IND vs WI: ಕೊಹ್ಲಿ ಶತಕ, ಐಯರ್ ಅರ್ಧಶತಕ; ಭಾರತಕ್ಕೆ 59 ರನ್​ಗಳ ಭರ್ಜರಿ ಜಯ

ಶ್ರೇಯಸ್ ಐಯರ್ ಹಾಗೂ ಕೊಹ್ಲಿ ಮನಮೋಹಕ ಆಟ ಪ್ರದರ್ಶಿಸಿದರು. ವಿಂಡೀಸ್ ಬೌಲರ್​​ಗಳನ್ನು ಕಾಡಿದ ಈ ಜೋಡಿ 125 ರನ್​ಗಳ ಜೊತೆಯಾಟ ಆಡಿತು.

ಟೀಂ ಇಂಡಿಯಾ

ಟೀಂ ಇಂಡಿಯಾ

  • News18
  • Last Updated :
  • Share this:
ಟ್ರಿನಿಡಾಡ್ (ಆ. 12): ಕ್ವೀನ್ಸ್​ ಪಾರ್ಕ್​ ಓವಲ್ ಮೈದಾನದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಮಳೆ ಬಾಧಿತ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ ಶತಕ, ಶ್ರೇಯಸ್ ಐಯರ್ ಅರ್ಧಶತಕ ಹಾಗೂ ಭುವನೇಶ್ವರ್ ಕುಮಾರ್​ರ ಮಾರಕ ದಾಳಿಯ ನೆರವಿನಿಂದ ಟೀಂ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 59 ರನ್​​ಗಳಿಂದ ಗೆದ್ದು ಬೀಗಿದೆ.

ಟಾಸ್ ಗೆದ್ದು ಬ್ಯಾಟಿಂಗ್​​ಗೆ ಇಳಿದ ಭಾರತ ಉತ್ತಮ ಆರಂಭ ಪಡೆದುಕೊಂಡಿಲ್ಲ. ಮೊದಲ ಓವರ್​ನಲ್ಲೇ ಶಿಖರ್ ಧವನ್(2) ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್​ಗೆ ರೋಹಿತ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟ ಆಡಿದರು. ಕೊಹ್ಲಿ ಬ್ಯಾಟ್ ಬೀಸಿದರೆ ರೋಹಿತ್ ಸಾತ್ ನೀಡಿದರು. ಇವರಿಬ್ಬರ ಖಾತೆಯಿಂದ 74 ರನ್​ಗಳ ಕಾಣಿಕೆ ಮೂಡಿಬಂತು. ರೋಹಿತ್ 34 ಎಸೆತಗಳಲ್ಲಿ 18 ರನ್ ಗಳಿಸಿ ಔಟ್ ಆದರು. ಪಂತ್ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ 20 ರನ್​ಗೆ ಇನ್ನಿಂಗ್ಸ್​ ಕೊನೆಗೊಳಿಸಿದರು.

ಈ ಸಂದರ್ಭ ಒಂದಾದ ಶ್ರೇಯಸ್ ಐಯರ್ ಹಾಗೂ ಕೊಹ್ಲಿ ಮನಮೋಹಕ ಆಟ ಪ್ರದರ್ಶಿಸಿದರು. ವಿಂಡೀಸ್ ಬೌಲರ್​​ಗಳನ್ನು ಕಾಡಿದ ಈ ಜೋಡಿ 125 ರನ್​ಗಳ ಜೊತೆಯಾಟ ಆಡಿತು. ನಿರೀಕ್ಷೆಗೆ ತಕ್ಕಂತೆ ಆಟ ಪ್ರದರ್ಶಿಸಿದ ಐಯರ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರೆ, ಕಿಂಗ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ 42ನೇ ಶತಕ ಬಾರಿಸಿದರು.

ಇವರಿಬ್ಬರ ಜೊತೆಯಾಟದ ನೆರವಿನಿಂದ ಭಾರತ 50 ಓವರ್​ಗೆ 7 ವಿಕೆಟ್ ಕಳೆದುಕೊಂಡು 279 ರನ್ ಕಲೆಹಾಕಿತು. ಕೊಹ್ಲಿ 125 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 120 ರನ್ ಬಾರಿಸಿದರೆ, ಐಯರ್ 68 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಜೊತೆಗೆ 71 ರನ್ ಗಳಿಸಿದರು. ವಿಂಡೀಸ್ ಪರ ಬ್ರಾಥ್​ವೈಟ್ 3 ವಿಕೆಟ್ ಕಿತ್ತರೆ, ಶೆಲ್ಡನ್ ಕಾಟ್ರೆಲ್, ಜೇಸನ್ ಹೋಲ್ಡರ್ ಹಾಗೂ ರಾಸ್ಟನ್ ಚೇಸ್ ತಲಾ 1 ವಿಕೆಟ್ ಪಡೆದರು.

 



280 ರನ್​ಗಳ ಕಠಿಣ ಗುರಿ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ಆರಂಭದಲ್ಲೇ ಕ್ರಿಸ್ ಗೇಲ್(11) ಹಾಗೂ ಶಾಯ್ ಹೋಪ್(5) ವಿಕೆಟ್ ಕಳೆದುಕೊಂಡಿತು. ವಿಂಡೀಸ್ 12.5 ಓವರ್‌ಗಳಲ್ಲಿ ಎರಡು ವಿಕೆಟ್ 55 ರನ್ ಗಳಿಸಿದ್ದ ವೇಳೆ ಮಳೆ ಸುರಿದಿದ್ದರಿಂದ ಓವರ್‌ಗಳ ಸಂಖ್ಯೆ ಇಳಿಕೆಮಾಡಿ 46 ಓವರ್‌ನಲ್ಲಿ ಗೆಲುವಿಗೆ 270 ರನ್ ನೀಡಲಾಯಿತು.

ಬಳಿಕ ಶ್ರಿಮ್ರೋನ್ ಹೆಟ್ಮೇರ್(18) ನಿಂತು ಆಡುವಲ್ಲಿ ವಿಫಲವಾದರು. ಆದರೆ, ಇತ್ತ ಎವಿನ್ ಲೆವಿಸ್ ಏಕಾಂಗಿಯಾಗಿ ಬ್ಯಾಟ್ ಬೀಸುತ್ತಿದ್ದರು. ಇವರ ಜೊತೆಯಾದ ನಿಕೋಲಸ್ ಪೂರನ್ ಗೆಲುವಿಗಾಗಿ ಹೋರಾಟ ನಡೆಸಿದರು. ಆದರೆ, ಲೆವಿಸ್ ಆಟ 65 ರನ್​ಗೆ ಅಂತ್ಯವಾದರೆ, ಪೂರನ್ ಹೋರಾಟ 42 ರನ್​ಗೆ ಕೊನೆಗೊಂಡಿತು.

ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಯಾರು ಹೆಚ್ಚಯಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಪರಿಣಾಮ ವಿಂಡೀಸ್ 42 ಓವರ್​ನಲ್ಲಿ 210 ರನ್​ಗೆ ಆಲೌಟ್ ಆಗುವ ಮೂಲಕ ಸೋಲುಂಡಿತು. ಭಾರತ ಪರ ಭುವನೇಶ್ವರ್ 4 ವಿಕೆಟ್ ಕಿತ್ತು ಮಿಂಚಿದರೆ, ಶಮಿ ಹಾಗೂ ಕುಲ್ದೀಪ್ 2, ಖಲೀಲ್ ಅಹ್ಮದ್ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದರು.

59 ರನ್​ಗಳ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಏಕದಿನ ಮಳೆಯಿಂದ ರದ್ದಾಗಿತ್ತು. ಶತಕ ಸಿಡಿಸಿ ಮಿಂಚಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಅಂತಿಮ ಮೂರನೇ ಏಕದಿನ ಪಂದ್ಯ ಆ. 14 ರಂದು ಇದೇ ಮೈದಾನದಲ್ಲಿ ನಡೆಯಲಿದೆ.
First published: