Aus vs Ind- ಆಸ್ಟ್ರೇಲಿಯಾಗೆ ಕೊನೆಯ ಬಾಲ್​ನಲ್ಲಿ ಗೆಲುವು; ಭಾರತೀಯರಿಗೆ ವೀರೋಚಿತ ಸೋಲು

Women’s cricket at its best- ಗೆಲುವಿಗೆ ಭಾರತ ಮಹಿಳಾ ತಂಡ ಒಡ್ಡಿದ 275 ರನ್ ಗುರಿಯನ್ನು ಆಸೀಸ್ ವನಿತೆಯರು ಕೊನೆಯ ಬಾಲ್​ನಲ್ಲಿ ಮುಟ್ಟಿ ಗೆದ್ದಿದ್ಧಾರೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನ ಜಯಿಸಿದ್ದಾರೆ.

ಸ್ಮೃತಿ ಮಂಧಾನ

ಸ್ಮೃತಿ ಮಂಧಾನ

  • Cricketnext
  • Last Updated :
  • Share this:
    ಕ್ವೀನ್ಸ್​ಲ್ಯಾಂಡ್, ಸೆ. 24: ಬೆತ್ ಮೂನೀ (Beth Mooney) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ಮಹಿಳಾ ತಂಡ (Australia Women's Cricket Team) ಭಾರತದ ವಿರುದ್ಧ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ರೋಚಕ ಗೆಲುವು ಪಡೆಯಿತು. ಇಲ್ಲಿಯ ಮ್ಯಾಕ್​ಕೇ (McKay) ನಗರದ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯನ್ನರು 5 ವಿಕೆಟ್​ಗಳಿಂದ ಭಾರತೀಯರನ್ನ ಸೋಲಿಸಿದರು. ಗೆಲ್ಲಲು ಭಾರತ ಮಹಿಳಾ ತಂಡ ಒಡ್ಡಿದ 275 ರನ್ ಗುರಿಯನ್ನ ಕಾಂಗರೂಗಳ ಪಡೆ ಕೊನೆಯ ಎಸೆತದಲ್ಲಿ ಮುಟ್ಟಿ ಗೆಲುವು ಪಡೆದರು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯು ಆತಿಥೇಯರ ಪಾಲಾಯಿತು. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ಭಾರತದ ವಿರುದ್ಧ ಸುಲಭ ಗೆಲುವು ಸಾಧಿಸಿತ್ತು. ಈ ಎರಡನೇ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿ ಬೆತ್ ಮೂನೀ ಅವರು ಅಜೇಯ 125 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ ಆಸ್ಟ್ರೇಲಿಯಾ ವಶವಾಗಿದೆ. ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇದೆ.

    ಭಾರತದ ಉತ್ತಮ ಮೊತ್ತಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾದ ಆರಂಭ ಕಳಪೆಯಾಗಿತ್ತು. ಇನ್ನೂ ರನ್ ಖಾತೆ ತೆರೆಯದೆಯೇ ಒಂದು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ 52 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಆಗ ಭಾರತದ ಮಹಿಳೆಯರು ಗೆಲ್ಲುವ ಸಾಧ್ಯತೆ ದಟ್ಟವಾಗಿತ್ತು. ಆದರೆ, ಆರಂಭಿಕ ಆಟಗಾರ್ತಿ ಬೆತ್ ಮೂನೀ ಒಂದು ಕಡೆ ಹೆಬ್ಬಂಡೆಯಂತೆ ನಿಂತರು. ಆರನೇ ಕ್ರಮಾಂಕದಲ್ಲಿ ಬಂದ ತಾಹ್ಲಿಯಾ ಮೆಕ್​ಗ್ರಾತ್ ಅವರು ಬೆತ್ ಮೂನೀ ಜೊತೆ ಸೇರಿ ಒಳ್ಳೆಯ ಜೊತೆಯಾಟ ನೀಡಿದರು. ಇವರಿಬ್ಬರು 5ನೇ ವಿಕೆಟ್​ಗೆ 126 ರನ್ ಜೊತೆಯಾಟದಲ್ಲಿ ಭಾಗಿಯಾದರು. ಈ ಹಂತದಲ್ಲಿ ಪಂದ್ಯದ ದಿಕ್ಕು ಆಸ್ಟ್ರೇಲಿಯಾ ಕಡೆ ವಾಲಿತ್ತು. ಮೆಕ್​ಗ್ರಾತ್ ಔಟಾದ ಬಳಿಕ ಭಾರತಕ್ಕೆ ಮತ್ತೆ ಗೆಲುವಿನ ಆಸೆ ಚಿಗುರಿತಾದರೂ ಬೆತ್ ಮೂನೀ ಮತ್ತು ನಿಕೋಲಾ ಕ್ಯಾರೀ ಅವರು ಅದಕ್ಕೆ ಆಸ್ಪದ ಕೊಡಲಿಲ್ಲ. ಕೊನೆಯವರೆಗೂ ಈ ಆಟಗಾರ್ತಿಯರು ಕ್ರೀಸ್​ನಲ್ಲಿ ಕಚ್ಚಿ ನಿಂತ ತಮ್ಮ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

    ಇದಕ್ಕೆ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತದ ವನಿತೆಯರ ತಂಡ ಉತ್ತಮ ಆರಂಭ ಪಡೆಯಿತಾದರೂ ಮಧ್ಯದಲ್ಲಿ ದಿಢೀರ್ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಸ್ಮೃತಿ ಮಂಧಾನ, ರೀಚಾ ಘೋಷ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ಮತ್ತು ಝುಲನ್ ಗೋಸ್ವಾಮಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಫಲವಾಗಿ ಭಾರತ ತಂಡ 274 ರನ್​ಗಳ ಉತ್ತಮ ಮೊತ್ತ ಕಲೆಹಾಕಿತು. ಸ್ಮೃತಿ ಮಂಧಾನ 94 ಬಾಲ್​ನಲ್ಲಿ 86 ರನ್ ಗಳಿಸಿ ಗಮನ ಸೆಳೆದರು.

    ಈ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಮಹಿಳೆಯರಿಗೆ ಒಂದೂ ಗೆಲುವು ಇದೂವರೆಗೆ ಸಿಕ್ಕಿಲ್ಲ. ಬ್ರಿಸ್ಬೇನ್​ನಲ್ಲಿ ನಡೆದ ಟೂರ್ ಗೇಮ್​ನಲ್ಲಿ 36 ರನ್​ನಿಂದ ಸೋತಿತು. ನಂತರ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 9 ವಿಕೆಟ್​ಗಳಿಂದ ಹೀನಾಯ ಸೋಲಪ್ಪಿತು. ಅದೂ ಮೆಕ್​ಕೇ ನಗರದಲ್ಲೇ ನಡೆದ ಪಂದ್ಯವಾಗಿದೆ. ಇವತ್ತು ಎರಡನೇ ಪಂದ್ಯವೂ ಆಸ್ಟ್ರೇಲಿಯನ್ ಮಹಿಳೆಯರ ಪಾಲಾಗಿದೆ. ಮೂರನೇ ಪಂದ್ಯವೂ ಸೆ. 26ರಂದು ಇಲ್ಲಿಯೇ ನಡೆಯಲಿದೆ.

    ಇದನ್ನೂ ಓದಿ: Dhoni craze in Karnataka- ಧೋನಿಗೆ ಕರ್ನಾಟಕದಲ್ಲಿ ಇಂಥ ಕ್ರೇಜಾ? ಸಿಎಸ್​ಕೆ ಫ್ಯಾನ್ಸೂ ಡಮ್ಮಿ

    ಏಕದಿನ ಸರಣಿ ಬಳಿಕ ಎರಡೂ ದೇಶಗಳ ಮಧ್ಯೆ ಒಂದು ಟೆಸ್ಟ್ ಪಂದ್ಯ ಹಾಗು ಮೂರು ಟಿ20 ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ಮಹಿಳಾ ತಂಡ ಸದ್ಯ ಮಹಿಳಾ ಟಿ20 ವಿಶ್ವಕಪ್​ನ ಹಾಲಿ ಚಾಂಪಿಯನ್ ಆಗಿದೆ.

    ಸ್ಕೋರು ವಿವರ:

    ಭಾರತದ ಮಹಿಳೆಯರ ತಂಡ 50 ಓವರ್ 274/7
    (ಸ್ಮೃತಿ ಮಂಧಾನ 86, ರಿಚಾ ಘೋಷ್ 44, ಪೂಜಾ ವಸ್ತ್ರಾಕರ್ 29, ಝುಲನ್ ಗೋಸ್ವಾಮಿ ಅಜೇಯ 28, ದೀಪ್ತಿ ಶರ್ಮಾ 23, ಶಫಾಲಿ ವರ್ಮಾ 22 ರನ್ – ತಾಹ್ಲಿಯಾ ಮೆಕ್​ಗ್ರಾಥ್ 45/3, ಸೋಫೀ ಮೋಲಿನ್ಯೂಕ್ಸ್ 28/2)

    ಆಸ್ಟ್ರೇಲಿಯಾ ಮಹಿಳಾ ತಂಡ 50 ಓವರ್ 275/5
    (ಬೆತ್ ಮೂನೀ ಅಜೇಯ 125, ಟಾಹ್ಲಿಯಾ ಮೆಕ್​ಗ್ರಾಥ್ 74, ನಿಕೋಲಾ ಕ್ಯಾರೇ ಅಜೇಯ 39 ರನ್)
    Published by:Vijayasarthy SN
    First published: