ಚೆನ್ನೈ (ಡಿ. 15): ಇಲ್ಲಿನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಶಿಮ್ರೋನ್ ಹೆಟ್ಮೇರ್ ಹಾಗೂ ಶಾಯ್ ಹೋಪ್ ಶತಕದಬ್ಬರಕ್ಕೆ ತಲೆಬಾಗಿದ ಭಾರತ ಸೋಲುಂಡಿದೆ.
ರಿಷಭ್ ಪಂತ್ ಹಾಗೂ ಶ್ರೇಯಸ್ ಐಯರ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ವಿಂಡೀಸ್ಗೆ ಗೆಲ್ಲಲು ಭಾರತ 288 ರನ್ಗಳ ಟಾರ್ಗೆಟ್ ನೀಡಿತು.
ಈ ಗುರಿ ಬೆನ್ನಟ್ಟಿದ ವಿಂಡೀಸ್ಗೆ ದೀಪಕ್ ಚಹಾರ್ ಆರಂಭದಲ್ಲೇ ಶಾಕ್ ನೀಡಿದರು. 8 ರನ್ ಗಳಿಸಿದ್ದ ಸುನಿಲ್ ಅಂಬ್ರಿಸ್ ಎಲ್ಬಿ ಬಲೆಗೆ ಸಿಲುಕಿ ನಿರ್ಗಮಿಸಿದರು. ಆದರೆ 2ನೇ ವಿಕೆಟ್ಗೆ ಶಾಯ್ ಹೋಪ್ ಹಾಗೂ ಶಿಮ್ರೋನ್ ಹೆಟ್ಮೇರ್ ಅಮೋಘ ಆಟ ಪ್ರದರ್ಶಿಸಿದರು. ಅದರಲ್ಲು ಹೆಟ್ಮೇರ್ ಬಿರುಸಿನ ಆಟದ ಮೊರೆಹೋದರೆ, ಇವರಿಗೆ ಶಾಯ್ ಹೋಪ್ ಉತ್ತಮ ಸಾಥ್ ನೀಡಿದರು.
ಭಾರತೀಯ ಬೌಲರ್ಗಳನ್ನು ಕಾಡಿದ ಹೆಟ್ಮೇರ್ ಬೌಂಡರಿ-ಸಿಕ್ಸರ್ ಚಚ್ಚಿದರು. ಈ ಜೋಡಿ 218 ರನ್ಗಳ ದ್ವಿಶತಕದ ಜೊತೆಯಾಟ ಆಡಿತು. ಹೆಟ್ಮೇರ್ 106 ಎಸೆತಗಳಲ್ಲಿ 11 ಬೌಂಡರಿ, 7 ಸಿಕ್ಸರ್ ಸಿಡಿಸಿ ಏಕದಿನ ಕ್ರಿಕೆಟ್ನಲ್ಲಿ 5ನೇ ಶತಕ ಪೂರೈಸಿ 139 ರನ್ಗೆ ಔಟ್ ಆದರು.
ನಂತರ ಹೋಪ್ ಹಾಗೂ ನಿಕೋಲಸ್ ಪೂರನ್ ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ಹೊತ್ತರು. ಅಂತೆಯೆ ಅತ್ಯುತ್ತಮ ಆಟವಾಡಿದ ಹೋಪ್ ಶತಕ ಬಾರಿಸಿ ತಂಡಕ್ಕೆ ಜಯ ತಂದಿಟ್ಟರು. 151 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಿಡಿಸಿ ಹೋಪ್ ಅಜೇಯ 102 ರನ್ ಗಳಿಸಿದರೆ, ಪೂರನ್ ಅಜೇಯ 29 ರನ್ ಬಾರಿಸಿದರು.
ವೆಸ್ಟ್ ಇಂಡೀಸ್ 47.5 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 291 ರನ್ ಕಲೆಹಾಕಿ 8 ವಿಕೆಟ್ಗಳ ಜಯ ಸಾಧಿಸಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೆರಿಬಿಯನ್ನರು 1-0 ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯ ಡಿ. 18 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ 7ನೇ ಓವರ್ನಲ್ಲಿ ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. 6 ರನ್ ಗಳಿಸಿ ಹೆಟ್ಮೇರ್ಗೆ ಕ್ಯಾಚಿತ್ತು ರಾಹುಲ್ ಔಟ್ ಆದರು. ಇದರ ಬೆನ್ನಲ್ಲೆ ನಾಯಕ ವಿರಾಟ್ ಕೊಹ್ಲಿ ಕೂಡ ಒಂದು ಬೌಂಡರಿ ಬಾರಿಸಿ ಪೆವಿಲಿಯನ್ ಸೇರಿಕೊಂಡರು.
ಭಾರತ-ವಿಂಡೀಸ್ ಪಂದ್ಯದಲ್ಲಿ ಸಲ್ಮಾನ್-ಸುದೀಪ್; ಕಿಚ್ಚನ ನೆಚ್ಚಿನ ಕ್ರಿಕೆಟಿಗ ನಮ್ಮ ಹೆಮ್ಮೆಯ ಕನ್ನಡಿಗ!
3ನೇ ವಿಕೆಟ್ಗೆ ಜೊತೆಯಾದ ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಐಯರ್ ಕೊಂಚ ರನ್ ಕಲೆಹಾಕಿದರು. ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತಷ್ಟೆ. ಚೆನ್ನಾಗಿಯೆ ಆಡುತ್ತಿದ್ದ ರೋಹಿತ್ ಶರ್ಮಾ 36 ರನ್ ಗಳಿಸಿರುವಾಗ ಔಟ್ ಆದರು.
ಈ ಸಂದರ್ಭ ಒಂದಾದ ಶ್ರೇಯಸ್ ಐಯರ್ ಹಾಗೂ ರಿಷಭ್ ಪಂತ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ತಂಡಕ್ಕೆ ಆಸರೆಯಾಗಿ ನಿಂತ ಈ ಜೋಡಿ ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ರನ್ ಗತಿಯನ್ನು ಏರಿಸಿದರು. 114 ರನ್ಗಳ ಅಮೋಘ ಜೊತೆಯಾಟ ಈ ಜೋಡಿಯ ಖಾತೆಯಿಂದ ಮೂಡಿಬಂತು. ರಿಷಭ್ ಪಂತ್ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು.
Maiden ODI FIFTY for
@RishabhPant17 👏👏
#INDvWI pic.twitter.com/nJ9x1kySNu
— BCCI (@BCCI)
December 15, 2019
ಐಯರ್ 88 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಿಡಿಸಿ 70 ರನ್ ಗಳಿಸಿ ಔಟ್ ಆದರು. ಇದರ ಬೆನ್ನಲ್ಲೆ ಪಂತ್ ಕೂಡ 69 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಬಾರಿಸಿ 71 ರನ್ಗೆ ಬ್ಯಾಟ್ ಕೆಳಗಿಟ್ಟರು.
ಕೊನೆಯಲ್ಲಿ ಕೇದರ್ ಜಾಧವ್(40) ಹಾಗೂ ರವೀಂದ್ರ ಜಡೇಜಾ(21) ಬ್ಯಾಟ್ ಬೀಸಿ ಎದುರಾಳಿಗೆ ಸವಾಲಿನ ಟಾರ್ಗೆಟ್ ನೀಡುವಲ್ಲಿ ಯಶಸ್ವಿಯಾದರು. ಭಾರತ 50 ಓವರ್ನಲ್ಲಿ 8 ವಿಕೆಟ್ ಕಳೆದುಕೊಂಡು 287 ರನ್ ಕಲೆಹಾಕಿತು. ವಿಂಡೀಸ್ ಪರ ಶೆಲ್ಡನ್ ಕಾಟ್ರೆಲ್, ಕೀಮೊ ಪೌಲ್ ಹಾಗೂ ಅಲ್ಜಾರಿ ಜೋಸೆಫ್ 2 ವಿಕೆಟ್ ಕಿತ್ತರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ