India vs West Indies: ಭಾರತ ಅಬ್ಬರದ ಬ್ಯಾಟಿಂಗ್; ಕುಲ್ದೀಪ್ ಹ್ಯಾಟ್ರಿಕ್ ಮ್ಯಾಜಿಕ್; ಸರಣಿ ಸಮಬಲ

ಕುಲ್ದೀಪ್ ತನ್ನ 8ನೇ ಓವರ್​ನಲ್ಲಿ 4ನೇ ಎಸೆತದಲ್ಲಿ ಶಾಯ್ ಹೋಪ್ ಅವರ ವಿಕೆಟ್ ಕಿತ್ತರೆ, 5ನೇ ಎಸೆತದಲ್ಲಿ ಜೇಸನ್ ಹೋಲ್ಡರ್ ಹಾಗೂ ಕೊನೆಯ ಎಸೆತದಲ್ಲಿ ಅಲ್ಜಾರಿ ಜೋಸೆಫ್ ವಿಕೆಟ್ ಕಿತ್ತು ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ 2 ಹ್ಯಾಟ್ರಿಕ್ ವಿಕೆಟ್ ಕಿತ್ತ ಭಾರತದ ಮೊದಲ ಬೌಲರ್ ಎನಿಸಿಕೊಂಡರು.

Vinay Bhat | news18-kannada
Updated:December 18, 2019, 9:21 PM IST
India vs West Indies: ಭಾರತ ಅಬ್ಬರದ ಬ್ಯಾಟಿಂಗ್; ಕುಲ್ದೀಪ್ ಹ್ಯಾಟ್ರಿಕ್ ಮ್ಯಾಜಿಕ್; ಸರಣಿ ಸಮಬಲ
ಟೀಂ ಇಂಡಿಯಾ ಆಟಗಾರರು
  • Share this:
ವಿಶಾಖಪಟ್ಟಣ (ಡಿ. 18): ಇಲ್ಲಿನ ಡಾ. ವೈಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್- ಬೌಲಿಂಗ್​ನಲ್ಲಿ ಮಿಂಚಿದ ಕೊಹ್ಲಿ ಹುಡುಗರು 107 ರನ್​ಗಳ ಜಯದೊಂದಿಗೆ ಸರಣಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ಭರ್ಜರಿ ಆಟ ಪ್ರದರ್ಶಿಸಿತು. ವಿಂಡೀಸ್ ಬೌಲರ್​ಗಳ ಬೆವರಿಳಿಸಿದ ಓಪನರ್​ಗಳಾದ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಬಿರುಸಿನ ಆಟವಾಡಿದರು. ಸಿಕ್ಕ ಅವಕಾಶವನ್ನು ಕೈತುಂಬಾ ಬಾಜಿಕೊಂಡ ಇವರಿಬ್ಬರು ಅಮೋಘ ಬ್ಯಾಟಿಂಗ್ ನಡೆಸಿದರು.

ರೋಹಿತ್ ಶರ್ಮಾ 107 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಿಡಿಸಿ ಶತಕ ಪೂರೈಸಿದರೆ, ರಾಹುಲ್ 104 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಬಾರಿಸಿ 102 ರನ್​ಗೆ ಔಟ್ ಆದರು. ಈ ಮೂಲಕ ಇವರಿಬ್ಬರ 227 ರನ್​ಗಳ ಅಮೋಘ ದ್ವಿಶತಕದ ಜೊತೆಯಾಟ ಅಂತ್ಯವಾಯಿತು. ಈ ನಡುವೆ ಬಂದ ಬೆನ್ನಲ್ಲೆ ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ನಿರ್ಗಮಿಸಿದರಾದರು ತಂಡಕ್ಕೆ ಹಿನ್ನಡೆಯಾಗಲಿಲ್ಲ.

6,6, 4, 6, 6: ಭಾರತ ಪರ ನೂತನ ದಾಖಲೆ ಬರೆದ ರಿಷಭ್ ಪಂತ್- ಶ್ರೇಯಸ್ ಐಯರ್!

ಹಿಟ್​ಮ್ಯಾನ್ ಇದಾವುದನ್ನು ಲೆಕ್ಕಿಸದೆ​ ತಮ್ಮ ಆರ್ಭಟವನ್ನು ಮುಂದುವರೆಸಿದರು. ಶತಕದ ಬಳಿಕ ಸ್ಫೋಟಕ ಆಟವಾಡಿದ ರೋಹಿತ್ 150 ರನ್ ಅನ್ನೂ ಪೂರೈಸಿಸದರು. ಆದರೆ, ಏಕದಿನ ಕ್ರಿಕೆಟ್​ನಲ್ಲಿ 4ನೇ ದ್ವಿಶತಕ ಸಿಡಿಸುವಲ್ಲಿ ಎಡವಿದರು. 138 ಎಸೆತಗಳಲ್ಲಿ 17 ಬೌಂಡರಿ, 5 ಸಿಕ್ಸರ್ ಚಚ್ಚಿ ರೋಹಿತ್ 159 ರನ್​ಗೆ ಬ್ಯಾಟ್ ಕೆಳಗಿಟ್ಟರು.

ಅಂತಿಮ ಹಂತದಲ್ಲಿ ಜೊತೆಯಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಐಯರ್ ಮನಬಂದಂತೆ ಬ್ಯಾಟ್ ಬೀಸಿದರು. ತಂಡದ ಮೊತ್ತವನ್ನು ಮತ್ತಷ್ಟು ಏರಿಸಿದರು. ಪಂತ್ ಕೇವಲ 15 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಿಡಿಸಿ 39 ರನ್ ಬಾರಿಸಿದರೆ, ಐಯರ್ 31 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಿಡಿಸಿ 53 ರನ್ ಚಚ್ಚಿದರು. ಅಂತಿಮವಾಗಿ ಭಾರತ 50 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಕಲೆಹಾಕಿತು. ವಿಂಡೀಸ್ ಪರ ಶೆಲ್ಡನ್ ಕಾಟ್ರೆಲ್ 2, ಕೀಮೊ ಪೌಲ್ ಹಾಗೂ ಅಲ್ಜರಿ ಜೋಸೆಫ್ ತಲಾ 1 ವಿಕೆಟ್ ಪಡೆದರು.

 

388 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ಎವಿನ್ ಲೆವಿಸ್ 30 ರನ್ ಗಳಿಸಿ ಠಾಕೂರ್​ಗೆ ವಿಕೆಟ್ ಒಪ್ಪಿಸಿದರೆ, ಶಿಮ್ರೋನ್ ಹೆಟ್ಮೇರ್(4) ರನೌಟ್​ಗೆ ಬಲಿಯಾದರು. ರಾಸ್ಟನ್ ಚೇಸ್ ಕೇವಲ 4 ರನ್​ಗೆ ಇನ್ನಿಂಗ್ಸ್​ ಅಂತ್ಯಗೊಳಿಸಿದರು. ಆದರೆ, ಈ ಸಂದರ್ಭ ಒಂದಾದ ಶಾಯ್ ಹೋಪ್ ಹಾಗೂ ನಿಕೋಲಸ್ ಪೂರನ್ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದರು.

(VIDEO): ತಾನೇ ಬಾರಿಸಿದ ಸಿಕ್ಸ್​ ನೋಡಿ ಶಾಕ್ ಆದ ರೋಹಿತ್ ಶರ್ಮಾ!; ಹಿಟ್​ಮ್ಯಾನ್​ನಿಂದ ದಾಖಲೆಯ ಆಟ!

ಕೆಲಹೊತ್ತು ಭಾರತೀಯ ಬೌಲರ್​ಗಳನ್ನು ಕಾಡಿದ ಈ ಜೋಡಿ ಶತಕದ ಕಾಣಿಕೆ ನೀಡಿ ತಂಡಕ್ಕೆ ನೆರವಾಯಿತು. ಹೊಡಿಬಡಿ ಆಟವಾಡಿದ ಪೂರನ್ ಕೇವಲ 47 ಎಸೆತಗಳಲ್ಲಿ 6 ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ 75 ರನ್ ಚಚ್ಚಿದರು. ಪೂರನ್ ನಿರ್ಗಮನದ ಬೆನ್ನಲ್ಲೆ ಬಂದ ನಾಯಕ ಕೀರೊನ್ ಪೊಲಾರ್ಡ್​ ಸೊನ್ನೆ ಸುತ್ತಿದರು.

ನಂತರ ನಡೆದಿದ್ದು ಕುಲ್ದೀಪ್ ಹ್ಯಾಟ್ರಿಕ್ ಮ್ಯಾಜಿಕ್- ಒಂದುಕಡೆ ವಿಕೆಟ್ ಉರುಳುತ್ತಿದ್ದರು ತಂಡಕ್ಕೆ ಆಸರೆಯಾಗಿ ನಿಂತ ಹೋಪ್ ಅನ್ನು ಪೆವಿಲಿಯನ್​ಗೆ ಅಟ್ಟುವಲ್ಲಿ ಕುಲ್ದೀಪ್ ಯಶಸ್ವಿಯಾದರು. 85 ಎಸೆತಗಳಲ್ಲಿ 7 ಬೌಂಡರಿ 3 ಸಿಕ್ಸರ್ ಬಾರಿಸಿ 78 ರನ್​ಗೆ ನಿರ್ಗಮಿಸಿದರು.

ಹೀಗೆ ತನ್ನ 8ನೇ ಓವರ್​ನಲ್ಲಿ 4ನೇ ಎಸೆತದಲ್ಲಿ ಶಾಯ್ ಹೋಪ್ ಅವರ ವಿಕೆಟ್ ಕಿತ್ತರೆ, 5ನೇ ಎಸೆತದಲ್ಲಿ ಜೇಸನ್ ಹೋಲ್ಡರ್(11) ಹಾಗೂ ಕೊನೆಯ ಎಸೆತದಲ್ಲಿ ಅಲ್ಜಾರಿ ಜೋಸೆಫ್ ವಿಕೆಟ್ ಕಿತ್ತು ಹ್ಯಾಟ್ರಿಕ್ ಕುಲ್ದೀಪ್ ಸಾಧನೆ ಮಾಡಿದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಎರಡು ಹ್ಯಾಟ್ರಿಕ್ ವಿಕೆಟ್ ಕಿತ್ತ ಭಾರತದ ಮೊದಲ ಬೌಲರ್ ಎನಿಸಿಕೊಂಡರು.

ವೆಸ್ಟ್​ ಇಂಡೀಸ್ ಅಂತಿಮವಾಗಿ 43.3 ಓವರ್​​ನಲ್ಲಿ 280 ರನ್​ಗೆ ಆಲೌಟ್ ಆಯಿತು. ಭಾರತ ಪರ ಕುಲ್ದೀಪ್ ಯಾದವ್ ಹಾಗೂ ಮೊಹಮ್ಮದ್ ಶಮಿ  ತಲಾ 3 ವಿಕೆಟ್ ಕಿತ್ತರೆ, ಜಡೇಜಾ ತಲಾ 2 ಹಾಗೂ  ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದರು.

ಐಪಿಎಲ್ ಹರಾಜಿಗೆ ಕ್ಷಣಗಣನೆ; ಯಾವ ತಂಡದ ಬಳಿ ಎಷ್ಟು ಹಣ?, ಎಷ್ಟು ಪ್ಲೇಯರ್ಸ್​ ಖರೀದಿಸಬಹುದು?

ಭಾರತ 107 ರನ್​ಗಳ ಭರ್ಜರಿ ಜಯದೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಬಾಜಿಕೊಂಡರು. ಅಂತಿಮ ನಿರ್ಣಾಯಕ ಪಂದ್ಯ ಡಿ. 22 ರಂದು ಕತಕ್​ನಲ್ಲಿ ನಡೆಯಲಿದೆ.

First published:December 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ