ಮುಂಬೈ (ಡಿ. 11): ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಕೆ ಎಲ್ ರಾಹುಲ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸ್ಪೋಟಕ ಅರ್ಧಶತಕ ಹಾಗೂ ಬೌಲರ್ಗಳ ಸಂಘಟಿತ ಹೋರಾಟದ ಫಲವಾಗಿ ಟೀಂ ಇಂಡಿಯಾ 67 ರನ್ಗಳ ಜಯ ಸಾಧಿಸಿದ್ದು, ಸರಣಿ ವಶಪಡಿಸಿಕೊಂಡಿದೆ.
ಭಾರತ ನೀಡಿದ್ದ 241 ರನ್ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟುವಲ್ಲಿ ಎಡವಿದ ವಿಂಡೀಸ್ 20 ಓವರ್ನಲ್ಲಿ 8 ವಿಕೆಟ್ಕಳೆದುಕೊಂಡು 173 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಗೊಂಡಿತು. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 2-1 ಮುನ್ನಡೆಯೊಂದಿಗೆ ಭಾರತ ಸರಣಿ ವಶಪಡಿಸಿಕೊಂಡಿದೆ.
ರೋಹಿತ್ ಸಿಕ್ಸರ್ ದಾಖಲೆ; ವಿರಾಟ್ 100ನೇ 50; ಭಾರತದ ಮೂರನೇ ಅತಿ ದೊಡ್ಡ ಮೊತ್ತ!
ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಕೀರೊನ್ ಪೊಲಾರ್ಡ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಇಳಿದ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿತು.
ಓಪನರ್ಗಳಾದ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಬಿರುಸಿನ ಬ್ಯಾಟಿಂಗ್ ನಡೆಸಿ ಚೆಂಡನ್ನು ಬೌಂಡರಿ- ಸಿಕ್ಸರ್ಗೆ ಅಟ್ಟಿದರು. ಈ ಜೋಡಿ ಮೊದಲ 5 ಓವರ್ಗೆನೆ ತಂಡದ ಮೊತ್ತವನ್ನು 58ಕ್ಕೆ ತಂದಿಟ್ಟರು.
ಈ ನಡುವೆ ರೋಹಿತ್ ಶರ್ಮಾ ಕೇವಲ 23 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಚಚ್ಚಿ ಅರ್ಧಶತಕ ಪೂರೈಸಿದರು. ಇದರ ಬೆನ್ನಲ್ಲೆ ರಾಹುಲ್ ಕೂಡ 29 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಿಡಿಸಿ 50 ರನ್ ಪೂರ್ಣಗೊಳಿಸಿದರು.
ಅರ್ಧಶತಕದ ಬಳಿಕವೂ ಹೊಡಿಬಡಿ ಆಟವಾಡಿದ ಹಿಟ್ಮ್ಯಾನ್ ಅಂತಿಮವಾಗಿ 34 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಸಿಡಿಸಿ 71 ರನ್ಗೆ ಔಟ್ ಆದರು. ಈ ಮೂಲಕ ರೋಹಿತ್-ರಾಹುಲ್ 135 ರನ್ಗಳ ಅಮೋಘ ಜೊತೆಯಾಟ ಅಂತ್ಯವಾಯಿತು. ರಿಷಭ್ ಪಂತ್ ಸೊನ್ನೆ ಸುತ್ತಿದರು.
13ನೇ ಓವರ್ ಹೊತ್ತಿಗೆ ನಾಯಕ ವಿರಾಟ್ ಕೊಹ್ಲಿ ಜೊತೆಯಾದ ರಾಹುಲ್ ಮನಬಂದಂತೆ ಬ್ಯಾಟ್ ಬೀಸಿದರು. ವಿಂಡೀಸ್ ಬೌಲರ್ಗಳ ಬೆಂಡೆತ್ತಿದರು. ಅದರಲ್ಲು ಕೊನೆಯ 4 ಓವರ್ನಲ್ಲಿ 64 ರನ್ ಹರಿದುಬಂತು.
ಕೊಹ್ಲಿ ಕೇವಲ 29 ಬಾಲ್ಗಳಲ್ಲಿ 4 ಬೌಂಡರಿ, 7 ಅಮೋಘ ಸಿಕ್ಸ್ ಸಿಡಿಸಿ ಅಜೇಯ 70 ರನ್ ಕಲೆಹಾಕಿದರು. ಇತ್ತ ರಾಹುಲ್ ಶತಕ ವಂಚಿತರಾಗಿ 56 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ನೊಂದಿಗೆ 91 ರನ್ ಗಳಿಸಿದರು. ಈ ಜೋಡಿ 95 ರನ್ಗಳ ಜೊತೆಯಾಟ ಆಡಿತು. ಅಂತಿಮವಾಗಿ ಭಾರತ 20 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 240 ರನ್ ಬಾರಿಸಿತು.
241 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಲೆಂಡ್ಲ್ ಸೈಮನ್ಸ್(7), ಬ್ರಾಂಡನ್ ಕಿಂಗ್(5) ಹಾಗೂ ನಿಕೋಲಸ್ ಪೂರನ್(0) ಬೇಗನೆ ನಿರ್ಗಮಿಸಿದರು.
ಶಿಮ್ರೋನ್ ಹೆಟ್ಮೇರ್ ಸ್ಫೋಟಕ ಆಟ 24 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 41 ರನ್ಗೆ ಅಂತ್ಯವಾಯಿತು. ಇತ್ತ ಪೊಲಾರ್ಡ್ ಅರ್ಧಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರು. ಆದರೆ, ಪೊಲಾರ್ಡ್ 39 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಬಾರಿಸಿ 68 ರನ್ಗೆ ಔಟ್ ಆದರು. ಈ ನಡುವೆ ಜೇಸನ್ ಹೋಲ್ಡರ್ ಕೂಡ 8 ರನ್ಗೆ ಸುಸ್ತಾದರು.
ಅಂತಿಮವಾಗಿ ವಿಂಡೀಸ್ 20 ಓವರ್ನಲ್ಲಿ 8 ವಿಕೆಟ್ಕಳೆದುಕೊಂಡು 173 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲಿಗೆ ಶರಣಾಯಿತು. ಭಾರತ ಪರ ದೀಪಕ್ ಚಹಾರ್, ಭುವನೇಶ್ವರ್, ಶಮಿ ಹಾಗೂ ಕುಲ್ದೀಪ್ ತಲಾ 2 ವಿಕೆಟ್ ಕಿತ್ತು ಮಿಂಚಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ