ಬೆಂಗಳೂರು (ಆ. 25): ಆಂಟಿಗಾದಲ್ಲಿ ಸಾಗುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. 2ನೇ ಇನ್ನಿಂಗ್ಸ್ ಆರಂಭಿಸಿರುವ ಭಾರತಕ್ಕೆ ಕೊಹ್ಲಿ ಹಾಗೂ ರಹಾನೆ ಆಸರೆಯಾಗಿ ನಿಂತಿದ್ದು ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 185 ರನ್ ಕಲೆಹಾಕಿದೆ. ಜೊತೆಗೆ 260 ರನ್ಗಳ ಮುನ್ನಡೆಯಲ್ಲಿದೆ.
ಎರಡನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 189 ರನ್ ಬಾರಿಸಿದ್ದ ವೆಸ್ಟ್ ಇಂಡೀಸ್ 3ನೇ ದಿನ 33 ರನ್ ಕಲೆಹಾಕುವಷ್ಟರಲ್ಲಿ ಆಲೌಟ್ ಆಯಿತು. ಇಶಾಂತ್ 5 ವಿಕೆಟ್ ಕಿತ್ತರೆ, ಜಡೇಜಾ ಹಾಗೂ ಶಮಿ 2 ಮತ್ತು ಬುಮ್ರಾ 1 ವಿಕೆಟ್ ಪಡೆದರು.
75 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಮತ್ತೆ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವಿತು. ಮಯಾಂಕ್ ಅಗರ್ವಾಲ್ 16 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಚೇತೇಶ್ವರ್ ಪೂಜಾರ(25) ಹಾಗೂ ಕೆ ಎಲ್ ರಾಹುಲ್(38) ಕೆಲ ಸಮಯ ಬ್ಯಾಟ್ ಬೀಸಿ ಔಟ್ ಆದರು.
ಬಳಿಕ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತರು. ಎಚ್ಚರಿಕೆಯ ಜೊತೆಯಾಟ ಆಡಿದ ಈ ಜೋಡಿ ತಂಡದ ರನ್ ಗತಿಯನ್ನು ಏರಿಸಿದರು. ಜೊತೆಗೆ ಅರ್ಧಶತಕ ಸಿಡಿಸಿ ಮಿಂಚಿದರು.
ಅಂತಿಮವಾಗಿ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 185 ರನ್ ಕಲೆಹಾಕಿದೆ. 260 ರನ್ಗಳ ಮುನ್ನಡೆಯಲ್ಲಿದ್ದು, ದೊಡ್ಡ ಮೊತ್ತ ಕಲೆಹಾಕುವ ಸೂಚನೆ ನೀಡಿದೆ. ಕೊಹ್ಲಿ 51 ಹಾಗೂ ರಹಾನೆ 53 ರನ್ ಬಾರಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ರಾಸ್ಟನ್ ಚೇಸ್ 2 ಹಾಗೂ ಕೇಮರ್ ರೋಚ್ 1 ವಿಕೆಟ್ ಪಡೆದಿದ್ದಾರೆ.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ