IND vs SA- ದಕ್ಷಿಣ ಆಫ್ರಿಕಾದಲ್ಲಿ ಭಾರತ ಟೆಸ್ಟ್ ಸರಣಿ ಗೆಲ್ಲುವ ಟ್ರಿಕ್ಸ್ ಬಿಚ್ಚಿಟ್ಟ ಮಾಜಿ ಆಟಗಾರ

Wasim Jaffer Speaks- ಸೌತ್ ಆಫ್ರಿಕಾದಲ್ಲಿ ಭಾರತ ಟೆಸ್ಟ್ ಪಂದ್ಯ ಗೆಲ್ಲಬೇಕಾದರೆ ಎಷ್ಟು ಸ್ಕೋರ್ ಮಾಡಬೇಕು; ಯಾವ ಆಟಗಾರ ಗೇಮ್ ಚೇಂಜರ್ ಆಗಬಲ್ಲ; ಬ್ಯಾಟಿಂಗ್ ಮತ್ತು ಬೌಲಿಂಗ್ ಲೈನಪ್​ನಲ್ಲಿ ಎಷ್ಟು ಮಂದಿ ಇರಬೇಕು ಇತ್ಯಾದಿ ವಿಚಾರದಲ್ಲಿ ವಾಸಿಂ ಜಾಫರ್ ಸಲಹೆಗಳನ್ನ ನೀಡಿದ್ಧಾರೆ.

ಜಸ್​ಪ್ರೀತ್ ಬುಮ್ರಾ

ಜಸ್​ಪ್ರೀತ್ ಬುಮ್ರಾ

  • Share this:
ಮುಂಬೈ, ಡಿ. 24: ಸೌತ್ ಆಫ್ರಿಕಾದಲ್ಲಿ ಭಾರತದ ಕ್ರಿಕೆಟ್ ಸರಣಿ ನಾಳೆಯಿಂದ ನಡೆಯಲಿದೆ. ಮೊದಲಿಗೆ ಟೆಸ್ಟ್ ಸರಣಿ ಇದೆ. ಭಾರತಕ್ಕೆ ಇದು ಬಹಳ ಮಹತ್ವದ ಸರಣಿ ಆಗಿದೆ. ದಕ್ಷಿಣ ಆಫ್ರಿಕಾದಲ್ಲಿ ಭಾರತ ಇದೂವರೆಗೂ ಟೆಸ್ಟ್ ಸರಣಿ ಗೆಲ್ಲಲು ಶಕ್ಯವಾಗಿಲ್ಲ. ಈ ಬಾರಿ ಒಳ್ಳೆಯ ಅವಕಾಶ ಒದಗಿಬಂದಿದೆ. ಇಲ್ಲಿನ ವೇಗದ ಪಿಚ್​ಗಳಲ್ಲಿ ಬ್ಯಾಟ್ ಮಾಡುವುದೇ ಟೀಮ್ ಇಂಡಿಯಾಗೆ ತಲೆನೋವು ಎಂಬುದು ಗೊತ್ತಿರುವ ಸಂಗತಿ. ಭಾರತದ ಮಾಜಿ ಆಟಗಾರ ವಾಸಿಂ ಜಾಫರ್ (Wasim Jaffer) ಕೂಡ ಈ ಅನಿಸಿಕೆಯನ್ನ ಅನುಮೋದಿಸಿದ್ದಾರೆ. ಸೌತ್ ಆಫ್ರಿಕಾದ ವಿಕೆಟ್​ಗಳಲ್ಲಿ ಭಾರತದ ಬ್ಯಾಟುಗಾರರು ಹೆಚ್ಚು ಜವಾಬ್ದಾರಿ ಹೊರಬೇಕು ಎಂದು 43 ವರ್ಷದ ಜಾಫರ್ ಹೇಳಿದ್ದಾರೆ.

ನ್ಯೂಸ್18 ವಾಹಿನಿ ಜೊತೆ ಮಾತನಾಡಿದ ವಾಸಿಂ ಜಾಫರ್, “ಹೆಚ್ಚು ಸ್ಕೋರ್ ಮಾಡುವುದು ಭಾರತದ ಬ್ಯಾಟುಗಾರರ ಮುಂದಿರುವ ಸವಾಲು. ಅದೇ ದೊಡ್ಡ ಸಮಸ್ಯೆ. 2018ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಮಾತ್ರವೇ ರನ್ ಗಳಿಸಲು ಯಶಸ್ವಿಯಾಗಿದ್ದು. ಇತರ ಬ್ಯಾಟುಗಾರರೂ ಉತ್ತಮ ಪ್ರದರ್ಶನ ನೀಡಬೇಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ರಿಷಭ್ ಪಂತ್ ಗೇಮ್ ಚೇಂಜರ್:

“ಈ ಬಾರಿ ಭಾರತದ ಬ್ಯಾಟಿಂಗ್ ಬಲಿಷ್ಠವಾಗಿದೆ. ಅಗ್ರಕ್ರಮಾಂಕದ ಆರು ಬ್ಯಾಟುಗಾರರು ತಂಡಕ್ಕೆ ಸಮತೋಲನ ನೀಡಿದ್ದಾರೆ. ರಿಷಭ್ ಪಂತ್ (Rishabh Pant) ಒಂದು ಅಥವಾ ಒಂದೂವರೆ ಗಂಟೆ ಕಾಲ ಬ್ಯಾಟ್ ಮಾಡಿದರೆ ಪಂದ್ಯದ ದಿಕ್ಕು ಬದಲಿಸಬಲ್ಲರು. ತಂಡದಲ್ಲಿ ಒಳ್ಳೆಯ ಆಟಗಾರರು ಇದ್ದಾರೆ. ಅವರೆಲ್ಲರೂ ವಿರಾಟ್​ಗೆ ಆಟಕ್ಕೆ ಬೆಂಬಲವಾಗಿ ನಿಲ್ಲಬೇಕು” ಎಂದು ಹೇಳಿದ ವಾಸಿಂ ಜಾಫರ್, ಈ ಸರಣಿಯಲ್ಲಿ ರಿಷಭ್ ಪಂತ್ ಅವರನ್ನ ವಿರಾಟ್ ಕೊಹ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ಧಾರೆ.

ಭಾರತದ ಬೌಲರ್ಸ್ ಸಮರ್ಥರಿದ್ದಾರೆ:

ಭಾರತದ ಬೌಲಿಂಗ್ ಪಡೆಯನ್ನ ವಾಸಿಂ ಜಾಫರ್ ಶ್ಲಾಘಿಸಿದ್ದಾರೆ. ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆರ್ ಅಶ್ವಿನ್ ಅವರಿರುವ ಬೌಲಿಂಗ್ ಲೈನಪ್ ಫಸ್ಟ್ ಕ್ಲಾಸ್ ಆಗಿದೆ ಎಂದು ಅವರು ಶಹಬ್ಬಾಸ್ ಹೇಳಿದ್ದಾರೆ.

ಇದನ್ನೂ ಓದಿ: Harbhajan singh: ಎಲ್ಲಾ ಮಾದರಿಯ ಕಿಕ್ರೆಟ್​ಗೆ ಸ್ಪಿನ್​ ಮಾಂತ್ರಿಕ ಹರ್ಭಜನ್​ ಸಿಂಗ್​ ನಿವೃತ್ತಿ

ಭಾರತ 400 ರನ್ ಗಳಿಸಿದರೆ ಗೆಲ್ಲಲು ಸಾಧ್ಯ:

ಕೂ ಆ್ಯಪ್​ನಲ್ಲಿ ತಮ್ಮ ಸಲಹೆಗಳನ್ನ ನೀಡಿರುವ ವಾಸಿಂ ಜಾಫರ್, ಸೌತ್ ಆಫ್ರಿಕಾದಲ್ಲಿ ಭಾರತ ಟೆಸ್ಟ್ ಪಂದ್ಯ ಗೆಲ್ಲಬೇಕಾದರೆ ಒಂದು ಇನ್ನಿಂಗ್ಸಲ್ಲಿ 400 ರನ್ ಆದರೂ ಗಳಿಸಬೇಕು ಎಂದಿದ್ದಾರೆ. 2018ರ ಸರಣಿಯನ್ನು ಉಲ್ಲೇಖಿಸಿದ ಜಾಫರ್, ಆ ಸಂದರ್ಭದಲ್ಲಿ ಮೂರು ಪಂದ್ಯಗಳ ಆರು ಇನಿಂಗ್ಸ್​ನಲ್ಲಿ ಭಾರತ ಒಮ್ಮೆ ಮಾತ್ರ 250 ರನ್ ಗಡಿ ದಾಟಿತ್ತು ಎಂದು ತಿಳಿಸಿದ್ಧಾರೆ.

ಭಾರತದ ಬೌಲರ್​ಗಳು ಎಲ್ಲಾ ಮೂರು ಪಂದ್ಯಗಳಲ್ಲೂ 20 ವಿಕೆಟ್​ಗಳನ್ನ ಪಡೆದರೂ ಭಾರತ ಸರನಿ ಸೋತಿತು ಎಂದು ಹೇಳುವ ಮೂಲಕ ಭಾರತದ ಬ್ಯಾಟುಗಾರರು ಹೆಚ್ಚು ರನ್ ಗಳಿಸುವ ಅಗತ್ಯತೆಯನ್ನ ಬಿಡಿಸಿ ವಿವರಿಸಿದ್ದಾರೆ.
ಬ್ಯಾಟಿಂಗ್, ಬೌಲಿಂಗ್ 7+4 ಇರಲಿ:

ಭಾರತ ಈ ಸರಣಿಯಲ್ಲಿ ಒಬ್ಬ ಹೆಚ್ಚುವರಿ ಬ್ಯಾಟುಗಾರನನ್ನು ಕಣಕ್ಕಿಳಿಸುವುದು ಒಳ್ಳೆಯದು. 7 ಬ್ಯಾಟುಗಾರರು ಮತ್ತು 4 ಬೌಲರ್​ಗಳು ತಂಡದ ಸಂಯೋಜನೆ ಆಗಿರಲಿ. ಬೌಲಿಂಗ್ ಲೈನಪ್​ನಲ್ಲಿ ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಮತ್ತು ರವಿಚಂದ್ರನ್ ಅಶ್ವಿನ್ ಇರಲಿ. ಬ್ಯಾಟಿಂಗ್​ನಲ್ಲಿ ಒಬ್ಬ ಎಕ್ಸ್​ಟ್ರಾ ಬ್ಯಾಟುಗಾರ ಇರಲಿ. ಆಗ ಭಾರತ ಉತ್ತಮ ಸ್ಕೋರು ಕಲೆಹಾಕಲು ನೆರವಾಗುತ್ತದೆ ಎಂದು ಮುಂಬೈ ತಂಡದ ಮಾಜಿ ಆಟಗಾರರೂ ಆದ ಜಾಫರ್ ತಿಳಿಸಿದ್ದಾರೆ.

ಇದನ್ನೂ ಓದಿ: RCB Captain: ರಾಹುಲ್ ಅಲ್ಲ, ವಾರ್ನರ್ ಅಲ್ಲ ಇವರೇ ನೋಡಿ RCB ತಂಡಕ್ಕೆ ಮುಂದಿನ ಕ್ಯಾಪ್ಟನ್

ಭಾರತದ ಬ್ಯಾಟಿಂಗ್ ಬಲಿಷ್ಠವಾಗಿದ್ದರೂ ಅದರ ಕೆಲ ಆಟಗಾರರು ಕಳಪೆ ಫಾರ್ಮ್​ನಲ್ಲಿದ್ಧಾರೆ. ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ನೆತ್ತಿಯ ಮೇಲೆ ಕತ್ತಿ ಸದಾ ತೂಗುತ್ತಲೇ ಇದೆ. ಆದರೆ, ಇವರಿಬ್ಬರು ಆಟಗಾರರು ಸೌತ್ ಆಫ್ರಿಕಾದ ವಿಕೆಟ್​ಗಳಲ್ಲಿ ಹಿಂದೆ ಉತ್ತಮ ಪ್ರದರ್ಶನ ನೀಡಿದ್ದಿದೆ. ಅಂಥ ಕಠಿಣ ಪಿಚ್​ಗಳಲ್ಲಿ ಇವರಿಬ್ಬರು ತಂಡಕ್ಕೆ ಆಪದ್ಬಾಂಧವರಾಗಬಲ್ಲರು. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ, ರಹಾನೆಯನ್ನ ಆಡಿಸುವುದೋ, ಅಯ್ಯರ್​ಗೆ ಮಣೆಹಾಕುವುದೋ ಎಂಬುದನ್ನ ನಿರ್ಧರಿಸುವುದು ಆಯ್ಕೆ ಸಮಿತಿಗೆ ಇರುವ ಸಂದಿಗ್ಧತೆ.

ಕೆಎಲ್ ರಾಹುಲ್, ಮಯಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ರಿಷಭ್ ಪಂತ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಪ್ರಿಯಾಂಕ್ ಪಾಂಚಾಲ್ ಮತ್ತು ಹನುಮ ವಿಹಾರಿ ಅವರು ಬ್ಯಾಟಿಂಗ್ ಪಟ್ಟಿಯಲ್ಲಿದ್ಧಾರೆ. ವಾಸಿಂ ಜಾಫರ್ ಸಲಹೆಯಂತೆ ಹೆಚ್ಚುವರಿ ಬ್ಯಾಟುಗಾರನ ಸೇರಿಸಿಕೊಂಡಲ್ಲಿ ಪ್ರಿಯಾಂಕ್ ಪಾಂಚಾಲ್ ಮತ್ತು ಹನುಮ ವಿಹಾರಿ ಅವರ ಬದಲು ಅಜಿಂಕ್ಯ ರಹಾನೆ ಅವರಿಗೆ ಅವಕಾಶ ಕೊಡುವ ಸಾಧ್ಯತೆ ದಟ್ಟವಾಗಿದೆ.
Published by:Vijayasarthy SN
First published: