ಬೆಂಗಳೂರು (ಆ. 30): ವೆಸ್ಟ್ ಇಂಡೀಸ್ ಪ್ರವಾದಲ್ಲಿರುವ ಭಾರತ ಇಂದಿನಿಂದ ಅಂತಿಮ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಈಗಾಗಲೇ ಮೊದಲ ಟೆಸ್ಟ್ ಗೆದ್ದಿರುವ ಕೊಹ್ಲಿ ಪಡೆ, ಈ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ಯೋಜನೆ ಹಾಕಿಕೊಂಡಿದೆ.
ಟೀಂ ಇಂಡಿಯಾದಲ್ಲಿ ಬಹುತೇಕ ಕಳೆದ ಗೆಲುವಿನ ತಂಡದ ಆಟಗಾರರೇ 2ನೇ ಟೆಸ್ಟ್ನಲ್ಲು ಇಳಿಯುವ ಅಂದಾಜಿನಲ್ಲಿದೆ. ಎಲ್ಲಾದರು ಬದಲಾವಣೆ ಆದಲ್ಲಿ ಆರ್. ಅಶ್ವಿನ್ ತಂಡ ಸೇರಿಕೊಳ್ಳಬಹುದು. ಹಾಗಾದಲ್ಲಿ ಯಾವ ಆಟಗಾರ ಹೊರಗುಳಿಯುತ್ತಾನೆ ಎಂಬುದು ಕುತೂಹಲ.
ಭಾರತ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಪದೇಪದೇ ಎಡವುತ್ತಿದೆ. ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮೊದಲ ಟೆಸ್ಟ್ನಲ್ಲಿ ಸಂಪೂರ್ಣ ವಿಫಲರಾಗಿದ್ದರು. ಕೆ ಎಲ್ ರಾಹುಲ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಇವರಿಬ್ಬರ ಮೇಲೆ ಈಬಾರಿ ಹೆಚ್ಚಿನ ನಿರೀಕ್ಷೆಯಿದೆ. ಜೊತೆಗೆ ರಿಷಭ್ ಪಂತ್ ವೈಫಲ್ಯ ಅನುಭವಿಸುತ್ತಿದ್ದು, ವೃದ್ದಿಮಾನ್ ಸಾಹ ಅವಕಾಶ ಪಡೆದರೆ ಅಚ್ಚರಿ ಪಡಬೇಕಿಲ್ಲ.
MS Dhoni: ಮುಚ್ಚಿದ ಬಾಗಿಲು; ನಿವೃತ್ತಿ ಇಲ್ಲ ಎಂದರೂ ಧೋನಿಯನ್ನು ಕೈಬಿಟ್ಟ ಆಯ್ಕೆ ಸಮಿತಿ, ಯಾಕೆ..?
ಇನ್ನು ನಾಯಕ
ವಿರಾಟ್ ಕೊಹ್ಲಿ ವಿನೂತನ ಸಾಧನೆಯತ್ತ ದಾಪುಗಾಲಿಡುತ್ತಿದ್ದಾರೆ. ವಿಂಡೀಸ್ ವಿರುದ್ಧದ 2ನೇ ಟೆಸ್ಟ್ನಲ್ಲಿ ಜಯ ಸಾಧಿಸಿದರೆ ಭಾರತ ಪರ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ನಾಯಕ ಎಂಬ ಬಹುದೊಡ್ಡ ಸಾಧನೆ ಮಾಡಲಿದ್ದಾರೆ.
ಎಂ ಎಸ್ ಧೋನಿ 60 ಟೆಸ್ಟ್ ಪಂದ್ಯಗಳಲ್ಲಿ 27 ಪಂದ್ಯ ಗೆದ್ದು ಮೊದಲ ಸ್ಥಾನದಲ್ಲಿ ಯಶಸ್ವಿ ಟೆಸ್ಟ್ ನಾಯಕನಾಗಿದ್ದಾರೆ. ಕೊಹ್ಲಿ ಕೂಡ ಇದೇ ಕ್ರಮಾಂಕದಲ್ಲಿದ್ದು, ಈ ಟೆಸ್ಟ್ ಗೆದ್ದರೆ ಭಾರತದ ಶ್ರೇಷ್ಠ ಟೆಸ್ಟ್ ನಾಯಕ ಎಂಬ ಪಟ್ಟ ಕೊಹ್ಲಿಗೆ ಸಿಗಲಿದೆ.
ಇತ್ತ ವೆಸ್ಟ್ ಇಂಡೀಸ್ ಮಾನ ಉಳಿಕೊಳ್ಳಲಾದರು ಈ ಟೆಸ್ಟ್ ಗೆಲ್ಲಬೇಕೆಂಬ ಪಣ ತೊಟ್ಟಿದೆ. ಮೊದಲ ಟೆಸ್ಟ್ನಲ್ಲಿ ಬ್ಯಾಟಿಂಗ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ ಬ್ಯಾಟ್ಸ್ಮನ್ಗಳ ವಿರುದ್ಧ ನಾಯಕ ಜೇಸನ್ ಹೋಲ್ಡರ್ ಬೇಸರ ವ್ಯಕ್ತ ಪಡಿಸಿದ್ದರು. ಹೀಗಾಗಿ ಈ ಬಾರಿ ನಾಯಕನ ಭರವಸೆ ಪ್ರಮುಖ ಬ್ಯಾಟ್ಸ್ಮನ್ಗಳು ಉಳಿಸಿಕೊಳ್ಳಬೇಕಿದೆ.
ಪಂದ್ಯ ಆರಂಭ: ರಾತ್ರಿ 8 ಗಂಟೆಗೆ
ಸ್ಥಳ: ಸಬೀನಾ ಪಾರ್ಕ್, ಜಮೈಕಾ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ