ಲಕ್ನೋನ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಒನ್ಡೇ ಸರಣಿಯಲ್ಲಿ ಟೀಮ್ ಇಂಡಿಯಾ ಮಹಿಳೆಯರು ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದ್ದಾರೆ. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಇದಕ್ಕೂ ಮುನ್ನ ಟಾಸ್ ಗೆದ್ದ ಭಾರತ ಮಹಿಳಾ ತಂಡದ ನಾಯಕ ಮಿಥಾಲಿ ರಾಜ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಬ್ಯಾಟಿಂಗ್ಗೆ ಇಳಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಓವರ್ನಲ್ಲೇ ಆರಂಭಿಕ ಆಘಾತ ನೀಡುವಲ್ಲಿ ಜುಲನ್ ಗೋಸ್ವಾಮಿ ಯಶಸ್ವಿಯಾದರು. ಪಂದ್ಯದ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಲೀ (4) ಅವರನ್ನು ಎಲ್ಬಿಡಬ್ಲ್ಯೂ ಮಾಡಿ ಜುಲನ್ ಮೊದಲ ಯಶಸ್ಸು ತಂದುಕೊಟ್ಟರು.
ಭಾರತೀಯ ಆಟಗಾರ್ತಿಯರ ಸಾಂಘಿಕ ಪ್ರದರ್ಶನದ ಮುಂದೆ ದಕ್ಷಿಣ ಆಫ್ರಿಕಾ ಮಹಿಳೆಯರು ರನ್ಗಳಿಸಲು ಪರದಾಡಿದರು. ಅದರಲ್ಲೂ ಜುಲನ್ ಗೋಸ್ವಾಮಿ ಬೌಲಿಂಗ್ ವೇಳೆ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಹೀಗೆ ನಿಧಾನಗತಿಯ ಬ್ಯಾಟಿಂಗ್ ಮೂಲಕ ಸುನೆ ಲೂಸ್ 36, ಲಾರಾ ಗುಡಾಲ್ 49 ಗಳಿಸಿ ಕೊಂಚ ಪ್ರತಿರೋಧ ತೋರಿದರು. ಇದಾಗ್ಯೂ ಭಾರತೀಯ ಮಹಿಳಾ ಬೌಲರುಗಳು 41 ಓವರ್ಗೆ 157 ರನ್ಗಳಿಸಿದ್ದ ದಕ್ಷಿಣ ಆಫ್ರಿಕಾ ವನಿತೆಯರನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಭಾರತ ತಂಡದ ಪರ ಜುಲನ್ ಗೋಸ್ವಾಮಿ 4 ವಿಕೆಟ್ ಪಡೆದು ಮಿಂಚಿದರೆ, ರಾಜೇಶ್ವರಿ ಗಾಯಕ್ವಾಡ್ 3 ವಿಕೆಟ್ ಕಬಳಿಸಿದರು.
ಇನ್ನು ಸುಲಭ ಗುರಿ ಬೆನ್ನತ್ತಿದ ಭಾರತ ತಂಡ ಆರಂಭದಲ್ಲೇ ಜೆಮಿಮಾ ರೋಡಿಗ್ರಸ್ (9) ವಿಕೆಟ್ ಕಳೆದುಕೊಂಡಿತು. ಇದಾಗ್ಯೂ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಜೊತೆಗೂಡಿದ ಪೂನಂ ರಾವತ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸ್ಮೃತಿ ಮಂಧಾನ ಕೇವಲ 64 ಎಸೆತಗಳಲ್ಲಿ ಅಜೇಯ 80 ರನ್ ಬಾರಿಸಿದರು. ಇದರಲ್ಲಿ 3 ಸಿಕ್ಸರ್ 10 ಬೌಂಡರಿಗಳು ಒಳಗೊಂಡಿತ್ತು. ಮತ್ತೊಂದೆಡೆ ಪೂನಂ ರಾವತ್ 8 ಬೌಂಡರಿಗಳೊಂದಿಗೆ 89 ಎಸೆತಗಳಲ್ಲಿ ಅಜೇಯ 62 ರನ್ ಬಾರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ