ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕು ಪಂದ್ಯಗಳ ಸರಣಿಯ ಮೂರನೇ ಟೆಸ್ಟ್ ಫೆಬ್ರವರಿ 24 ರಿಂದ ಅಹಮದಾಬಾದ್ನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೊನಲು ಬೆಳಕಿನಲ್ಲಿ ನಡೆಯುವ ಪಂದ್ಯವಾಗಿರುವುದರಿಂದ ಇಲ್ಲಿ ಪಿಂಕ್ ಬಾಲ್ ಅನ್ನು ಬಳಸಲಾಗುತ್ತದೆ. ತವರಿನಲ್ಲಿ ಇದು ಭಾರತಕ್ಕೆ 2ನೇ ಡೇ ನೈಟ್ ಟೆಸ್ಟ್ ಪಂದ್ಯ. ಇದಕ್ಕೂ ಮೊದಲು ಟೀಮ್ ಇಂಡಿಯಾ ಕೊಲ್ಕತ್ತಾ ಈಡನ್ ಗಾರ್ಡನ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ ಭಾರತ ಜಯಗಳಿಸಿತ್ತು. ಇನ್ನು ಈ ಸರಣಿಯ ಎರಡು ಪಂದ್ಯಗಳನ್ನು ಚೆನ್ನೈನಲ್ಲಿ ಆಡಲಾಗಿದ್ದು, ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ದ್ವಿತೀಯ ಟೆಸ್ಟ್ನಲ್ಲಿ ಭಾರತ ಜಯ ಸಾಧಿಸಿದೆ. ಇದೀಗ ಮೂರನೇ ಟೆಸ್ಟ್ಗಾಗಿ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಸಜ್ಜಾಗಿದೆ.
1 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳ ಸಾಮರ್ಥ್ಯ ಹೊಂದಿರುವ ಮೊಟೆರಾ ಕ್ರೀಡಾಂಗಣದಲ್ಲಿ ಈ ಬಾರಿ ಕೋವಿಡ್ -19 ಪ್ರೋಟೋಕಾಲ್ ಕಾರಣ, ಪ್ರತಿದಿನ 50,000 ಅಭಿಮಾನಿಗಳು ಮಾತ್ರ ಅವಕಾಶ ನೀಡಲಾಗಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳಲ್ಲೂ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಾಗೆಯೇ ನಾಳಿನ ಪಂದ್ಯಕ್ಕೆ ಟೀಮ್ ಇಂಡಿಯಾ ಸಂಭಾವ್ಯ ಪಟ್ಟಿ ಹೀಗಿರಲಿದೆ.
ಆರಂಭಿಕರು: ಟೀಮ್ ಇಂಡಿಯಾದ ಆರಂಭಿಕ ಜೋಡಿಯ ಬಗ್ಗೆ ಯಾವುದೇ ಸಂದೇಹವಿಲ್ಲ. ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ರೋಹಿತ್ ಶರ್ಮಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಫಾರ್ಮ್ಗೆ ಮರಳಿದ್ದಾರೆ. ಎರಡನೇ ಟೆಸ್ಟ್ನಲ್ಲಿ 231 ಎಸೆತಗಳಲ್ಲಿ 161 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಹಾಗೆಯೇ 2ನೇ ಪಂದ್ಯದ ವೇಳೆ ಗಾಯಗೊಂಡಿದ್ದ ಶುಭ್ಮನ್ ಗಿಲ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಹೀಗಾಗಿ ಅವರೇ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
ಮಧ್ಯಮ ಕ್ರಮಾಂಕ: ಮೂರನೇ ಟೆಸ್ಟ್ನಲ್ಲೂ 3ನೇ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ನಾಲ್ಕನೇ ಸ್ಥಾನದಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲಿದ್ದಾರೆ. ಇನ್ನು ಪಿಂಕ್ ಬಾಲ್ ಟೆಸ್ಟ್ನಲ್ಲಿ ಶತಕ ಗಳಿಸಿದ ಮೊದಲ ಮತ್ತು ಏಕೈಕ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಎಂಬುದು ವಿಶೇಷ. ಇನ್ನು 5ನೇ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಬ್ಯಾಟಿಂಗ್ ಮಾಡಲಿದ್ದಾರೆ. ಇದರ ನಂತರ ವಿಕೆಟ್ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರೆ.
ಆಲ್ ರೌಂಡರ್: ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರು ಸ್ಪಿನ್ ವಿಭಾಗವನ್ನು ಮುನ್ನಡೆಸುವ ಜೊತೆಗೆ ಬ್ಯಾಟಿಂಗ್ನಲ್ಲೂ ಉತ್ತಮ ಕೊಡುಗೆ ನೀಡಿದ್ದಾರೆ. ಅಶ್ವಿನ್ ಎರಡನೇ ಟೆಸ್ಟ್ನಲ್ಲಿ 8 ವಿಕೆಟ್ ಉರುಳಿಸಿದರು. ಹಾಗೆಯೇ ಬ್ಯಾಟಿಂಗ್ನಲ್ಲಿ ಅದ್ಭುತ ಶತಕವನ್ನು ಸಿಡಿಸಿದ್ದರು. ಅದೇ ರೀತಿ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಅಕ್ಷರ್ ಪಟೇಲ್ 7 ವಿಕೆಟ್ ಪಡೆದು ಮಿಂಚಿದ್ದರು. ಹೀಗಾಗಿ ನಾಳಿನ ಪಂದ್ಯದಲ್ಲೂ ಸ್ಪಿನ್ ವಿಭಾಗವನ್ನು ಇವರಿಬ್ಬರೇ ಮುನ್ನಡೆಸಲಿದ್ದಾರೆ.
ಬೌಲರ್ಸ್: ಬೌಲಿಂಗ್ ವಿಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು. ಎರಡನೇ ಟೆಸ್ಟ್ನಲ್ಲಿ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ ಪಿಂಕ್ ಬಾಲ್ ಟೆಸ್ಟ್ನಲ್ಲಿ ಆಡುವ ಹನ್ನೊಂದಕ್ಕೆ ಅವರು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಹಾಗಾಗಿ ಮೊಹಮ್ಮದ್ ಸಿರಾಜ್ ಅವರ ಬದಲಿಗೆ ಬುಮ್ರಾ ಕಣಕ್ಕಿಳಿಯಬಹುದು. ಇನ್ನು ಫಿಟ್ನೆಸ್ ಪರೀಕ್ಷೆಯಲ್ಲಿ ಉಮೇಶ್ ಯಾದವ್ ಪಾಸ್ ಆಗಿದ್ದಾರೆ. ಕುಲ್ದೀಪ್ ಯಾದವ್ ಬದಲಿಗೆ ಉಮೇಶ್ ಯಾದವ್ ಆಡಬಹುದು. ಇನ್ನು 100 ನೇ ಟೆಸ್ಟ್ ಆಡಿರುವ ಇಶಾಂತ್ ಶರ್ಮಾ ಅವರು ಟೀಮ್ ಇಂಡಿಯಾ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.
ಭಾರತ ಸಂಭಾವ್ಯ ಇಲೆವೆನ್:
ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್, ಇಶಾಂತ್ ಶರ್ಮಾ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ