ಸೌತ್ ಆಫ್ರಿಕಾದ ಬೌನ್ಸಿ ಪಿಚ್​ನಲ್ಲಿ ಆಡೋದು ಹೇಗೆ? ದ್ರಾವಿಡ್ ಅಂಡ್ ಟೀಮ್ ಬಳಿ ಇದೆ ಉತ್ತರ

India vs South Africa: ಮುಂದಿನ ಮೂರು ದಿನಗಳ ಕಾಲ ನಾವು ಹೇಗೆ ಶ್ರಮ ವಹಿಸಿ ಅಭ್ಯಾಸ ನಡೆಸುತ್ತೇವೆ ಎಂಬುದರ ಮೇಲೆ ನಾವು ಸೌತ್ ಆಫ್ರಿಕಾ ತಂಡವನ್ನ ಎಷ್ಟರಮಟ್ಟಿಗೆ ಎದುರಿಸಬಲ್ಲೆವು ಎಂಬುದು ಅವಲಂಬಿತವಾಗಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಟೀಮ್ ಇಂಡಿಯಾ ಆಟಗಾರ ಜೊತೆ ಕೋಚ್ ರಾಹುಲ್ ದ್ರಾವಿಡ್

ಟೀಮ್ ಇಂಡಿಯಾ ಆಟಗಾರ ಜೊತೆ ಕೋಚ್ ರಾಹುಲ್ ದ್ರಾವಿಡ್

 • Share this:
  ನವದೆಹಲಿ, ಡಿ. 20: ಸೌತ್ ಆಫ್ರಿಕಾದಲ್ಲಿ (South Africa) ಭಾರತ ಒಮ್ಮೆಯೂ ಟೆಸ್ಟ್ ಸರಣಿ ಗೆದ್ದಿಲ್ಲ. ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮೊದಲಾದೆಡೆ ವಿಕ್ರಮ ಭಾರಿಸಿರುವ ಟೀಮ್ ಇಂಡಿಯಾಗೆ ಹರಿಣಗಳ ನಾಡಿನಲ್ಲಿ ಹರಿಣಗಳನ್ನ ಮೊದಲ ಬಾರಿಗೆ ಬೇಟೆಯಾಡುವ ಅವಕಾಶ ಸಿಕ್ಕಿದೆ. ಆದರೆ, ದಕ್ಷಿಣ ಆಫ್ರಿಕಾದ ಪಿಚ್​ಗಳು ಸಾಮಾನ್ಯವಾಗಿ ಭಾರತೀಯ ಬ್ಯಾಟುಗಾರರಿಗೆ (Pacey Wickets in South Africa) ಕಬ್ಬಿಣ ಕಡಲೆಯಂತೆ ಇರುತ್ತವೆ. ತುಸು ಹುಲ್ಲು ಬೆಳೆದಿರುವ ಇಲ್ಲಿನ ಪಿಚ್​ಗಳಲ್ಲಿ ಚೆಂಡುಗಳು ಬೌನ್ಸ್ ಆಗುತ್ತವೆ. ಬೌನ್ಸ್ ಎಸೆತಗಳನ್ನ (Bouncers) ಎದುರಿಸಲು ಭಾರತೀಯರು ಪರದಾಡುತ್ತಾರೆ. ದಶಕಗಳ ಹಿಂದಿನ ಆಟಗಾರರಿಗೆ ಹೋಲಿಸಿದರೆ ಈಗಿನ ಆಟಗಾರರು ಬೌನ್ಸರ್​ಗಳನ್ನ ತುಸು ಸುಲಭವಾಗಿ ಎದುರಿಸುತ್ತಾರೆ. ಆದರೂ ಶಾರ್ಟ್ ಪಿಚ್ ಬಾಲ್​ಗಳು ಈಗಲೂ ಭಾರತೀಯರ ಬ್ಯಾಟರ್ಸ್​ಗೆ ತಲೆನೋವೇ.

  ಇದೇ ಡಿ. 26ರಂದು ಜೋಹಾನ್ಸ್​ಬರ್ಗ್ ನಗರದ ಸೂಪರ್ ಸ್ಪೋರ್ಟ್ ಪಾರ್ಕ್​ನಲ್ಲಿ (Centurion Supersport Park in Johannesburg) ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಟೀಮ್ ಇಂಡಿಯಾ ಈಗಾಗಲೇ ನೆಟ್​ಗಳಲ್ಲಿ ಅಭ್ಯಾಸ ಆರಂಭಿಸಿದೆ. ನಿನ್ನೆ ಭಾನುವಾರ ತಂಡದ ಎಲ್ಲಾ ಸದಸ್ಯರು ಮೈದಾನದಲ್ಲಿ ಬೆವರು ಹರಿಸಿದರು. ರಾಹುಲ್ ದ್ರಾವಿಡ್ (Rahul Dravid) ಅವರ ಹದ್ದಿನ ಕಣ್ಣುಗಳು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದವು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ದ್ರಾವಿಡ್, ಸೌತ್ ಆಫ್ರಿಕಾವನ್ನು ಎದುರಿಸಲು ರೂಪಿಸಿರುವ ರಣತಂತ್ರ ಏನು ಎಂಬ ಪ್ರಶ್ನೆಗೆ ಉತ್ತಮ ಬಿಚ್ಚಿಟ್ಟರು.

  “ಮೊದಲ ಟೆಸ್ಟ್ ಪಂದ್ಯಕ್ಕೆ ನಾನು ಸರಿಯಾಗಿ ಸಜ್ಜಾಗಬೇಕಾದರೆ ಮುಂದಿನ ಮೂರು ದಿನಗಳು ಬಹಳ ಮುಖ್ಯ ಎನಿಸಿವೆ… ವೇಗಕ್ಕೆ ಸಹಕಾರಿಯಾಗಿರುವ ಇಲ್ಲಿನ ಪಿಚ್​ಗಳಲ್ಲಿ ಸವಾಲುಗಳನ್ನ ಎದುರಿಸಲು ಉಚ್ಛತಮ ಅಭ್ಯಾಸ ನೆರವಾಗುತ್ತದೆ” ಎಂದು ರಾಹುಲ್ ದ್ರಾವಿಡ್ ಹೇಳಿದರು.

  ಬೌಲರ್​ಗಳ ಶೈಲಿಯಲ್ಲಿ ಬದಲಾಗಬೇಕು:

  ಭಾರತ ತಂಡದ ಹೊಸ ಬೌಲಿಂಗ್ ಕೋಚ್ ಹಾಗು ಮಾಜಿ ಆಟಗಾರ ಪರಸ್ ಮಾಂಬ್ರೆ ಅವರು ಮಾತನಾಡಿರುವ ವಿಡಿಯೋವೊಂದನ್ನ ಬಿಸಿಸಿಐ ಪ್ರಕಟಿಸಿದೆ. ಸೌತ್ ಆಫ್ರಿಕಾದ ವೇಗದ ಪಿಚ್​ಗಳಲ್ಲಿ ಬ್ಯಾಟುಗಾರರು ಮಾತ್ರವಲ್ಲ ಬೌಲರ್​ಗಳೂ ಶ್ರಮ ವಹಿಸಿ ಅಭ್ಯಾಸ ನಡೆಸಬೇಕು. ಅವರ ಟೆಕ್ನಿಕ್ ಅನ್ನು ಸರಿಹೊಂದಿಸುವ ನಿಟ್ಟಿನಲ್ಲಿ ಪ್ರಾಕ್ಟೀಸ್ ಮಾಡಬೇಕು. ಇಲ್ಲಿನ ಪಿಚ್​ಗಳಲ್ಲಿ ಎಲ್ಲೆಲ್ಲಿ ಪಿಚ್ ಮಾಡಬೇಕು ಎಂಬುದನ್ನು ಅರಿತು ಅದಕ್ಕೆ ತಕ್ಕಂತೆ ಅಭ್ಯಾಸ ನಡೆಸಬೇಕು ಎಂದು ಪರಸ್ ಮಾಂಬ್ರೆ ಈ ವಿಡಿಯೋದಲ್ಲಿ ತಿಳಿಸಿದ್ದಾರೆ.

  ಇದನ್ನೂ ಓದಿ: India vs South Africa: ಸೆಂಚೂರಿಯನ್​ನಲ್ಲಿ ಟೀಮ್ ಇಂಡಿಯಾ ಆಟಗಾರರ ಭರ್ಜರಿ ನೆಟ್ ಪ್ರಾಕ್ಟಿಸ್

  “ನಾವು ಸೌತ್ ಆಫ್ರಿಕಾದಲ್ಲಿ ಬಿಸಿಲು ಇರಬಹುದು ಎಂದು ನಿರೀಕ್ಷಿಸಿದ್ದೆವು. ಅದರೆ, ನಾವು ಗ್ರೌಂಡ್​ಗೆ ಕಾಲಿಟ್ಟಾಗ ಮೋಡ ಕವಿದ ವಾತಾರಣ (Overcast Condition) ಇತ್ತು. ಈ ವಾತಾವರಣದಲ್ಲಿ ಬೌಲರ್​ಗಳು ಸರಿಯಾದ ಜಾಗದಲ್ಲಿ ಚೆಂಡೆಸೆಯುವುದು ಹೆಚ್ಚು ಸವಾಲಿನ ಕೆಲಸ ಆಗಿರುತ್ತದೆ. ಟೆಸ್ಟ್ ಕ್ರಿಕೆಟ್​ನಲ್ಲಿ ಅನಿರೀಕ್ಷಿತವೆಂಬಂತೆ ಇಂಥ ವಾತಾವರಣ ಎದುರಾದಾಗ ಅದನ್ನ ಹೇಗೆ ಬಳಸಿಕೊಳ್ಳಬೇಕೆಂಬುದನ್ನು ನಾವು ತಿಳಿದಿರಬೇಕು” ಎಂದು ಮಾಂಬ್ರೆ ಹೇಳಿದ್ಧಾರೆ.

  ಬ್ಯಾಟಿಂಗ್ ಕೋಚ್​ಗೂ ಸಮಾಧಾನ:

  ಇನ್ನು, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರಿಗೆ ಟೀಮ್ ಇಂಡಿಯಾ ಆಟಗಾರರು ನಡೆಸುತ್ತಿರುವ ಅಭ್ಯಾಸ ತೃಪ್ತಿ ತಂದಿದೆ. ಪ್ರಾಕ್ಟೀಸ್ ವೇಳೆ ಬ್ಯಾಟುಗಾರರು ಬೌನ್ಸ್ ಎಸೆತಗಳನ್ನ ಆಡುವ ರೀತಿ ಸರಿಯಾಗಿದೆ ಎಂದಿದ್ದಾರೆ.

  “ಇವತ್ತು ಮಧ್ಯದ ವಿಕೆಟ್​ನಲ್ಲಿ ಪ್ರಾಕ್ಟೀಸ್ ಸೆಷನ್ ಇತ್ತು. ಮೋಡಕವಿತ ವಾತಾವರಣದಲ್ಲಿ ಫ್ರೆಷ್ ಆದ ಪಿಚ್​ನಲ್ಲಿ ಅಭ್ಯಾಸ ನಡೆಸುವ ಅದೃಷ್ಟ ನಮ್ಮದಾಗಿತ್ತು. ಇಲ್ಲಿ ಬ್ಯಾಟ್ ಮಾಡಲು ಬಹಳ ಕಷ್ಟ. ಆದರೆ, ನಮ್ಮ ಬ್ಯಾಟುಗಾರರು ಸರಿಯಾದ ರೀತಿಯಲ್ಲಿ ಆಡಿದ್ದು ಖುಷಿ ತಂದಿತು” ಎಂದು ರಾಥೋಡ್ ಸಂತಸ ವ್ಯಕ್ತಪಡಿಸಿದರು.

  ಇದನ್ನೂ ಓದಿ: ರೋಹಿತ್ ಶರ್ಮಾ ಬದಲು ಕೆಎಲ್ ರಾಹುಲ್ ಭಾರತ ಟೆಸ್ಟ್ ತಂಡದ ಉಪನಾಯಕ

  ಬ್ಯಾಟರ್ಸ್​​ಗೆ ಇಶಾಂತ್ ಥಂಬ್ಸ್ ಅಪ್:

  ಆದರೆ, ಭಾರತದ ಬ್ಯಾಟುಗಾರರು ಬೌನ್ಸಿ ಪಿಚ್​ನಲ್ಲಿ ಆಡುತ್ತಿರುವ ರೀತಿಗೆ ತಂಡದ ಬೌಲರ್​ಗಳು ಶಹಬ್ಬಾಸ್ ವ್ಯಕ್ತಪಡಿಸಿದ್ಧಾರೆ. ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಮತ್ತಿತರರು ಆಡುತ್ತಿರುವುದನ್ನು ನೋಡಿದರೆ ಸೌತ್ ಆಫ್ರಿಕಾದ ವೇಗದ ಬೌಲರ್​ಗಳನ್ನ ನಾವು ಸಮರ್ಥವಾಗಿ ಎದುರಿಸಬಲ್ಲೆವು ಎನಿಸುತ್ತದೆ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.

  ಇನ್ನು, ವಿರಾಟ್ ಕೊಹ್ಲಿಯ ಅಭಿಮಾನಿಯೇ ಆಗಿರುವ ಶ್ರೇಯಸ್ ಅಯ್ಯರ್ ನಿನ್ನೆ ಪ್ರಾಕ್ಟೀಸ್ ಸೆಷನ್​ನಲ್ಲಿ ಕೊಹ್ಲಿ ಮಾಡುತ್ತಿದ್ದ ಅಭ್ಯಾಸವನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದುದು ಕಂಡುಬಂತು. “ಈ ವಿಕೆಟ್​ನಲ್ಲಿ ಬೌಲಿಂಗ್ ಮಾಡಲು ಬೌಲರ್​ಗೆ ಬಹಳ ಪ್ರಿಯವಾಗುತ್ತದೆ. ವಿಕೆಟ್​ನಲ್ಲಿ ಹುಲ್ಲು ಇದೆ, ಚೆಂಡು ಸಖತ್ತಾಗಿ ಬೌನ್ಸ್ ಆಗುತ್ತಿದೆ. ಬೌನ್ಸರ್ ಎಸೆತವನ್ನ ವಿರಾಟ್ ಕೊಹ್ಲಿ ಡಕಿಂಗ್ (ducking a bouncer) ಮಾಡುತ್ತಿದ್ದಾರೆ” ಎಂದು ಶ್ರೇಯಸ್ ಅಯ್ಯರ್ ಉದ್ಘರಿಸಿದ್ಧಾರೆ.
  Published by:Vijayasarthy SN
  First published: