KXIP vs DC: ಕಿಂಗ್ಸ್​​ಗಳ ಎದುರು ಮೆರೆದ ಡೆಲ್ಲಿ ಬಾಯ್ಸ್​​; ಐಯರ್ ನಾಯಕನ ಆಟಕ್ಕೆ ತಲೆಬಾಗಿದ ಅಶ್ವಿನ್ ಪಡೆ

ಕಾಲಿನ್ ಇನ್​​ಗ್ರಾಂ ಜೊತೆಗೂಡಿ ನಾಯಕನ ಆಟವಾಡಿದ ಐಯರ್ ತಂಡದ ಗೆಲುವಿಗಾಗಿ ಹೋರಾಟ ನಡೆಸಿದರು. ಇನ್​ಗ್ರಾಂ 9 ಎಸೆತಗಳಲ್ಲಿ 19 ರನ್ ಬಾರಿಸಿ ತಂಡದ ಗೆಲುವನ್ನು ಹತ್ತಿರ ಮಾಡಿ ನಿರ್ಗಮಿಸಿದರು. ಪರಿಣಾಮ ಕೊನೆಯ ಓವರ್​ನಲ್ಲಿ ಡೆಲ್ಲಿ ಗೆಲುವಿಗೆ 6 ರನ್​ಗಳ ಅವಶ್ಯಕತೆಯಿತ್ತು.

zahir | news18
Updated:April 21, 2019, 12:11 AM IST
KXIP vs DC: ಕಿಂಗ್ಸ್​​ಗಳ ಎದುರು ಮೆರೆದ ಡೆಲ್ಲಿ ಬಾಯ್ಸ್​​; ಐಯರ್ ನಾಯಕನ ಆಟಕ್ಕೆ ತಲೆಬಾಗಿದ ಅಶ್ವಿನ್ ಪಡೆ
ಶ್ರೇಯಸ್ ಐಯರ್
  • News18
  • Last Updated: April 21, 2019, 12:11 AM IST
  • Share this:
ದಿಲ್ಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಕಿಂಗ್ಸ್ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ತಂಡ ಭರ್ಜರಿ ಜಯ ಸಾಧಿಸಿದೆ. ಶಿಖರ್ ಧವನ್ ಹಾಗೂ ನಾಯಕ ಶ್ರೇಯಸ್ ಐಯರ್​​ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಡೆಲ್ಲಿ 5 ವಿಕೆಟ್ಗಳ ಗೆಲುವು ಸಾಧಿಸಿದೆ.

ಪಂಜಾಬ್ ನೀಡಿದ್ದ 164 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲೇ ಪೃಥ್ವಿ ಶಾ(13) ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಧವನ್ ಜೊತೆಯಾದ ನಾಯಕ ಶ್ರೇಯಸ್ ಐಯರ್ ಭರ್ಜರಿ ಆಟ ಪ್ರದರ್ಶಿಸಿದರು. ಒಂದುಕಡೆ ಧವನ್ ಸ್ಫೋಟಕ ಆಟಕ್ಕೆ ಮುಂದಾದರೆ, ಇತ್ತ ಐಯರ್ ಉತ್ತಮ ಸಾತ್ ನೀಡಿದರು. ಬೌಂಡರಿಗಳ ಸುರಿಮಳೆ ಗೈದ ಧವನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ, 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸ್​​ನೊಂದಿಗೆ ಧವನ್ 56 ರನ್ ಬಾರಿಸಿ ಪ್ರಮುಖ ಹಂತದಲ್ಲೇ ನಿರ್ಗಮಿಸಿದರೆ, ರಿಷಭ್ ಪಂತ್ ಬಂದ ಬೆನ್ನಲ್ಲೆ 6 ರನ್​ಗೆ ಬ್ಯಾಟ್ ಕೆಳಗಿಟ್ಟಿದ್ದು ತಂಡಕ್ಕೆ ಹೊಡೆತ ಬಿದ್ದಂತಾಯಿತು.

ಈ ಸಂದರ್ಭ ಕಾಲಿನ್ ಇನ್​​ಗ್ರಾಂ ಜೊತೆಗೂಡಿ ನಾಯಕನ ಆಟವಾಡಿದ ಐಯರ್ ತಂಡದ ಗೆಲುವಿಗಾಗಿ ಹೋರಾಟ ನಡೆಸಿದರು. ಇನ್​ಗ್ರಾಂ 9 ಎಸೆತಗಳಲ್ಲಿ 19 ರನ್ ಬಾರಿಸಿ ತಂಡದ ಗೆಲುವನ್ನು ಹತ್ತಿರ ಮಾಡಿ ನಿರ್ಗಮಿಸಿದರು. ಪರಿಣಾಮ ಕೊನೆಯ ಓವರ್​ನಲ್ಲಿ ಡೆಲ್ಲಿ ಗೆಲುವಿಗೆ 6 ರನ್​ಗಳ ಅವಶ್ಯಕತೆಯಿತ್ತು. ಸಂಕಷ್ಟದ ಸಂದರ್ಭದಲ್ಲಿ ಐಯರ್ ನಾಜೂಕಾಗಿ ಬ್ಯಾಟ್ ಬೀಸಿ 4ನೇ ಎಸೆತದಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವು ತಂದಿಟ್ಟರು.

IPL 2019 Live Score, DC vs KXIP: ಐಯರ್​​-ಧವನ್ ಭರ್ಜರಿ ಆಟ; ಡೆಲ್ಲಿಗೆ 5 ವಿಕೆಟ್​ಗಳ ಜಯ

ಈ ಮೂಲಕ 19.4 ಓವರ್​ಗಳಲ್ಲೇ 5 ವಿಕೆಟ್ ನಷ್ಟಕ್ಕೆ 166 ರನ್ ಕಲೆಹಾಕುವ ಮೂಲಕ ಡೆಲ್ಲಿ 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಪಂಜಾಬ್ ಪರ ವಿಲ್​ಜೋನ್ 2 ಹಾಗೂ ಶಮಿ 1 ವಿಕೆಟ್ ಪಡೆದರು. 10 ಪಂದ್ಯಗಳಲ್ಲಿ ಆರು ಪಂದ್ಯವನ್ನು ಗೆದ್ದಿರುವ ಡೆಲ್ಲಿ 12 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, ಪ್ಲೇ ಆಫ್​​ ಹಾದಿ ಮತ್ತಷ್ಟು ಸುಗಮಗೊಳಿಸಿದೆ. ಇತ್ತ ಪಂಜಾಬ್ 5ನೇ ಸೋಲಿನೊಂದಿಗೆ 4ನೇ ಸ್ಥಾನದಲ್ಲಿದೆ. ಉತ್ತಮ ಆಟ ಪ್ರದರ್ಶಿಸಿದ ಐಯರ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್​ ಆರಂಭ ಉತ್ತಮವಾಗಿರಲಿಲ್ಲ. 2ನೇ ಓವರ್​ನಲ್ಲೇ ಕೆ.ಎಲ್ ರಾಹುಲ್ (12) ವಿಕೆಟ್​ ಒಪ್ಪಿಸಿ ಡೆಲ್ಲಿಯ ಮೇಲುಗೈಗೆ ಕಾರಣರಾದರು. ರಾಹುಲ್ ಜಾಗಕ್ಕೆ ಕ್ರೀಸ್​ಗೆ ಆಗಮಿಸಿದ ಮಯಾಂಕ್ ಅಗರ್ವಾಲ್ (2) ಕೂಡ ಬೇಗನೆ ನಿರ್ಗಮಿಸಿ ಆಘಾತ ಮೂಡಿಸಿದರು. ಇನ್ನೊಂದೆಡೆ ಸ್ಫೋಟಕ ಆಟದತ್ತ ಮುಖ ಮಾಡಿದ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅಬ್ಬರದ ಬ್ಯಾಟಿಂಗ್ ಮಾಡಿದರು. ಹೊಡಿ ಬಡಿ ಆಟದೊಂದಿಗೆ ಇನಿಂಗ್ಸ್​ ಕಟ್ಟಿದ ಗೇಲ್ ಭರ್ಜರಿ ಐದು ಅಮೋಘ ಸಿಕ್ಸರ್ ಸಿಡಿಸಿ ಮಿಂಚಿದರು. ಆದರೆ ಮತ್ತೊಂದೆಡೆ ಡೇವಿಡ್ ಮಿಲ್ಲರ್ (7) ಅಕ್ಷರ್ ಪಟೇಲ್ ಎಸೆತದಲ್ಲಿ ವಿಕೆಟ್ ನೀಡಿ ಹೊರ ನಡೆದರು.

ಒಂದೆಡೆ ವಿಕೆಟ್ ಪತನವಾಗುತ್ತಿದ್ದರೂ ಲೆಕ್ಕಿಸದ ಗೇಲ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಸ್ಪೋಟಕ ಆಟದ ಮೂಲಕ ಮೊದಲ ಹತ್ತು ಓವರ್​ನಲ್ಲಿ ಕಿಂಗ್ಸ್ ಇಲೆವೆನ್​ ಸ್ಕೋರ್ ಅನ್ನು 3 ವಿಕೆಟ್​ ನಷ್ಟಕ್ಕೆ 92 ರನ್​ಗೆ ತಲುಪಿಸುವಲ್ಲಿ ಗೇಲ್ ಯಶಸ್ವಿಯಾಗಿದ್ದರು.36 ಎಸೆತಗಳಲ್ಲಿ 69 ರನ್​ಗಳಿಸಿ ಅಪಾಯಕಾರಿಯಾಗಿ ಬ್ಯಾಟ್ ಬೀಸುತ್ತಿದ್ದ ಗೇಲ್ ಕಾಲಿನ್ ಇನ್​ಗ್ರಾಂ ಅವರ ಮನಮೋಹಕ ಫೀಲ್ಡಿಂಗ್​ಗೆ ಶರಣಾಗಲೇಬೇಕಾಯಿತು. ಇನ್​ಗ್ರಾಂ ಹಾಗೂ ಅಕ್ಷರ್ ಪಟೇಲ್ ಸೇರಿ ಹಿಡಿದ ಕ್ಯಾಚ್​ಗೆ ಗೇಲ್ ಬಲಿಯಾದರು.

ಇನ್ನು 13ನೇ ಓವರ್‌ನಲ್ಲಿ ಸ್ಯಾಮ್ ಕುರ್ರನ್ (0) ಅವರನ್ನು ಹೊರಗಟ್ಟುವ ಮೂಲಕ ಯುವ ಬೌಲರ್ ಸಂದೀಪ್ ಲಮಿಚಾನೆ ಪಂಜಾಬ್​ ಡಬಲ್ ಶಾಕ್ ನೀಡಿದರು. ಗೇಲ್ ಔಟಾಗುತ್ತಿದ್ದಂತೆ ಉತ್ತಮ ಬೌಲಿಂಗ್ ನಡೆಸಿದ ಡೆಲ್ಲಿ ವೇಗಿಗಳು ರನ್​ಗತಿಯನ್ನು ಇಳಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: VIDEO: ಹ್ಯಾಟ್ರಿಕ್ ಕ್ಯಾಚ್ ಡ್ರಾಪ್: ಮುಂಬೈಯೊಂದಿಗೆ ಫಿಕ್ಸಿಂಗ್ ಮಾಡಿದ್ರಾ ಜೋಫ್ರಾ ಆರ್ಚರ್​?

ಈ ವೇಳೆ ಮಂದೀಪ್ ಸಿಂಗ್ (30) ಒಂದಷ್ಟು ಆಕರ್ಷಕ ಹೊಡೆತಗಳಿಂದ ಗಮನ ಸೆಳೆದರೂ ಅಕ್ಷರ್ ಪಟೇಲ್ ಗೂಗ್ಲಿಗೆ ಸ್ಟಂಪ್ ಆಗಿ ಹೊರ ನಡೆದರು. ಅಂತಿಮ ಹಂತದಲ್ಲಿ ನಾಯಕ ಆರ್ ಅಶ್ವಿನ್ (16) ಹಾಗೂ ಹರ್ಪಿತ್ ಬ್ರಾರ್ (20) ಒಂದಷ್ಟು ಭರ್ಜರಿ ಹೊಡೆತಗಳನ್ನು ಬಾರಿಸಿ ತಂಡದ ಮೊತ್ತವನ್ನು ಏಳು ವಿಕೆಟ್ ನಷ್ಟಕ್ಕೆ 163 ರನ್​ಗಳತ್ತ ತಂದು ನಿಲ್ಲಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಲಮಿಚಾನೆ 3 ಮತ್ತು ರಬಾಡ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟುಗಳನ್ನು ಪಡೆಯುವ ಮೂಲಕ ಗಮನ ಸೆಳೆದರು.

 First published:April 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading