CSK vs KKR: ಬ್ಯಾಟಿಂಗ್-ಬೌಲಿಂಗ್​​ನಲ್ಲಿ ಮಿಂಚಿದ ಧೋನಿ ಪಡೆ; ಅಗ್ರಸ್ಥಾನಕ್ಕೇರಿದ ಚೆನ್ನೈ

109 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಚೆನ್ನೈ ಆರಂಭದಲ್ಲಿ ಶೇನ್ ವಾಟ್ಸನ್(17) ಹಾಗೂ ಸುರೇಶ್ ರೈನಾ(14) ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಜೊತೆಯಾದ ಫಾಫ್ ಡುಪ್ಲೆಸಿಸ್ ಹಾಗೂ ಅಂಬಟಿ ರಾಯುಡು ಎಚ್ಚರಿಕೆಯ ಆಟ ಪ್ರದರ್ಶಿಸಿದರು.

Pic: @IPL

Pic: @IPL

  • News18
  • Last Updated :
  • Share this:
ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 23ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್​ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಬ್ಯಾಟಿಂಗ್-ಬೌಲಿಂಗ್​​​ನಲ್ಲಿ ಕಳಪೆ ಪ್ರದರ್ಶನ ತೋರಿದ ಕೋಲ್ಕತ್ತಾ ಟೂರ್ನಿಯಲ್ಲಿ 2ನೇ ಸೋಲು ಕಂಡಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಲು ಬಂದ ಕೊಲ್ಕತ್ತಾ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ ಕೇವಲ 9 ರನ್ ಆಗುವಷ್ಟರಲ್ಲಿ ಆರಂಭಿಕರು ಸೇರಿದಂತೆ ಮೂವರು ಪೆವಿಲಿಯನ್​ನತ್ತ ನಡೆದಿದ್ದರು.  ಕ್ರಿಸ್ ಲಿನ್ (0) ಮತ್ತೊಮ್ಮೆ ವಿಫಲರಾದರೆ, ಹೊಡಿಬಡಿ ಆಟಗಾರ ಸುನಿಲ್ ನರೈನ್​(6) ನ ಆಟ ಅನುಭವಿ ಹರ್ಭಜನ್ ಸಿಂಗ್ ಮುಂದೆ ನಡೆಯಲಿಲ್ಲ. ಯುವ ದಾಂಡಿಗ ನಿತೀಶ್ ರಾಣಾ ಸೊನ್ನೆ ಸುತ್ತಿ ಲಿನ್​ರನ್ನೇ ಹಿಂಬಾಲಿಸಿದರು.

ಕೇವಲ 11 ರನ್​ಗಳಿಸಿ ರಾಬಿನ್ ಉತ್ತಪ್ಪ ಸಹ ಈ ಬಾರಿ ನಿರಾಸೆ ಮೂಡಿಸಿದರು. ಅದಾಗಲೇ 24 ರನ್​ಗಳಿಗೆ ನಾಲ್ಕು ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್​ ಗೆ ನಾಯಕ ದಿನೇಶ್ ಕಾರ್ತಿಕ್ ಆಸರೆಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. 3 ಬೌಂಡರಿಗಳೊಂದಿಗೆ 21 ರನ್​ಗಳಿಸಿ ಬ್ಯಾಟ್​ ಕೆಳಗಿಡುವ ಮೂಲಕ ನಾಯಕ ಸಹ ಹೋರಾಟ ಅಂತ್ಯಗೊಳಿಸಿದ್ದರು. ಇನ್ನು ಶುಭ್ಮನ್ ಗಿಲ್ (9) ಧೋನಿಯನ್ನು ಮರೆತು ಕ್ರೀಸ್​ನಿಂದ ಹೊರ ನಡೆದು ಔಟಾದರು.

IPL 2019 Live Score, CSK vs KKR; ಚೆನ್ನೈಗೆ 7 ವಿಕೆಟ್​ಗಳ ಭರ್ಜರಿ ಜಯ

ಆದರೆ ಮತ್ತೊಂದೆಡೆ ಸ್ಫೋಟಕ ಆಟಗಾರ ಆಂಡ್ರೆ ರಸೆಲ್ ಮಾತ್ರ ಕ್ರೀಸ್ ಕಚ್ಚಿ ನಿಂತಿದ್ದರು. ಒಂದು ಬದಿಯಲ್ಲಿ ವಿಕೆಟ್​ಗಳ ಪತನವಾಗುತ್ತಿದ್ದರೂ, ರಸೆಲ್ ತನ್ನ ಭುಜಬಲವನ್ನು ತೋರಿಸಲು ಆರಂಭಿಸಿದ್ದರು. ಇದರ ನಡುವೆ ಇಮ್ರಾನ್ ತಾಹೀರ್ ದಾಳಿಯಲ್ಲಿ ಸುಲಭ ಕ್ಯಾಚ್ ಹರ್ಭಜನ್ ಸಿಂಗ್ ಕೈಚೆಲ್ಲಿದರು. ಇದುವೇ ಮುಂದೆ ಸಿಎಸ್​ಕೆ ಮುಳುವಾಯಿತು. ಕೊನೆಯಲ್ಲಿ ಆರ್ಭಟಿಸಿದ ರಸೆಲ್ ಮೂರು ಭರ್ಜರಿ ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ ಅಮೋಘ 50 ರನ್​ಗಳನ್ನು ಸಿಡಿಸಿ ತಂಡಕ್ಕೆ ಆಸರೆಯಾದರು. ರಸೆಲ್​ ಅವರ ಏಕಾಂಗಿ ಹೋರಾಟದ ಫಲವಾಗಿ ಕೆಕೆಆರ್ 9 ವಿಕೆಟ್​ ಕಳೆದುಕೊಂಡು 108 ರನ್​ಗಳನ್ನು ಪೇರಿಸಿತು.

ಆರಂಭದಿಂದಲೂ ಉತ್ತಮ ದಾಳಿ ಸಂಘಟಿಸುವಲ್ಲಿ ಹಳದಿ ಪಡೆಯ ಬೌಲರ್​ಗಳು ಯಶಸ್ವಿಯಾಗಿದ್ದರು. ಇದರ ಪರಿಣಾಮ ದೀಪಕ್ ಚಹಾರ್ 3 ವಿಕೆಟ್ ಉರುಳಿಸಿದರೆ, ಹರ್ಭಜನ್ ಹಾಗೂ ಇಮ್ರಾನ್ ತಾಹಿರ್ ತಲಾ ಎರಡು ವಿಕೆಟ್​ ಕಬಳಿಸಿ ಮಿಂಚಿದರು.

109 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಚೆನ್ನೈ ಆರಂಭದಲ್ಲಿ ಶೇನ್ ವಾಟ್ಸನ್(17) ಹಾಗೂ ಸುರೇಶ್ ರೈನಾ(14) ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಜೊತೆಯಾದ ಫಾಫ್ ಡುಪ್ಲೆಸಿಸ್ ಹಾಗೂ ಅಂಬಟಿ ರಾಯುಡು ಎಚ್ಚರಿಕೆಯ ಆಟ ಪ್ರದರ್ಶಿಸಿದರು. ನಿಧಾನಗತಿಯಲ್ಲಿ ರನ್​ಕಲೆಹಾಕಿದ ಈ ಜೋಡಿ ತಂಡಕ್ಕೆ ಗೆಲುವು ಸನಿಹ ಮಾಡಿತು. ಇನ್ನೇನು ಚೆನ್ನೈ ಗೆಲುವಿನ ದಡ ಸೇರಿತು ಎನ್ನುವಷ್ಟರಲ್ಲಿ ರಾಯುಡು(21) ರಾಣಗೆ ಕ್ಯಾಚಿತ್ತು ನಿರ್ಗಮಿಸಿದರು.

ಕೊನೆ ಹಂತದಲ್ಲಿ ಡುಪ್ಲೆಸಿಸ್ ಹಾಗೂ ಕೇದರ್ ಜಾಧವ್(ಅಜೇಯ 8) ಜೊತೆಯಾಗಿ 17.2 ಓವರ್​ಗಳಲ್ಲೇ ಚೆನ್ನೈಗೆ ಭರ್ಜರಿ ಜಯ ತಂದಿಟ್ಟರು. ಡುಪ್ಲೆಸಿಸ್ 45 ಎಸೆತಗಳಲ್ಲಿ ಅಜೇಯ 45 ರನ್ ಕಲೆಹಾಕಿದರು. ಕೆಕೆಆರ್ ಪರ ಸುನೀಲ್ ನರೈನ್ 2 ಹಾಗೂ ಪಿಯೂಶ್ ಚಾವ್ಲಾ 1 ವಿಕೆಟ್ ಪಡೆದರು. ಉತ್ತಮ ಬೌಲಿಂಗ್ ಪ್ರದರ್ಶಿಸಿದ ದೀಪಕ್ ಚಹಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಈ ಗೆಲುವಿನ ಮೂಲಕ ಚೆನ್ನೈ 10 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದರೆ ಕೋಲ್ಕತ್ತಾ 8 ಅಂಕದೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ.

 

First published: