IPL 2019, RR vs CSK: ರೋಚಕ ಹೋರಾಟದಲ್ಲಿ ಸೂಪರ್​ ಕಿಂಗ್ಸ್​ ಮುಂದೆ ಮಂಡಿಯೂರಿದ ರಾಯಲ್ಸ್

ಅಂತಿಮ 5 ಓವರ್‌ಗಳಲ್ಲಿ ಚೆನ್ನೈ ಗೆಲುವಿಗೆ 51 ರನ್ ಅವಶ್ಯಕತೆಯಿತ್ತು. ಇದೇ ವೇಳೆ ವಿಕೆಟ್​ ಒಪ್ಪಿಸಿ ಅಂಬಟಿ ರಾಯುಡು(57) ಹೊರ ನಡೆದಾಗ ವಿಜಯಲಕ್ಷ್ಮಿ ಮತ್ತೊಮ್ಮೆ ರಾಜಸ್ಥಾನತ್ತ ವಾಲಿತ್ತು.

CSk

CSk

  • News18
  • Last Updated :
  • Share this:
ಐಪಿಎಲ್​ 2019ನಲ್ಲಿ ಗುರುವಾರ ನಡೆದ 25ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ ನಾಲ್ಕು ವಿಕೆಟ್​ಗಳ ರೋಚಕ ಗೆಲುವು ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್​ ರಾಜಸ್ಥಾನ ರಾಯಲ್ಸ್​ ತಂಡಕ್ಕೆ ಬ್ಯಾಟಿಂಗ್​ ಅವಕಾಶ ನೀಡಿತು. ಜೋಸ್ ಬಟ್ಲರ್ (23) ಹಾಗೂ ನಾಯಕ ಅಜಿಂಕ್ಯ ರಹಾನೆ(14) ಬಿರುಸಿನ ಆರಂಭ ಒದಗಿಸಿದರೂ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

4.4 ಓವರ್‌ಗಳಲ್ಲೇ ರಾಜಸ್ಥಾನದ ಮೊತ್ತ 50ರ ಗಡಿ ದಾಟಿದರೂ, ಮತ್ತೊಂದೆಡೆ ಸಂಜು ಸ್ಯಾಮ್ಸನ್ (6) ರಾಹುಲ್ ತ್ರಿಪಾಠಿ (10) ಸಹ ವಿಕೆಟ್ ಒಪ್ಪಿಸಿ ಹೊರ ನಡೆದು ಆಘಾತ ಮೂಡಿಸಿದರು. 10 ಓವರ್​ನಲ್ಲಿ ವೇಳೆಗೆ ರಾಜಸ್ಥಾನ್ ಸ್ಕೋರ್ 74/4 ತಲುಪಿತ್ತು. ಈ ಮೊತ್ತಕ್ಕೆ 4 ರನ್​ ಪೇರಿಸುವಷ್ಟರಲ್ಲಿ ಸ್ಟೀವ್ ಸ್ಮಿತ್ (15) ಔಟಾಗುವುದರೊಂದಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಸ್ಮಿತ್ ವಿಕೆಟ್ ಉರುಳಿಸುವ ಮೂಲಕ ಐಪಿಎಲ್​ನಲ್ಲಿ 100 ವಿಕೆಟ್​ ಪಡೆದವರ ಕ್ಲಬ್​ಗೆ ರವೀಂದ್ರ ಜಡೇಜ ಸೇರಿಕೊಂಡರು.

ಇದೇ ಮೊದಲ ಬಾರಿ ಐಪಿಎಲ್ ಆಡುತ್ತಿರುವ ರಿಯಾನ್ ಪರಾಗ್ (16) ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿಸುವಲ್ಲಿ ಎಡವಿದರು. ಅಂತಿಮ ಓವರ್​ಗಳಲ್ಲಿ ಬೆನ್ ಸ್ಟೋಕ್ಸ್ (28), ಜೋಫ್ರಾ ಆರ್ಚರ್ (13) ಹಾಗೂ ಶ್ರೇಯಸ್ ಗೋಪಾಲ್ (19) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡದ ಮೊತ್ತವನ್ನು 151ಕ್ಕೆ ತಂದು ನಿಲ್ಲಿಸಿದರು. ಅದರಲ್ಲೂ ಕೊನೆಯ ಓವರ್​ನಲ್ಲಿ ಸೂಪರ್ ಬ್ಯಾಟಿಂಗ್ ನಡೆಸಿದ ಕನ್ನಡಿಗ ಶ್ರೇಯಸ್ 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್​ಗೆ ಸವಾಲಿನ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಚೆನ್ನೈ ಪರ ದೀಪಕ್ ಚಾಹರ್, ರವೀಂದ್ರ ಜಡೇಜಾ ಹಾಗೂ ಶಾರ್ದುಲ್ ಠಾಕೂರ್ ತಲಾ ಎರಡು ವಿಕೆಟುಗಳನ್ನು ಕಬಳಿಸಿ ಮಿಂಚಿದರು.

152 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ತಂಡದ ಆರಂಭ ಸಹ ಉತ್ತಮವಾಗಿರಲಿಲ್ಲ. ಮೊದಲ ಓವರ್​ನಲ್ಲಿ ಶೇನ್​ ವಾಟ್ಸನ್ ಸೊನ್ನೆ ಸುತ್ತುವ ಮೂಲಕ ಆಘಾತ ನೀಡಿದರು. ಇದರ ಬೆನ್ನಲ್ಲೇ ಸುರೇಶ್ ರೈನಾ(4) ತಮ್ಮದೇ ತಪ್ಪಿನಿಂದ ರನೌಟ್​ಗೆ ಬಲಿಯಾದರು. ತಂಡದ ಮೊತ್ತ 15 ಆಗುವಷ್ಟರಲ್ಲಿ ಫಫ್ ಡು ಪ್ಲೆಸಿಸ್ (7) ಸಹ ಔಟಾಗುವ ಮೂಲಕ ಸೂಪರ್ ಕಿಂಗ್ಸ್​ ಸಂಕಷ್ಟಕ್ಕೆ ಸಿಲುಕುವಂತಾಯಿತು. ಪವರ್ ಪ್ಲೇಯ ಕೊನೆಯ ಎಸೆತದಲ್ಲಿ ಕೇದರ್ ಜಾಧವ್(1) ಬಾರಿಸಿದ ಚೆಂಡನ್ನು ಬೆನ್​ ಸ್ಟೋಕ್ಸ್​ ಸೂಪರ್ ಡೈವ್​ನಲ್ಲಿ ಹಿಡಿದು ಚೆನ್ನೈಗೆ ಮತ್ತೊಂದು ಶಾಕ್ ನೀಡಿದರು.

ಈ ಹಂತದಲ್ಲಿ ಜತೆಗೂಡಿದ ಅಂಬಟಿ ರಾಯುಡು ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಎಚ್ಚರಿಕೆಯಿಂದ ಮುನ್ನಡೆಸಿದರು. 10 ಓವರ್‌ಗಳ ಅಂತ್ಯಕ್ಕೆ ಚೆನ್ನೈ ಸ್ಕೋರ್ 4 ವಿಕೆಟ್ ನಷ್ಟಕ್ಕೆ ಕೇವಲ 50 ಮಾತ್ರ. ಮೊದಲ ಹತ್ತು ಓವರ್​ನಲ್ಲಿ ಪಂದ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ ರಾಜಸ್ಥಾನ್​ ಬೌಲರ್​ಗಳ ಎದುರಿಸುವಲ್ಲಿ ಧೋನಿ ಹಾಗೂ ಜಾಧವ್ ಎಚ್ಚರಿಕೆ ವಹಿಸಿದರು. ಅದರಂತೆ ನಿಧಾನಗತಿಯಲ್ಲಿ ಇನಿಂಗ್ಸ್​ ಕಟ್ಟಿದ ಇಬ್ಬರು ಆಟಗಾರರು ಅರ್ಧಶತಕ ಸಿಡಿಸಿ ಮಿಂಚಿದರು.

ಅಂತಿಮ 5 ಓವರ್‌ಗಳಲ್ಲಿ ಚೆನ್ನೈ ಗೆಲುವಿಗೆ 51 ರನ್ ಅವಶ್ಯಕತೆಯಿತ್ತು. ಇದೇ ವೇಳೆ ವಿಕೆಟ್​ ಒಪ್ಪಿಸಿ ಅಂಬಟಿ ರಾಯುಡು(57) ಹೊರ ನಡೆದಾಗ ವಿಜಯಲಕ್ಷ್ಮಿ ಮತ್ತೊಮ್ಮೆ ರಾಜಸ್ಥಾನತ್ತ ವಾಲಿತ್ತು. ಅತ್ತ ಕಡೆ ಜಾಧವ್ ಜತೆಯಲ್ಲಿ 95 ರನ್​ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದ ಧೋನಿ ತಂಡವನ್ನು ಗುರಿ ಮುಟ್ಟಿಸುವ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡರು.

ಕೊನೆಯ ಓವರ್​ನಲ್ಲಿ ಚೆನ್ನೈಗೆ ಗೆಲ್ಲಲು 18 ರನ್​ಗಳ ಅವಶ್ಯಕತೆಯಿತ್ತು. ಈ ವೇಳೆ ಕ್ರೀಸ್​ನಲ್ಲಿದ್ದ ರವೀಂದ್ರ ಜಡೇಜ ಬೆನ್​ ಸ್ಟೋಕ್ಸ್​ ಮೊದಲ ಎಸೆತವನ್ನು ಅದ್ಭುತವಾಗಿ ಪ್ರೇಕ್ಷಕರತ್ತ ತಲುಪಿಸುವ ಮೂಲಕ ಮಿಂಚಿನ ಸಂಚಲನ ಸೃಷ್ಟಿಸಿದರು. ನೋಬಾಲ್ ಆಗಿದ್ದ ಎರಡನೇ ಎಸೆತದಲ್ಲಿ ಫ್ರಿಹಿಟ್ ಲಭಿಸಿದರೂ ಅದನ್ನು ಉಪಯೋಗಿಸಿಕೊಳ್ಳುವಲ್ಲಿ ಧೋನಿ ಎಡವಿದರು.

ಸ್ಟೋಕ್ಸ್​ ಎಸೆದ 3ನೇ ಸ್ಟ್ರೈಕಿಂಗ್ ಬಾಲ್​ನಲ್ಲಿ ಮಹೇಂದ್ರ ಸಿಂಗ್ ಧೋನಿ (58) ಕ್ಲೀನ್ ಬೌಲ್ಡ್​ ಆಗಿ ಪೆವಿಲಿಯನ್​ನತ್ತ ಹೆಜ್ಜೆ ಹಾಕಿದಾಗ ಸೂಪರ್ ಕಿಂಗ್ಸ್ ಅಭಿಮಾನಿಗಳ ಮುಖದಲ್ಲಿ ನಿರಾಸೆ ಮನೆಮಾಡಿತ್ತು. ಕೊನೆಯ ಎಸೆತದಲ್ಲಿ 3 ರನ್​ಗಳು ಬೇಕಿದ್ದಾಗ ಕ್ರೀಸ್​ನಲ್ಲಿದ್ದದ್ದು ಸ್ಪಿನ್ನರ್ ಸ್ಯಾಂಟ್ನರ್. ಇನ್ನೇನು ರಾಜಸ್ಥಾನ್ ರಾಯಲ್ಸ್ ವಿಜಯ ಪತಾಕೆಯನ್ನು ಹಾರಿಸಲಿದೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಬೆನ್​ಸ್ಟೋಕ್ಸ್​ ಎಸೆದ ಅಂತಿಮ ಬಾಲ್​ ಅನ್ನು ಸಿಕ್ಸರ್​ ಅಟ್ಟುವ ಮೂಲಕ ಸ್ಯಾಂಟ್ನರ್ ಸೂಪರ್​ ಕಿಂಗ್ಸ್​ ಪಾಲಿನ ಗೆಲುವಿನ ರೂವಾರಿಯಾದರು. 3 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ ಉಪಯುಕ್ತ 58 ರನ್ ಬಾರಿಸಿದ್ದ ಮಹೇಂದ್ರ ಸಿಂಗ್ ಧೋನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.

First published: