ಕಟಕ್ (ಡಿ. 22): ಇಲ್ಲಿನ ಬಾರಬತಿ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿದೆ. ರೋಹಿತ್-ರಾಹುಲ್-ಕೊಹ್ಲಿ ಅರ್ಧಶತಕ ಹಾಗೂ ಜಡೇಜಾ ಅಜೇಯ 39 ರನ್ಗಳ ನೆರವಿನಿಂದ ಟೀಂ ಇಂಡಿಯಾ 4 ವಿಕೆಟ್ಗಳ ಗೆಲುವು ಕಂಡು 2-1 ಅಂತರದಿಂದ ಸರಣಿ ವಶ ಪಡಿಸಿಕೊಂಡಿದೆ.
ವೆಸ್ಟ್ ಇಂಡೀಸ್ ನೀಡಿದ್ದ 316 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಭಾರತ ಅತ್ಯುತ್ತಮ ಆರಂಭ ಪಡೆದುಕೊಂಡಿತು. ಆರಂಭದಿಂದಲೆ ಎಚ್ಚರಿಕೆಯ ಆಟವಾಡಿದ ರೋಹಿತ್ ಶರ್ಮಾ- ಕೆ ಎಲ್ ರಾಹುಲ್ ಆವೇಶಕ್ಕೆ ಒಳಗಾಗದೆ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡಿತು.
ಇಬ್ಬರೂ ಅರ್ಧಶತಕ ಪೂರೈಸಿದರು. 122 ರನ್ಗಳ ಅಮೋಘ ಕಾಣಿಕೆ ನೀಡಿದರು. ಚೆನ್ನಾಗಿಯೆ ಆಡುತ್ತಿದ್ದ ರೋಹಿತ್ ಬಿರುಸಿನ ಆಟದ ಮೊರೆಹೋಗಿ 63 ಎಸೆತಗಳಲ್ಲಿ 63 ರನ್ ಗಳಿಸಿ ಔಟ್ ಆದರು.
PAK vs SL: ದಶಕಗಳ ಬಳಿಕ ಟೆಸ್ಟ್ ಗೆಲುವಿನತ್ತ ಪಾಕಿಸ್ತಾನ; ಅಂತಿಮ ದಿನದತ್ತ ಎಲ್ಲರ ಚಿತ್ತ
ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆಯಾದ ರಾಹುಲ್ ಹೆಚ್ಚುಹೊತ್ತು ಕ್ರೀಸ್ನಲ್ಲಿ ಇರಲಿಲ್ಲ. 89 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಬಾರಿಸಿ 77 ರನ್ ಗಳಿಸಿದ್ದಾಗ ಔಟ್ ಆದರು. ಶ್ರೇಯಸ್ ಐಯರ್ ಕೂಡ ಬಂದ ಬೆನ್ನಲ್ಲೆ 7 ರನ್ಗೆ ಸುಸ್ತಾದರು. ಪಂತ್ ಕೂಡ ಕೊಹ್ಲಿಗೆ ಸಾಥ್ ನೀಡದೆ 7 ರನ್ಗೆ ಔಟ್ ಆದರೆ, ಕೇದರ್ ಜಾಧವ್ 9 ರನ್ಗೆ ನಿರ್ಗಮಿಸಿದರು.
ಈ ಸಂಕಷ್ಟದ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಿದ್ದು ಕೊಹ್ಲಿ ಹಾಗೂ ರವೀಂದ್ರ ಜಡೇಜಾ. ಅದ್ಭುತ ಆಟ ಪ್ರದರ್ಶಿಸಿದ ಇವರಿಬ್ಬರು 58 ರನ್ಗಳ ಜೊತೆಯಾಟ ಆಡಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಅಂತಿಮ ಹಂತದಲ್ಲಿ ಕೊಹ್ಲಿ ಔಟ್ ಆದರಾದರು ಜಡೇಜಾ ಅವರು ಶಾರ್ದಲ್ ಠಾಕೂರ್ ಜೊತೆಗೂಡಿ ತಂಡವನ್ನು ಗೆಲುವಿನ ತಡ ಸೇರಿಸಿದರು.
ಕೊಹ್ಲಿ 81 ಎಸೆತಗಳಲ್ಲಿ 9 ಬೌಂಡರಿ ಬಾರಿಸಿ 85 ರನ್ ಗಳಿಸಿದರೆ, ಜಡೇಜಾ 31 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ ಅಜೇಯ 39 ರನ್ ಹಾಗೂ ಠಾಕೂರ್ 6 ಎಸೆತಗಳಲ್ಲಿ ಅಜೇಯ 17 ಚಚ್ಚಿದರು.
ಭಾರತ 48.4 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 316 ರನ್ ಗಳಿಸಿ ಗೆಲುವಿನ ನಗೆ ಬೀರಿತು. ವೆಸ್ಟ್ ಇಂಡೀಸ್ ಪರ ಕೀಮೊ ಪೌಲ್ 3 ವಿಕೆಟ್ ಪಡೆದರೆ, ಶೆಲ್ಡನ್ ಕಾಟ್ರೆಲ್, ಜೇಸನ್ ಹೋಲ್ಡರ್ ಹಾಗೂ ಅಲ್ಝರಿ ಜೋಸೆಫ್ ತಲಾ 1 ವಿಕೆಟ್ ಪಡೆದರು.
ಮುಂಬೈ ಇಂಡಿಯನ್ಸ್ ಬ್ಯಾಟ್ಸ್ಮನ್ನ ಸ್ಫೋಟಕ ಆಟ; 94 ರನ್ಗಳಲ್ಲಿ 11 ಸಿಕ್ಸರ್; ತೆಗೆದುಕೊಂಡ ಬಾಲ್ ಎಷ್ಟು?
4 ವಿಕೆಟ್ಗಳ ಜಯದೊಂದಿಗೆ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಅಂತರದಿಂದ ವಶಪಡಿಸಿಕೊಂಡಿತು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಉಳಿದ ವಿಂಡೀಸ್ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವಿತು. 57 ರನ್ ಆಗುವ ಹೊತ್ತಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಎವಿನ್ ಲೆವಿಸ್ ಹಾಗೂ ಶಾಯ್ ಹೋಪ್ ಅರ್ಧಶತಕದ ಜೊತೆಯಾಟ ಆಡಿದರಷ್ಟೆ.
ಜಡೇಜಾ ಬೌಲಿಂಗ್ನಲ್ಲಿ ಲೆವಿಸ್ 21 ರನ್ಗೆ ಔಟ್ ಆದರು. ಇದರ ಬೆನ್ನಲ್ಲೆ ಅರ್ಧಶತಕದ ಹೊಸ್ತಿಲಲ್ಲಿದ್ದ ಹೋಪ್ 42 ರನ್ಗೆ ನಿರ್ಗಮಿಸಿದರು. ಬಳಿಕ ಶಿಮ್ರೋನ್ ಹೆಟ್ಮೇರ್ ಹಾಗೂ ರೋಸ್ಟನ್ ಚೇಸ್ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ಅದರಂತೆ ಈ ಜೋಡಿ 62 ರನ್ಗಳ ಜೊತೆಯಾಟ ಆಡಿತು.
ಚೆನ್ನಾಗಿಯೆ ಆಡುತ್ತಿದ್ದ ಹೆಟ್ಮೇರ್ ಅವರು ಸೈನಿ ಎಸೆದ ಬೌನ್ಸರ್ಗೆ 37 ರನ್ ಗಳಿಸಿರುವಾಗ ಔಟ್ ಆದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಸೈನಿ ಚೊಚ್ಚಲ ವಿಕೆಟ್ ಪಡೆದರು. ಇದರ ಬೆನ್ನಲ್ಲೆ 38 ರನ್ ಗಳಿಸಿದ್ದ ಚೇಸ್ ಅವರನ್ನೂ ಸೈನಿ ಬೌಲ್ಡ್ ಮಾಡಿ ಪೆವಿಲಿಯನ್ಗೆ ಅಟ್ಟಿದರು.
ಈ ಸಂದರ್ಭ ಒಂದಾದ ನಾಯಕ ಕೀರೊನ್ ಪೊಲಾರ್ಡ್ ಹಾಗೂ ನಿಕೋಲಸ್ ಪೂರನ್ ಎಚ್ಚರಿತೆಯಿಂದ ಬ್ಯಾಟ್ ಬೀಸಿದರು. ನಿಧಾನಗತಿಯಲ್ಲಿ ತಂಡದ ರನ್ ಗತಿಯನ್ನು ಏರಿಸಿದ ಈ ಜೋಡಿ ಶತಕದ ಜೊತೆಯಟ ಆಡಿತು. ಇಬ್ಬರೂ ಅರ್ಧಶತಕ ಸಿಡಿಸಿ ಅಬ್ಬರಿಸಿದರು. ಭಾರತೀಯ ಬೌಲರ್ಗಳನ್ನು ಕಾಡಿದ ಈ ಜೋಡಿ 135 ರನ್ಗಳ ಕಾಣಿಕೆ ನೀಡಿತು.
IPL 2020: ಐಪಿಎಲ್ ಆರಂಭಕ್ಕೂ ಮುನ್ನವೇ ಕೆಕೆಆರ್ ತಂಡದ ಆಟಗಾರನಿಗೆ ಗೇಟ್ ಪಾಸ್?
ಅಂತಿಮವಾಗಿ ವೆಸ್ಟ್ ಇಂಡೀಸ್ 50 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 315 ರನ್ ಕಲೆಹಾಕಿತು. ಪೊಲಾರ್ಡ್ 51 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಸಿಡಿಸಿ ಅಜೇಯ 74 ರನ್ ಗಳಿಸಿದರೆ, ಪೂರನ್ ಕೇವಲ 63 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಿಡಿಸಿ 89 ರನ್ ಚಚ್ಚಿದರು. ಭಾರತ ಪರ ನವ್ದೀಪ್ ಸೈನಿ 2, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ