ನಾಟಿಂಗ್ಹ್ಯಾಂ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಮೊದಲ ದಿನ ಭಾರತಕ್ಕೆ ಶುಭಕರವಾಗಿದೆ. ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ಮೇಲುಗೈ ಸಾಧಿಸಿದೆ. ಭಾರತದ ವೇಗಿಗಳ ದಾಳಿಗೆ ಇಂಗ್ಲೆಂಡ್ ಬ್ಯಾಟುಗಾರರು ಧೂಳೀಪಟವಾಗಿದ್ದಾರೆ. ಪರಿಣಾಮವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 183 ರನ್ಗೆ ಅಂತ್ಯಗೊಂಡಿದೆ. ನಿನ್ನೆ ನಡೆದ ಮೊದಲ ದಿನದಾಟದ ಅಂತ್ಯದಲ್ಲಿ ಭಾರತ ಕೊನೆ ಕ್ಷಣಗಳ ಆತಂಕದ ಮಧ್ಯೆಯೂ ಯಾವುದೇ ವಿಕೆಟ್ ಕಳೆದುಕೊಳ್ಳದೇ 21 ರನ್ ಗಳಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಭಾರತ ಆಡುತ್ತಿರುವ ಮೊದಲ ಟೆಸ್ಟ್ ಸರಣಿ ಇದಾಗಿದ್ದು, ಎಲ್ಲರ ಚಿತ್ತ ಕೊಹ್ಲಿ ಬಳಗದತ್ತ ನೆಟ್ಟಿದೆ.
ನಿನ್ನೆ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ರನ್ ಖಾತೆ ಆರಂಭಿಸುವ ಮೊದಲೇ ರೋರಿ ಬರ್ನ್ಸ್ ಅವರನ್ನ ಕಳೆದುಕೊಂಡು ಆಘಾತ ಅನುಭವಿಸಿದರೂ ಜೋ ರೂಟ್, ಬೇರ್ಸ್ಟೋ, ಜ್ಯಾಕ್ ಕ್ರಾಲೀ ಮತ್ತು ಡಾಮ್ ಸಿಬ್ಲೀ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಚೇತರಿಸಿಕೊಂಡಿತು. ಒಂದು ಹಂತದಲ್ಲಿ 3 ವಿಕೆಟ್ ನಷ್ಟಕ್ಕೆ ಇಂಗ್ಲೆಂಡ್ ಸ್ಕೋರು 135 ರನ್ ದಾಟಿತ್ತು. ಈ ಹಂತದಲ್ಲಿ ತಂಡ 300 ರನ್ ಗಡಿ ಮುಟ್ಟುವ ಎಲ್ಲಾ ಸಾಧ್ಯತೆ ತೋರಿತ್ತು. ಆದರೆ, ಭಾರತದ ವೇಗದ ಬೌಲರ್ಗಳ ನಿರಂತರ ಕರಾರುವಾಕ್ ದಾಳಿಗೆ ಇಂಗ್ಲೆಂಡ್ ಬ್ಯಾಟುಗಾರರು ಹೆಚ್ಚು ಪ್ರತಿರೋಧ ತೋರಲು ಸಾಧ್ಯವಾಗಲಿಲ್ಲ. ಕೇವಲ 45 ರನ್ ಅಂತರದಲ್ಲಿ ಕೊನೆಯ ಏಳು ವಿಕೆಟ್ಗಳನ್ನ ಕಳೆದುಕೊಂಡ ಇಂಗ್ಲೆಂಡ್ 66ನೇ ಓವರ್ನಲ್ಲಿ 183 ರನ್ಗೆ ಆಲೌಟ್ ಆಯಿತು.
ಜಸ್ಪ್ರೀತ್ ಬುಮ್ರಾ 48 ರನ್ನಿತ್ತು 4 ವಿಕೆಟ್ ಪಡೆದರು. ಮೊಹಮ್ಮದ್ ಶಮಿ 28 ರನ್ಗೆ 3 ವಿಕೆಟ್ ಪಡೆದು ಇನ್ನಷ್ಟು ಮಾರಕವಾಗಿ ಪರಿಣಮಿಸಿದರು. ಶಾರ್ದೂಲ್ ಠಾಕೂರ್ 2 ಮತ್ತು ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದರು. ಇಂಗ್ಲೆಂಡ್ನ ಎಲ್ಲಾ 10 ವಿಕೆಟ್ಗಳನ್ನ ಕಬಳಿಸಿದ್ದು ವೇಗದ ಬೌಲರ್ಗಳೇ ಎಂಬುದು ಗಮನಾರ್ಹ. ಅಂದಹಾಗೆ ಭಾರತ ತಂಡದಲ್ಲಿ ಸ್ಪಿನ್ನರ್ ಎಂದಿರುವುದು ರವೀಂದ್ರ ಜಡೇಜಾ ಮಾತ್ರವೇ.
ಇದನ್ನೂ ಓದಿ: Repechage- ಒಲಿಂಪಿಕ್ಸ್ ಕುಸ್ತಿಯಲ್ಲಿ ರಪೆಶಾಜ್ ಎಂದರೇನು? ಭಾರತಕ್ಕೆ 3 ಪದಕ ತಂದಿತ್ತ ಇದರ ನಿಯಮಗಳೇನು?
ಇಂಗ್ಲೆಂಡ್ ಇನ್ನಿಂಗ್ಸ್ ನಿರೀಕ್ಷೆಮೀರಿ ಬೇಗ ಅಂತ್ಯಗೊಂಡ ಬೆನ್ನಲ್ಲೇ ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನ ಹೇಗೆ ಪ್ರಾರಂಭಿಸುತ್ತದೆ ಎಂಬ ಕುತೂಹಲ ಬಹಳಷ್ಟಿತ್ತು. ದಿನದಾಟು ಮುಗಿಯುವ ಅಂತಿಮ ಓವರ್ಗಳಲ್ಲಿ ಭಾರತ ವಿಕೆಟ್ ಕಳೆದುಕೊಳ್ಳುವ ಆತಂಕ ಇತ್ತು. ಆದರೆ, ರೋಹಿತ್ ಶರ್ಮಾ ಮತ್ತು ಕೆ ಎಲ್ ರಾಹುಲ್ ಇಬ್ಬರೂ ಬಹಳ ಎಚ್ಚರಿಕೆಯ ಆಟವಾಡಿ 13 ಓವರ್ಗಳನ್ನ ಸಮರ್ಥವಾಗಿ ಎದುರಿಸಿ 21 ರನ್ ಸೇರಿಸಿ ಅಜೇಯರಾಗಿ ಉಳಿದಿದ್ದಾರೆ. ಇವತ್ತು ಪಂದ್ಯದ ಎರಡನೇ ದಿನ ಭಾರತ ಎಷ್ಟು ರನ್ ಮುನ್ನಡೆ ಪಡೆಯುತ್ತದೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ. ಆದರೆ, ಎರಡನೇ ಸೆಷೆನ್ ನಂತರ ನಾಟಿಂಗ್ ಹ್ಯಾಂ ಶೈರ್ ನಗರದಲ್ಲಿ ಮಳೆ ಬರುವ ಸಾಧ್ಯತೆ ಇತ್ತು ಪಂದ್ಯಕ್ಕೆ ಇದು ಅಡ್ಡಿಯಾಗುವ ಸಾಧ್ಯತೆ ಇದೆ.
ಸ್ಕೋರು ವಿವರ (ಮೊದಲ ದಿನದಾಟ):
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 65.4 ಓವರ್ 183/10
(ಜೋ ರೂಟ್ 64, ಜಾನಿ ಬೇರ್ಸ್ಟೋ 29, ಜ್ಯಾಕ್ ಕ್ರಾವ್ಲೀ 27, ಸ್ಯಾಮ್ ಕುರನ್ ಅಜೇಯ 27, ಡಾಮ್ ಸಿಬ್ಲೇ 18 ರನ್ – ಜಸ್ಪ್ರೀತ್ ಬುಮ್ರಾ 46/4, ಮೊಹಮ್ಮದ್ ಶಮಿ 28/3, ಶಾರ್ದೂಲ್ ಠಾಕೂರ್ 41/2)
ಭಾರತ ಮೊದಲ ಇನ್ನಿಂಗ್ಸ್ 13 ಓವರ್ 21/0
(ರೋಹಿತ್ ಶರ್ಮಾ ಅಜೇಯ 9, ಕೆ ಎಲ್ ರಾಹುಲ್ ಅಜೇಯ 9 ರನ್)
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ