KKR vs RR: ಮಿಂಚಿದ 17 ವರ್ಷದ ಪೋರ ಪರಾಗ್; ರಾಜಸ್ಥಾನ್ ಪ್ಲೇ ಆಫ್ ಕನಸು ಜೀವಂತ!

ಈ ಗೆಲುವಿನೊಂದಿಗೆ ರಾಜಸ್ಥಾನ್ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದ್ದು, ಕೆಕೆಆರ್​​​ ಸತತ ಆರು ಸೋಲಿನೊಂದಿಗೆ ಸಂಕಷ್ಟದ ಸ್ಥಿತಿಯಲ್ಲಿದೆ.

zahir | news18
Updated:April 26, 2019, 12:13 AM IST
KKR vs RR: ಮಿಂಚಿದ 17 ವರ್ಷದ ಪೋರ ಪರಾಗ್; ರಾಜಸ್ಥಾನ್ ಪ್ಲೇ ಆಫ್ ಕನಸು ಜೀವಂತ!
ರಿಯಾನ್ ಪರಾಗ್
zahir | news18
Updated: April 26, 2019, 12:13 AM IST
ಕೋಲ್ಕತ್ತಾ (ಏ. 26): ಇಲ್ಲಿನ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡ 3 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿದೆ. ನಾಯಕ ದಿನೇಶ್ ಕಾರ್ತಿಕ್​​ರ ಅಜೇಯ 97 ರನ್​ಗಳ ಹೊರತಾಗಿಯು ಕೆಕೆಆರ್​ ಸೋಲುಂಡಿದ್ದು, ಪ್ಲೇ ಆಫ್​ ಹಾದಿ ಕಠಿಣವಾಗಿದೆ.

ಕೋಲ್ಕತ್ತಾ ನೀಡಿದ್ದ 176 ರನ್​ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ಸ್ಫೋಟಕ ಆರಂಭ ಪಡೆದಿದ್ದು ಬಿಟ್ಟರೆ, ಬಳಿಕ ದಿಢೀರ್ ಕುಸಿತ ಕಂಡಿತು. ಓಪನರ್​ಗಳಾಗಿ ಕಣಕ್ಕಿಳಿದ ಅಜಿಂಕ್ಯ ರಹಾನೆ ಹಾಗೂ ಸಂಜು ಸ್ಯಾಮ್ಸನ್ ಬಿರುಸಿನ ಆಟ ಪ್ರದರ್ಶಿಸಿ 5 ಓವರ್ ಆಗುವ ಹೊತ್ತಿಗೆನೆ ತಂಡದ ಮೊತ್ತವನ್ನು 50ಕ್ಕೆ ತಂದಿಟ್ಟರು. ಈ ಸಂದರ್ಭ 6ನೇ ಓವರ್ ಬೌಲಿಂಗ್ ಮಾಡಲು ಬಂದ ನರೈನ್ ಮೊದಲನೆಯದಾಗಿ 34 ರನ್​ ಗಳಿಸಿದ್ದ ರಹಾನೆಯನ್ನು ಪೆವಿಲಿಯನ್​​ಗೆ ಅಟ್ಟಿದರೆ, ತನ್ನ 2ನೇ ಓವರ್​ನಲ್ಲಿ ನಾಯಕ ಅಪಾಯಕಾರಿ ಬ್ಯಾಟ್ಸ್​ಮನ್​ ಸ್ಟೀವ್ ಸ್ಮಿತ್​(2) ರನ್ನು ಬೌಲ್ಡ್​ ಮಾಡುವಲ್ಲಿ ಯಶಸ್ವಿಯಾದರು. ಇದರ ಮಧ್ಯೆ ಚಾವ್ಲಾ 22 ರನ್ ಬಾರಿಸಿದ್ದ ಸ್ಯಾಮ್ಸನ್​​ರನ್ನು ನಿರ್ಗಮಿಸಿ ಆರ್​ಆರ್​ ಸ್ಫೋಟಕ ಆಟಕ್ಕೆ ಕಡಿವಾಣ ಹಾಕಿದರು.

ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ಬೆನ್ ಸ್ಟೋಕ್ಸ್​(11), ಸ್ಟುವರ್ಟ್​ ಬಿನ್ನಿ(11), ಶ್ರೇಯಸ್ ಗೋಪಾಲ್(18) ಬೇಗನೆ ನಿರ್ಗಮಿಸಿದರು. ಹೀಗೆ ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ, ಎಚ್ಚರಿಕೆಯಿಂದ ರನ್ ಕಲೆಹಾಕುತ್ತಿದ್ದ 17 ವರ್ಷದ ಪೋರ ರಿಯಾನ್ ಪರಾಗ್ 7ನೇ ವಿಕೆಟ್​ಗೆ ಜೋಫ್ರಾ ಆರ್ಚೆರ್​​ ಜೊತೆಗೂಡಿ ಸಿಡಿಯಲಾರಂಭಿಸಿದರು. ಕೊನೆ ಹಂತದಲ್ಲಿ ಈ ಜೋಡಿ ಭರ್ಜರಿ ಆಟ ಪ್ರದರ್ಶಿಸಿತು. ಅದರಲ್ಲು ಪ್ರಮುಖ ಬೌಂಡರಿ-ಸಿಕ್ಸ್​ ಸಿಡಿಸಿ ಪರಾಗ್ ಮಿಂಚಿದರು.

IPL 2019 Live Score, KKR vs RR: ಆರ್​ಆರ್​ಗೆ ಗೆಲುವು ತಂದಿಟ್ಟ ಪರಾಗ್-ಆರ್ಚೆರ್; 3 ವಿಕೆಟ್​ಗಳ ಜಯ

ಇನ್ನೇನು ಈ ಜೋಡಿಯೇ ತಂಡಕ್ಕೆ ಗೆಲುವು ತಂದುಕೊಡುತ್ತೆ ಎಂಬೊತ್ತಿಗೆ ತಿಳಿಯದೆ ತನ್ನ ಬ್ಯಾಟ್ ಅನ್ನು ವಿಕೆಟ್​ಗೆ ತಾಗಿಸಿ ಹಿಟ್ ವಿಕೆಟ್ ಆಗುವ ಮೂಲಕ ಪರಾಗ್ ಔಟ್ ಆದರು. 31 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸ್​ ಸಿಡಿಸಿ 47 ರನ್​ಗೆ 18.5 ಓವರ್​ಗೆ ಪರಾಗ್ ತಮ್ಮ ಅಮೂಲ್ಯ ಇನ್ನಿಂಗ್ಸ್​ ಕೊನೆಗೊಳಿಸಿದರು. ಇದರ ಪರಿಣಾಮ ಕೊನೆಯ ಓವರ್​ನಲ್ಲಿ ಆರ್​ ಆರ್​ ಗೆಲುವಿಗೆ 9 ರನ್​ಗಳ ಅವಶ್ಯಕತೆಯಿತ್ತು. ಕ್ರೀಸ್​ನಲ್ಲಿದ್ದ ಆರ್ಚೆರ್​​ ಅವರು 20ನೇ ಓವರ್​ನ ಪ್ರಸಿದ್ಧ್​​ ಕೃಷ್ಣರ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರೆ, ಎರಡನೇ ಎಸೆತದಲ್ಲಿ ಚೆಂಡನ್ನು ಸಿಕ್ಸ್​ಗೆ ಅಟ್ಟಿದ ಮೂಲಕ ತಂಡಕ್ಕೆ ಗೆಲುವು ತಂದಿಟ್ಟರು. ಈ ಮೂಲಕ 19.2 ಓವರ್​ಗಳಲ್ಲೇ ರಾಜಸ್ಥಾನ್ 7 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕುವ ಮೂಲಕ 3 ವಿಕೆಟ್​ಗಳ ಜಯ ಸಾಧಿಸಿತು. ಕೆಕೆಆರ್ ಪರ ಚಾವ್ಲಾ 3 ವಿಕೆಟ್ ಕಿತ್ತರೆ, ನರೈನ್ 2, ಕೃಷ್ಣ ಹಾಗೂ ರಸೆಲ್ ತಲಾ 1 ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ರಾಜಸ್ಥಾನ್ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದ್ದು, ಕೆಕೆಆರ್​​​ ಸತತ ಆರು ಸೋಲಿನೊಂದಿಗೆ ಸಂಕಷ್ಟದ ಸ್ಥಿತಿಯಲ್ಲಿದೆ. ಉತ್ತಮ ಬೌಲಿಂಗ್ ದಾಳಿ ನಡೆಸಿದ ವರುಣ್ ಆರುಣ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ ಇಳಿದ ಕೆಕೆಆರ್ ತಂಡ ಆರಂಭ ಉತ್ತಮವಾಗಿರಲಿಲ್ಲ. ಕ್ರಿಸ್ ಲಿನ್ ಖಾತೆ ತೆರೆಯದೆ ಮೂರನೇ ಎಸೆತದಲ್ಲೇ ಕ್ಲೀನ್ ಬೌಲ್ಡ್​ ಆಗಿ ಮರಳಿದರು.ಇದರ ಬೆನ್ನಲ್ಲೇ ಉದಯೋನ್ಮುಖ ಆಟಗಾರ ಶುಭಮನ್ ಗಿಲ್ (14) ರನ್ನು ಬೌಲ್ಡ್ ಮಾಡುವ ಮೂಲಕ 2ನೇ ಯಶಸ್ಸು ತಂದುಕೊಡುವಲ್ಲಿ ವರುಣ್ ಆರೋನ್ ಯಶಸ್ವಿಯಾದರು.

ಇನ್ನು ಕನ್ನಡಿಗ ಶ್ರೇಯಸ್ ಗೋಪಾಲ್ ಸ್ಪಿನ್ ಮುಂದೆ ನಿತೀಶ್ ರಾಣಾ (21) ಕೂಡ ಮಂಡಿಯೂರಿದರು. ಪರಿಣಾಮ 50 ರನ್​ ಆಗುವಷ್ಟರಲ್ಲಿ ಪ್ರಮುಖ ಮೂರು ವಿಕೆಟುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ದಿನೇಶ್ ಕಾರ್ತಿಕ್ ಹಾಗೂ ಸುನಿಲ್ ನರೈನ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆದರೆ ಹೊಂದಾಣಿಕೆಯ ಓಟದ ಕೊರತೆಯಿಂದಾಗಿ ನರೈನ್ (11) ರನೌಟ್‌ಗೆ ಬಲಿಯಾಗಿ ನಿರಾಸೆಯಿಂದ ಪೆವಿಲಿಯನತ್ತ ಮುಖ ಮಾಡಿದರು.

ಇನ್ನೊಂದೆಡೆ ಏಕಾಂಗಿಯಾಗಿ ಇನಿಂಗ್ಸ್​ ಕಟ್ಟಿದ ಕಾರ್ತಿಕ್ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ವೇಳೆ ನಾಯಕನಿಗೆ ಸಾಥ್ ನೀಡಿದ ಆ್ಯಂಡ್ರೆ ರಸೆಲ್ ಒಂದಷ್ಟು ಭರ್ಜರಿ ಶಾಟ್​ಗಳನ್ನು ಬಾರಿಸಿದರೂ 14 ರನ್ನನ್ನು ದಾಟಿ ಮುಂದೆ ಹೋಗಲಿಲ್ಲ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರಸೆಲ್ ರನ್ನು ಕಟ್ಟಿ ಹಾಕುವಲ್ಲಿ ರಾಜಸ್ಥಾನ್ ಬೌಲರ್​ಗಳು ಯಶಸ್ವಿಯಾದರು.

ಅಂತಿಮ ಓವರ್​ವರೆಗೂ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿದ ದಿನೇಶ್ ಕಾರ್ತಿಕ್ 9 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಸಿಡಿಸಿದ್ದರು. ಕೇವಲ 50 ಎಸೆತಗಳಲ್ಲಿ ಅಜೇಯ 97 ರನ್​ಗಳನ್ನು ಬಾರಿಸಿದ ಕಾರ್ತಿಕ್ ತಂಡದ ಮೊತ್ತವನ್ನು ಆರು ವಿಕೆಟ್ ನಷ್ಟಕ್ಕೆ 175 ಕ್ಕೆ ತಂದು ನಿಲ್ಲಿಸಿದರು. ಇನ್ನು ರಾಜಸ್ಥಾನ್ ಪರ ಉತ್ತಮ ದಾಳಿ ನಡೆಸಿದ ವರುಣ್ ಆರೋನ್ 4 ಓವರ್​ನಲ್ಲಿ 20 ರನ್​ ನೀಡಿ 2 ವಿಕೆಟ್​ ಕಬಳಿಸಿ ಗಮನ ಸೆಳೆದರು.

 

First published:April 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ