ವ್ಯರ್ಥವಾಗದ ವಿರಾಟ್ ಹೋರಾಟ; ರಸೆಲ್ ಆರ್ಭಟದ ಮಧ್ಯೆ ಕೊನೆಗೂ ಗೆದ್ದು ಬೀಗಿದ ಆರ್​ಸಿಬಿ

ಆಂಡ್ರೆ ರಸೆಲ್ ಅವರು ರಾಣ ಜೊತೆಗೂಡಿ ಗೆಲುವಿಗಾಗಿ ಹೋರಾಟ ನಡೆಸಿದರು. ಎಂದಿನಂತೆ ತನ್ನ ಸ್ಪೋಟಕ ಆಟದ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿದ ರಸೆಲ್ ಆರ್​ಸಿಬಿ ಬೌಲರ್​ಗಳ ಬೆವರಿಳಿಸಿ ಬಿಟ್ಟರು.

Vinay Bhat | news18
Updated:April 20, 2019, 12:07 AM IST
ವ್ಯರ್ಥವಾಗದ ವಿರಾಟ್ ಹೋರಾಟ; ರಸೆಲ್ ಆರ್ಭಟದ ಮಧ್ಯೆ ಕೊನೆಗೂ ಗೆದ್ದು ಬೀಗಿದ ಆರ್​ಸಿಬಿ
ವಿರಾಟ್ ಕೊಹ್ಲಿ
Vinay Bhat | news18
Updated: April 20, 2019, 12:07 AM IST
ಕೋಲ್ಕತ್ತಾ (ಏ. 19): ಇಲ್ಲಿನ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ರಾಯಲ್ ಚಾಲೆಂಜರ್ಸ್​ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡ ತವರಿನಲ್ಲೇ ಮುಖಭಂಗ ಅನುಭವಿಸಿದೆ. ರಸೆಲ್​​ ಆರ್ಭಟದ ಮಧ್ಯೆಯು ಆರ್​ಸಿಬಿ 10 ರನ್​ಗಳ ಗೆಲುವು ಕಾಣುವಲ್ಲಿ ಯಶಸ್ವಿಯಾಗಿದ್ದು ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ಉತ್ತಮ ಆರಂಭ ಸಿಗಲಿಲ್ಲ. ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್​ ಆರಂಭಿಸಿದ ಪಾರ್ಥಿವ್ ಪಟೇಲ್ ಕೇವಲ 11 ರನ್​ಗೆ ನಿರ್ಗಮಿಸಿದರೆ, ಅಕ್ಷದೀಪ್ ನಾಥ್ 13 ರನ್​ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ಕೊಹ್ಲಿ ಜೊತೆಯಾದ ಮೊಯೀನ್ ಅಲಿ ಭರ್ಜರಿ ಆಟ ಪ್ರದರ್ಶಿಸಿದರು.

ಕ್ರೀಸ್​ಗೆ ಇಳಿದಾಗಿನಿಂದಲೇ ಹೊಡಿಬಡಿ ಆಟಕ್ಕೆ ಮುಂದಾದ ಅಲಿ ಕೆಕೆಆರ್ ಬೌಲರ್​ಗಳನ್ನು ಮನಸೋ ಇಚ್ಚೆ ದಂಡಿಸಿದರು. ಅದರಲ್ಲು ಕುಲ್ದೀಪ್​​ರ ಒಂದು ಓವರ್​​ನಲ್ಲಿ 27 ರನ್ ಚಚ್ಚಿ ಆರ್​ಸಿಬಿ ತಂಡದ ರನ್ ಗರಿಯನ್ನು ಏರಿಸಿದರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದ ಈ ಜೋಡಿ 90 ರನ್​ಗಳ ಬೊಂಬಾಟ್ ಜೊತೆಯಾಟ ನೀಡಿತು. ಕೊನೆ ಹಂತದಲ್ಲಿ ಸಿಕ್ಸ್​ ಸಿಡಿಸಲೋಗಿ ಅಲಿ ಔಟ್ ಆದರು. ಕೇವಲ 28 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸ್​ ಸಿಡಿಸಿ 66 ರನ್ ಬಾರಿಸಿ ಅಲಿ ಬ್ಯಾಟ್ ಕೆಳಗಿಟ್ಟರು.

ಕೊನೆಯ 5 ಓವರ್​ ಬಾಕಿರುವಾಗ ಸ್ಟಾಯಿನಿಸ್ ಜೊತೆಗೂಡಿ ಕೊಹ್ಲಿ ವಿರಾಟ ರೂಪ ಪ್ರದರ್ಶಿಸಿದರು. ಬೌಂಡರಿ-ಸಿಕ್ಸರ್​​ಗಳ ಸುರಿಮಳೆ ಗೈದ ಕೊಹ್ಲಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಜೊತೆಗೆ ಕೊನೆಯ ಓವರ್​​​ನಲ್ಲಿ ಆಕರ್ಷಕ ಶತಕ ಬಾರಿಸಿ ಮಿಂಚಿದರು. ಇನ್ನಿಂಗ್ಸ್​ನ ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿ ಔಟ್ ಆಗುವ ಮೂಲಕ ಆರ್​ಸಿಬಿ 20 ಓವರ್​ಗೆ 4 ವಿಕೆಟ್ ಕಳೆದುಕೊಂಡು 213 ರನ್​ ಕಲೆಹಾಕಿತು. ವಿರಾಟ್ ಕೊಹ್ಲಿ 58 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸ್​​ ಬಾರಿಸಿ 100 ರನ್​​ ಗಳಿಸಿದರು. ಕೆಕೆಆರ್ ಪರ ಹ್ಯಾರಿ ಗರ್ನೆ, ಸುನೀಲ್ ನರೈನ್, ಆಂಡವರೋ ರಸೆಲ್ ಹಾಗೂ ಚಾವ್ಲಾ ತಲಾ 1 ವಿಕೆಟ್ ಪಡೆದರು.

IPL 2019 Live Score, KKR vs RCB; ರಸೆಲ್​​​ ಸ್ಫೋಟಕ ಆಟ ವ್ಯರ್ಥ; ಆರ್​ಸಿಬಿಗೆ ಎರಡನೇ ಜಯ

214 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಕೆಕೆಆರ್​ಗೆ ಡೇಲ್ ಸ್ಟೇನ್ ಮೊದಲ ಓವರ್​ನಲ್ಲೇ ಆಘಾತ ನೀಡಿದರು. ಬೌಂಡರಿ ಬಾರಿಸುವಲ್ಲಿ ಎಡವಿದ ಕ್ರಿಸ್ ಲಿನ್(1) ಕೊಹ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಸುನೀಲ್ ನರೈನ್ ಅಬ್ಬರ ಕೇವಲ 18 ರನ್​ಗೆ ಅಂತ್ಯವಾದರೆ, ಶುಭ್ಮನ್ ಗಿಲ್ 9 ರನ್​ಗೆ ಇನ್ನಿಂಗ್ಸ್​ ಮುಗಿಸಿದರು. ನಂತರದಲ್ಲಿ ಶುಭ್ಮನ್ ಗಿಲ್ ಹಾಗೂ ನಿತೀಶ್ ರಾಣ ಇನ್ನಿಂಗ್ಸ್​ ಕಟ್ಟಲು ಹೊರಟರಾದರು, ಉತ್ತಪ್ಪ 9 ರನ್​ಗೆ ಔಟ್ ಆಗಿ ಆಘಾತ ನೀಡಿದರು.
Loading...

ಈ ಸಂದರ್ಭ ಕ್ರೀಸ್​ಗೆ ಇಳಿದ ಆಂಡ್ರೆ ರಸೆಲ್ ಅವರು ರಾಣ ಜೊತೆಗೂಡಿ ಗೆಲುವಿಗಾಗಿ ಹೋರಾಟ ನಡೆಸಿದರು. ಎಂದಿನಂತೆ ತನ್ನ ಸ್ಪೋಟಕ ಆಟದ ಮೂಲಕ ಪಂದ್ಯದ ಗತಿಯನ್ನೇ ಬದಲಾಯಿಸಿದ ರಸೆಲ್ ಆರ್​ಸಿಬಿ ಬೌಲರ್​ಗಳ ಬೆವರಿಳಿಸಿ ಬಿಟ್ಟರು. ಇವರಿಗೆ ಉತ್ತಮ ಸಾತ್ ನೀಡಿದ ರಾಣ ಕೂಡ ಅಬ್ಬರಿಸಿದರು. ಬರೀ ಸಿಕ್ಸರ್​​ಗಳನ್ನೇ ಚಚ್ಚುತ್ತಿದ್ದ ಈ ಜೋಡಿಯನ್ನು ಕಂಡು ಆರ್​ಸಿಬಿಗೆ ಮತ್ತೊಂದು ಸೋಲು ಖಚಿತ ಎಂಬಂತ್ತಿತ್ತು.

ಆದರೆ ಕೊನೆ ಹಂತದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಸ್ಟಾಯಿನಿಸ್​ ಹಾಗೂ 20ನೇ ಓವರ್​​ ಬೌಲಿಂಗ್ ಮಾಡಿದ ಮೊಯೀನ್ ಅಲಿ ಇವರಿಬ್ಬರ ಆರ್ಭಟವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಕೊನೆಯ ಓವರ್​​ನಲ್ಲಿ ಕೆಕೆಆರ್ ಗೆಲುವಿಗೆ 24 ರನ್​ಗಳ ಅವಶ್ಯಕತೆಯಿತ್ತು.

ಈ ಸಂದರ್ಭ ಬೌಲಿಂಗ್ ಮಾಡಿದ ಅಲಿ 13 ರನ್ ನೀಡುವ ಮೂಲಕ ಆರ್​ಸಿಬಿಗೆ ಗೆಲುವು ತಂದಿಟ್ಟರು. ಕೊನೆಯ ಓವರ್​​ನಲ್ಲಿ 25 ಎಸೆತಗಳಲ್ಲಿ 2 ಬೌಂಡರಿ, 9 ಸಿಕ್ಸ್​​ ಸಿಡಿಸಿ 65 ರನ್ ಬಾರಿಸಿದ್ದ ರಸೆಲ್ ರನೌಟ್ ಆದರು. ರಾಣ 46 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸ್​ನೊಂದಿಗೆ 85 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಕೆಕೆಆರ್ 20 ಓವರ್​​ಗೆ 5 ವಿಕೆಟ್ ಕಳೆದುಕೊಂಡು 203 ರನ್​ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಗೊಂಡಿತು. ಆರ್​ಸಿಬಿ ಪರ ಡೇಲ್ ಸ್ಟೇನ್ 2, ಸೈನಿ ಹಾಗೂ ಸ್ಟಾಯಿನಿಸ್ ತಲಾ 1 ವಿಕೆಟ್ ಪಡೆದರು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

  

First published:April 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...