Ind vs Aus- ಭಾರತಕ್ಕೆ ಐತಿಹಾಸಿಕ ಜಯ; ಆಸ್ಟ್ರೇಲಿಯಾ ಮಹಿಳೆಯರ ವಿಶ್ವದಾಖಲೆ ಓಟ ಅಂತ್ಯ

Record Chasing- ಮೂರನೇ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ 264 ರನ್ ಮೊತ್ತವನ್ನು ಭಾರತದ ಮಹಿಳಾ ತಂಡ ಚೇಸ್ ಮಾಡಿ ಇತಿಹಾಸ ಸೃಷ್ಟಿಸಿದೆ. ಕಳೆದ 27 ಪಂದ್ಯಗಳಲ್ಲಿ ಆಸ್ಟ್ರೇಲಿಯನ್ನರು ಅನುಭವಿಸಿದ ಮೊದಲ ಸೋಲಾಗಿದೆ.

ಭಾರತ ತಂಡದ ನಾಯಕಿ ಮಿಥಾಲಿ ರಾಜ್

ಭಾರತ ತಂಡದ ನಾಯಕಿ ಮಿಥಾಲಿ ರಾಜ್

 • Cricketnext
 • Last Updated :
 • Share this:
  ಕ್ವೀನ್ಸ್​ಲ್ಯಾಂಡ್, ಸೆ. 26: ಇಲ್ಲಿಯ ಮೆಕ್​ಕೇ ನಗರದ ಕ್ರಿಕೆಟ್ ಸ್ಟೇಇಯಂನಲ್ಲಿ ಭಾರತದ ಮಹಿಳಾ ತಂಡ ಇಂದು ಐತಿಹಾಸಿಕ ಗೆಲುವು ಪಡೆಯಿತು. ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಇಂದು ನಡೆದ ಮೂರನೇ ಹಾಗೂ ಕೊನೆಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಎರಡು ವಿಕೆಟ್​ಗಳಿಂದ ರೋಚಕ ಜಯ ಪಡೆಯಿತು. ಗೆಲ್ಲಲು 265 ರನ್ ಗುರಿ ಪಡೆದ ಭಾರತದ ಮಹಿಳೆಯರು ಮೂರು ಎಸೆತ ಬಾಕಿ ಇರುವಾಗ ಗೆಲುವಿನ ದಡ ಮುಟ್ಟಿದರು. ಇದು ಭಾರತ ಇದೂವರೆಗೆ ಚೇಸ್ ಮಾಡಿದ ಗರಿಷ್ಠ ಮೊತ್ತವಾಗಿದೆ. ಆಸ್ಟ್ರೇಲಿಯಾದ ಮಹಿಳೆಯರು ಈ ಸೋಲಿಗೆ ಮುನ್ನ ಕಳೆದ 26 ಪಂದ್ಯಗಳಿಂದ ಸತತವಾಗಿ ಗೆಲ್ಲುತ್ತಾ ಬಂದು ವಿಶ್ವದಾಖಲೆ ಸ್ಥಾಪಿಸಿದ್ದರು. ಅಂತಿಮವಾಗಿ ಈ ವಿಶ್ವದಾಖಲೆ ಓಟವನ್ನು ಭಾರತದ ಮಹಿಳೆಯರು ಅಂತ್ಯಗೊಳಿಸಿದ್ದಾರೆ. ಹಾಗೆಯೇ, ಇದು ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ವಿಶ್ವದ ಯಾವುದೇ ತಂಡ ಚೇಸ್ ಮಾಡಿದ ಎರಡನೇ ಗರಿಷ್ಠ ಮೊತ್ತವಾಗಿದೆ.

  ಆಸ್ಟ್ರೇಲಿಯಾ ತಂಡವೇ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿತು. ಎರಡನೇ ಓಡಿಐನಲ್ಲಿ ಆಕರ್ಷಕ ಶತಕ ಭಾರಿಸಿದ್ದ ಬೆತ್ ಮೂನೀ ಈ ಮೂರನೇ ಪಂದ್ಯದಲ್ಲೂ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು ಮತ್ತು ಆಷ್ಲೀಗ್ ಗಾರ್ಡ್ನರ್ ಇಬ್ಬರೂ ಅರ್ಧಶತಕ ಭಾರಿಸಿದರು. ಟಾಹ್ಲಿಯಾ ಮೆಕ್​ಗ್ರಾಥ್ ಕೂಡ 47 ರನ್ ಗಳಿಸಿದರು. ಈ ಮೂವರು ಆಟಗಾರ್ತಿಯರ ಉತ್ತಮ ಪ್ರದರ್ಶನದ ಫಲವಾಗಿ ಆಸ್ಟ್ರೇಲಿಯಾ ವನಿತೆಯರು ನಿಗದಿತ 50 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದರು.

  ಮಹಿಳಾ ಕ್ರಿಕೆಟ್​ನಲ್ಲಿ 250 ರನ್ ಗಡಿ ದಾಟಿದರೆ ಒಂದು ಹೆಚ್ಚೂಕಡಿಮೆ ವಿನಿಂಗ್ ಸ್ಕೋರ್ ಎನಿಸುತ್ತದೆ. ಸರಣಿಯ ಮೊದಲೆರೆಡು ಪಂದ್ಯಗಳನ್ನ ಗೆದ್ದಿದ್ದ ಆಸ್ಟ್ರೇಲಿಯಾ ಈ ಮೂರನೇ ಪಂದ್ಯವನ್ನೂ ಗೆಲ್ಲುವ ಸನ್ನಾಹದಲ್ಲಿತ್ತು. ಆದರೆ, ಕ್ಲೀನ್ ಸ್ವೀಪ್ ಮಾಡುವ ಆಸ್ಟ್ರೇಲಿಯಾ ಲೆಕ್ಕಾಚಾರ ಈಡೇರಲಿಲ್ಲ. ಭಾರತದ ಮಹಿಳೆಯರು ವೀರೋಚಿತ ಹೋರಾಟ ನೀಡಿದರು. ಶಫಾಲಿ ವರ್ಮಾ, ಯಸ್ತಿಕಾ ಭಾಟಿಯಾ ಮತ್ತು ಸ್ಮೃತಿ ಮಂಧನಾ ಭಾರತದ ಚೇಸಿಂಗ್​ಗೆ ಒಳ್ಳೆಯ ಬುನಾದಿ ಹಾಕಿಕೊಟ್ಟರು. ಶಫಾಲಿ ಮತ್ತು ಯಸ್ತಿಕಾ ಅರ್ಧಶತಕಗಳನ್ನ ಭಾರಿಸಿದರು. ಶಫಾಲಿ ವರ್ಮಾ 30ನೇ ಓವರ್​ನಲ್ಲಿ ಔಟಾಗುವ ಮುನ್ನ ಭಾರತ ತಂಡ ಒಂದು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತ್ತು. ಈ ಹಂತದಲ್ಲಿ ಭಾರತದ ಮಹಿಳೆಯರು ಸುಲಭವಾಗಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, 48 ರನ್ ಅಂತರದಲ್ಲಿ 5 ವಿಕೆಟ್​ಗಳು ದಿಢೀರ್ ಉದುರಿದವು.

  ಇದನ್ನೂ ಓದಿ: England vs India- ಮ್ಯಾಂಚೆಸ್ಟರ್ ಪಂದ್ಯ ಬದಲು 2022ರಲ್ಲಿ ಭಾರತ-ಇಂಗ್ಲೆಂಡ್ ಮಧ್ಯೆ ಒಂದು ಟೆಸ್ಟ್

  ಈ ಹಂತದಲ್ಲಿ 208 ರನ್​ಗೆ 6 ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತು. ಆದರೆ, ದೀಪ್ತಿ ಶರ್ಮಾ ಮತ್ತು ಸ್ನೇಹ್ ರಾಣಾ ಅವರಿಬ್ಬರು ಉತ್ತಮವಾಗಿ ಆಡಿ ಭಾರತದ ಗೆಲುವಿನ ಹಾದಿ ಸುಲಭಗೊಳಿಸಿದರು. ಅವರಿಬ್ಬರು 7ನೇ ವಿಕೆಟ್​ಗೆ 33 ರನ್ ಸೇರಿಸಿದ್ದರಿಂದ ಭಾರತಕ್ಕೆ ಗೆಲುವು ಕೈಗೆಟುಕಲು ಸಾಧ್ಯವಾಯಿತು.

  ಈ ಗೆಲುವಿನ ಮೂಲಕ ಭಾರತ ಈ ಸರಣಿಯಲ್ಲಿ ಸೋಲಿನ ಅಂತರ ತಗ್ಗಿಸಿತು. ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ 2-1ರಿಂದ ಆಸ್ಟ್ರೇಲಿಯನ್ನರ ವಶವಾಗಿದೆ. ಸೆ. 30ರಂದು ಕ್ವೀನ್ಸ್​ಲ್ಯಾಂಡ್ ರಾಜ್ಯದಲ್ಲೇ ಇರುವ ಕರಾರದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮಹಿಳೆಯರ ಮಧ್ಯೆ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ಅ. 7, 9 ಮತ್ತು 11ರಂದು ಮೂರು ಟಿ20 ಪಂದ್ಯಗಳು ನಡೆಯಲಿವೆ.

  ಸ್ಕೋರು ವಿವರ:

  ಆಸ್ಟ್ರೇಲಿಯಾ ಮಹಿಳಾ ತಂಡ 50 ಓವರ್ 264/9
  (ಆಷ್ಲೀಗ್ ಗಾರ್ಡ್ನರ್ 67, ಬೆತ್ ಮೂನೀ 52, ಟಾಹ್ಲಿಯಾ ಮೆಕ್​ಗ್ರಾಥ್ 47, ಅಲೀಸಾ ಹೀಲೀ 35, ಎಲಿಸ್ ಪೆರಿ 26 ರನ್ – ಝುಲನ್ ಗೋಸ್ವಾಮಿ 37/3, ಪೂಜಾ ವಸ್ತ್ರಾಕರ್ 46/3)

  ಭಾರತ ಮಹಿಳಾ ತಂಡ 49.3 ಓವರ್ 266/8
  (ಯಸ್ತಿಕಾ ಭಾಟಿಯಾ 64, ಶಫಾಲಿ ವರ್ಮಾ 56, ದೀಪ್ತಿ ಶರ್ಮಾ 31, ಸ್ನೇಹ್ ರಾಣಾ 30, ಸ್ಮೃತಿ ಮಂಧನಾ 22, ಮಿಥಾಲಿ ರಾಜ್ 16 ರನ್ – ಅನ್ನಾಬೆಲ್ ಸದರ್​ಲ್ಯಾಂಡ್ 30/3)
  Published by:Vijayasarthy SN
  First published: