• Home
  • »
  • News
  • »
  • sports
  • »
  • ರೋಹಿತ್ ಶತಕದಾಟ; ವಿಶ್ವಕಪ್​ನಲ್ಲಿ ಭಾರತ ಭರ್ಜರಿ ಶುಭಾರಂಭ; ಆಫ್ರಿಕಾಕ್ಕೆ ಹ್ಯಾಟ್ರಿಕ್ ಸೋಲು

ರೋಹಿತ್ ಶತಕದಾಟ; ವಿಶ್ವಕಪ್​ನಲ್ಲಿ ಭಾರತ ಭರ್ಜರಿ ಶುಭಾರಂಭ; ಆಫ್ರಿಕಾಕ್ಕೆ ಹ್ಯಾಟ್ರಿಕ್ ಸೋಲು

ರೋಹಿತ್ ಶರ್ಮಾ

ರೋಹಿತ್ ಶರ್ಮಾ

India vs South Africa Live Score: ಹರಿಣಗಳಿಗೆ ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿಯುತ್ತಿದ್ದರೆ, ಟೀಂ ಇಂಡಿಯಾ ಮಾತ್ರ ಯಾವುದೇ ಒತ್ತಡ​​ ಇಲ್ಲದೆ ಉತ್ತಮ ಆರಂಭಕ್ಕಾಗಿ ತಯಾರಿ ಮಾಡಿಕೊಂಡು ಅಖಾಡ ಪ್ರವೇಶಿಸಿದೆ.

  • News18
  • Last Updated :
  • Share this:

ಬೆಂಗಳೂರು (ಜೂ. 05): ಸೌತಾಂಪ್ಟನ್​ನ ರೋಸ್ ಬೌಲ್​ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾರ ಆಕರ್ಷಕ ಶತಕ ಹಾಗೂ ಯಜುವೇಂದ್ರ ಚಹಾಲ್​ರ ಸ್ಪಿನ್ ಮೋಡಿಗೆ ತಲೆಬಾಗಿದ ಆಫ್ರಿಕಾ ಹ್ಯಾಟ್ರಿಕ್ ಸೋಲುಂಡಿದ್ದು, ಭಾರತ ಗೆಲುವಿನ ಆರಂಭ ಪಡೆದಿದೆ.

ದ. ಆಫ್ರಿಕಾ ನೀಡಿದ 228 ರನ್​ಗಳ ಗುರಿ ಬೆನ್ನಟ್ಟಿದ ಭಾರತ ಪರ ಓಪನರ್​ಗಳಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ರನ್ ಕಲೆಹಾಕಲು ಪರದಾಡಿದರು. ರಬಾಡ ಸ್ವಿಂಗ್​​ ದಾಳಿಗೆ ಶಿಖರ್ ಧವನ್(8) ಪೆವಿಲಿಯನ್ ಹಾದಿ ಹಿಡಿಯುವ ಮೂಲಕ ಮೊದಲ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ರೋಹಿತ್ ಶರ್ಮಾ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್​ ಕಟ್ಟಲು ಹೊರಾಟರಾದರು ಫೆಹ್ಲುಕ್ವೇವೊ ಮಾರಕವಾಗಿ ಪರಿಣಮಿಸಿದರು. ಚೆನ್ನಾಗಿಯೆ ಆಡುತ್ತಿದ್ದ ಕೊಹ್ಲಿ 18 ರನ್ ಗಳಿಸಿರುವಾಗ ಕೀಪರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಹೀಗೆ ಎರಡು ಪ್ರಮುಖ ವಿಕೆಟ್ ಕಳೆದುಕೊಂಡ ಭಾರತಕ್ಕೆ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಆಸರೆಯಾಗಿ ನಿಂತರು. ಎಚ್ಚರಿಕೆಯ ಆಟ ಪ್ರದರ್ಶಿಸಿದ ಈ ಜೋಡಿ ಪೈಕಿ ರೋಹಿತ್ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರು. ಅಂತೆಯೆ 85 ರನ್​ಗಳ ಅಮೂಲ್ಯ ಕಾಣಿಕೆ ನೀಡಿದರು. ಚೆನ್ನಾಗಿಯೆ ಆಡುತ್ತಿದ್ದ ರಾಹುಲ್ ರಬಾಡ ಎಸೆದ ಸ್ಲೋ ಬಾಲ್​ಗೆ ಬಲಿಯಾಗ ಬೇಕಾಯಿತು. 26 ರನ್ ಗಳಿಸಿ ರಾಹುಲ್ ಔಟ್ ಆಗಿದ್ದು ತಂಡಕ್ಕೆ ಹೊಡೆತ ಬಿದ್ದಂತಾಗಿದೆ.

ಆದರೆ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ರೋಹಿತ್ ಅವರು ಎಂ ಎಸ್ ಧೋನಿ ಜೊತೆಗೂಡಿ ಅತ್ಯುತ್ತಮ ಆಟವಾಡಿದರು. ಏಕದಿನ ಕ್ರಿಕೆಟ್​ನಲ್ಲಿ 23ನೇ ಶತಕ ಸಿಡಿಸಿದ ರೋಹಿತ್ ತಂಡಕ್ಕೆ ಗೆಲುವು ತಂದಿಟ್ಟರು. ಗೆಲುವಿಗೆ ಇನ್ನೇನು ಕೆಲವೇ ರನ್ ಬೇಕಿರುವಾಗ ಧೋನಿ(34) ಔಟ್ ಆದರಾದರು, ಕೊನೆಯಲ್ಲಿ ಹಾರ್ದಿಕ್ ಜೊತೆಗೂಡಿ ರೋಹಿತ್ ಗೆಲುವಿನ ದಡ ಸೇರಿಸಿದರು. ಈ ಮೂಲಕ 47.3 ಓವರ್​ನಲ್ಲೇ 4 ವಿಕೆಟ್ ಕಳೆದುಕೊಂಡು ಭಾರತ 230 ರನ್ ಕಲೆಹಾಕಿ ಜಯ ಸಾಧಿಸಿತು. ರೋಹಿತ್ ಶರ್ಮಾ 144 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ಸೇರಿ ಅಜೇಯ 122 ರನ್ ಕಲೆಹಾಕಿದರು.

ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 2 ವಿಕೆಟ್ ಕಿತ್ತರೆ, ಕ್ರಿಸ್ ಮೊರೀಸ್ ಹಾಗೂ ಫೆಹ್ಲುಕ್ವೇವೊ ತಲಾ 1 ವಿಕೆಟ್ ಕಿತ್ತರು. 6 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ವಿಶ್ವಕಪ್​ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಶತಕ ಸಿಡಿಸಿ ಮಿಂಚಿದ ರೋಹಿತ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಭಾರತ ತನ್ನ ಮುಂದಿನ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಜೂನ್ 9 ರಂದು ಆಡಲಿದೆ.

 ಇದಕ್ಕೂ ಮೊದಲು ಟಾಸ್ ಗೆದ್ದ ದ. ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡರು. ಆದರೆ ಓಪನರ್​ಗಳಾಗಿ ಕ್ರೀಸ್​ಗೆ ಬಂದ ಕ್ವಿಂಟನ್ ಡಿಕಾಕ್ ಹಾಗೂ ಆಶೀಮ್ ಆಮ್ಲಾ ರನ್​ ಕಲೆಹಾಕಲು ಪರದಾಡಿದರು. ಈ ಮಧ್ಯೆ 3ನೇ ಓವರ್​​ನ ಬುಮ್ರಾ ಬೌಲಿಂಗ್​ನಲ್ಲಿ ಹಶೀಮ್ ಆಮ್ಲಾ(6) ಸ್ಲಿಪ್​​ನಲ್ಲಿ ರೋಹಿತ್​​ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಇದಾದ ಬೆನ್ನಲ್ಲೆ ಡಿಕಾಕ್​​(10) ಕೂಡ ಸ್ಲಿಪ್​​ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸಿದ್ದಾರೆ.

ಈ ಸಂದರ್ಭ ನಾಯಕ ಫಾಫ್ ಡುಪ್ಲೆಸಿಸ್ ಜೊತೆಯಾದ ವಂಡರ್ ಡಸ್ಸೆನ್ ಎಚ್ಚರಿಕೆಯಿಂದ ಇನ್ನಿಂಗ್ಸ್​ ಕಟ್ಟಲು ಹೊರಟರು. ಅದರಂತೆ ಈ ಜೋಡಿ 54 ರನ್​ಗಳ ಜೊತೆಯಾಟವಾಡಿತು. ಆದರೆ ಇದೇವೇಳೆ ಬೌಲಿಂಗ್ ಮಾಡಲು ಬಂದ ಚಹಾಲ್, ತಮ್ಮ ಸ್ಪಿನ್ ತಂತ್ರದಿಂದ 22 ರನ್ ಗಳಿಸಿದ್ದ ಡಸ್ಸೆನ್​ರನ್ನು ಬೌಲ್ಡ್​ ಮಾಡಿದರೆ, ಅದೆ ಓವರ್​ನ ಕೊನೆಯ ಎಸೆತದಲ್ಲಿ ಆಪಾಯಕಾರಿ ಬ್ಯಾಟ್ಸ್​ಮನ್​ ಡುಪ್ಲೆಸಿಸ್(38) ಅವರನ್ನೂ ಪೆವಿಲಿಯನ್​ಗೆ ಅಟ್ಟಿದರು.

ಇತ್ತ ಜೆಪಿ ಡುಮಿನಿ ಕೂಡ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದೆ ಕೇವಲ 3 ರನ್ ಗಳಿಸಿ ಕುಲ್ದೀಪ್​ಗೆ ವಿಕೆಟ್ ಒಪ್ಪಿಸಿದರು. ಈ ಸಂದರ್ಭ ಡೇವಿಡ್ ಮಿಲ್ಲರ್ ಹಾಗೂ ಫೆಹ್ಲುಕ್ವೇವೊ ಕೊಂಚ ಹೊತ್ತು ಬ್ಯಾಟ್ ಬೀಸಿ ತಂಡದ ರನ್​ಗತಿಯನ್ನು ಏರಿಸಿದರು. ಆದರೆ, ಇವರ ಜೊತೆಯಾಟವನ್ನು ಬ್ರೇಕ್ ಮಾಡುವಲ್ಲಿ ಯಶಸ್ವಿಯಾದ ಚಹಾಲ್ 31 ರನ್ ಗಳಿಸಿದ್ದ ಮಿಲ್ಲರ್​​ರನ್ನು ಔಟ್ ಮಾಡಿದರು. ಮಿಲ್ಲರ್ ಬೆನ್ನಲ್ಲೆ ಫೆಹ್ಲುಕ್ವೇವೊ(34) ಕೂಡ ಸ್ಟಂಪ್​ ಔಟ್​ಗೆ ಬಲಿಯಾದರು.

ಕೊನೆ ಹಂತದಲ್ಲಿ ಕ್ರಿಸ್ ಮೊರೀಸ್(42) ಬ್ಯಾಟ್ ಬೀಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅಂತಿಮವಾಗಿ ಆಫ್ರಿಕಾ 50 ಓವರ್​ಗೆ 9 ವಿಕೆಟ್ ಕಳೆದುಕೊಂಡು 227 ರನ್ ಕಲೆಹಾಕಿತು. ಭಾರತ ಪರ ಚಹಾಲ್ 4 ವಿಕೆಟ್ ಕಿತ್ತರೆ, ಬುಮ್ರಾ ಹಾಗೂ ಭುವನೇಶ್ವರ್ ತಲಾ 2 ಮತ್ತು ಕುಲ್ದೀಪ್ 1 ವಿಕೆಟ್ ಪಡೆದರು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು