ತಿದೆ. ಐಪಿಎಲ್​ ಪಂದ್ಯ ನಡೆಯುವ ವೇಳೆ ನಾಡಾ ಕ್ರಿಕೆಟ್​ ಆಟಗಾರನ್ನು ಪರೀಕ್ಷೆ ಒಳಪಡಿಸಲಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

news18-kannada
Updated:August 25, 2020, 12:55 PM IST
IPL 2020: ಐಪಿಎಲ್​ ಆರಂಭಕ್ಕೂ ಮೊದಲು ಕೊಹ್ಲಿ, ಧೋನಿ, ರೋಹಿತ್​ಗೆ ವಿಶೇಷ ಪರೀಕ್ಷೆ!
ಕೊಹ್ಲಿ, ಧೋನಿ, ರೋಹಿತ್
  • Share this:
ಐಪಿಎಲ್​ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಮಧ್ಯೆ, ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ದಳ (ನಾಡಾ) ದುಬೈಗೆ ತೆರಳಲಿದ್ದು, ಸ್ಟಾರ್​ ಕ್ರಿಕೆಟರ್​ ವಿರಾಟ್​ ಕೊಹ್ಲಿ, ಎಂಎಸ್ ಧೋನಿ ಸೇರಿದಂತೆ 50ಕ್ಕೂ ಹೆಚ್ಚು ಕ್ರಿಕೆಟಿಗರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸೆಪ್ಟೆಂಬರ್​ 19ರಿಂದ ನವೆಂಬರ್​ 10ವರೆಗೆ ಯುನೈಟೆಡ್ ಅರಬ್​ ಎಮಿರೇಟ್ಸ್​ನಲ್ಲಿ ಐಪಿಎಲ್​ ನಡೆಯುತ್ತಿದೆ. ಐಪಿಎಲ್​ ಪಂದ್ಯ ನಡೆಯುವ ವೇಳೆ ನಾಡಾ ಕ್ರಿಕೆಟ್​ ಆಟಗಾರನ್ನು ಪರೀಕ್ಷೆ ಒಳಪಡಿಸಲಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ನಾಡಾದ ಪ್ರಧಾನ ನಿರ್ದೇಶಕ ನವೀನ್​ ಅಗರ್​ವಾಲ್​, ಟೂರ್ನಮೆಂಟ್​ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಕ್ರೀಡಾಪಟುಗಳ ರಕ್ತ ಹಾಗೂ ಮೂತ್ರದ ಸ್ಯಾಂಪಲ್​ಗಳನ್ನು ಪಡೆಯುವಂತೆ ನಾವು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಹಾಗೂ ಎಂಎಸ್​ ಧೋನಿ ಸೇರಿ ಪ್ರಮುಖರನ್ನು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಈಗಾಗಲೇ ದುಬೈನ ಶಾರ್ಜಾ ಮೈದಾನದಲ್ಲಿ ಒಂದು ಡೋಪ್ ಕಂಟ್ರೋಲ್ ಸ್ಟೇಷನ್ ಹಾಗೂ ಜಾಯೇದ್ ಮೈದಾನದಲ್ಲಿ 2 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇನ್ನು ಆಟಗಾರರು ಅಭ್ಯಾಸ ನಡೆಸುವ ವೇಳೆ ಮಾತ್ರ ಡೋಪಿಂಗ್​ ಟೆಸ್ಟ್ ನಡೆಸಲು ನಾಡಾ ತೀರ್ಮಾನಿಸಿದೆ ಎಂದು  ನವಿನ್​ ಅಗರ್ವಾಲ್​ ಹೇಳಿದ್ದಾರೆ..

ನಾಡಾದ ಒಟ್ಟು ಮೂರು ತಂಡಗಳು ಯುಎಇಗೆ ತೆರಳಲಿವೆ. ಸೆಪ್ಟೆಂಬರ್​ ಮೊದಲ ವಾರದಲ್ಲಿ ಮೊದಲ ತಂಡ, ಹಾಗೂ ಮುಂದಿನ ದಿನಗಳಲ್ಲಿ ಉಳಿದೆರಡು ತಂಡ ತೆರಳಲಿದೆ. ಹೀಗೆ ತೆರಳುವುದಕ್ಕೂ ಮೊದಲು ಎಲ್ಲರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಆಟಗಾರರು ಉದ್ದೀಪನ ಮದ್ದು ಸೇವನೆ ಮಾಡುವುದು ನಿಷೇಧವಾಗಿದೆ. ಒಂದೊಮ್ಮೆ ಈ ರೀತಿ ಉದ್ದೀಪನ ಮದ್ದು ಸೇವನೆ ಮಾಡಿದ್ದರೆ ಈ ಪರೀಕ್ಷೆ ವೇಳೆ ಸಿಕ್ಕಿ ಬೀಳುತ್ತಾರೆ. ಅಂಥವರ ಮೇಲೆ ನಿಷೇಧ ಹೇರಲಾಗುತ್ತದೆ.

2019ರ ಮೂರನೇ ತ್ರೈಮಾಸಿಕದಿಂದ ಬಿಸಿಸಿಐ, ವಾಡಾ ವ್ಯಾಪ್ತಿಗೆ ಒಳಪಟ್ಟಿದೆ. ಹೀಗಾಗಿ ಬಿಸಿಸಿಐ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸುವ ಕ್ರಿಕೆಟಿಗರ ರಕ್ತ ಮತ್ತು ಮೂತ್ರ ಪರೀಕ್ಷೆ ನಡೆಸುವ ಸಂಪೂರ್ಣ ಅಧಿರಾರವನ್ನು ನಾಡಾಗೆ ವಹಿಸಿಕೊಡಲಾಗಿದೆ.

ಇನ್ನೂ ಐಪಿಎಲ್​ನಲ್ಲಿ ಇದೇ ಮೊದಲ ಬಾರಿ ಡೋಪಿಂಗ್ ಮೇಲ್ವಿಚಾರಣೆಯನ್ನು ರಾಷ್ಟ್ರೀಯ ಉದ್ದೀಪನಾ ಮದ್ದು ನಿಗ್ರಹ ಘಟಕ ಹೊತ್ತಿದೆ. ಹಲವು ವರ್ಷಗಳಿಂದ ಬಿಸಿಸಿಐ, ನಾಡಾಗೆ ಸಹಿಹಾಕದ ಕಾರಣ, ತೀವ್ರ ಅಸಮಧಾನ ವ್ಯಕ್ತಪಡಿಸಿದ್ದ ಕೇಂದ್ರ ಕ್ರೀಡಾ ಸಚಿವಾಲಯ, ಉದ್ದೀಪನ ಮದ್ದು ಸೇವನಾ ಪರೀಕ್ಷೆ ನಡೆಸುವ ಅಧಿಕಾರವಿಲ್ಲ ಕ್ರಿಕೆಟ್ ನಿಯಂತ್ರಣ ಸಂಸ್ಥೆಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

ಆದರೆ, ಕಳೆದ ಮಾರ್ಚ್ ತಿಂಗಳಲ್ಲಿ,  ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧ್ಯಕ್ಷ ಶಶಾಂಕ್ ಮನೋಹರ್ ಅವರೊಂದಿಗೆ ಬಿಸಿಸಿಐ ಆಡಳಿತ ಸಮಿತಿಯ ಪದಾಧಿಕಾರಿಗಳು ಸಭೆ ನಡೆಸಿದ ನಂತರ ನಾಡಾದೊಂದಿಗೆ ಕಾರ್ಯನಿರ್ಹಿಸಲು ಸಮ್ಮತಿಸಿತ್ತು.
Published by: Rajesh Duggumane
First published: August 25, 2020, 12:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading