Pakistan- ಭಾರತೀಯರು ಹಿಂದೆಂದೂ ಆ ರೀತಿ ಇರಲಿಲ್ಲ, ಅಂದು ಆ ಸ್ಥಿತಿ ಕಂಡು ಅಚ್ಚರಿ ಆಯಿತು: ಇಂಜಮಮ್

Inzamam-ul-Haq- ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಭಾರತೀಯರು ಆಡಿದ ರೀತಿ ಅವರ ಶೈಲಿಯಾಗಿರಲಿಲ್ಲ. ಆ ಸ್ಥಿತಿಯಲ್ಲಿ ಅವರನ್ನ ಕಂಡು ಅಚ್ಚರಿ ಆಯಿತು ಎಂದು ಪಾಕಿಸ್ತಾನದ ಮಾಜಿ ಆಟಗಾರ ಇಂಜಮ್ ಉಲ್ ಹಕ್ ಹೇಳಿದ್ಧಾರೆ.

ಇಂಜಮಮ್ ಉಲ್ ಹಕ್

ಇಂಜಮಮ್ ಉಲ್ ಹಕ್

  • Share this:
ಇಸ್ಲಾಮಾಬಾದ್, ನ. 27: ಇತ್ತೀಚೆಗೆ ನಡೆದ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಸೋತು (India lose to Pakistan in T20 World Cup match) ಕೊನೆಗೆ ಸೆಮಿಫೈನಲ್ ಪ್ರವೇಶಕ್ಕೆ ಮುನ್ನವೇ ಟೂರ್ನಿಯಿಂದ ನಿರ್ಗಮಿಸಿತ್ತು. ಯಾವುದೇ ಕ್ರಿಕೆಟ್ ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಕಂಡ ಮೊದಲ ಸೋಲಾಗಿತ್ತು. ಭಾರತ ಯಾಕೆ ಸೋತಿತು ಎಂಬುದಕ್ಕೆ ಬಹಳಷ್ಟು ವಿಶ್ಲೇಷಣೆಗಳು, ಟೀಕೆಗಳು, ಅನಿಸಿಕೆಗಳು ಬಂದು ಹೋಗಿವೆ. ಈಗ ಅದಾಗಿ ತಿಂಗಳ ನಂತರ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಅಲ್ಲಿನ ಆಯ್ಕೆಗಾರ ಇಂಜಮಮ್ ಉಲ್ ಹಕ್ (Inzamam-ul-Haq) ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಎದುರು ಭಾರತ ಸೋಲಲು ಕಾರಣ ಏನಿರಬಹುದು ಎಂದು ತಿಳಿಸಿದ್ದಾರೆ. ಹಾಗೆಯೇ ಟೀಮ್ ಇಂಡಿಯಾಗೆ ಸಹಾನುಭೂತಿಯನ್ನೂ ವ್ಯಕ್ತಪಡಿಸಿದ್ದಾರೆ.

ಭಾರತದ ಆಟಗಾರರು ಆ ಪಂದ್ಯಕ್ಕೆ ಮುನ್ನವೇ ಬಹಳ ಒತ್ತಡಕ್ಕೆ ಸಿಲುಕಿದಂತ ಕಂಡರು. ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಂ ಟಾಸ್​ಗೆ ಬಂದಾಗ ನಾನು ಗಮನಿಸಿದಂತೆ ಭಾರತೀಯರು ಬಹಳ ಒತ್ತಡದಲ್ಲಿದ್ದಂತಿತ್ತು. ಅದಕ್ಕೆ ಅವರು 10 ವಿಕೆಟ್​ಗಳಿಂದ ಸೋತರು. ಭಾರತೀಯ ಆಟಗಾರರ ಬಾಡಿ ಲಾಂಗ್ವೇಜ್ ಗಮನಿಸಿದರೆ ಅವರು ವಿಚಲಿತಗೊಂಡಂತಿತ್ತು. ಪಾಕಿಸ್ತಾನದ ಆಟಗಾರರು ಹೆಚ್ಚು ಆತ್ಮವಿಶ್ವಾಸದಲ್ಲಿದ್ದರು. ಪಂದ್ಯ ಗೆಲ್ಲುವ ಛಲದಲ್ಲಿದ್ದರು ಎಂದು ಪಾಕಿಸ್ತಾನ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಬ್ಯಾಟರ್​ಗಳ ಪೈಕಿ ಒಬ್ಬರೆನಿಸಿರುವ ಇಂಜಮಮ್ ಅವರು ತಿಳಿದ್ದಾರೆ.

ಭಾರತೀಯರು ಆಡಿದ ರೀತಿ ಕಂಡು ಅಚ್ಚರಿ ಆಯಿತು ಎಂದ ಇಂಜಿ: 

ಪಾಕಿಸ್ತಾನದ ಸ್ಥಳೀಯ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡುತ್ತಿದ್ದ ಇಂಜಮಮ್ ಉಲ್ ಹಕ್, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಭಾರತೀಯರು ಆಡಿದ ರೀತಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

“ಭಾರತ ಒಳ್ಳೆಯ ಟಿ20 ತಂಡ. ಬಹಳಷ್ಟು ಪ್ರತಿಭಾನ್ವಿತರು ತಂಡದಲ್ಲಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಅವರ ಸಾಧನೆ ಗಮನಿಸಿದರೆ ಇಂಗ್ಲೆಂಡ್ ಜೊತೆ ಭಾರತ ಕೂಡ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ಅವರು ಸೆಮಿಫೈನಲ್ ಕೂಡ ಪ್ರವೇಶಿಸಲು ಆಗಲಿಲ್ಲ. ಯಾಕೆಂದರೆ ನಮ್ಮ ಹಾಗೂ ನ್ಯೂಜಿಲೆಂಡ್ ವಿರುದ್ಧ ಅವರು ಆಡಿದ ರೀತಿ ಅವರ ಶೈಲಿಗೆ ಒಪ್ಪುವಂಥದ್ದಲ್ಲ” ಎಂದು ಅವರು ಹೇಳಿದ್ಧಾರೆ.

ಇದನ್ನೂ ಓದಿ: Dance- ಕೊಹ್ಲಿಗೆ ಡ್ಯಾನ್ಸ್ ಹೇಳಿಕೊಟ್ಟ ಚಹಲ್ ಪತ್ನಿ; ಶತಕದ ಸಂಭ್ರಮದಲ್ಲಿ ಅಯ್ಯರ್ ಡ್ಯಾನ್ಸ್

“ಪಾಕಿಸ್ತಾನ ವಿರುದ್ಧ ಪಂದ್ಯ ಭಾರತದ ಆಟಗಾರರ ಮೇಲೆ ತುಂಬಾ ಒತ್ತಡ ತಂದಂತಿತ್ತು. ವಿಶ್ವಕಪ್ ಪಂದ್ಯಗಳಲ್ಲಿ ನಮ್ಮ ವಿರುದ್ಧ ಅವರು ಯಾವಾಗಲೂ ಚೆನ್ನಾಗಿ ಆಡಿದ್ದಾರೆ. ಆದರೆ, ಅಂದು ಅದೇಕೆ ಹಾಗೆ ಆಡಿದರೋ ಗೊತ್ತಿಲ್ಲ” ಎಂದೂ ಇಂಜಮಮ್ ತಿಳಿಸಿದ್ಧಾರೆ.

ಪಾಕಿಸ್ತಾನ ವಿರುದ್ಧದ ಸೋಲಿನ ಗಾಯ: 

ಐಪಿಎಲ್ ಮುಗಿದ ಕೂಡಲೇ ಆರಂಭವಾದ ಟಿ20 ವಿಶ್ವಕಪ್​ನಲ್ಲಿ ಭಾರತದ ಅಭಿಯಾನ ಶುರುವಾಗಿದ್ದೇ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ. ಅಕ್ಟೋಬರ್ 24ರಂದು ನಡೆದ ಆ ಪಂದ್ಯದಲ್ಲಿ ಭಾರತ 10 ವಿಕೆಟ್​ಗಳಿಂದ ಹೀನಾಯವಾಗಿ ಸೋತಿತು. ಬ್ಯಾಟಿಂಗ್​ನಲ್ಲಿ ಬಹುತೇಕ ವಿರಾಟ್ ಕೊಹ್ಲಿ ಅವರು ಏಕಾಂಗಿಯಾಗಿ ಹೋರಾಡಿ ಗೌರವಾರ್ಹವೆನಿಸುವ ಸ್ಕೋರ್ ಸಿಗುವಂತೆ ಮಾಡಿದರು. ಆದರೆ, ಪಾಕಿಸ್ತಾನದ ಆರಂಭಿಕ ಬ್ಯಾಟರ್​ಗಳಾದ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರಿಬ್ಬರೇ ಲೀಲಾಜಾಲವಾಗಿ ಆ ಟಾರ್ಗೆಟ್ ಚೇಸ್ ಮಾಡಿದ್ದರು.

ಇದನ್ನೂ ಓದಿ: IPL 2022- ರೀಟೈನ್ ಆಗಲಿರುವ ಆಟಗಾರರು; ಹಣ ಎಷ್ಟು, ಹರಾಜು ಯಾವಾಗ, ಎಲ್ಲಾ ಮಾಹಿತಿ

ಪಾಕಿಸ್ತಾನ ವಿರುದ್ಧದ ಆ ಹೀನಾಯ ಸೋಲಿನಿಂದ ಆದ ಗಾಯ ಭಾರತವನ್ನು ಅದರ ಮುಂದಿನ ಪಂದ್ಯ ನ್ಯೂಜಿಲೆಂಡ್ ವಿರುದ್ಧವೂ ಕಾಡಿತು. ಕಿವೀಸ್ ಪಡೆ ವಿರುದ್ಧವೂ ಭಾರತ ಸುಲಭವಾಗಿ ಶರಣಾಯಿತು. ಈ ಎರಡು ಸತತ ಸೋಲುಗಳು ಟೀಮ್ ಇಂಡಿಯಾಗೆ ವಿಶ್ವಕಪ್ ಸೆಮಿಫೈನಲ್ ಪ್ರವೇಶದ ಸಾಧ್ಯತೆಯನ್ನ ಮಸುಕಾಗಿಸಿತು.

ಪಾಕಿಸ್ತಾನಕ್ಕೆ ಒದಗಿಸಿತ್ತು ಬಲ: 

ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಸಿಕ್ಕ ಗೆಲುವು ಪಾಕಿಸ್ತಾನದ ಆತ್ಮವಿಶ್ವಾಸವನ್ನು ನೂರ್ಮಡಿಗೊಳಿಸಿತ್ತು. ಸೂಪರ್-12ರಲ್ಲಿ ಪಾಕಿಸ್ತಾನ ಎಲ್ಲಾ ಪಂದ್ಯಗಳನ್ನ ಬಹಳ ಸುಲಭವಾಗಿ ಗೆದ್ದು ಬೀಗಿತು. ಇಂಜಮಮ್ ಉಲ್ ಹಕ್ ಅವರು ಭಾರತ ವಿರುದ್ಧದ ಗೆಲುವು ಪಾಕಿಸ್ತಾನಕ್ಕೆ ದೊಡ್ಡ ಮಟ್ಟದಲ್ಲಿ ಆತ್ಮವಿಶ್ವಾಸ ತಂದುಕೊಟ್ಟಿದ್ದನ್ನು ಒಪ್ಪಿಕೊಳ್ಳುತ್ತಾರೆ.
Published by:Vijayasarthy SN
First published: