ಕ್ರಿಕೆಟ್ ಕಾಶಿಯಲ್ಲಿ ಆಂಗ್ಲರ ಪಡೆಯನ್ನ ಮೆಟ್ಟಿನಿಂತ ಭಾರತೀಯರು; ಸ್ವಾತಂತ್ರ್ಯೋತ್ಸವ ಗಿಫ್ಟ್

ಗೆಲ್ಲಲು 272 ರನ್ ಗುರಿ ಪಡೆದ ಇಂಗ್ಲೆಂಡ್ ತಂಡ ತನ್ನ ಎರಡನೇ ಇನ್ನಿಂಗ್ಸಲ್ಲಿ 120 ರನ್ಗೆ ಆಲೌಟ್ ಆಯಿತು. 151 ರನ್ಗಳಿಂದ ಅಮೋಘ ಗೆಲುವು ಪಡೆದ ಭಾರತ ಈ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

ಲಾರ್ಡ್ಸ್​ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿದ ಭಾರತ ತಂಡ

ಲಾರ್ಡ್ಸ್​ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿದ ಭಾರತ ತಂಡ

  • Share this:
ಬೆಂಗಳೂರು: ಆತಿಥೇಯ ಇಂಗ್ಲೆಂಡ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ಐತಿಹಾಸಿಕ ಜಯ ಪಡೆದಿದೆ. ಸೋಲಿನಂಚಿನಿಂದ ಪುಟಿದೆದ್ದು ಬಂದು ಭರ್ಜರಿಯಾಗಿ ಆಂಗ್ಲರನ್ನ ಕೆಡವಿಹಾಕಿದೆ. ಇಂಗ್ಲೆಂಡ್ ರಾಜಧಾನಿ ಲಂಡನ್ ನಗರದಲ್ಲಿರುವ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಿನ್ನೆ ರಾತ್ರಿ ಮುಕ್ತಾಯಗೊಂಡ ಟೆಸ್ಟ್ ಪಂದ್ಯದಲ್ಲಿ ಭಾರತ 151 ರನ್​ಗಳಿಂದ ಗೆದ್ದಿತು. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಈಗ 1-0 ಮುನ್ನಡೆ ಪಡೆದುಕೊಂಡಿತು. ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ಜೋ ರೂಟ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನವು ಈ ಪಂದ್ಯದ ಹೈಲೈಟ್ ಆಗಿದ್ದವು. ಅವೆಲ್ಲವನ್ನೂ ಮೀರಿಸಿದ್ದು ಭಾರತದ ಅಪ್ರತಿಮ ಫಾಸ್ಟ್ ಬೌಲರ್​ಗಳು. ಅದರಲ್ಲೂ ಮೊಹಮ್ಮದ್ ಸಿರಾಜ್ ಅವರ ಬೆಂಕಿಯುಂಡೆಯಂಥ ಚೆಂಡುಗಳು ಆಂಗ್ಲ ಬ್ಯಾಟುಗಾರರನ್ನ ಕಂಗೆಡಿಸಿದವು. ಬೌಲಿಂಗ್ ಅಷ್ಟೇ ಅಲ್ಲ ಮೊಹಮ್ಮದ್ ಶಮಿ ಮತ್ತು ಜಸ್​ಪ್ರೀತ್ ಬುಮ್ರಾ ತಮ್ಮ ಕೆಚ್ಚೆದೆಯ ಬ್ಯಾಟಿಂಗ್ ಮೂಲಕ ಭಾರತಕ್ಕೆ ಮೊದಲು ಗೆಲುವಿನ ಸಾಧ್ಯತೆ ತೆರೆದಿಟ್ಟವರು.

ಒಂದು ಹಂತದಲ್ಲಿ ಎರಡನೇ ಇನ್ನಿಂಗ್ಸಲ್ಲಿ 209 ರನ್​ಗೆ 8 ವಿಕೆಟ್ ಕಳೆದುಕೊಂಡು ಭಾರತಕ್ಕೆ ಸೋಲಿನ ಕರೆಛಾಯೆ ಕಾಣಿಸಿಕೊಂಡ ಸಂದರ್ಭದಲ್ಲಿ ಜೊತೆಯಾದವರು ಶಮಿ ಮತ್ತು ಬುಮ್ರಾ. ಒಂದೆಡೆ ಇಂಗ್ಲೆಂಡ್ ಆಟಗಾರರಿಂದ ಸ್ಲೆಡ್ಜಿಂಗ್, ಮತ್ತೊಂದೆಡೆ ವೇಗದ ಬೌಲರ್​ಗಳಿಂದ ಅಪಾಯಕಾರಿ ಬೌಲಿಂಗ್. ಆದರೂ ಶಮಿ ಮತ್ತು ಬುಮ್ರಾ ಸಂಯಮ ಕಳೆದುಕೊಳ್ಳಲಿಲ್ಲ. ತಾವು ಟೈಲ್ ಎಂಡರ್ಸ್ ಅಲ್ಲ, ಕೆಳಗಿನ ಕ್ರಮಾಂಕದ ಬ್ಯಾಟುಗಾರರು ಎಂಬುದನ್ನು ಇಬ್ಬರೂ ನಿರೂಪಿಸಿದರು. ಇಬ್ಬರೂ ಸೇರಿ 9ನೇ ವಿಕೆಟ್​ಗೆ 89 ರನ್​ಗಳ ಮುರಿಯದ ಜೊತೆಯಾಟ ನೀಡಿದರು. ಶಮಿ ಅರ್ಧಶತಕ ಕೂಡ ಭಾರಿಸಿದರು. ಇವರಿಬ್ಬರು ಭಾರತವನ್ನ ಸೋಲಿನಿಂದ ಪಾರು ಮಾಡಿದ್ದಲ್ಲದೇ ಗೆಲುವಿನ ಸಾಧ್ಯತೆ ಒದಗಿಸಿಕೊಟ್ಟರು.

ಗೆಲುವಿನ ಟಾರ್ಗೆಟ್ 200 ರನ್​ಗೂ ಕಡಿಮೆ ಇರಬಹುದು ಎಂದು ಅಂದಾಜು ಮಾಡಿಕೊಂಡಿದ್ದ ಇಂಗ್ಲೆಂಡ್ ಎಣಿಕೆ ತಲೆಕೆಳಗು ಆಗಿ 272 ರನ್ ಗುರಿ ಪಡೆಯಿತು. ಪಂದ್ಯ ಉಳಿಸಿಕೊಳ್ಳಲಾದರೂ ಪ್ರಯತ್ನಿಸಿತು. ಆದರೆ, ಮೊದಲೆರಡು ಓವರ್​ನಲ್ಲೇ ಇಂಗ್ಲೆಂಡ್ ಎರಡು ವಿಕೆಟ್ ಕಳೆದುಕೊಂಡು ತತ್ತರಿಸಿತು. 67 ರನ್ನಾಗುಷ್ಟರಲ್ಲಿ ಐವರು ಔಟಾಗಿದ್ದರು. ಮೊದಲ ಇನ್ನಿಂಗ್ಸ್​ನ ಶತಕವೀರ ಜೋ ರೂಟ್ ಕೂಡ ಪೆವಿಲಿಯನ್ ಸೇರಿದರು. ಆಗಲೇ ಭಾರತ ಗೆಲುವಿನ ಹಾದಿಯಲ್ಲಿ ಸುಗಮವಾಗಿ ಸಾಗತೊಡಗಿತ್ತು. ಸ್ಕೋರ್ ಬೋರ್ಡ್ 90 ರನ್ನಿದ್ದಾಗ ಇಂಗ್ಲೆಂಡ್ 7ನೇ ವಿಕೆಟ್ ಕಳೆದುಕೊಂಡಾಗ ಭಾರತದ ಗೆಲುವು ನಿಶ್ಚಿತವೆನಿಸಿತ್ತು. ಆದರೆ, ಓವರ್​ಗಳು ಗತಿಸಿಹೋಗುತ್ತಿದ್ದವು. ಜೋಸ್ ಬಟ್ಲರ್ ಮತ್ತು ಓಲೀ ರಾಬಿನ್ಸನ್ ತಮ್ಮ ತಂಡಕ್ಕೆ ಪಂದ್ಯ ಉಳಿಸಿಕೊಳ್ಳಲು ಹರಸಾಹಸ ನಡೆಸಿದ್ದರು. ಇಬ್ಬರೂ ಅಮೂಲ್ಯ 12 ಓವರ್​ಗಳನ್ನ ನುಂಗಿಹಾಕಿದರು. ಗೆಲುವು ಶತಃಸಿದ್ಧ ಎಂದುಕೊಂಡಿದ್ದ ಭಾರತ ಡ್ರಾ ಫಲಿತಾಂಶಕ್ಕೆ ತೃಪ್ತಿಪಡಬೇಕಾಗಬಹುದು ಎಂಬಂತಹ ಸ್ಥಿತಿ ಬಂದಿತ್ತು. ಆದರೆ, ಭಾರತದ ವೇಗದ ಬೌಲರ್​ಗಳು ಯಾವ ಹಂತದಲ್ಲೂ ಹತಾಶರಾಗಲಿಲ್ಲ. ನಿರಂತರವಾಗಿ ವಿವಿಧ ತಂತ್ರಗಾರಿಕೆಗಳ ಮೂಲಕ ತಮ್ಮ ಪ್ರಯತ್ನಗಳನ್ನ ನಡೆಸುತ್ತಲೇ ಇದ್ದರು. ಪರಿಣಾಮವಾಗಿ ಪಂದ್ಯ ಮುಗಿಯಲು ಕೆಲವೇ ನಿಮಿಷ ಬಾಕಿ ಇರುವಾಗ ಬುಮ್ರಾ ಮತ್ತು ಸಿರಾಜ್ ಅವರು ಇಂಗ್ಲೆಂಡ್​ನ ಉಳಿದ ಮೂರು ವಿಕೆಟ್​ಗಳನ್ನ ಕಬಳಿಸಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: Modi- Sindhu: ಕೊಟ್ಟ ಮಾತು ಈಡೇರಿಸಿದ ಪ್ರಧಾನಿ; ಸಿಂಧು ಜೊತೆ ಐಸ್​ ಕ್ರೀಂ ಸವಿದ ಮೋದಿ

ಮೊಹಮ್ಮದ್ ಸಿರಾಜ್ ಈ ಪಂದ್ಯದಲ್ಲಿ 8 ವಿಕೆಟ್​ಗಳನ್ನ ಪಡೆದರು. ಮೂರು ಬಾರಿ ಡಬಲ್ ಸ್ಟ್ರೈಕ್ ಮಾಡಿದರು. ಅಂದರೆ ಒಂದೇ ಓವರ್​ನಲ್ಲಿ 2 ವಿಕೆಟ್​ಗಳನ್ನ ಅವರು ಈ ಪಂದ್ಯದಲ್ಲಿ ಮೂರು ಬಾರಿ ಮಾಡಿ ಇಂಗ್ಲೆಂಡ್ ತಂಡದ ಜಂಘಾಬಲವನ್ನ ಅಡಗಿಸಿದರು. ಅಮೋಘ ಶತಕ ಭಾರಿಸಿದ ಕೆ ಎಲ್ ರಾಹುಲ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯ ಗೌರವ ಪಡೆದರಾದರೂ ಮೊಹಮ್ಮದ್ ಸಿರಾಜ್ ಹೀರೋ ಎನಿಸಿದರು.

ಈ ಪಂದ್ಯದಲ್ಲಿ ಭಾರತಕ್ಕೆ ಅನೇಕ ಶುಭಫಲಗಳು ಸಿಕ್ಕವು. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇತ್ತೀಚೆಗೆ ಬ್ಯಾಟಿಂಗ್​ನಲ್ಲಿ ಕಳೆಗುಂದಿದಂತಿದ್ದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಈ ಪಂದ್ಯದಲ್ಲಿ ಒಳ್ಳೆಯ ಲಯಕ್ಕೆ ಮರಳಿದ್ದಾರೆ. ಭಾರತದ ಟೆಸ್ಟ್ ಕ್ರಿಕೆಟ್​ನಲ್ಲಿ ಇವರಿಬ್ಬರ ಪಾತ್ರ ಬಹಳ ಮಹತ್ವದಿರುವುದರಿಂದ ಅವರು ಫಾರ್ಮ್​ಗೆ ಮರಳಿರುವುದು ಭಾರತಕ್ಕೆ ಆನೆಬಲ ಸಿಕ್ಕಂತಾಗಿದೆ. ರವೀಂದ್ರ ಜಡೇಜಾ ಒಂದೂ ವಿಕೆಟ್ ಪಡೆಯದಿದ್ದರೂ ಬ್ಯಾಟಿಂಗ್​ನಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ. ರಿಷಭ್ ಪಂತ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ವಿರಾಟ್ ಕೊಹ್ಲಿ ಯಾವಾಗ ಬೇಕಾದರೂ ಸಿಡಿದೇಳುವ ಛಾತಿಯ ಬ್ಯಾಟ್ಸ್​ಮ್ಯಾನ್ ಆಗಿದ್ದಾರೆ. ಇನ್ನು, ವೇಗದ ಬೌಲರ್​ಗಳು ಈಗ ಭಾರತದ ಟ್ರಂಪ್ ಕಾರ್ಡ್. ಹೀಗಾಗಿ, ಉಳಿದ ಮೂರು ಟೆಸ್ಟ್ ಪಂದ್ಯಗಳನ್ನ ಭಾರತ ಆತ್ಮವಿಶ್ವಾಸದಿಂದ ಎದುರಿಸಲಿದೆ. ಮೂರನೇ ಟೆಸ್ಟ್ ಪಂದ್ಯ ಆಗಸ್ಟ್ 25ರಂದು ಲೀಡ್ಸ್​ನಲ್ಲಿ ಪ್ರಾರಂಭಗೊಳ್ಳಲಿದೆ.

ಸ್ಕೋರು ವಿವರ:

ಭಾರತ ಮೊದಲ ಇನ್ನಿಂಗ್ಸ್ 126.1 ಓವರ್ 364/10

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 128 ಓವರ್ 391/10

ಭಾರತ ಎರಡನೇ ಇನ್ನಿಂಗ್ಸ್ 109.3 ಓವರ್ 298/8 ಡಿಕ್ಲೇರ್
(ಅಜಿಂಕ್ಯ ರಹಾನೆ 61, ಮೊಹಮ್ಮದ್ ಶಮಿ ಅಜೇಯ 56, ಚೇತೇಶ್ವರ್ ಪೂಜಾರ 45, ಜಸ್​ಪ್ರೀತ್ ಬುಮ್ರಾ ಅಜೇಯ 34, ರಿಷಭ್ ಪಂತ್ 22, ರೋಹಿತ್ ಶರ್ಮಾ 21, ವಿರಾಟ್ ಕೊಹ್ಲಿ 20 ರನ್ – ಮಾರ್ಕ್ ವುಡ್ 51/3, ಓಲೀ ರಾಬಿನ್ಸನ್ 45/2, ಮೊಯೀನ್ ಅಲಿ 84/2)

ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 51.5 ಓವರ್ 120/10
(ಜೋ ರೂಟ್ 33, ಜೋಸ್ ಬಟ್ಲರ್ 25, ಮೊಯೀನ್ ಅಲಿ 13 ರನ್ – ಮೊಹಮ್ಮದ್ ಸಿರಾಜ್ 32/4, ಜಸ್​ಪ್ರೀತ್ ಬುಮ್ರಾ 33/3, ಇಶಾಂತ್ ಶರ್ಮಾ 13/2)
Published by:Vijayasarthy SN
First published: