ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅವರ ಭರ್ಜರಿ ಶತಕದ ನೆರವಿನಿಂದ ಭಾರತ 43.3 ಓವರ್ನಲ್ಲಿ ಲಂಕಾ ನೀಡಿದ 265 ರನ್ಗಳ ಗುರಿ ಮುಟ್ಟಿತು.
ಶ್ರೀಲಂಕಾ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ಎರಡು ಓವರ್ಗಳಲ್ಲೇ 18 ರನ್ ಕಲೆ ಹಾಕಿದ ಈ ಜೋಡಿ ಬಿರುಸಿನ ಆರಂಭ ಒದಗಿಸುವ ಸೂಚನೆ ನೀಡಿತು.
ಅದರಂತೆ ಭರ್ಜರಿಯಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ ಲಂಕಾ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ 49 ಎಸೆತಗಳಲ್ಲಿ ಹಿಟ್ ಮ್ಯಾನ್ ಮತ್ತೊಂದು ಅರ್ಧಶತಕವನ್ನು ಪೂರೈಸಿದರು. ಈ ಹಾಫ್ ಸೆಂಚುರಿಯಲ್ಲಿ 8 ಭರ್ಜರಿ ಬೌಂಡಿರಿ, 2 ಅಮೋಘ ಸಿಕ್ಸರ್ಗಳು ಸಿಡಿದವು. ಅಷ್ಟೇ ಅಲ್ಲದೆ ಮೊದಲ 103 ಎಸೆತಗಳಲ್ಲಿ 100 ರನ್ಗಳ ಜೊತೆಯಾಟವನ್ನು ರಾಹುಲ್-ರೋಹಿತ್ ಪೂರೈಸಿದರು.
ಇನ್ನು ವೈಯುಕ್ತಿಕ 66 ರನ್ ಪೂರೈಸುವುದರೊಂದಿಗೆ ಹಿಟ್ಮ್ಯಾನ್ ವಿಶ್ವಕಪ್ ಲೀಗ್ ಹಂತದಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದರು. ಇದೇ ವೇಳೆ 67 ಎಸೆತಗಳನ್ನು ಎದುರಿಸಿದ ಕನ್ನಡಿಗ ವಿಶ್ವಕಪ್ನಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿ ಬ್ಯಾಟ್ ಮೇಲೆತ್ತಿದರು.
ಶತಕದ ಬಳಿಕ ಬಿರುಸಿನ ಆಟಕ್ಕೆ ಮುಂದಾದ ಹಿಟ್ಮ್ಯಾನ್ ಚೆಂಡನ್ನು ಮೈದಾನದ ಮೂಲೆ ಮೂಲೆಗೆ ತಲುಪಿಸಿದರು. ಅದರಲ್ಲೂ ಕೊನೆಯ ಪಂದ್ಯವಾಡುತ್ತಿರುವ ಲಸಿತ್ ಮಾಲಿಂಗ ಎಸೆತಗಳನ್ನು ಸತತ ಬೌಂಡರಿ ಗೆರೆ ದಾಟುವಂತೆ ನೋಡಿಕೊಂಡರು. ಶರ್ಮಾರ ಈ ಭರ್ಜರಿ ಬ್ಯಾಟಿಂಗ್ನಿಂದ 25 ಓವರ್ ಆಗುವಷ್ಟರಲ್ಲಿ ಟೀಂ ಇಂಡಿಯಾ ಮೊತ್ತ 150ರ ಗಡಿದಾಟಿತು. ರೋಹಿತ್ರ ಈ ಆರ್ಭಟಕ್ಕೆ ಸಾಥ್ ನೀಡಿದ ಕೆಎಲ್ ರಾಹುಲ್ ಸಹ ಈ ಬಾರಿ ತುಸು ಹೆಚ್ಚೇ ಆತ್ಮ ವಿಶ್ವಾಸದಿಂದ ಬ್ಯಾಟ್ ಬೀಸಿರುವುದು ಕಂಡು ಬಂತು.
ಇನ್ನು ನೀರಾಯಾಸವಾಗಿ ಲಂಕಾ ಬೌಲರುಗಳನ್ನು ಎದುರಿಸಿದ ರೋಹಿತ್ 92 ಎಸೆತಗಳಲ್ಲಿ ಮತ್ತೊಂದು ಶತಕ ಸಿಡಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದರು. ಈ ಶತಕದಲ್ಲಿ 2 ಭರ್ಜರಿ ಸಿಕ್ಸರ್ ಹಾಗೂ 13 ಬೌಂಡರಿಗಳು ಒಳಗೊಂಡಿತ್ತು. ಈ ಮೂಲಕ ವರ್ಲ್ಡ್ಕಪ್ವೊಂದರಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಸಾಧನೆಯನ್ನು ಭಾರತದ ಆಟಗಾರ ಮಾಡಿದರು. ಈ ಹಿಂದೆ ಶ್ರೀಲಂಕಾದ ಕುಮಾರ ಸಂಗಾಕ್ಕರ ಹಾಗೂ ಆಸೀಸ್ನ ರಿಕಿ ಪಾಟಿಂಗ್ ವಿಶ್ವಕಪ್ವೊಂದರಲ್ಲಿ ನಾಲ್ಕು ಶತಕ ಸಿಡಿಸಿ ದಾಖಲೆ ಬರೆದಿದ್ದರು. ಆದರೆ ಈ ಬಾರಿ ರೋಹಿತ್ ಐದು ಶತಕಗಳ ಸಾಧನೆ ಮಾಡಿದ್ದಾರೆ.
ಶತಕದ ಬೆನ್ನಲ್ಲೇ ರಜಿತಾ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿದ ರೋಹಿತ್ ವೈಯುಕ್ತಿಕ 103 ರನ್ಗಳೊಂದಿಗೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಇನ್ನು ರೋಹಿತ್ ನಿರ್ಗಮನದ ನಂತರ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ರಾಹುಲ್ ಕಲಾತ್ಮಕ ಶಾಟ್ಗಳೊಂದಿಗೆ 109 ಎಸೆತಗಳಲ್ಲಿ ವಿಶ್ವಕಪ್ನ ತಮ್ಮ ಚೊಚ್ಚಲ ಶತಕ ಪೂರೈಸಿ ಮಿಂಚಿದರು. ಇದರಲ್ಲಿ 11 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸ್ ಮೂಡಿ ಬಂದಿದ್ದವು.
ಸೆಂಚುರಿಯ ಬಳಿಕ ಭರ್ಜರಿ ಹೊಡೆತಕ್ಕೆ ಕೈ ಹಾಕಿದ ಕನ್ನಡಿಗ 111 ರನ್ಗಳಿಸಿ ಮಾಲಿಂಗಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಲಸಿತ್ ಮಾಲಿಂಗ ಪಡೆದ ವಿಕೆಟ್ ಆಗಿ ರಾಹುಲ್ ಹೊರ ನಡೆದರು.
ಈ ಹಂತದಲ್ಲಿ ನಾಯಕ ಕೊಹ್ಲಿ ಜೊತೆಗೂಡಿದ ರಿಷಬ್ ಪಂತ್ (4) ಬಂದ ವೇಗದಲ್ಲೇ ವಿಕೆಟ್ ಒಪ್ಪಿಸಿ ಹಿಂತಿರುಗಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ(7) ಹಾಗೂ ಕೊಹ್ಲಿ(34) ಅಜೇಯರಾಗುವ ಮೂಲಕ ಟೀಂ ಇಂಡಿಯಾವನ್ನು 3 ವಿಕೆಟ್ ನಷ್ಟಕ್ಕೆ 265 ರನ್ ಗುರಿ ಸೇರಿಸಿದರು. ಆ ಮೂಲಕ ಲಂಕಾ ವಿರುದ್ಧ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.
ಲಂಕಾ ಪರ ಕೊನೆಯ ಏಕದಿನ ಪಂದ್ಯವಾಡಿದ ಲಸಿತ್ ಮಾಲಿಂಗ 10 ಓವರ್ಗಳಲ್ಲಿ 82 ರನ್ 1 ವಿಕೆಟ್ ಪಡೆದು ನೋವಿನ ವಿದಾಯ ಹೇಳಿದರು. 224 ಏಕದಿನ ಪಂದ್ಯಗಳನ್ನು ಆಡಿರುವ ಮಾಲಿಂಗ ಏಕದಿನ ಕ್ರಿಕೆಟ್ನಲ್ಲಿ 334 ವಿಕೆಟ್ ಕಬಳಿಸಿದ್ದಾರೆ.
ಸಹ ಆಟಗಾರನ ಅಂತಿಮ ಏಕದಿನ ಪಂದ್ಯವನ್ನು ಅವಿಸ್ಮರಣೀಯವಾಗಿಸುವ ಯೋಜನೆಯೊಂದಿಗೆ ಕಣಕ್ಕಿಳಿದ್ದಿದ್ದ ಲಂಕಾ ಆಟಗಾರರು ಸೋಲಿನೊಂದಿಗೆ ವಿಶ್ವಕಪ್ ಅಭಿಯಾನಯನ್ನು ಮುಗಿಸಿದರು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಈಗ ಅಂಕಪಟ್ಟಿಯಲ್ಲಿ 15 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನವನ್ನು ಅಲಂಕರಿಸಿದೆ.
ಇದನ್ನೂ ಓದಿ: ಸಚಿನ್ ದಾಖಲೆ ಛಿದ್ರ: ವಿಶ್ವಕಪ್ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ರೋಹಿತ್ ಶರ್ಮಾ
ಇದಕ್ಕೂ ಮುನ್ನ ಟಾಸ್ ಗೆದ್ದ ಲಂಕಾ ನಾಯಕ ಕರುಣಾರತ್ನೆ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಬುಮ್ರಾ ನೀಡಿದ ಶಾಕ್ನಿಂದ ಲಂಕಾ ಆರಂಭಿಕ ಆಘಾತಕ್ಕೊಳಗಾಯಿತು. ಆರಂಭಿಕನಾಗಿ ಕಣಕ್ಕಿಳಿದ ಕರುಣಾರತ್ನೆ(10) 3ನೇ ಓವರ್ಗೆ ಇನಿಂಗ್ಸ್ ಕೊನೆಗೊಳಿಸಿದರು.
ಇನ್ನು ಆರಂಭದಲ್ಲೇ ಸ್ಪೋಟಕ ಆಟಕ್ಕೆ ಒತ್ತು ನೀಡಿದ್ದ ಕುಶಾಲ ಪೆರೆರಾ 3 ಭರ್ಜರಿ ಬೌಂಡರಿಗಳೊಂದಿಗೆ 18 ರನ್ಗಳಿಸಿದ ಧೋನಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಮೂಲಕ ಬುಮ್ರಾ ಭಾರತಕ್ಕೆ 2ನೇ ಯಶಸ್ಸು ತಂದುಕೊಟ್ಟರು. ಇನ್ನು ಕುಶಾಲ ಮೆಂಡೀಸ್(3) ರವೀಂದ್ರ ಜಡೇಜ ಅವರ ಸ್ಪಿನ್ ಎಸೆತವನ್ನು ಗುರುತಿಸಲು ಎಡವಿ ಸ್ಟಂಪ್ ಆಗುವ ಆಗಿ ಪೆವಿಲಿಯನ್ಗೆ ಹೆಜ್ಜೆ ಹಾಕಿದರು. 12ನೇ ಓವರ್ ಎಸೆದ ಹಾರ್ದಿಕ್ ಪಾಂಡ್ಯರ ಬೌನ್ಸರ್ಗೆ ಬೆದರಿದ ಅವಿಷ್ಕಾ ಫೆರ್ನಾಂಡೊ(20) ಸಹ ಧೋನಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
55ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಲಂಕಾಗೆ ಈ ಹಂತದಲ್ಲಿ ಆಸರೆಯಾಗಿದ್ದು ತಿರಿಮನ್ನೆ ಹಾಗೂ ಅಂಜೆಲೊ ಮ್ಯಾಥ್ಯೂಸ್. ರಕ್ಷಣಾತ್ಮಕ ಆಟದ ನಿಧಾನಗತಿಯಲ್ಲಿ ರನ್ ಪೇರಿಸುತ್ತಾ ಹೋದ ಈ ಜೋಡಿ 5ನೇ ವಿಕೆಟ್ಗೆ ನೂರು ರನ್ಗಳ ಭರ್ಜರಿ ಜೊತೆಯಾಟ ಆಡಿದರು. ಇದರ ನಡುವೆ ಮ್ಯಾಥ್ಯೂಸ್ ಆಕರ್ಷಕ ಅರ್ಧಶತಕ ಪೂರೈಸಿದರು.
ಹಾಗೆಯೇ 68 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಲಹಿರು ತಿರಿಮನ್ನೆ ತಂಡದ ಮೊತ್ತ 179 ಆಗಿದ್ದಾಗ ಭರ್ಜರಿ ಹೊಡೆತಕ್ಕೆ ಮುಂದಾಗಿ ಕುಲ್ದೀಪ್ ಯಾದವ್ಗೆ ವಿಕೆಟ್ ಒಪ್ಪಿಸಿದರು. ಆದರೆ ಇನ್ನೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಮ್ಯಾಥ್ಯೂಸ್ ಭಾರತದ ಬೌಲರುಗಳ ಮೇಲೆ ಮುಗಿಬಿದ್ದರು. ಪರಿಣಾಮ 115 ಎಸೆತಗಳಲ್ಲಿ ಶತಕ ಸಿಡಿಸಿ ರನ್ ವೇಗವನ್ನು ಹೆಚ್ಚಿಸಿದರು. ಈ ಸೆಂಚುರಿ ಆಟದಲ್ಲಿ 10 ಭರ್ಜರಿ ಬೌಂಡರಿ ಹಾಗೂ 2 ಅಮೋಘ ಸಿಕ್ಸರ್ಗಳು ಮ್ಯಾಥ್ಯೂಸ್ ಬ್ಯಾಟ್ನಿಂದ ಸಿಡಿಯಿತು.
ಇನ್ನು ನಿರ್ಣಾಯಕ ಓವರ್ಗಳಲ್ಲಿ ರನ್ ಗತಿ ಏರಿಸಲು ಮುಂದಾದ ಮ್ಯಾಥ್ಯೂಸ್(115) ಬುಮ್ರಾ ಎಸೆತದಲ್ಲಿ ರೋಹಿತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಧನಂಜಯ್ ಡಿಸಿಲ್ವಾ 29 ರನ್ಗಳಿಸುವುದರೊಂದಿಗೆ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 264ಕ್ಕೆ ತಂದು ನಿಲ್ಲಿಸಿದರು.
ಭಾರತದ ಪರ ಮಾರಕ ದಾಳಿ ಸಂಘಟಿಸಿದ ಜಸ್ಪ್ರೀತ್ ಬುಮ್ರಾ ಲಂಕಾ ತಂಡದ ಪ್ರಮುಖ 3 ವಿಕೆಟ್ಗಳನ್ನು ಉರುಳಿಸಿ ಯಶಸ್ವಿ ಬೌಲರು ಎನಿಸಿಕೊಂಡರು. ಇನ್ನು ಭರ್ಜರಿ ಶತಕ ಸಿಡಿಸಿದ ರೋಹಿತ್ ಶರ್ಮಾ ಮತ್ತೊಮ್ಮೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಭಾರತ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಮಹೇಂದ್ರಸಿಂಗ್ ಧೋನಿ (ವಿಕೆಟ್ಕೀಪರ್), ದಿನೇಶ್ ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ರವೀಂದ್ರ ಜಡೇಜ.
ಶ್ರೀಲಂಕಾ:
ದಿಮುತ್ ಕರುಣಾರತ್ನೆ (ನಾಯಕ), ಕುಶಾಲ ಮೆಂಡಿಸ್, ಲಸಿತ್ ಮಾಲಿಂಗ, ಧನಂಜಯ ಡಿಸಿಲ್ವಾ, ಕುಶಾಲ ಪೆರೆರಾ, ಲಾಹಿರು ತಿರಿಮನ್ನೆ, ಏಂಜೆಲೊ ಮ್ಯಾಥ್ಯೂಸ್, ಕಸುನ ರಜಿತಾ, ಇಸುರು ಉಡಾನ, ತಿಸಾರ ಪೆರೆರಾ, ಅವಿಷ್ಕಾ ಫರ್ನಾಂಡೊಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ