India vs West Indies Live: ಕುಲ್ದೀಪ್ ಹ್ಯಾಟ್ರಿಕ್ ವಿಕೆಟ್; ಗೆಲುವಿನತ್ತ ಭಾರತ

ಮೊದಲ ಏಕದಿನ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಅನುಭವಿಸಿತ್ತು. 0-1 ಅಂತರದಿಂದ ಹಿನ್ನಡೆ ಅನುಭವಿಸಿರುವ ಕೊಹ್ಲಿ ಪಡೆಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ಟೀಂ ಇಂಡಿಯಾ

ಟೀಂ ಇಂಡಿಯಾ

  • Share this:
ವಿಶಾಖಪಟ್ಟಣ (ಡಿ. 18): ಇಲ್ಲಿನ ಡಾ. ವೈಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ಇಂಡೀಸ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತ ಕಲೆಹಾಕಿದೆ. ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಶತಕ, ರಿಷಭ್ ಪಂತ್ ಹಾಗೂ ಶ್ರೇಯಸ್ ಐಯರ್ ಸ್ಫೋಟಕ ಆಟದ ನೆರವಿನಿಂದ ವಿಂಡೀಸ್​ಗೆ ಗೆಲ್ಲಲು 388 ರನ್​ಗಳ ಟಾರ್ಗೆಟ್ ನೀಡಿದೆ.

ಸದ್ಯ ಈ ಗುರಿ ಬೆನ್ನಟ್ಟಿರುವ ವೆಸ್ಟ್​ ಇಂಡೀಸ್ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ. ತಂಡಕ್ಕೆ ಆಸರೆಯಾಗಿದ್ದ ಶಾಯ್ ಹೋಪ್ ಕೂಡ 78 ರನ್​ಗೆ ಔಟ್ ಆಗಿದ್ದಾರೆ. ಈ ನಡುವೆ ಕುಲ್ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ್ದಾರೆ.

ತನ್ನ 8ನೇ ಓವರ್​ನಲ್ಲಿ 4ನೇ ಎಸೆತದಲ್ಲಿ ಶಾಯ್ ಹೋಪ್(78) ಅವರ ವಿಕೆಟ್ ಕಿತ್ತರೆ, 5ನೇ ಎಸೆತದಲ್ಲಿ ಜೇಸನ್ ಹೋಲ್ಡರ್(11) ಹಾಗೂ ಕೊನೆಯ ಎಸೆತದಲ್ಲಿ ಅಲ್ಜಾರಿ ಜೋಸೆಫ್ ವಿಕೆಟ್ ಕಿತ್ತು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

 ಎವಿನ್ ಲೆವಿಸ್ 30 ರನ್ ಗಳಿಸಿ ಠಾಕೂರ್​ಗೆ ವಿಕೆಟ್ ಒಪ್ಪಿಸಿದರೆ, ಶಿಮ್ರೋನ್ ಹೆಟ್ಮೇರ್(4) ರನೌಟ್​ಗೆ ಬಲಿಯಾದರು. ರಾಸ್ಟನ್ ಚೇಸ್ ಕೇವಲ 4 ರನ್​ಗೆ ಇನ್ನಿಂಗ್ಸ್​ ಅಂತ್ಯಗೊಳಿಸಿದರು. ಈ ಸಂದರ್ಭ ಒಂದಾದ ಶಾಯ್ ಹೋಪ್ ಹಾಗೂ ನಿಕೋಲಸ್ ಪೂರನ್ ಅತ್ಯುತ್ತಮ ಆಟ ಪ್ರದರ್ಶಿಸಿದರು.

ಕೆಲಹೊತ್ತು ಭಾರತೀಯ ಬೌಲರ್​ಗಳನ್ನು ಕಾಡಿದ ಈ ಜೋಡಿ ಶತಕದ ಜೊತೆಯಾಟ ಆಡಿ ತಂಡಕ್ಕೆ ನೆರವಾದರು. ಹೊಡಿಬಡಿ ಆಟವಾಡಿದ ಪೂರನ್ ಕೇವಲ 47 ಎಸೆತಗಳಲ್ಲಿ 6 ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ 75 ರನ್ ಚಚ್ಚಿದರು. ಈ ಜೋಡಿ 4ನೇ ವಿಕೆಟ್​ಗೆ 106 ರನ್​ಗಳ ಜೊತೆಯಾಟ ಆಡಿದರು.

ಪೂರನ್ ನಿರ್ಗಮನದ ಬೆನ್ನಲ್ಲೆ ಬಂದ ನಾಯಕ ಕೀರೊನ್ ಪೊಲಾರ್ಡ್​ ಸೊನ್ನೆ ಸುತ್ತಿದರು. ನಂತರ ಹೋಪ್ ಕೂಡ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 85 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್ ಬಾರಿಸಿ 78 ರನ್​ಗೆ ನಿರ್ಗಮಿಸಿದರು. ಜೇಸನ್ ಹೋಲ್ಡರ್ ಆಟ 11 ರನ್​ಗೆ ಅಂತ್ಯವಾಯಿತು.

ಇದಕ್ಕೂ ಮುನ್ನ ಟಾಸ್ ಗೆದ್ದ ವೆಸ್ಟ್​​ ಇಂಡೀಸ್ ತಂಡದ ನಾಯಕ ಕೀರೊನ್ ಪೊಲಾರ್ಡ್​​ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದರಂತೆ ಬ್ಯಾಟಿಂಗ್​ಗೆ ಇಳಿದ ಭಾರತೀಯ ಓಪನರ್​ಗಳು ಭರ್ಜರಿ ಆಟ ಪ್ರದರ್ಶಿಸಿದರು. ವಿಂಡೀಸ್ ಬೌಲರ್​ಗಳ ಬೆವರಿಳಿಸಿದ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಬಿರುಸಿನ ಆಟವಾಡಿದರು.

 ರೋಹಿತ್ ಶರ್ಮಾ 107 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಿಡಿಸಿ ಶತಕ ಪೂರೈಸಿದರೆ, ರಾಹುಲ್ 104 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಬಾರಿಸಿ 102 ರನ್​ಗೆ ಔಟ್ ಆದರು. ಈ ಮೂಲಕ ಇವರಿಬ್ಬರ 227 ರನ್​ಗಳ ಅಮೋಘ ದ್ವಿಶತಕದ ಜೊತೆಯಾಟ ಅಂತ್ಯವಾಯಿತು. ಬಂದ ಬೆನ್ನಲ್ಲೆ ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ನಿರ್ಗಮಿಸಿದರಾದರು ತಂಡಕ್ಕೆ ಹಿನ್ನಡೆಯಾಗಲಿಲ್ಲ..

 ಹಿಟ್​ಮ್ಯಾನ್ ಇದಾವುದನ್ನು ಲೆಕ್ಕಿಸದೆ​ ತಮ್ಮ ಆರ್ಭಟವನ್ನು ಮುಂದುವರೆಸಿದರು. ಶತಕದ ಬಳಿಕ ಸ್ಫೋಟಕ ಆಟವಾಡಿದ ರೋಹಿತ್ 150 ರನ್ ಅನ್ನೂ ಪೂರೈಸಿಸದರು. ಆದರೆ, ಏಕದಿನ ಕ್ರಿಕೆಟ್​ನಲ್ಲಿ 4ನೇ ದ್ವಿಶತಕ ಸಿಡಿಸುವಲ್ಲಿ ಎಡವಿದರು. 138 ಎಸೆತಗಳಲ್ಲಿ 17 ಬೌಂಡರಿ, 5 ಸಿಕ್ಸರ್ ಚಚ್ಚಿ ರೋಹಿತ್ 159 ರನ್​ಗೆ ಬ್ಯಾಟ್ ಕೆಳಗಿಟ್ಟರು.

ಅಂತಿಮ ಹಂತದಲ್ಲಿ ಜೊತೆಯಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಐಯರ್ ಮನಬಂದಂತೆ ಬ್ಯಾಟ್ ಬೀಸಿದರು. ತಂಡದ ಮೊತ್ತವನ್ನು ಮತ್ತಷ್ಟು ಏರಿಸಿದರು. ಪಂತ್ ಕೇವಲ 15 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಿಡಿಸಿ 39 ರನ್ ಬಾರಿಸಿದರೆ, ಐಯರ್ 31 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಿಡಿಸಿ 53 ರನ್ ಚಚ್ಚಿದರು.

ಅಂತಿಮವಾಗಿ ಭಾರತ 50 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಕಲೆಹಾಕಿರು. ವಿಂಡೀಸ್ ಪರ ಶೆಲ್ಡನ್ ಕಾಟ್ರೆಲ್ 2, ಕೀಮೊ ಪೌಲ್ ಹಾಗೂ ಅಲ್ಜರಿ ಜೋಸೆಫ್ ತಲಾ 1 ವಿಕೆಟ್ ಪಡೆದರು.

ಇಂದಿನ ಪಂದ್ಯಕ್ಕೆ ಟೀಂ ಭಾರತದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಶಿವಂ ದುಬೆ ಬದಲು ಶಾರ್ದೂಲ್ ಠಾಕೂರ್ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಕೆ ಎಲ್ ರಾಹುಲ್, ರೋಹಿತ್ ಶರ್ಮಾ, ಶ್ರೇಯಸ್ ಐಯರ್, ರಿಷಭ್ ಪಂತ್, ಕೇದರ್ ಜಾಧವ್, ರವೀಂದ್ರ ಜಡೇಜಾ, ದೀಪಕ್ ಚಹಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್.

ಇತ್ತ ವೆಸ್ಟ್​ ಇಂಡೀಸ್ ತಂಡ 2 ಬದಲಾವಣೆ ಮಾಡಲಾಗಿದೆ. ಎವಿನ್ ಲೆವಿಸ್ ಹಾಗೂ ಖೇರಿ ಪಿರ್ರೆ ತಂಡ ಸೇರಿಕೊಂಡಿದ್ದಾರೆ.

ವೆಸ್ಟ್​ ಇಂಡೀಸ್ ತಂಡ: ಕೀರೊನ್ ಪೊಲಾರ್ಡ್​ (ನಾಯಕ), ಶಾಯ್ ಹೋಪ್, ಎವಿನ್ ಲೆವಿಸ್, ಶಿಮ್ರೋನ್ ಹೆಟ್ಮೇರ್, ನಿಕೋಲಸ್ ಪೂರನ್, ರಾಸ್ಟನ್ ಚೇಸ್, ಜೇಸನ್ ಹೋಲ್ಡರ್, ಶೆಲ್ಡನ್ ಕಾಟ್ರೆಲ್, ಕೀಮೊ ಪೌಲ್, ಅಲ್ಜರಿ ಜೋಸೆಫ್, ಖೇರಿ ಪಿರ್ರೆ.
Published by:Vinay Bhat
First published: