India vs West Indies: ವೆಸ್ಟ್​ ಇಂಡೀಸ್ ಭರ್ಜರಿ ಬ್ಯಾಟಿಂಗ್: ಪಂದ್ಯಕ್ಕೆ ವರುಣನ ಅಡ್ಡಿ

3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ತರಲಾಗಿದ್ದು, ಸ್ಪಿನ್ನರ್ ಕುಲ್​ದೀಪ್ ಯಾದವ್ ಸ್ಥಾನಕ್ಕೆ ಯಜುವೇಂದ್ರ ಚಾಹಲ್​ರನ್ನು ಆಯ್ಕೆ ಮಾಡಲಾಗಿದೆ.

zahir | news18-kannada
Updated:August 14, 2019, 10:29 PM IST
India vs West Indies: ವೆಸ್ಟ್​ ಇಂಡೀಸ್ ಭರ್ಜರಿ ಬ್ಯಾಟಿಂಗ್: ಪಂದ್ಯಕ್ಕೆ ವರುಣನ ಅಡ್ಡಿ
ಟೀಂ ಇಂಡಿಯಾ
  • Share this:
ಪೋರ್ಟ್ ಆಫ್ ಸ್ಪೇನ್​ನಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದಿರುವ ಆತಿಥೇಯ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಈಗಾಗಲೇ ಸರಣಿಯಲ್ಲಿ 1-0 ಅಂತರವನ್ನು ಕಾಯ್ದುಕೊಂಡಿರುವ ವಿರಾಟ್ ಪಡೆ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ವಶಕ್ಕೆ ಪಡೆಯುವ ಇರಾದೆಯಲ್ಲಿದೆ.

ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಏಕದಿನ ಸರಣಿಯನ್ನು ಸಮಬಲಗೊಳಿಸುವ ಯೋಜನೆಯಲ್ಲಿ ವಿಂಡೀಸ್ ತಂಡವಿದ್ದು, ಈ ಮೂಲಕ ತವರಿನ ಪ್ರೇಕ್ಷಕರ ಮುಂದೆ ಮಾನ ಉಳಿಸಲು ಪ್ಲ್ಯಾನ್ ಹಾಕಿಕೊಂಡಿದೆ. ಮೊದಲ ಏಕದಿನ ಪಂದ್ಯವು ಮಳೆಗೆ ಆಹುತಿಯಾದರೆ, 2ನೇ ಪಂದ್ಯದಲ್ಲಿ ಭಾರತ ಗೆದ್ದು ಬೀಗಿತ್ತು. ಇದಕ್ಕೂ ಮುನ್ನ ನಡೆದ ಟಿ20 ಸರಣಿಯನ್ನು ಭಾರತ ತಂಡ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಹೀಗಾಗಿ ಇಂದಿನ ಪಂದ್ಯವು ವೆಸ್ಟ್ ಇಂಡೀಸ್ ಪಾಲಿಗೆ ಮುಖ್ಯವಾಗಿದೆ.

3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ತರಲಾಗಿದ್ದು, ಸ್ಪಿನ್ನರ್ ಕುಲ್​ದೀಪ್ ಯಾದವ್ ಸ್ಥಾನಕ್ಕೆ ಯಜುವೇಂದ್ರ ಚಾಹಲ್​ರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಕಳೆದ ಪಂದ್ಯದಲ್ಲಿ ಹೊರಗುಳಿದಿದ್ದ ಫ್ಯಾಬಿಯನ್ ಅಲೆನ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ.

ಆರಂಭಿಕರಾಗಿ ಕಣಕ್ಕಿಳಿದ ಕ್ರಿಸ್ ಗೇಲ್ ಹಾಗೂ ಎವಿನ್ ಲೆವಿಸ್ ಬ್ಯಾಟಿಂಗ್ ಅಬ್ಬರಕ್ಕೆ ಟೀಂ ಇಂಡಿಯಾ ಬೌಲರುಗಳು ಪರದಾಡಿದರು. ಮೊದಲ 4 ಓವರ್​ನಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಗೇಲ್ ಇದಕ್ಕಿದ್ದಂತೆ ಭಾರತೀಯ ಬೌಲರುಗಳ ವಿರುದ್ಧ ತಿರುಗಿ ಬಿದ್ದರು. ಪರಿಣಾಮ ಕೇವಲ  41 ಎಸೆತಗಳಲ್ಲಿ ಗೇಲ್ ಚಚ್ಚಿದ್ದು ಬರೋಬ್ಬರಿ 72 ರನ್​ಗಳು. ಇದರಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ 8 ಬೌಂಡರಿಗಳು ಮೂಡಿಬಂದಿದ್ದವು. ಇನ್ನೊಂದೆಡೆ ಯುನಿವರ್ಸಲ್ ಬಾಸ್​ಗೆ ಸಾಥ್ ನೀಡಿದ ಎವಿನ್ ಲೆವಿಸ್ ಸಹ ಟೀಂ ಇಂಡಿಯಾ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದರು.

28 ಎಸೆತಗಳಲ್ಲಿ 43 ರನ್​ಗಳಿಸಿದ ಲೆವಿಸ್​ರನ್ನು ಕೊನೆಗೂ ಔಟ್ ಮಾಡಲು ಯಶಸ್ವಿಯಾದ ಚಾಹಲ್ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಅಷ್ಟೊತ್ತಿಗಾಗಲೇ ಗೇಲ್-ಲೆವಿಸ್ ಜೋಡಿ 10.5 ಓವರ್​ನಲ್ಲಿ 115 ರನ್​ಗಳ ಜೊತೆಯಾಟವಾಡಿದ್ದರು. ಮೊದಲ ವಿಕೆಟ್ ಪತನದ ಬೆನ್ನಲ್ಲೇ ಯುವ ವೇಗಿ ಖಲೀಲ್ ಅಹ್ಮದ್ ಗೇಲ್​ರನ್ನು ಔಟ್ ಮಾಡುವ ಮೂಲಕ ಟೀಂ ಇಂಡಿಯಾದ ಮತ್ತೊಂದು ಯಶಸ್ಸಿಗೆ ಕಾರಣರಾದರು.

ಇತ್ತೀಚಿನ ವರದಿ ಬಂದಾಗ ಕ್ರೀಸ್​ನಲ್ಲಿ ಹೆಟ್ಮೆಯರ್ ಹಾಗೂ ಹೋಪ್ ಬ್ಯಾಟ್ ಮಾಡುತ್ತಿದ್ದು, 22 ಓವರ್​ಗೆ 2 ವಿಕೆಟ್ ನಷ್ಟಕ್ಕೆ  158 ರನ್​ಗಳಿಸಿದೆ. (ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ)

ಉಭಯ ತಂಡಗಳು ಇಂತಿವೆ:ವೆಸ್ಟ್ ಇಂಡೀಸ್ : ಕ್ರಿಸ್ ಗೇಲ್, ಎವಿನ್ ಲೂಯಿಸ್, ಶಾಹ್ ಹೋಪ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್ (ನಾಯಕ), ಕಾರ್ಲೋಸ್ ಬ್ರಾಥ್‌ವೇಟ್, ಫ್ಯಾಬಿಯನ್ ಅಲೆನ್, ಕೀಮೊ ಪೌಲ್, ಕೆಮರ್ ರೋಚ್

ಭಾರತ : ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್, ಖಲೀಲ್ ಅಹ್ಮದ್
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ