ಕರಾರ, ಅ. 02: ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ರಾಜ್ಯದ ಕರಾರದಲ್ಲಿ ನಡೆಯುತ್ತಿರುವ ಆತಿಥೇಯ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಏಕೈಕ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಭಾರತ 377 ರನ್ಗೆ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮಳೆ ಹಾಗು ಕೆಟ್ಟ ಹವಾಮಾನಕ್ಕೆ ಎರಡು ದಿನದ ಅರ್ಧದಷ್ಟು ಆಟ ಬಲಿಯಾಗಿತ್ತು. ಆ ನಡುವೆಯೂ ಭಾರತದ ಮಹಿಳೆಯರು 8 ವಿಕೆಟ್ ನಷ್ಟಕ್ಕೆ 377 ರನ್ ಗಳಿಸಿದರು. ಇದು ನಾಲ್ಕು ದಿನಗಳ ಟೆಸ್ಟ್ ಪಂದ್ಯವಾದ್ದರಿಂದ ಇಂದು ಮೂರನೇ ದಿನದಂದು ಭಾರತದ ವನಿತೆಯರು ಹೆಚ್ಚು ಹೊತ್ತು ಆಟ ಮುಂದುವರಿಸದೇ ಡಿಕ್ಲೇರ್ ಮಾಡಿಕೊಂಡರು. ನಿನ್ನೆ ಎರಡನೇ ದಿನಾಂತ್ಯಕ್ಕೆ ಭಾರತ 5 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿತ್ತು. ಇಂದು ಆ ಸ್ಕೋರಿಗೆ 101 ರನ್ ಸೇರಿಸುವಲ್ಲಿ ಯಶಸ್ವಿಯಾಗಿದೆ.
ದೀಪ್ತಿ ಶರ್ಮಾ ಅಮೋಘ ಅರ್ಧಶತಕ ಭಾರಿಸಿ ಗಮನ ಸೆಳೆದರು. ದೀಪ್ತಿ 167 ಬಾಲ್ನಲ್ಲಿ ಗಳಿಸಿದ 66 ರನ್ನಲ್ಲಿ 8 ಬೌಂಡರಿ ಒಳಗೊಂಡಿವೆ. ಇವರಿಗೆ ತನಿಯಾ ಭಾಟಿಯಾ, ಪೂಜಾ ವಸ್ತ್ರಾಕರ್ ಅವರೂ ತಕ್ಕಷ್ಟು ಕಾಲ ಜೊತೆಯಾಟ ನೀಡಿದರು. ದೀಪ್ತಿ ಮತ್ತು ತನಿಯಾ ಭಾಟಿಯಾ 6ನೇ ವಿಕೆಟ್ಗೆ 45 ರನ್ ಸೇರಿಸಿದರು. ನಂತರ ದೀಪ್ತಿ ಮತ್ತು ಪೂಜಾ ವಸ್ತ್ರಾಕರ್ 7ನೇ ವಿಕೆಟ್ಗೆ 40 ರನ್ ಕೂಡಿಹಾಕಿದರು. ಇದರಿಂದಾಗಿ ಭಾರತದ ಮಹಿಳಾ ತಂಡದ ಸ್ಕೋರು ಇನ್ನಷ್ಟು ಉಬ್ಬುವಂತಾಯಿತು.
ಭಾರತದ ಈ ಇನ್ನಿಂಗ್ಸಲ್ಲಿ ಬಹುತೇಕ ಎಲ್ಲಾ ಪ್ರಮುಖ ಬ್ಯಾಟರ್ಗಳ ಕೊಡುಗೆ ಇದೆ. ಸ್ಮೃತಿ ಮಂಧನಾ ಅವರಿಗೆ ಚೊಚ್ಚಲ ಟೆಸ್ಟ್ ಶತಕದ ಸಂಭ್ರಮ ಸಿಕ್ಕಿತು. ಕಾಂಗರೂ ನಾಡಿನ ಪಿಚ್ನಲ್ಲಿ ಸ್ಮೃತಿ ಆಟದ ಸೊಗಸಿಗೆ ಅತಿಥೇಯ ದೇಶದ ಕ್ರಿಕೆಟ್ ದಿಗ್ಗಜರು ಮಾರು ಹೋಗಿದ್ದಾರೆ. ಆಫ್ಸೈಡ್ ಎಸೆತವನ್ನು ಮನಮೋಹಕ ಶಾಟ್ಗಳಿಂದ ಎದುರಿಸುವ ಸ್ಮೃತಿ ಅವರನ್ನ ಆಫ್ಸೈಡ್ ದೇವತೆ ಎಂದು ಬಿರುದೂ ಕೊಟ್ಟಿದ್ದಾರೆ. ಶಫಾಲಿ ವರ್ಮಾ, ಪೂನಮ್ ರಾವತ್, ಮಿಥಾಲಿ ರಾಜ್, ಯಸ್ತಿಕಾ ಭಾಟಿಯಾ ಅವರೆಲ್ಲರೂ ನಿನ್ನೆ ಮತ್ತು ಮೊನ್ನೆಯ ದಿನದಾಟದಲ್ಲಿ ಉತ್ತಮವಾಗಿ ಆಡಿದ್ದರು.
ವಿಶ್ವದ ಅತ್ಯಂತ ವೇಗದ ಮಹಿಳಾ ಬೌಲರ್ ಎನಿಸಿರುವ ಝೂಲನ್ ಗೋಸ್ವಾಮಿ ಅವರಿಗೆ ಇದು ಕೊನೆಯ ಟೆಸ್ಟ್ ಪಂದ್ಯವಾಗಿದೆ. ಈ ಟೆಸ್ಟ್ ಬಳಿಕ ಅವರು ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ. ತಮ್ಮ ಈ ಅಂತಿಮ ಟೆಸ್ಟ್ನಲ್ಲಿ ಅವರು ಆಸ್ಟ್ರೇಲಿಯಾದ ಬ್ಯಾಟರ್ಗಳನ್ನ ಹೆಚ್ಚಿನ ಸಂಖ್ಯೆಯಲ್ಲಿ ಪೆವಿಲಿಯನ್ಗೆ ಕಳುಹಿಸುವಲ್ಲಿ ಸಫಲರಾಗುತ್ತಾರಾ ಕಾದುನೋಡಬೇಕು. ಆಸ್ಟ್ರೇಲಿಯಾ ಈಗಾಗಲೇ 63 ರನ್ಗೆ 2 ವಿಕೆಟ್ ಕಳೆದುಕೊಂಡಿದೆ. ಝೂಲನ್ ಅವರೇ ಈ ಎರಡು ವಿಕೆಟ್ ಪಡೆದಿದ್ಧಾರೆ. ನಾಳೆ ಕೊನೆಯ ದಿನವಾಗಿದ್ದು, ಈ ಪಂದ್ಯದಲ್ಲಿ ಫಲಿತಾಂಶ ಬರುವುದು ಬಹುತೇಕ ಅಸಾಧ್ಯ. ಆದರೆ, ಝೂಲನ್ ಗೋಸ್ವಾಮಿ ಅವರಂತಹ ಮಾರಕ ಬೌಲರ್ಗಳನ್ನ ಹೊಂದಿರುವ ಭಾರತ ತಂಡ ಎಂಥ ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥವಾಗಿದ ಎಂಬುದಕ್ಕೆ ಭಾರತದ ಈ ಆಸ್ಟ್ರೇಲಿಯಾ ಪ್ರವಾಸದ ಹಿಂದಿನ ಪಂದ್ಯಗಳೇ ಸಾಕ್ಷಿಯಾಗಿವೆ.
ಇದನ್ನೂ ಓದಿ: Smriti Mandhana|'Off Side ದೇವತೆ ಸ್ಮೃತಿ ಮಂದಾನ'; ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಶತಕದ ಬಳಿಕ ಪ್ರಶಂಶೆಯ ಮಹಾಪೂರ!
ಈ ಹಗಲು ರಾತ್ರಿಯ ಟೆಸ್ಟ್ ಪಂದ್ಯಕ್ಕೆ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳೆಯರ ಮಧ್ಯೆ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯೂ ಆಗಿದೆ. ಇದರಲ್ಲಿ ಮೊದಲ ಪಂದ್ಯವನ್ನ ಆಸ್ಟ್ರೇಲಿಯನ್ನರು ಸುಲಭವಾಗಿ ಗೆದ್ದರೆ ಎರಡನೇ ಪಂದ್ಯ ಅದೃಷ್ಟದಲ್ಲಿ ಗೆದ್ದಿದ್ದರು. ಆದರೆ, ಮೂರನೇ ಪಂದ್ಯದಲ್ಲಿ ಭಾರತದ ವೀರ ವನಿತೆಯರು ಐತಿಹಾಸಿಕ ಗೆಲುವು ದಾಖಲಿಸಿ ತಾವು ವಿಶ್ವದ ಅತ್ಯಂತ ಪ್ರಬಲ ತಂಡಗಳಲ್ಲೊಂದು ಎಂದು ಸಾಬೀತು ಮಾಡಿ ತೋರಿಸಿದ್ದರು.
ಸ್ಕೋರು ವಿವರ:
ಭಾರತದ ಮಹಿಳಾ ತಂಡ ಮೊದಲ ಇನ್ನಿಂಗ್ಸ್ 145 ಓವರ್ 377/8
(ಸ್ಮೃತಿ ಮಂಧನಾ 127, ದೀಪ್ತಿ ಶರ್ಮಾ 66, ಪೂನಮ್ ರಾವತ್ 36, ಮಿಥಾಲಿ ರಾಜ್ 30, ಶಫಾಲಿ ವರ್ಮಾ 31, ತಾನಿಯಾ ಭಟಿಯಾ 22, ಯಸ್ತಿಕಾ ಭಾಟಿಯಾ 19, ಪೂಜಾ ವಸ್ತ್ರಾಕರ್ 13 ರನ್ – ಸೋಫೀ ಮೋಲಿನ್ಯೂಕ್ಸ್ 45/2, ಸ್ಟೆಲಾ ಕ್ಯಾಂಪ್ಬೆಲ್ 47/2, ಎಲಿಸ್ ಪೆರಿ 76/2)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ