Ind vs Aus- ಆಸ್ಟ್ರೇಲಿಯಾ-ಭಾರತ ಪಿಂಕ್ ಬಾಲ್ ಟೆಸ್ಟ್; ಡ್ರಾನತ್ತ ಪಂದ್ಯ

Women’s Cricket- ಭಾರತ ಆಸ್ಟ್ರೇಲಿಯಾ ನಡುವಿನ ಏಕೈಕ ಟೆಸ್ಟ್ ಪಂದ್ಯ ಡ್ರಾನತ್ತ ಸಾಗಿದೆ. ಭಾರತ ಮೊದಲ ಇನ್ನಿಂಗ್ಸನ್ನು 377 ರನ್​ಗೆ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿದೆ. ಇನ್ನೊಂದು ದಿನ ಬಾಕಿ ಇದೆ.

ಭಾರತ ಮಹಿಳಾ ಕ್ರಿಕೆಟಿಗರು

ಭಾರತ ಮಹಿಳಾ ಕ್ರಿಕೆಟಿಗರು

  • Share this:
    ಕರಾರ, ಅ. 02: ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ರಾಜ್ಯದ ಕರಾರದಲ್ಲಿ ನಡೆಯುತ್ತಿರುವ ಆತಿಥೇಯ ಆಸ್ಟ್ರೇಲಿಯಾ ಮತ್ತು ಭಾರತ ಮಹಿಳಾ ತಂಡಗಳ ನಡುವಿನ ಏಕೈಕ ಡೇ ನೈಟ್ ಟೆಸ್ಟ್ ಪಂದ್ಯ ಡ್ರಾನತ್ತ ಸಾಗುತ್ತಿದೆ. ಇಂದು ನಡೆದ ಮೂರನೇ ದಿನದಾಟದ ಅಂತ್ಯದಲ್ಲಿ ಭಾರತದ 377 ರನ್​ನ ಮೊದಲ ಇನ್ನಿಂಗ್ಸ್ ಸ್ಕೋರ್​ಗೆ ಪ್ರತಿಯಾಗಿ ಆಸ್ಟ್ರೇಲಿಯನ್ನರು 4 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿದ್ದಾರೆ. ನಾಳೆ ಕೊನೆಯ ದಿನವಾಗಿದ್ದು, ಪಂದ್ಯ ಡ್ರಾ ಆಗುವುದು ಬಹುತೇಕ ಖಚಿತವೆಂಬಂತಿದೆ.

    ಮಳೆ ಹಾಗು ಕೆಟ್ಟ ಹವಾಮಾನಕ್ಕೆ ಎರಡು ದಿನದ ಅರ್ಧದಷ್ಟು ಆಟ ಬಲಿಯಾಗಿತ್ತು. ಆ ನಡುವೆಯೂ ಭಾರತದ ಮಹಿಳೆಯರು 8 ವಿಕೆಟ್ ನಷ್ಟಕ್ಕೆ 377 ರನ್ ಗಳಿಸಿದರು. ಇದು ನಾಲ್ಕು ದಿನಗಳ ಟೆಸ್ಟ್ ಪಂದ್ಯವಾದ್ದರಿಂದ ಇಂದು ಮೂರನೇ ದಿನದಂದು ಭಾರತದ ವನಿತೆಯರು ಹೆಚ್ಚು ಹೊತ್ತು ಆಟ ಮುಂದುವರಿಸದೇ ಡಿಕ್ಲೇರ್ ಮಾಡಿಕೊಂಡರು. ನಿನ್ನೆ ಎರಡನೇ ದಿನಾಂತ್ಯಕ್ಕೆ ಭಾರತ 5 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿತ್ತು. ಇಂದು ಆ ಸ್ಕೋರಿಗೆ 101 ರನ್ ಸೇರಿಸುವಲ್ಲಿ ಯಶಸ್ವಿಯಾಯಿತು.

    ದೀಪ್ತಿ ಶರ್ಮಾ ಅಮೋಘ ಅರ್ಧಶತಕ ಭಾರಿಸಿ ಗಮನ ಸೆಳೆದರು. ದೀಪ್ತಿ 167 ಬಾಲ್​ನಲ್ಲಿ ಗಳಿಸಿದ 66 ರನ್​ನಲ್ಲಿ 8 ಬೌಂಡರಿ ಒಳಗೊಂಡಿವೆ. ಇವರಿಗೆ ತನಿಯಾ ಭಾಟಿಯಾ, ಪೂಜಾ ವಸ್ತ್ರಾಕರ್ ಅವರೂ ತಕ್ಕಷ್ಟು ಕಾಲ ಜೊತೆಯಾಟ ನೀಡಿದರು. ದೀಪ್ತಿ ಮತ್ತು ತನಿಯಾ ಭಾಟಿಯಾ 6ನೇ ವಿಕೆಟ್​ಗೆ 45 ರನ್ ಸೇರಿಸಿದರು. ನಂತರ ದೀಪ್ತಿ ಮತ್ತು ಪೂಜಾ ವಸ್ತ್ರಾಕರ್ 7ನೇ ವಿಕೆಟ್​ಗೆ 40 ರನ್ ಕೂಡಿಹಾಕಿದರು. ಇದರಿಂದಾಗಿ ಭಾರತದ ಮಹಿಳಾ ತಂಡದ ಸ್ಕೋರು ಇನ್ನಷ್ಟು ಉಬ್ಬುವಂತಾಯಿತು.

    ಭಾರತದ ಈ ಇನ್ನಿಂಗ್ಸಲ್ಲಿ ಬಹುತೇಕ ಎಲ್ಲಾ ಪ್ರಮುಖ ಬ್ಯಾಟರ್​ಗಳ ಕೊಡುಗೆ ಇದೆ. ಸ್ಮೃತಿ ಮಂಧನಾ ಅವರಿಗೆ ಚೊಚ್ಚಲ ಟೆಸ್ಟ್ ಶತಕದ ಸಂಭ್ರಮ ಸಿಕ್ಕಿತು. ಕಾಂಗರೂ ನಾಡಿನ ಪಿಚ್​ನಲ್ಲಿ ಸ್ಮೃತಿ ಆಟದ ಸೊಗಸಿಗೆ ಅತಿಥೇಯ ದೇಶದ ಕ್ರಿಕೆಟ್ ದಿಗ್ಗಜರು ಮಾರು ಹೋಗಿದ್ದಾರೆ. ಆಫ್​ಸೈಡ್ ಎಸೆತವನ್ನು ಮನಮೋಹಕ ಶಾಟ್​ಗಳಿಂದ ಎದುರಿಸುವ ಸ್ಮೃತಿ ಅವರನ್ನ ಆಫ್​ಸೈಡ್ ದೇವತೆ ಎಂದು ಬಿರುದೂ ಕೊಟ್ಟಿದ್ದಾರೆ. ಶಫಾಲಿ ವರ್ಮಾ, ಪೂನಮ್ ರಾವತ್, ಮಿಥಾಲಿ ರಾಜ್, ಯಸ್ತಿಕಾ ಭಾಟಿಯಾ ಅವರೆಲ್ಲರೂ ನಿನ್ನೆ ಮತ್ತು ಮೊನ್ನೆಯ ದಿನದಾಟದಲ್ಲಿ ಉತ್ತಮವಾಗಿ ಆಡಿದ್ದರು.

    ಇಂದು ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ವನಿತೆಯರು ಭಾರತದ ಬೌಲರ್​ಗಳೆದುರು ಹೆಚ್ಚು ಪ್ರಾಬಲ್ಯ ತೋರಲು ಸಾಧ್ಯವಾಗಲಿಲ್ಲ. ಝೂಲನ್ ಗೋಸ್ವಾಮಿ ಮತ್ತು ಪೂಜಾ ವಸ್ತ್ರಾಕರ್ ಇಬ್ಬರೂ ತಲಾ ಎರಡು ವಿಕೆಟ್ ಪಡೆದರು. ವಿಶ್ವದ ಅತ್ಯಂತ ವೇಗದ ಮಹಿಳಾ ಬೌಲರ್ ಎನಿಸಿರುವ ಝೂಲನ್ ಗೋಸ್ವಾಮಿ ಅವರಿಗೆ ಇದು ಕೊನೆಯ ಟೆಸ್ಟ್ ಪಂದ್ಯವಾಗಿದೆ. ಈ ಟೆಸ್ಟ್ ಬಳಿಕ ಅವರು ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ. ತಮ್ಮ ಈ ಅಂತಿಮ ಟೆಸ್ಟ್​​ನಲ್ಲಿ ಈಗಾಗಲೇ 2 ವಿಕೆಟ್ ಪಡೆದಿರುವ ಅವರು ನಾಳೆ ಇನ್ನೆಷ್ಟು ಆಸ್ಟ್ರೇಲಿಯಾ ಬ್ಯಾಟರ್​ಗಳನ್ನ ಪೆವಿಲಿಯನ್​ಗೆ ಕಳುಹಿಸುವಲ್ಲಿ ಸಫಲರಾಗುತ್ತಾರೆ ಕಾದುನೋಡಬೇಕು. ನಾಳೆ ಕೊನೆಯ ದಿನವಾಗಿದ್ದು, ಈ ಪಂದ್ಯದಲ್ಲಿ ಫಲಿತಾಂಶ ಬರುವುದು ಬಹುತೇಕ ಅಸಾಧ್ಯ. ಆದರೆ, ಕೊನೆಯ ದಿನದಂದು ಆಸ್ಟ್ರೇಲಿಯಾ ಬ್ಯಾಟಿಂಗ್ ದಿಢೀರ್ ಪತನಗೊಂಡು ಫಾಲೋ ಆನ್ ಆದರೆ ಕುತೂಹಲ ಹುಟ್ಟಿಸಲಿದೆ. ಸದ್ಯ ಆ ಪರಿಸ್ಥಿತಿ ಬರುವುದು ಅನುಮಾನ.

    ಇದನ್ನೂ ಓದಿ: Gandhi and Football- ದಕ್ಷಿಣ ಆಫ್ರಿಕಾದಲ್ಲಿ ಫುಟ್ಬಾಲ್ ಮೂಲಕ ಬಿಳಿಯರಿಗೆ ಬಿಸಿ ಮುಟ್ಟಿಸಿದ್ದ ಗಾಂಧೀಜಿ

    ಈ ಹಗಲು ರಾತ್ರಿಯ ಟೆಸ್ಟ್ ಪಂದ್ಯಕ್ಕೆ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳೆಯರ ಮಧ್ಯೆ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯೂ ಆಗಿದೆ. ಇದರಲ್ಲಿ ಮೊದಲ ಪಂದ್ಯವನ್ನ ಆಸ್ಟ್ರೇಲಿಯನ್ನರು ಸುಲಭವಾಗಿ ಗೆದ್ದರೆ ಎರಡನೇ ಪಂದ್ಯ ಅದೃಷ್ಟದಲ್ಲಿ ಗೆದ್ದಿದ್ದರು. ಆದರೆ, ಮೂರನೇ ಪಂದ್ಯದಲ್ಲಿ ಭಾರತದ ವೀರ ವನಿತೆಯರು ಐತಿಹಾಸಿಕ ಗೆಲುವು ದಾಖಲಿಸಿ ತಾವು ವಿಶ್ವದ ಅತ್ಯಂತ ಪ್ರಬಲ ತಂಡಗಳಲ್ಲೊಂದು ಎಂದು ಸಾಬೀತು ಮಾಡಿ ತೋರಿಸಿದ್ದರು. ಈ ಟೆಸ್ಟ್ ಪಂದ್ಯದ ಬಳಿಕ ಎರಡೂ ತಂಡಗಳ ಮಧ್ಯೆ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯೂ ಇದೆ.

    ಸ್ಕೋರು ವಿವರ:

    ಭಾರತದ ಮಹಿಳಾ ತಂಡ ಮೊದಲ ಇನ್ನಿಂಗ್ಸ್ 145 ಓವರ್ 377/8
    (ಸ್ಮೃತಿ ಮಂಧನಾ 127, ದೀಪ್ತಿ ಶರ್ಮಾ 66, ಪೂನಮ್ ರಾವತ್ 36, ಮಿಥಾಲಿ ರಾಜ್ 30, ಶಫಾಲಿ ವರ್ಮಾ 31, ತಾನಿಯಾ ಭಟಿಯಾ 22, ಯಸ್ತಿಕಾ ಭಾಟಿಯಾ 19, ಪೂಜಾ ವಸ್ತ್ರಾಕರ್ 13 ರನ್ – ಸೋಫೀ ಮೋಲಿನ್ಯೂಕ್ಸ್ 45/2, ಸ್ಟೆಲಾ ಕ್ಯಾಂಪ್​ಬೆಲ್ 47/2, ಎಲಿಸ್ ಪೆರಿ 76/2)

    ಆಸ್ಟ್ರೇಲಿಯಾ ಮಹಿಳಾ ತಂಡ ಮೊದಲ ಇನ್ನಿಂಗ್ಸ್ 60 ಓವರ್ 143/4
    (ಮೆಗ್ ಲ್ಯಾನಿಂಗ್ 38, ಟಾಹ್ಲಿಯಾ ಮೆಕ್​ಗ್ರಾಥ್ 28, ಎಲಿಸ್ ಪೆರಿ ಅಜೇಯ 27 ರನ್ – ಝೂಲನ್ ಗೋಸ್ವಾಮಿ 27/2, ಪೂಜಾ ವಸ್ತ್ರಾಕರ್ 31/2)
    Published by:Vijayasarthy SN
    First published: