HOME » NEWS » Sports » CRICKET IPL 2019 BOWLERS AND SURYAKUMAR HELP MUMBAI CLINCH FINAL SPOT AFTER CONVINCING WIN OVER CSK

IPL 2019, Qualifier 1: ಚೆನ್ನೈ ನಾಡಲ್ಲೇ ದಾಖಲೆ ಬರೆದು ಫೈನಲ್​​ಗೆ ಭರ್ಜರಿ ಎಂಟ್ರಿ ಕೊಟ್ಟ ಮುಂಬೈ

IPL 2019, MI vs CSK: ಈ ಗೆಲುವಿನೊಂದಿಗೆ ಮುಂಬೈ 5ನೇ ಬಾರಿ ಐಪಿಎಲ್​​ನಲ್ಲಿ ಫೈನಲ್​ಗೆ ಲಗ್ಗೆಯಿಟ್ಟು ದಾಖಲೆ ಬರೆದಿದೆ. ಅಲ್ಲದೆ ಚೆನ್ನೈ ವಿರುದ್ಧ ನಾವೇ ಬಲಿಷ್ಠ ಎಂಬುದನ್ನು ಮತ್ತೊಮ್ಮೆ ಸಾಭೀತು ಮಾಡಿದೆ.

zahir | news18
Updated:May 8, 2019, 10:44 AM IST
IPL 2019, Qualifier 1: ಚೆನ್ನೈ ನಾಡಲ್ಲೇ ದಾಖಲೆ ಬರೆದು ಫೈನಲ್​​ಗೆ ಭರ್ಜರಿ ಎಂಟ್ರಿ ಕೊಟ್ಟ ಮುಂಬೈ
ಸಂಭ್ರಮಿಸುತ್ತಿರುವ ಮುಂಬೈ ಇಂಡಿಯನ್ಸ್​ ತಂಡದ ಆಟಗಾರರು
  • News18
  • Last Updated: May 8, 2019, 10:44 AM IST
  • Share this:
ಚೆನ್ನೈ:  ಇಲ್ಲಿನ ಚೆಪಾಕ್ ಅಂಗಳದಲ್ಲಿ ನಡೆದ ಐಪಿಎಲ್​​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಫೈನಲ್​ಗೆ ಲಗ್ಗೆಯಿಟ್ಟಿದೆ. ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಹಾಲಿ ಚಾಂಪಿಯನ್ ಮುಂಬೈ 6 ವಿಕೆಟ್​ಗಳ ಜಯ ಸಾಧಿಸಿದೆ. ಇತ್ತ ಧೋನಿ ಪಡೆ ಸೋತಿರುವುದರಿಂದ ನಾಳೆ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಮತ್ತೊಮ್ಮೆ ಹೋರಾಟ ನಡೆಸಲಿದೆ.

ಈ ಗೆಲುವಿನೊಂದಿಗೆ ಮುಂಬೈ 5ನೇ ಬಾರಿ ಐಪಿಎಲ್​​ನಲ್ಲಿ ಫೈನಲ್​ಗೆ ಲಗ್ಗೆಯಿಟ್ಟು ದಾಖಲೆ ಬರೆದಿದೆ. ಅಲ್ಲದೆ ಚೆನ್ನೈ ವಿರುದ್ಧ ನಾವೇ ಬಲಿಷ್ಠ ಎಂಬುದನ್ನು ಮತ್ತೊಮ್ಮೆ ಸಾಭೀತು ಮಾಡಿದೆ. ಲೀಗ್​ ಹಂತದಿಂದಲೂ ಮುಂಬೈ ವಿರುದ್ಧ ಒಂದೂ ಗೆಲುವನ್ನು ಕಾಣದ ಚೆನ್ನೈ, ಮತ್ತೊಮ್ಮೆ ಮಂಡಿ ಊರಿದೆ.

ಚೆನ್ನೈ ನೀಡಿದ್ದ 132 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಮುಂಬೈ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಓಪನರ್​ಗಳಾದ ರೋಹಿತ್ ಶರ್ಮಾ(4) ಹಾಗೂ ಕ್ವಿಂಟನ್ ಡಿಕಾಕ್(8) ಬೇಗನೆ ನಿರ್ಗಮಿಸಿದ ಆಘಾತ ನೀಡಿದರು. ಆದರೆ 3ನೇ ವಿಕೆಟ್​ಗೆ ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಉತ್ತಮ ಆಟ ಪ್ರದರ್ಶಿಸಿದರು.

ಕುಸಿದಿಂದ ತಂಡಕ್ಕೆ ಆಸರೆಯಾಗಿ ನಿಂತ ಈ ಜೋಡಿ ಅಮೋಘ ಬ್ಯಾಟಿಂಗ್ ನಡೆಸಿತು. 80 ರನ್​ಗಳ ಜೊತೆಯಾಟ ಆಡಿದ ಈ ಜೋಡಿ ತಂಡಕ್ಕೆ ಗೆಲುವನ್ನು ಹತ್ತಿರ ಮಾಡಿತು. ಚೆನ್ನಾಗಿಯೆ ಆಡುತ್ತಿದ್ದ ಕಿಶನ್ 28 ರನ್ ಗಳಿಸಿರುವಾಗ ತಾಹೀರ್ ಬೌಲಿಂಗ್​ನಲ್ಲಿ ಬೌಲ್ಡ್​ ಆದರು. ಇದರ ಬೆನ್ನಲ್ಲೆ ಮುಂದಿನ ಎಸೆತದಲ್ಲಿ ಕ್ರುನಾಲ್ ಪಾಂಡ್ಯ ಶೂನ್ಯಕ್ಕೆ ನಿರ್ಗಮಿಸಿದರು. ಈ ಮಧ್ಯೆ ಸೂರ್ಯಕುಮಾರ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.

ಕೊನೆ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಜೊತೆಯಾದ ಸೂರ್ಯಕುಮಾರ್ ಉತ್ತಮ ಆಟ ಪ್ರದರ್ಶಿಸಿ ತಂಡವನ್ನು ಫೈನಲ್​ಗೇರಿಸಿದರು. 18.3 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಕಲೆಹಾಕುವ ಮೂಲಕ ಮುಂಬೈ 6 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. 54 ಎಸೆತಗಳಲ್ಲಿ 10 ಬೌಂಡರಿಯೊಂದಿಗೆ ಅಜೇಯ 71 ರನ್ ಸಿಡಿಸಿದ ಸೂರ್ಯಕುಮಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಚೆನ್ನೈ ಪರ ಇಮ್ರಾನ್ ತಾಹೀರ್ 2, ದೀಪಕ್ ಚಹಾರ್ ಹಾಗೂ ಹರ್ಭಜನ್ ತಲಾ 1 ವಿಕೆಟ್ ಪಡೆದರು.

ನಾಳೆ ಎಲಿಮಿನೇಟರ್ ಪಂದ್ಯ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ನಡೆಯಲಿದ್ದು, ಇಲ್ಲಿ ಗೆದ್ದ ತಂಡ ಕ್ವಾಲಿಫೈಯರ್- 2ನಲ್ಲಿ ಚೆನ್ನೈ ವಿರುದ್ಧ ಮುಖಾಮುಖಿ ಆಗಲಿದೆ. ಇದರಲ್ಲಿ ಗೆಲುವು ಸಾಧಿಸಿದ ತಂಡ ಫೈನಲ್​​ನಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಐಪಿಎಲ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.

 


ಇದಕ್ಕೂ ಮೊದಲು ಟಾಸ್ ಗೆದ್ದ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಮಾಡಲು ಇಚ್ಛಿಸಿದ್ದರು. ಆದರೆ ಧೋನಿಯ ಯೋಜನೆಯನ್ನು ಈ ಬಾರಿ ಕಿಂಗ್ಸ್​ ಬ್ಯಾಟ್ಸ್​ಮನ್​ಗಳು ತಲೆಕೆಳಗಾಗುವಂತೆ ಮಾಡಿದ್ದರು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಆರಂಭಿಕ ಫಫ್ ಡು ಪ್ಲೆಸಿಸ್ ಇಂದು ಕೇವಲ 6 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಯುವ ಸ್ಪಿನ್ನರ್ ರಾಹುಲ್ ಎಸೆತದಲ್ಲಿ ಸ್ಕ್ವೇರ್​ನಲ್ಲಿ ಕ್ಯಾಚಿತ್ತು ಡು ಪ್ಲೆಸಿಸ್ ಹೊರ ನಡೆದರು. ಒನ್ ಡೌನ್ ಬಳಿಕ ಕ್ರಿಸ್​ಗೆ ಆಗಮಿಸಿದ ರೈನಾ(5) ಸಹ ಬಂದ ದಾರಿಯಲ್ಲೇ  ಹಿಂತಿರುಗಿದರು. ಮೊದಲ ಮೂರು ಓವರ್​ನಲ್ಲೇ 2 ವಿಕೆಟ್ ಪಡೆದು ಮೇಲುಗೈ ಸಾಧಿಸಿದ ಮುಂಬೈ ಬೌಲರ್​ಗಳು ಪವರ್​ ಪ್ಲೇನಲ್ಲಿ ಚೆನ್ನೈ ದಾಂಡಿಗರನ್ನು ಪರದಾಡುವಂತೆ ಮಾಡುವಲ್ಲಿ ಯಶಸ್ವಿಯಾದರು.

ಅದರಲ್ಲೂ 6ನೇ ಓವರ್​ನ ಕೊನೆಯ ಎಸೆತದಲ್ಲಿ ಶೇನ್ ವಾಟ್ಸನ್​ (10) ರನ್ನು ಪೆವಿಲಿಯನ್​ಗೆ ಕಳುಹಿಸುವ ಮೂಲಕ ಕೃನಾಲ್ ಪಾಂಡ್ಯ ರೋಹಿತ್ ಪಡೆಗೆ ಮತ್ತೊಂದು ಯಶಸ್ಸು ತಂದುಕೊಟ್ಟರು. ಈ ಹಂತದಲ್ಲಿ ಜೊತೆಗೂಡಿದ ಮುರಳಿ ವಿಜಯ್ ಹಾಗೂ ಅಂಬಾಟಿ ರಾಯುಡು ತಂಡವನ್ನು ಎಚ್ಚರಿಕೆಯಿಂದ ಮುನ್ನೆಡೆಸಿದರು. ಪರಿಣಾಮ ಮೊದಲ 10 ಓವರ್​ನಲ್ಲಿ ಸೂಪರ್​ ಕಿಂಗ್ಸ್​ ಗಳಿಸಿದ್ದು ಕೇವಲ 50 ರನ್​ ಮಾತ್ರ.

26 ರನ್​ಗಳಿಸಿ ಭರವಸೆ ಮೂಡಿಸಿದ್ದ ಮುರಳಿ ವಿಜಯ್ ಭರ್ಜರಿ ಹೊಡೆತಕ್ಕೆ ಮುನ್ನುಗ್ಗಿ ಸ್ಟಂಪ್ ಔಟ್ ಆಗಿ ಹೊರನಡೆದರು. ಅದಾಗಲೇ ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಮೇಲೆಕ್ಕೆತ್ತುವ ಜವಾಬ್ದಾರಿಯೊಂದಿಗೆ ಕ್ರೀಸ್​ಗೆ ಆಗಮಿಸಿದ ನಾಯಕ ಧೋನಿ ಹಾಗೂ ಅಂಬಾಟಿ ರಾಯುಡು ಒಂದಷ್ಟು ಭರ್ಜರಿ ಹೊಡೆತಗಳ ಮೂಲಕ ರನ್​ ಗತಿ ಹೆಚ್ಚಿಸಿದರು. ಈ ಉತ್ತಮ ಜೊತೆಯಾಟದ ಪರಿಣಾಮ 15 ಓವರ್​ ಆಗುವಷ್ಟರಲ್ಲಿ ಚೆನ್ನೈ 4 ವಿಕೆಟ್ ನಷ್ಟಕ್ಕೆ 91 ರನ್​ಗಳಿಸಿತ್ತು.

ಅಂತಿಮ ಹಂತದಲ್ಲಿ ಸ್ಪೋಟಕ ಆಟಕ್ಕೆ ಕೈ ಹಾಕಿದ ಧೋನಿ, ಭರ್ಜರಿ ಹೊಡೆತಗಳಿಗೆ ಮುನ್ನುಗ್ಗಿದರು. ಅದರಂತೆ ಲಸಿತ್ ಮಾಲಿಂಗ ಅವರ 19ನೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿದರು. 5ನೇ ವಿಕೆಟ್​ಗೆ ರಾಯುಡುರೊಂದಿಗೆ ಧೋನಿ 66 ರನ್​ಗಳ ಜೊತೆಯಾಟವಾಡುವ ಮೂಲಕ ಅಂತಿಮವಾಗಿ ತಂಡದ ಮೊತ್ತವನ್ನು 131 ಕ್ಕೆ ತಂದು ನಿಲ್ಲಿಸಿದರು.

ರಾಯುಡು ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 42 (37) ರನ್ ಗಳಿಸಿ ಮಿಂಚಿದರೆ, ಕೇವಲ 29 ಎಸೆತಗಳಲ್ಲಿ ಮೂರು ಭರ್ಜರಿ ಸಿಕ್ಸರ್ ಸಿಡಿಸಿದ ಧೋನಿ 37 ರನ್ ಗಳಿಸಿ ಅಜೇಯರಾಗುಳಿದರು. ಇನ್ನು ಮುಂಬೈ ರಾಹುಲ್ ಚಾಹರ್ ನಾಲ್ಕು ಓವರ್​ನಲ್ಲಿ ಕೇವಲ 14 ರನ್ ನೀಡಿ 2 ವಿಕೆಟ್ ಕಿತ್ತು ಮಿಂಚಿದರು.

 

First published: May 7, 2019, 9:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories