Aus vs India- ಸ್ಮೃತಿ ಅರ್ಧಶತಕ ವ್ಯರ್ಥ; ಆಸ್ಟ್ರೇಲಿಯಾ ಎದುರು ಕೊನೆಯ ಟಿ20ಯಲ್ಲೂ ಭಾರತಕ್ಕೆ ಸೋಲು

ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯನ್ನ 1-2ರಿಂದ ಸೋತಿದ್ದ ಭಾರತ ಮಹಿಳಾ ತಂಡ ಈಗ ಟಿ20 ಸರಣಿಯಲ್ಲೂ 0-2ರಿಂದ ಪರಾಭವಗೊಂಡಿದೆ. ಈ ಕ್ರಿಕೆಟ್ ಸರಣಿಗಳಲ್ಲಿ ಒಟ್ಟಾರೆಯಾಗಿ ಭಾರತ 5-11 ಅಂಕಗಳ ಅಂತರದಿಂದ ಸೋಲೊಪ್ಪಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್ ತಂಡ

ಭಾರತ ಮಹಿಳಾ ಕ್ರಿಕೆಟ್ ತಂಡ

 • Share this:
  ಕರಾರ, ಕ್ವೀನ್ಸ್​ಲ್ಯಾಂಡ್: ಇವತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತದ ಮಹಿಳಾ ತಂಡ 14 ರನ್​ಗಳಿಂದ ಸೋತಿತು. ಗೆಲ್ಲಲು 150 ರನ್ ಗುರಿ ಪಡೆದಿದ್ದ ಭಾರತದ ಮಹಿಳೆಯರು ನಿಗದಿತ 20 ಓವರ್​ನಲ್ಲಿ 135 ರನ್ ಮಾತ್ರ ಗಳಿಸಲು ಶಕ್ಯರಾದರು. ಸ್ಮೃತಿ ಮಂಧನಾ ಅರ್ಧಶತಕವು ಭಾರತೀಯರ ಚೇಸಿಂಗ್​ಗೆ ಬಲ ತುಂಬಲಾಗಲಿಲ್ಲ. ಕೊನೆಯ ಘಟ್ಟದಲ್ಲಿ ರಿಚಾ ಘೋಷ್ ಅವರಿಂದ ಸ್ಫೋಟಕ ಬ್ಯಾಟಿಂಗ್ ಬರದೇ ಹೋಗಿದ್ದರೆ ಭಾರತೀಯರ ಸೋಲಿನ ಅಂತರ ಇನ್ನೂ ಹೆಚ್ಚಿರುತ್ತಿತ್ತು. ಬಿಗ್ ಬ್ಯಾಷ್ ಲೀಗ್​ನಲ್ಲಿ ಬಹುನಿರೀಕ್ಷೆಯ ಸ್ಟಾರ್ ಆಟಗಾರ್ತಿಯಾಗಿರುವ ರಿಚಾ ಘೋಷ್ ಅವರು 11 ಬಾಲ್​ನಲ್ಲಿ 2 ಸಿಕ್ಸರ್, 2 ಬೌಂಡರಿಗಳೊಂದಿಗೆ 23 ರನ್ ಭಾರಿಸಿದರು. ಆದರೆ, ಗೆಲುವಿನ ದಾರಿ ಬಹಳ ದೂರ ಇತ್ತಾದ್ದರಿಂದ ಅವರೂ ಅಸಹಾಯಕರಾದರು.

  ರಿಚಾ ಕ್ರೀಸ್​ಗೆ ಬಂದಾಗ ಭಾರತ 94 ರನ್​ಗೆ 4 ವಿಕೆಟ್ ಕಳೆದುಕೊಂಡಿತ್ತು. 17 ಓವರ್ ನಂತರ ಭಾರತ 102 ರನ್​ಗೆ 6 ವಿಕೆಟ್ ಕಳೆದುಕೊಂಡಿತು. 17 ಬಾಲ್​ನಲ್ಲಿ 48 ರನ್ ಗಳಿಸುವ ತೀರಾ ಕಠಿಣ ಸವಾಲು ಮುಂದಿತ್ತು. ಆದರೆ, ರಿಚಾ ಘೋಷ್ ದೃತಿಗಡದೆ ತಮ್ಮ ಪ್ರಯತ್ನ ಮಾಡಿದರು. ಅಂತಿಮವಾಗಿ 14 ರನ್ ಕೊರತೆ ಎದುರಾಯಿತು. ಇದಕ್ಕೆ ಮುನ್ನ ಸ್ಮೃತಿ ಮಂಧನಾ ಮತ್ತು ಜೆಮಿಮಾ ರೋಡ್ರಿಗೆಸ್ ಇಬ್ಬರೂ 2ನೇ ವಿಕೆಟ್​ಗೆ 57 ರನ್ ಸೇರಿಸಿ ಗೆಲುವಿನ ನಿರೀಕ್ಷೆ ಮೂಡಿಸಿದರು. ಜೆಮಿಮಾ ನಿರ್ಗಮನದ ಬಳಿಕ ಸ್ಮೃತಿ ಮತ್ತು ಹರ್ಮನ್​ಪ್ರೀತ್ ಕೌರ್ ಇಬ್ಬರೂ 3ನೇ ವಿಕೆಟ್​ಗೆ 32 ರನ್ ಸೇರಿಸಿ ಚೇಸಿಂಗ್​ಗೆ ಇನ್ನಷ್ಟು ಶಕ್ತಿ ತುಂಬಿದರು. ಆದರೆ, ಸ್ಮೃತಿ ಮಂಧನಾ ನಿರ್ಗಮನದೊಂದಿಗೆ ಭಾರತದ ಪತನ ಹೆಚ್ಚಾಯಿತು. 10 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿದ್ದು ಭಾರತಕ್ಕೆ ಹಿನ್ನಡೆ ತಂದಿತು. ಗೆಲುವು ದಕ್ಕಲಿಲ್ಲ.

  ಇದಕ್ಕೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮಹಿಳೆಯರು 149 ರನ್​ಗಳ ಉತ್ತಮ ಮೊತ್ತ ಕಲೆಹಾಕಿದರು. ಬೆತ್ ಮೂನೀ ಮತ್ತು ಟಾಹ್ಲಿಯಾ ಮೆಕ್​ಗ್ರಾಥ್ ಅವರಿಬ್ಬರ ಆಟ ಇದಕ್ಕೆ ಪ್ರಮುಖ ಕಾರಣವಾಯಿತು. ಟಾಹ್ಲಿಯಾ ಮೆಕ್​ಗ್ರಾಥ್ ಅವರಿಗೆ ಪಂದ್ಯಶ್ರೇಷ್ಠರಷ್ಟೇ ಅಲ್ಲ ಸರಣಿ ಶ್ರೇಷ್ಠರೆಂಬ ಗೌರವಕ್ಕೂ ಪಾತ್ರರಾದರು.

  ಏಕದಿನ ಕ್ರಿಕೆಟ್ ಸರಣಿ ಮತ್ತು ಟಿ20 ಕ್ರಿಕೆಟ್ ಸರಣಿ ಎರಡನ್ನೂ ಸೇರಿ ಆದ ಮಲ್ಟಿಫಾರ್ಮಾಟ್ ಸೀರೀಸ್ ಅನ್ನು ಆತಿಥೇಯರು 11-5 ಅಂಕಗಳಿಂದ ಜಯಿಸಿದ್ದಾರೆ. ಏಕದಿನ ಕ್ರಿಕೆಟ್ ಸರಣಿಯನ್ನು ಆಸ್ಟ್ರೇಲಿಯನ್ನರು 2-1ರಿಂದ ಗೆದ್ದಿದ್ದರು. ಟಿ20 ಸರಣಿ 2-0ಯಿಂದ ಆತಿಥೇಯರ ಪಾಲಾಗಿದೆ. ಈ ಎರಡು ಸರಣಿಗಳ ಮಧ್ಯೆ ನಡೆದ ಏಕೈಕ ಟೆಸ್ಟ್ ಪಂದ್ಯ ಡ್ರಾ ಆದರೂ ಭಾರತ ಎಲ್ಲಾ ವಿಭಾಗದಲ್ಲಿ ಮೇಲುಗೈ ಸಾಧಿಸಿ ಗಮನ ಸೆಳೆದಿತ್ತು.

  ಇದನ್ನೂ ಓದಿ: Voice For Women's IPL| ಮಹಿಳಾ IPL ಟೂರ್ನಿ ಆಯೋಜನೆಗಾಗಿ ಕೂಗೆತ್ತಿದ ಭಾರತ ಟಿ 20 ನಾಯಕಿ ಹರ್ಮನ್‌ಪ್ರೀತ್ ಕೌರ್

  ಇದಾದ ಬಳಿಕ ಆಸ್ಟ್ರೇಲಿಯಾದಲ್ಲಿ ಮಹಿಳೆಯರ ಬಿಗ್ ಬ್ಯಾಷ್ ಟಿ20 ಕ್ರಿಕೆಟ್ ಪಂದ್ಯಾವಳಿ ಶುರುವಾಗಲಿದೆ. ಭಾರತದ ಎಂಟು ಆಟಗಾರ್ತಿಯರು ಈ ಡಬ್ಲ್ಯೂಬಿಬಿಎಲ್​ನಲ್ಲಿ ಆಡುತ್ತಿದ್ದಾರೆ. ತವರಿನಲ್ಲಿ ಅಪರೂಪಕ್ಕೆ ಸೋಲುವ ಆಸ್ಟ್ರೇಲಿಯಾ ಮಹಿಳಾ ತಂಡವನ್ನು ಅದರದ್ದೇ ನೆಲದಲ್ಲಿ ಮಣಿಸಿದ ಭಾರತದ ಮಹಿಳೆಯರ ಆಟ ನಿಜಕ್ಕೂ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಬಿಗ್ ಬ್ಯಾಷ್ ಲೀಗ್​ನಲ್ಲಿ ಭಾರತೀಯ ಆಟಗಾರ್ತಿಯರು ಆಡುತ್ತಿರುವುದು ಭಾರತದಲ್ಲಿ ಮಹಿಳಾ ಕ್ರಿಕೆಟ್​ನ ಜನಪ್ರಿಯತೆ ಹೆಚ್ಚಳಕ್ಕೆ ಕಾರಣವಾಗಬಹುದು.

  ಸ್ಕೋರು ವಿವರ:

  ಆಸ್ಟ್ರೇಲಿಯಾ ಮಹಿಳಾ ತಂಡ 20 ಓವರ್ 149/5
  (ಬೆತ್ ಮೂನೀ 61, ಟಾಹ್ಲಿಯಾ ಮೆಕ್​ಗ್ರಾಥ್ ಅಜೇಯ 44 ರನ್- ರಾಜೇಶ್ವರಿ ಗಾಯಕ್ವಾಡ್ 37/2)

  ಭಾರತ ಮಹಿಳಾ ತಂಡ 20 ಓವರ್ 135/6
  (ಸ್ಮೃತಿ ಮಂಧನಾ 52, ಜೆಮಿಮಾ ರೋಡ್ರಿಗ್ಸ್ 23, ರಿಚಾ ಘೋಷ್ ಅಜೇಯ 23 ರನ್ – ನಿಕೋಲಾ ಕೆರೇ 42/2)
  Published by:Vijayasarthy SN
  First published: