ಪುಣೆ (ಜ. 10): ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಅಂತಿಮ ಮೂರನೇ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ರಾಹುಲ್- ಧವನ್ ಅರ್ಧಶತಕದ ನೆರವಿನಿಂದ ಭಾರತ 201 ರನ್ ಕಲೆಹಾಕಿದೆ.
ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಶ್ರೀಲಂಕಾ ಆರಂಭದಲ್ಲೇ ಆಘಾತ ಅನುಭವಿಸಿದೆ. 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಜಸ್ಪ್ರೀತ್ ಬುಮ್ರಾ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಧನುಷ್ಕಾ ಗುಣತಿಲಕ(1) ಸುಂದರ್ಗೆ ಕ್ಯಾಚ್ ನೀಡಿ ಔಟ್ ಆದರು.
ಇದರ ಬೆನ್ನಲ್ಲೆ ಮುಂದಿನ ಶಾರ್ದೂಲ್ ಠಾಕೂರ್ ಓವರ್ನಲ್ಲಿ ಆವಿಷ್ಕಾ ಫೆರ್ನಾಂಡೊ(9) ಕೂಡ ನಿರ್ಗಮಿಸಿದರೆ, ಓಶಾಡ ಫೆರ್ನಾಂಡೊ(2) ರನೌಟ್ಗೆ ಬಲಿಯಾದರು. ನವ್ದೀಪ್ ಸೈನಿ ತನ್ನ 2ನೇ ಓವರ್ನ ಮೊದಲ ಎಸೆತದಲ್ಲೇ ಕುಶಾಲ್ ಪೆರೇರಾ(7) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಟಾಸ್ ಸೋತು ಬ್ಯಾಟಿಂಗ್ಗೆ ಉಳಿದ ಟೀಂ ಇಂಡಿಯಾ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಕೆ ಎಲ್ ರಾಹುಲ್ ಹಾಗೂ ಶಿಖರ್ ಧವನ್ ಬಿರುಸಿನ ಆಟವಾಡಿದರು. ಬೌಂಡರಿಗಳ ಮಳೆ ಸುರಿಸಿದ ಈ ಜೋಡಿ 97 ರನ್ಗಳ ಜೊತೆಯಾಟ ಆಡಿತು.
ಬೊಂಬಾಟ್ ಆಟವಾಡಿದ ಧವನ್ 36 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ನೊಂದಿಗೆ 52 ರನ್ ಗಳಿಸಿ ಔಟ್ ಆದರು. ಇದರ ಬೆನ್ನಲ್ಲೆ ಬಂದ ಸಂಜು ಸ್ಯಾಮ್ಸನ್ ತಾನು ಎದುರಿಸಿದ ಮೊದಲ ಎಸೆತದಲ್ಲೇ ಚೆಂಡನ್ನು ಸಿಕ್ಸ್ಗೆ ಅಟ್ಟಿದರು.
Sanju Samson: 5 ವರ್ಷದ ಬಳಿಕ ಸ್ಯಾಮ್ಸನ್ ಕಣಕ್ಕೆ; ಭಾರತ ಪರ ದಾಖಲೆ ಬರೆದ ಸಂಜು!
ಆದರೆ, 2ನೇ ಎಸೆತದಲ್ಲಿ ಎಲ್ಬಿ ಬಲೆಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಇತ್ತ ರಾಹುಲ್ ಕೂಡ ಅರ್ಧಶತಕ ಸಿಡಿಸಿ ಸುಸ್ತಾದರು. ರಾಹುಲ್ 36 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ನೊಂದಿಗೆ 54 ರನ್ ಗಳಿಸಿದರು. ಶ್ರೇಯಸ್ ಐಯರ್ ಒಂದು ಬೌಂಡರಿಗೆ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು.ಹೀಗೆ ದಿಢೀರ್ ಕುಸಿತ ಕಂಡ ಭಾರತಕ್ಕೆ ಆಸರೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಮನೀಶ್ ಪಾಂಡೆ ತಂಡವನ್ನು ಮೇಲೆತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಜೋಡಿ 42 ರನ್ಗಳ ಕಾಣಿಕೆ ನೀಡಿತು. ಕೊಹ್ಲಿ 17 ಎಸೆತಗಳಲ್ಲಿ 26 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ ಸೊನ್ನೆ ಸುತ್ತಿದರು.
ಕೊನೆ ಹಂತದಲ್ಲಿ ಮನೀಶ್ ಪಾಂಡೆ(31*) ಹಾಗೂ ಶಾರ್ದೂಲ್ ಠಾಕೂರ್ ಕೇವಲ 8 ಎಸೆತಗಳಲ್ಲಿ ಅಜೇಯ 22 ರನ್ ಚಚ್ಚಿದರು. ಅಂತಿಮವಾಗಿ ಭಾರತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿತು. ಲಂಕಾ ಪರ ಲಕ್ಷಣ್ ಸಂದಕನ್ 3 ವಿಕೆಟ್ ಕಿತ್ತರೆ, ವನಿಂದು ಹಸರಂಗ ಹಾಗೂ ಲಹಿರು ಕುಮಾರ ತಲಾ 1 ವಿಕೆಟ್ ಪಡೆದರು.
ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಮಹತ್ವದ ಬದಲಾವಣೆ ಮಾಡಲಾಗಿದೆ. ರಿಷಭ್ ಪಂತ್ ಬದಲು ಸಂಜು ಸ್ಯಾಮ್ಸನ್, ಕುಲ್ದೀಪ್ ಯಾದವ್ ಬದಲು ಯಜುವೇಂದ್ರ ಚಹಾಲ್ ಹಾಗೂ ಶಿವಂ ದುಬೆ ಬದಲು ಮನೀಶ್ ಪಾಂಡೆ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತ ತಂಡ: ಶಿಖರ್ ಧವನ್, ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಐಯರ್, ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಮನೀಶ್ ಪಾಂಡೆ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಾಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ನವ್ದೀಪ್ ಸೈನಿ.
ಇನ್ನು ಶ್ರೀಲಂಕಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಆ್ಯಂಜಲೊ ಮ್ಯಾಥ್ಯೂಸ್ ಹಾಗೂ ಸಂದಕನ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರೀಲಂಕಾ ತಂಡ: ಲಸಿತ್ ಮಲಿಂಗಾ (ನಾಯಕ), ಧನುಷ್ಕಾ ಗುಣತಿಲಕ, ಆವಿಷ್ಕಾ ಫೆರ್ನಾಂಡೊ, ಕುಶಾಲ್ ಪೆರೇರಾ, ಓಶಾಡ ಫೆರ್ನಾಂಡೊ, ಆ್ಯಂಜಲೊ ಮ್ಯಾಥ್ಯೂಸ್, ಧನಂಜಯ್ ಡಿ ಸಿಲ್ವಾ, ದಾಸುನ್ ಶನಕಾ, ಲಕ್ಷಣ್ ಸಂದಕನ್, ವನಿಂದು ಹಸರಂಗ, ಲಹಿರು ಕುಮಾರ.