IPL 2019: ಧೋನಿ ಪಡೆಯ ಅನುಭವದೆದುರು ಮಕಾಡೆ ಮಲಗಿದ ಡೆಲ್ಲಿ ಬಾಯ್ಸ್​​!

CSK vs DC: ಸುರೇಶ್ ರೈನಾರ ಅರ್ಧಶತಕ, ಎಂಎಸ್ ಧೋನಿಯ ಸ್ಪೋಟಕ ಬ್ಯಾಟಿಂಗ್ ಹಾಗೂ ಬೌಲರ್​ಗಳ ಉತ್ತಮ ಪ್ರದರ್ಶನದ ನೆರವಿನಿಂದ ಚೆನ್ನೈ ತಂಡ ಪಾಯಿಂಟ್​ ಪಟ್ಟಿಯಲ್ಲಿ ಮತ್ತೆ ಮೊದಲನೇ ಸ್ಥಾನಕ್ಕೇರಿದೆ.

ಚೆನ್ನೈ ಸೂಪರ್ ಕಿಂಗ್ಸ್​

ಚೆನ್ನೈ ಸೂಪರ್ ಕಿಂಗ್ಸ್​

  • News18
  • Last Updated :
  • Share this:
ಚೆನ್ನೈ (ಮೇ. 01): ಇಲ್ಲಿನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡ 80 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಧೋನಿ ಪಡೆಯ ಸ್ಪಿನ್ನರ್​​​ಗಳ ಮಾರಕ ದಾಳಿಗೆ ತರಗೆಲೆಯಂತೆ ಉರುಳಿದ ಡೆಲ್ಲಿ ಬಾಯ್ಸ್​ ಹೀನಾಯ ಸೋಲು ಕಂಡಿದ್ದಾರೆ.

ಸುರೇಶ್ ರೈನಾರ ಅರ್ಧಶತಕ, ಎಂಎಸ್ ಧೋನಿಯ ಸ್ಪೋಟಕ ಬ್ಯಾಟಿಂಗ್ ಹಾಗೂ ಬೌಲರ್​ಗಳ ಉತ್ತಮ ಪ್ರದರ್ಶನದ ನೆರವಿನಿಂದ ಚೆನ್ನೈ ತಂಡ ಪಾಯಿಂಟ್​ ಪಟ್ಟಿಯಲ್ಲಿ ಮತ್ತೆ ಮೊದಲನೇ ಸ್ಥಾನಕ್ಕೇರಿದೆ.

ಟಾಸ್ ಸೋತು ಬ್ಯಾಟಿಂಗ್​ ಆರಂಭಿಸಿದ ಚೆನ್ನೈ ನಿಧಾನಗತಿಯಲ್ಲಿ ಇನ್ನಿಂಗ್ಸ್​ ಪ್ರಾರಂಭಿಸಿತು. 3 ಓವರ್​ ಆಗುವ ಹೊತ್ತಿಗೆ ತಂಡದ ಮೊತ್ತ ಕೇವಲ 3 ರನ್ ಇತ್ತಲ್ಲದೆ 9 ಎಸೆತಗಳಲ್ಲಿ ಶೂನ್ಯಕ್ಕೆ ಶೇನ್ ವಾಟ್ಸನ್ ನಿರ್ಗಮಿಸಿದರು. ಪರಿಣಾಮ ಪವರ್​ ಪ್ಲೇನಲ್ಲಿ ಚೆನ್ನೈ ಕೇವಲ 27 ರನ್ ಗಳಿಸಿತಷ್ಟೆ. 2ನೇ ವಿಕೆಟ್​ಗೆ ಡುಪ್ಲೆಸಿಸ್ ಜೊತೆಯಾದ ಸುರೇಶ್ ರೈನಾ ಜೋಪಾನವಾಗಿ ಇನ್ನಿಂಗ್ಸ್​ ಕಟ್ಟಿದರು. ಉತ್ತಮ ಜೊತೆಯಾಟ ಆಡಿದ ಈ ಜೋಡಿ 83 ರನ್​ಗಳ ಕಾಣಿಕೆ ನೀಡಿತು. ಚೆನ್ನಾಗಿಯೆ ಆಡುತ್ತಿದ್ದ ಡುಪ್ಲೆಸಿಸ್ 39 ರನ್ ಗಳಿಸಿರುವಾಗ ನಿರ್ಗಮಿಸಿದರು.

ಈ ಸಂದರ್ಭ ಕ್ರೀಸ್​ಗೆ ಬಂದ ನಾಯಕ ಎಂಎಸ್ ಧೋನಿ ಅವರು ರೈನಾ ಜೊತೆಗೂಡಿ ಭರ್ಜರಿ ಆಟ ಪ್ರದರ್ಶಿಸಿದರು. ಆದರೆ ಸುರೇಶ್ ರೈನಾ ಅರ್ಧಶತಕ ಬಾರಿಸಿದ ಕೂಡಲೆ ಔಟ್ ಆಗಿ ಆಘಾತ ನೀಡಿದರು. 37 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಿಡಿಸಿ ರೈನಾ 59 ರನ್​ಗೆ ಪೆವಿಲಿಯನ್ ಸೇರಿಕೊಂಡರು. ರವೀಂದ್ರ ಜಡೇಜಾ 10 ಎಸೆತಗಳಲ್ಲಿ 25 ರನ್ ಚಚ್ಚಿ ತಂಡದ ರನ್​ಗತಿಯನ್ನು ಏರಿಸಿ ಬ್ಯಾಟ್ ಕೆಳಗಿಟ್ಟರು. ಕೊನೆಹಂತದಲ್ಲಿ ಸಿಡಿದೆದ್ದ ಧೋನಿ ಬೌಂಡರಿ-ಸಿಕ್ಸರ್ ಚಚ್ಚಿದರು. ಪರಿಣಾಮ ಚೆನ್ನೈ 20 ಓವರ್​ಗೆ 4 ವಿಕೆಟ್ ಕಳೆದುಕೊಂಡು 179 ರನ್ ಕಲೆಹಾಕಿತು. ಧೋನಿ 22 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಿಡಿಸಿ ಅಜೇಯ 44 ರನ್ ಬಾರಿಸಿದರು. ಡೆಲ್ಲಿ ಪರ ಸುಚಿತ್ 2 ವಿಕೆಟ್ ಕಿತ್ತರೆ, ಮೊರೀಸ್ ಹಾಗೂ ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದರು.

 

ಇತ್ತ 180 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಡೆಲ್ಲಿ ಮೊದಲ ಓವರ್​ನಲ್ಲೇ ಪೃಥ್ವಿ ಶಾ(4) ವಿಕೆಟ್ ಕಳೆದುಕೊಂಡಿತು. ಆದರೂ ಶಿಖರ್ ಧವನ್ ಹಾಗೂ ನಾಯಕ ಶ್ರೇಯಸ್ ಐಯರ್ ಬ್ಯಾಟ್ ಬೀಸಿ ತಂಡದ ರನ್​ ಗತಿಯನ್ನು ಏರಿಸುತ್ತಾ ಬಂದರು. ಆದರೆ, ಧವನ್ ಈ ಬಾರಿ 19 ರನ್​ಗೆ ಬೇಗನೆ ಔಟ್ ಆದರೆ, ರಿಷಭ್ ಪಂತ್(5), ಕಾಲಿನ್ ಇನ್​ಗ್ರಾಂ(1), ಅಕ್ಷರ್ ಪಟೇಲ್(9) ಹೀಗೆ ಉಳಿದ ಬ್ಯಾಟ್ಸ್​ಮನ್​ಗಳು ಬಂದಷ್ಟೆ ವೇಗದಲ್ಲಿ ನಿರ್ಗಮಿಸಿದರು. 44 ರನ್ ಗಳಿಸಿದ್ದಾಗ ನಾಯಕ ಐಯರ್ ಕೂಡ ಧೋನಿಯ ಮಿಂಚಿನ ಸ್ಟಂಪಿಂಗ್​ಗೆ ಬಲಿಯಾದರು.

ಅಂತಿಮವಾಗಿ ಡೆಲ್ಲಿ 16.2 ಓವರ್​ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 99 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಗೊಂಡಿತು. ಚೆನ್ನೈ ಪರ ಮಾರಕ ದಾಳಿ ಸಂಘಟಿಸಿದ ಇಮ್ರಾನ್ ತಾಹೀರ್ 4 ವಿಕೆಟ್ ಕಿತ್ತು ಮಿಂಚಿದರೆ, ಜಡೇಜಾ 3 ವಿಕೆಟ್ ಪಡೆದರು. ದೀಪಕ್ ಚಹಾರ್ ಹಾಗೂ ಹರ್ಭಜನ್ ಸಿಂಗ್ ಕೂಡ ತಲಾ 1 ವಿಕೆಟ್ ಪಡೆದರು.

ಈ ಮೂಲಕ 80 ರನ್​ಗಳ ಭರ್ಜರಿ ಗೆಲುವಿನೊಂದಿಗೆ ಧೋನಿ ನಾಯಕತ್ವದಲ್ಲಿ ಚೆನ್ನೈ ಮತ್ತೆ ಕಮ್​ಬ್ಯಾಕ್ ಮಾಡಿದ್ದು, 18 ಅಂಕ ಸಂಪಾದಿಸಿ ಅಗ್ರಸ್ಥಾನಕ್ಕೇರಿದೆ. ಇಮ್ರಾನ್ ತಾಹೀರ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.

 





First published: