Pakistan coach- ವಿಶ್ವದ ಅತ್ಯುತ್ತಮ ಕೋಚ್ ಪಾಕಿಸ್ತಾನದ ಮುಂದಿನ ಕೋಚ್?

Gary Kirsten: ಸೌತ್ ಆಫ್ರಿಕಾದ ಮಾಜಿ ಆಟಗಾರ ಹಾಗೂ ಟೀಮ್ ಇಂಡಿಯಾದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಅವರು ಪಾಕಿಸ್ತಾನದ ನೂತನ ಕೋಚ್ ಆಗುವ ಸಾಧ್ಯತೆ ದಟ್ಟವಾಗಿದೆ. ವಿಶ್ವಕಪ್ ಬಳಿಕ ಅವರ ಹೆಸರು ಘೋಷಣೆ ಆಗುವ ನಿರೀಕ್ಷೆ ಇದೆ.

ಗ್ಯಾರಿ ಕರ್ಸ್ಟನ್ ಮತ್ತು ಎಂಎಸ್ ಧೋನಿ

ಗ್ಯಾರಿ ಕರ್ಸ್ಟನ್ ಮತ್ತು ಎಂಎಸ್ ಧೋನಿ

 • Share this:
  ಇಸ್ಲಾಮಾಬಾದ್: ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಅವರು ಪಾಕಿಸ್ತಾನದ ಮುಂದಿನ ಕ್ರಿಕೆಟ್ ಕೋಚ್ ಆಗುವ ಸಾಧ್ಯತೆ ದಟ್ಟವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಿನ ಕೋಚ್​ಗೆ ಶಾರ್ಟ್ ಲಿಸ್ಟ್ ಮಾಡಿರುವ ಮೂರು ಹೆಸರುಗಳಲ್ಲಿ ಕರ್ಸ್ಟನ್ ಅವರದ್ದೂ ಇದೆ. ಆಸ್ಟ್ರೇಲಿಯಾ ಸಿಮನ್ ಕಟಿಚ್ ಮತ್ತು ಇಂಗ್ಲೆಂಡ್​ನ ಪೀಟರ್ ಮೂರ್ಸ್ ಅವರು ಕೋಚ್ ಸ್ಥಾನಕ್ಕೆ ಅರ್ಜಿ ಹಾಕಿರುವ ಇನ್ನಿಬ್ಬರು ಅಭ್ಯರ್ಥಿಗಳಾಗಿದ್ದಾರೆ. ಈ ವಿಶ್ವಕಪ್ ಬಳಿಕ ಗ್ಯಾರಿ ಕರ್ಸ್ಟನ್ ಅವರಿಗೆ ಕೋಚ್ ಸ್ಥಾನ ಸಿಗುವ ಎಲ್ಲಾ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ಕೆಲ ಮಾಧ್ಯಮಗಳು ವರದಿ ಮಾಡಿವೆ.

  ಗ್ಯಾರಿ ಕರ್ಸ್ಟನ್ ಅವರು ದಕ್ಷಿಣ ಆಫ್ರಿಕಾದ ಅತ್ಯುತ್ತಮ ಬ್ಯಾಟುಗಾರರ ಲ್ಲೊಬ್ಬರೆನಿಸಿದ್ದವರು. ಭಾರತ ಕಂಡ ಅತ್ಯುತ್ತಮ ಕೋಚ್ ಎನಿಸಿಕೊಂಡರು. ವಿಶ್ವದ ಅತ್ಯುತ್ತಮ ಕೋಚ್​ಗಳ ಪೈಕಿ ಒಬ್ಬರೆನಿಸಿದವರು. 2011ರ ವಿಶ್ವಕಪ್ ಗೆದ್ದ ಎಂಎಸ್ ಧೋನಿ ನೇತೃತ್ವದ ಟೀಮ್ ಇಂಡಿಯಾಗೆ ಆಗ ಕೋಚ್ ಆಗಿದ್ದವರು ಗ್ಯಾರಿ ಕರ್ಸಟನ್ ಅವರೆಯೇ. ಆಗ ಭಾರತ ತಂಡದ ಬಹುತೇಕ ಆಟಗಾರರ ವಿಶ್ವಾಸವನ್ನು ಗಳಿಸಿದ್ದ ಗ್ಯಾರಿ ಕರ್ಸ್ಟನ್ ಅವರದ್ದು ಆಕ್ರಮಣಕಾರಿ ಸ್ವಭಾವವಾಗಿರಲಿಲ್ಲ. ಆಟಗಾರರನ್ನ ವಿಶ್ವಾಸಕ್ಕೆ ಪಡೆದು ಅವರನ್ನ ಬಹಳ ನಯವಾಗಿ ಹುರಿದುಂಬಿಸುವ ಕೆಲಸವನ್ನು ಕರ್ಸ್ಟರ್ ಮಾಡುತ್ತಿದ್ದರೆಂದು ಆಟಗಾರರ ವಲಯದಲ್ಲಿ ಕೇಳಿಬರುತ್ತಿದ್ದ ಮಾತುಗಳು.

  ಭಾರತದ ಗೆಲುವಿಗೆ ಗರ್ವ ಪಟ್ಟ ಕರ್ಸ್ಟನ್:

  ಭಾರತ 2011ರ ವಿಶ್ವಕಪ್ ಗೆದ್ದದ್ದು ತಮ್ಮ ವೃತ್ತಿ ಜೀವದನ ಪ್ರಮುಖ ಅಂಶಗಳಲ್ಲಿ ಒಂದು ಎಂದು ಗ್ಯಾರಿ ಕರ್ಸ್ಟನ್ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಆ ಕ್ಷಣದ ನಂತರ ಭಾರತ ತಂಡದ ಬೆಳೆದ ರೀತಿ, ಆಟಗಾರರು ಬೆಳೆದ ರೀತಿ ನಿಜಕ್ಕೂ ಹೆಮ್ಮೆ ಮೂಡಿಸುತ್ತದೆ ಎಂದು ಟೀಮ್ ಇಂಡಿಯಾವನ್ನು ಕೆಲ ತಿಂಗಳ ಹಿಂದೆ ಕರ್ಸ್ಟನ್ ಶ್ಲಾಘಿಸಿದ್ದರು.

  ಪಿಎಸ್​ಎಲ್ ತಂಡಗಳ ಕೋಚಿಂಗ್ ಆಫರ್:

  ಭಾರತ ಕ್ರಿಕೆಟ್ ತಂಡದ ಆಟಗಾರರ ಜೊತೆ ಬಹಳ ಆಪ್ಯಾಯಮಾನ ಸಂಬಂಧ ಹೊಂದಿದ್ದ ಕರ್ಸ್ಟನ್ ಅವರು ಈಗ ನೆರೆಯ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಆಗಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಮೂಲಗಳ ಪ್ರಕಾರ, ಕೋಚ್ ಸ್ಥಾನಕ್ಕೆ ಶಾರ್ಟ್ ಲಿಸ್ಟ್ ಆಗಿರುವ ಸೈಮನ್ ಕಟಿಚ್ ಮತ್ತು ಪೀಟರ್ ಮೂರ್ಸ್ ಅವರಿಗೆ ಪಾಕಿಸ್ತಾನ್ ಸೂಪರ್ ಲೀಗ್​ನ ತಂಡಗಳ ಕೋಚ್ ಆಗುವ ಆಫರ್ ಕೊಡಬಹುದು.

  ಇದನ್ನೂ ಓದಿ: Ind vs NZ- ನ್ಯೂಜಿಲೆಂಡ್​ನ ದೊಡ್ಡ ಶಕ್ತಿ ಯಾವುದು ಗೊತ್ತಾ? ಭಾರತಕ್ಕೆ ಜಹೀರ್ ಎಚ್ಚರಿಕೆ ಕರೆಗಂಟೆ

  ಇಂಗ್ಲೆಂಡ್ ತಂಡದ ಪೀಟರ್ ಮೂರ್ಸ್ ಅವರು ತಮ್ಮ ದೇಶದ ತಂಡಕ್ಕೆ ಎರಡು ಬಾರಿ ಮುಖ್ಯ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದಾರೆ. ಇನ್ನು, ಆಸ್ಟ್ರೇಲಿಯಾದ ಸಿಮನ್ ಕಟಿಚ್ ಅವರು ಈ ಹಿಂದೆ ಆರ್​ಸಿಬಿ ತಂಡದ ಕೋಚ್ ಆಗಿದ್ದರು. ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹಾಯಕ ಕೋಚ್ ಕೂಡ ಆಗಿದ್ದರು.

  ಸಕ್ಲೇನ್ ಮುಷ್ತಾಕ್ ಹಂಗಾಮಿ ಕೋಚ್:

  ಪಾಕಿಸ್ತಾನ ಕ್ರಿಕೆಟ್ ತಂಡ ಸದ್ಯ ಪೂರ್ಣಪ್ರಮಾಣದ ಕೋಚ್ ಇಲ್ಲದೇ ವಿಶ್ವಕಪ್ ಆಡುತ್ತಿದೆ. ಮಾಜಿ ಆಫ್ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಸದ್ಯ ಕೋಚ್ ಆಗಿ ತಾತ್ಕಾಲಿಕವಾಗಿ ಕರ್ತವ್ಯ ನಿಭಾಯಿಸುತ್ತಿದ್ಧಾರೆ. ಅಬ್ದುಲ್ ರಜಾಕ್ ಬೌಲಿಂಗ್ ಕೋಚ್ ಆಗಿದ್ದಾರೆ. ವಿಶ್ವಕಪ್​ಗೆ ಮುನ್ನ ಮಿಸ್ಬಾ ಉಲ್ ಹಕ್ ಅವರು ಕೋಚ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ವಕಾರ್ ಯೂನಿಸ್ ಕೂಡ ಬೌಲಿಂಗ್ ಕೋಚ್ ಸ್ಥಾನದಿಂದ ಹಿಂದಕ್ಕೆ ಸರಿದಿದ್ದರು.

  ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ವಿಶ್ವಕಪ್ ಬಳಿಕ ಪಾಕಿಸ್ತಾನಕ್ಕೆ ವಿದೇಶೀ ಕೋಚ್ ನೇಮಕ ಮಾಡಲು ನಿರ್ಧರಿಸಿದೆ. ಆದರೆ, ರಾಷ್ಟ್ರೀಯ ತಂಡಕ್ಕೆ ಕೋಚ್ ಆದರೆ ಪೂರ್ಣಾವಧಿ ದೇಶದಿಂದ ಹೊರಗೇ ಇರಬೇಕಾಗುತ್ತದೆ ಎಂಬ ಕಾರಣಕ್ಕೆ ವಿದೇಶೀ ಕೋಚ್​ಗಳು ಹಿಂದೇಟು ಹಾಕುತ್ತಾರೆ.
  Published by:Vijayasarthy SN
  First published: