KXIP vs RR: ಹೊಸ ಹೀರೋ ರಾಹುಲ್ ತಿವಾಠಿಯಾ: ಕಿಂಗ್ಸ್ ಮುಂದೆ ರಾಯಲ್ಸ್ ದರ್ಬಾರ್

ಉಭಯ ತಂಡಗಳು 19 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ರಾಜಸ್ಥಾನ್ ರಾಯಲ್ಸ್ 10 ಬಾರಿ ಗೆದ್ದು ಬೀಗಿದ್ರೆ, ಕಿಂಗ್ ಇಲೆವೆನ್ ಪಂಜಾಬ್ 9 ಬಾರಿ ವಿಜಯಿಶಾಲಿಯಾಗಿದ್ದಾರೆ.

RR

RR

  • Share this:
    ಶಾರ್ಜಾ ಮೈದಾನದಲ್ಲಿ ನಡೆದ ಐಪಿಎಲ್​ನ 9ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ನೀಡಿದ ಬೃಹತ್ ಗುರಿ ಬೆನ್ನತ್ತಿ ರಾಜಸ್ಥಾನ್ ರಾಯಲ್ಸ್ ಹೊಸ ಇತಿಹಾಸ ಬರೆದಿದೆ.  ಪಂಜಾಬ್ ನೀಡಿದ 224 ಟಾರ್ಗೆಟ್​ನ್ನು 19.3 ಓವರ್​ನಲ್ಲಿ ಗುರಿ ಮುಟ್ಟುವ ಮೂಲಕ ಸ್ಮಿತ್ ಪಡೆ 4 ವಿಕೆಟ್​ಗಳ ವಿಜಯ ಸಾಧಿಸಿದೆ. ಇದರೊಂದಿಗೆ ಐಪಿಎಲ್​ನಲ್ಲಿ ಬೃಹತ್ ರನ್ ಚೇಸಿಂಗ್ ಮಾಡಿದ ಹೊಸ ದಾಖಲೆಯನ್ನು ರಾಜಸ್ಥಾನ್ ತನ್ನ ಹೆಸರಿಗೆ ಬರೆದುಕೊಂಡಿತು.

    ಇದಕ್ಕೂ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ರಾಜಸ್ಥಾನ್ ರಾಯಲ್ಸ್​ಗೆ ಗೆಲ್ಲಲು 224 ರನ್​ಗಳ ಕಠಿಣ ಗುರಿ ನೀಡಿತು. ಈ ಬೃಹತ್ ಮೊತ್ತವನ್ನು ಬೆನ್ನತಿದ ರಾಜಸ್ಥಾನ್ 3ನೇ ಓವರ್​ನಲ್ಲಿ ಆರಂಭಿಕ ಜೋಸ್ ಬಟ್ಲರ್​ (4)ನ್ನು ಕಳೆದುಕೊಂಡಿತು.

    ಬಳಿಕ ಜೊತೆಯಾದ ನಾಯಕ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಪಂಜಾಬ್ ಬೌಲರುಗಳ ವಿರುದ್ಧ ತಿರುಗಿ ಬಿದ್ದರು. ಫೋರ್-ಸಿಕ್ಸರ್​ಗಳ ಸುರಿಮಳೆಗೈದ ಈ ಜೋಡಿ ಮೊದಲ 4 ಓವರ್​ನಲ್ಲೇ ತಂಡದ ಮೊತ್ತವನ್ನು 40ರ ಗಡಿದಾಟಿಸಿದರು. ಅಲ್ಲದೆ ಪವರ್​ ಪ್ಲೇ ಮುಕ್ತಾಯದ ವೇಳೆಗೆ 58 ರನ್ ಬಾರಿಸುವ ಮೂಲಕ ಚೇಸಿಂಗ್​ಗೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

    ಅಲ್ಲದೆ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಟೀವ್ ಸ್ಮಿತ್ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಆದರೆ ನೀಶಮ್ ಎಸೆತದಲ್ಲಿ ಬಿಗ್ ಹಿಟ್​ಗೆ ಕೈಹಾಕಿ ವಿಕೆಟ್ ಒಪ್ಪಿಸಿ ಹೊರ ನಡೆದರು. ರಾಜಸ್ಥಾನ್ ನಾಯಕ ಈ ಸಿಡಿಲಬ್ಬರದ ಇನಿಂಗ್ಸ್​ನಲ್ಲಿ 7 ಭರ್ಜರಿ ಬೌಂಡರಿ ಹಾಗೂ 2 ಸೂಪರ್ ಸಿಕ್ಸ್​ ಮೂಡಿಬಂದಿದ್ದವು. ಅಲ್ಲದೆ ಸ್ಮಿತ್ ನಿರ್ಗಮಿಸುವ ವೇಳೆಗೆ ರಾಜಸ್ಥಾನ್ ರಾಯಲ್ಸ್ ತಂಡವು 9 ಓವರ್​ನಲ್ಲಿ 100 ರನ್ ಪೇರಿಸಿತ್ತು.

    ಇತ್ತ ಕ್ರೀಸ್​ನಲ್ಲಿದ್ದ ಸಂಜು ಸ್ಯಾಮ್ಸನ್ ಆರ್ಭಟಿಸಲು ಆರಂಭಿಸಿದರು. ಪರಿಣಾಮ ಕೇವಲ 27 ಎಸೆತಗಳಲ್ಲಿ ಹಾಫ್ ಸೆಂಚುರಿ ಮೂಡಿಬಂತು. ಈ ಸ್ಪೋಟಕ ಇನಿಂಗ್ಸ್​ನಲ್ಲಿ ಸ್ಯಾಮ್ಸನ್ ಬ್ಯಾಟ್​ನಿಂದ 3 ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಯಿತು.

    ಆದರೆ ಮತ್ತೊಂದೆಡೆ ಇದ್ದ ಯುವ ಬ್ಯಾಟ್ಸ್​ಮನ್ ರಾಹುಲ್ ತಿವಾಠಿಯಾ ರನ್​ಗಳಿಸಲು ಪರದಾಡಿದರು. ಆರಂಭದಲ್ಲಿ ಎದುರಿಸಿದ 19 ಎಸೆತಗಳಲ್ಲಿ ತಿವಾಠಿಯಾ ಗಳಿಸಿದ್ದು ಕೇವಲ 8 ರನ್​ಗಳು ಮಾತ್ರ. ಇತ್ತ ಮೇಲುಗೈ ಸಾಧಿಸಿದ ಪಂಜಾಬ್ ಬೌಲರುಗಳು ರಾಜಸ್ಥಾನ್ ಬ್ಯಾಟ್ಸ್​ಮನ್​ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಪರಿಣಾಮ 9 ಓವರ್​ಗಳಲ್ಲಿ 100 ರನ್​ಗಳಿಸಿದ್ದ ರಾಜಸ್ಥಾನ್ ತನ್ನ ಖಾತೆಗೆ 40 ರನ್​ ಸೇರಿಸಲು ತೆಗೆದುಕೊಂಡಿದ್ದು 5 ಓವರ್​ಗಳು.

    ಕೊನೆಯ 30 ಎಸೆತಗಳಲ್ಲಿ 84 ರನ್​ ಗುರಿ ಪಡೆದ ರಾಜಸ್ಥಾನ್​ ತಂಡಕ್ಕೆ ಸಂಜು ಸ್ಯಾಮ್ಸನ್​ ಆಸರೆಯಾದರು. ಮಾಕ್ಸ್​ವೆಲ್ ಎಸೆದ 16ನೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ 3 ಸಿಕ್ಸರ್ ಸಿಡಿಸಿದ ಸಂಜು, ಟಾರ್ಗೆಟ್​ನ್ನು 24 ಎಸೆತದಲ್ಲಿ 63 ರನ್​ಗೆ ತಂದು ನಿಲ್ಲಿಸಿದರು.

    ಆದರೆ  17ನೇ ಓವರ್​ನಲ್ಲಿ ಶಮಿ ಎಸೆದ ಬೌನ್ಸರ್ ಗುರುತಿಸಲು ಎಡವಿದ ಸ್ಯಾಮ್ಸನ್ ಕೀಪರ್​ ರಾಹುಲ್​ಗೆ ಕ್ಯಾಚ್ ನೀಡಿದರು. ಕೇವಲ 42 ಎಸೆತಗಳನ್ನು ಎದುರಿಸಿದ್ದ ಸಂಜು 7 ಭರ್ಜರಿ ಸಿಕ್ಸರ್​ ಹಾಗೂ 4 ಬೌಂಡರಿಗಳೊಂದಿಗೆ 85 ರನ್​ಗಳೊಂದಿಗೆ ತಮ್ಮ ಏಕಾಂಗಿ ಹೋರಾಟ ಅಂತ್ಯಗೊಳಿಸಿದರು.

    ಕೊನೆಯ ಮೂರು ಓವರ್​ಗಳಲ್ಲಿ 51 ರನ್​ಗಳ ಗುರಿ ಪಡೆದ ರಾಜಸ್ಥಾನ್​ ಪರ 18ನೇ ಓವರ್​ನ ಐದು ಸಿಕ್ಸರ್​ ಸಿಡಿಸಿ ತಿವಾಠಿಯಾ ರನ್-ಬಾಲ್ ಅಂತರವನ್ನು ಕಡಿಮೆಗೊಳಿಸಿದರು.  2 ಓವರ್​ಗಳಲ್ಲಿ 21 ರನ್ ಬೇಕಿದ್ದಾಗ ಶಮಿ ರಾಬಿನ್ ಉತ್ತಪ್ಪ ವಿಕೆಟ್ ಪಡೆಯುವ ಮೂಲಕ ಮತ್ತೊಂದು ಯಶಸ್ಸುತಂದುಕೊಟ್ಟರು. ಆದರೆ ನಂತರದ 2 ಎಸೆತಗಳಲ್ಲಿ ಜೋಫ್ರಾ ಆರ್ಚರ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದರು. ಅಲ್ಲದೆ ತಿವಾಠಿಯಾ ಕೂಡ ಒಂದು ಸಿಕ್ಸರ್ ಸಿಡಿಸುವ ಮೂಲಕ 30 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ನಂತರ ಎಸೆತದಲ್ಲಿ ಔಟ್ ಆದರೂ ಅದಾಗಲೇ ರಾಜಸ್ಥಾನ್ ತಂಡದ ಗೆಲುವಿನ ಸಮೀಪದಲ್ಲಿತ್ತು. ಕೊನೆಯ ಓವರ್​ನಲ್ಲಿ 2 ರನ್​ಗಳ ಗುರಿಯನ್ನು ಫೋರ್ ಮೂಲಕ ಗಳಿಸುವುದರೊಂದಿಗೆ ರಾಜಸ್ಥಾನ್ ರಾಯಲ್ಸ್ 4 ವಿಕೆಟ್​ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು.

    ಕೊನೆಯ ಮೂರು ಓವರ್​ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ತಿವಾಠಿಯಾ 7 ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಇಡೀ ಪಂದ್ಯದ ಗತಿಯನ್ನೇ ಬದಲಿಸಿ ಹೀರೋ ಎನಿಸಿಕೊಂಡರು. 42 ಎಸೆತಗಳಲ್ಲಿ 85 ರನ್ ಬಾರಿಸಿದ ಸಂಜು ಸ್ಯಾಮ್ಸನ್​ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.

    ಇದಕ್ಕೂ ಮುನ್ನ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಬೃಹತ್ ಮೊತ್ತ ಪೇರಿಸಿತು. ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಕಣಕ್ಕಿಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿದರು.

    2ನೇ ಓವರ್​ನಿಂದಲೇ ಬಿರುಸಿನ ಆಟಕ್ಕೆ ಮುಂದಾದ ಈ ಜೋಡಿ 4 ಓವರ್​ಗಳಾಗುವಷ್ಟರಲ್ಲಿ ತಂಡದ ಮೊತ್ತವನ್ನು 40 ಕ್ಕೆ ತಂದು ನಿಲ್ಲಿಸಿದ್ದರು. ಹಾಗೆಯೇ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಜೊತೆಯಾಟವಾಡಿದರು. ಅಲ್ಲದೆ ಪವರ್​ ಪ್ಲೇನಲ್ಲೇ 60 ರನ್​ಗಳನ್ನು ಕಲೆಹಾಕಿದರು. ಈ ವೇಳೆ ರಾಹುಲ್ ಬ್ಯಾಟ್​ನಿಂದ ಸಿಡಿದದ್ದು 4 ಬೌಂಡರಿಗಳಾದರೆ, ಮಯಾಂಕ್ 2 ಭರ್ಜರಿ ಸಿಕ್ಸರ್ ಜೊತೆ 3 ಫೋರ್ ಬಾರಿಸಿದ್ದರು.

    ಪವರ್​ಪ್ಲೇ ಬಳಿಕ ಕೂಡ ಆರ್ಭಟ ಮುಂದುವರೆಸಿದ ಮಯಾಂಕ್ 26 ಎಸೆತಗಳಲ್ಲಿ 54 ರನ್​ ಬಾರಿಸಿ ಐಪಿಎಲ್​ನಲ್ಲಿ ತಮ್ಮ 7ನೇ ಅರ್ಧಶತಕ ಪೂರೈಸಿದರು. ಅಷ್ಟೇ ಅಲ್ಲದೆ ತಮ್ಮ ಸ್ಪೋಟಕ ಆಟದೊಂದಿಗೆ ಕಿಂಗ್ಸ್​ ಇಲೆವೆನ್ ಮೊತ್ತವನ್ನು ಕೇವಲ 52 ಎಸೆತಗಳಲ್ಲಿ 100ರ ಗಡಿದಾಟಿಸಿದರು. ವೈಯುಕ್ತಿಕ ಸಾಧನೆಯೊಂದಿಗೆ ಮೊದಲ 10 ಓವರ್​ಗಳಲ್ಲಿ ಪಂಜಾಬ್ ಆರಂಭಿಕರು ತಂಡದ ಮೊತ್ತವನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ 110ಕ್ಕೆ ತಂದು ನಿಲ್ಲಿಸಿದರು.

    10 ಓವರ್ ಬಳಿಕ ರಾಹುಲ್ ಕೂಡ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಪರಿಣಾಮ 34 ಎಸೆತಗಳಲ್ಲಿ ಐಪಿಎಲ್​ನಲ್ಲಿ ತಮ್ಮ 17ನೇ ಅರ್ಧಶತಕ ಪೂರೈಸಿದರು. ಅಲ್ಲದೆ ಈ ಸ್ಪೋಟಕ ಜೊತೆಯಾಟದ ನೆರವಿನಿಂದ ಕಿಂಗ್ಸ್ ಇಲೆವೆನ್ 80 ಎಸೆತಗಳಲ್ಲಿ  150 ರನ್ ಗಳಿಸಿತು. ಇದರ ಬೆನ್ನಲ್ಲೇ 45 ಎಸೆತಗಳಲ್ಲಿ ಮಯಾಂಕ್ ಅಗರ್ವಾಲ್ ಐಪಿಎಲ್​ನ ಮೊದಲ ಶತಕ ಸಿಡಿಸಿದರು. ಈ ಭರ್ಜರಿ ಸೆಂಚುರಿಯಲ್ಲಿ ಕನ್ನಡಿಗನ ಬ್ಯಾಟ್​ನಿಂದ ಸಿಡಿದದ್ದು 7 ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿಗಳು.



    ಶತಕದ ಬಳಿಕ ವೈಯುಕ್ತಿಕ ಮೊತ್ತಕ್ಕೆ 6 ರನ್ ಸೇರ್ಪಡೆಗೊಳಿಸಿದ ಅಗರ್ವಾಲ್ ಟಾಮ್ ಕರ್ರನ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಹೊರ ನಡೆದರು. ಈ ವೇಳೆಗಾಗಲೇ ಪಂಜಾಬ್ ಮೊದಲ ವಿಕೆಟ್​ಗೆ 183 ರನ್​ ಪೇರಿಸಿತ್ತು. ಜೊತೆಗಾರ ಔಟ್ ಆದ ಬೆನ್ನಲ್ಲೇ ನಾಯಕ ರಾಹುಲ್ ಕೂಡ 54 ಎಸೆತಗಳಲ್ಲಿ 69 ರನ್ ಬಾರಿಸಿ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ರಜಪೂತ್​ಗೆ ವಿಕೆಟ್​ ಒಪ್ಪಿಸುವ ಮುನ್ನ ರಾಹುಲ್ 1 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಬಾರಿಸಿದ್ದರು.

    ಕೊನೆಯ ಎರಡು ಓವರ್​ಗಳಿರುವಾಗ ಬ್ಯಾಟ್ ಬೀಸಿದ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ನಿಕೋಲಸ್ ಪೂರನ್  29 ರನ್​ಗಳನ್ನು ಕಲೆಹಾಕುವ ಮೂಲಕ ತಂಡದ ಮೊತ್ತವನ್ನು 20 ಓವರ್​ಗಳಲ್ಲಿ 223 ರನ್​ಗೆ ತಂದು ನಿಲ್ಲಿಸಿದರು.

    224 ರನ್​ಗಳ ಬೃಹತ್ ಗುರಿಯನ್ನು ಬೆನ್ನತ್ತುವ ಮೂಲಕ ರಾಜಸ್ಥಾನ್ ರಾಯಲ್ಸ್ ಆಡಿರುವ 2 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಿದೆ.

    POINTS TABLE:

    SCHEDULE TIME TABLE:

    ORANGE CAP:

    PURPLE CAP:

    RESULT DATA:

    MOST SIXES:

    KL Rahul: ಕನ್ನಡಿಗನ ಕಮಾಲ್: ಸಿಡಿಲಬ್ಬರದ ಒಂದು ಸೆಂಚುರಿಗೆ 8 ದಾಖಲೆಗಳು ಉಡೀಸ್..!
    Published by:zahir
    First published: