India Vs South Africa: ಚಿನ್ನಸ್ವಾಮಿಯಲ್ಲಿ ಮಿಂಚದ ಕೊಹ್ಲಿ ಪಡೆ; ಸರಣಿ ಸಮಬಲ ಸಾಧಿಸಿದ ಹರಿಣಗಳು

ಈ ಗೆಲುವಿನೊಂದಿಗೆ ಹರಿಣಗಳು ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಧರ್ಮಶಾಲದಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು.

Vinay Bhat | news18-kannada
Updated:September 22, 2019, 10:16 PM IST
India Vs South Africa: ಚಿನ್ನಸ್ವಾಮಿಯಲ್ಲಿ ಮಿಂಚದ ಕೊಹ್ಲಿ ಪಡೆ; ಸರಣಿ ಸಮಬಲ ಸಾಧಿಸಿದ ಹರಿಣಗಳು
ಸಂಭ್ರಮಿಸುತ್ತಿರುವ ದ. ಆಫ್ರಿಕಾ ಆಟಗಾರರು
Vinay Bhat | news18-kannada
Updated: September 22, 2019, 10:16 PM IST
ಬೆಂಗಳೂರು (ಸೆ. 22): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಭಾರತ ಸೋಲುಂಡಿದೆ. ನಾಯಕ ಕ್ವಿಂಟನ್ ಡಿಕಾಕ್ ಅರ್ಧಶತಕ ಹಾಗೂ ಬೌಲರ್​​ಗಳ ಸಂಘಟಿತ ಹೋರಾಟದ ಫಲವಾಗಿ 9 ವಿಕೆಟ್​ಗಳ ಜಯ ಸಾಧಿಸಿರುವ ದ. ಆಫ್ರಿಕಾ ತಂಡ ಸರಣಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಭಾರತ ನೀಡಿದ್ದ 135 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ದ. ಆಫ್ರಿಕಾ ಭರ್ಜರಿ ಆಟ ಪ್ರದರ್ಶಿಸಿತು. ಓಪನರ್​ಗಳಾದ ನಾಯಕ ಕ್ವಿಂಟನ್ ಡಿಕಾಕ್ ಹಾಗೂ ರೀಜಾ ಹೆಂಡ್ರಿಕ್ಸ್ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದರು.

ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದ ಈ ಜೋಡಿ 76 ರನ್​ಗಳ ಜೊತೆಯಾಟ ಆಡಿತು. ಆಫ್ರಿಕಾದ ಮೊದಲ ವಿಕೆಟ್ ಕೀಳಲು ಭಾರತಕ್ಕೆ ಅರ್ಧದಷ್ಟು ಓವರ್​ ಕಾಯಬೇಕಾಯಿತು. 11ನೇ ಓವರ್​ನ ಹಾರ್ದಿಕ್​​ರ ಮೊದಲ ಎಸೆತದಲ್ಲಿ ಹೆಂಡ್ರಿಕ್ಸ್​((28) ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

ಚೇಸಿಂಗ್ ಪಿಚ್​ನಲ್ಲಿ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಯಾಕೆ?; ನಾಯಕ ನೀಡಿದ ಸ್ಪಷ್ಟನೆ ಏನು ಗೊತ್ತಾ?

ಬಳಿಕ ಡಿಕಾಕ್ ಅಬ್ಬರದ ಬ್ಯಾಟಿಂಗ್ ನಡೆಸಿ ಟೂರ್ನಿಯಲ್ಲಿ ಎರಡನೇ ಅರ್ಧಶತಕ ಸಿಡಿಸಿ ಮಿಂಚಿದರು. 52 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸ್​ ಸಿಡಿಸಿ ಅಜೇಯ 79 ರನ್ ಕಲೆಹಾಕಿದ ಡಿಕಾಕ್ ತಂಡಕ್ಕೆ ಗೆಲುವು ತಂದಿಟ್ಟರು. ತೆಂಬ ಬವುಮಾ ಅಜೇಯ 27 ರನ್ ಗಳಿಸಿದರು. ದ. ಆಫ್ರಿಕಾ 16.5 ಓವರ್​ನಲ್ಲೇ 1 ವಿಕೆಟ್ ಕಳೆದುಕೊಂಡು 135 ರನ್ ಬಾರಿಸುವ ಮೂಲಕ 9 ವಿಕೆಟ್​ಗಳ ಜಯ ಸಾಧಿಸಿತು. ಭಾರತ ಪರ ಹಾರ್ದಿಕ್ 1 ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಹರಿಣಗಳು ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಧರ್ಮಶಾಲದಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯ ಮಳೆಗೆ ಆಹುತಿಯಾಗಿತ್ತು.

ಇದಕ್ಕೂ ಮೊದಲು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದರಂತೆ ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. 9 ರನ್​ ಗಳಿಸಿ ರೋಹಿತ್ ಪೆವಿಲಿಯನ್ ಹಾದಿ ಹಿಡಿದರು.
Loading...

 



ಈ ಸಂದರ್ಭ ಧವನ್ ಜೊತೆಯಾದ ವಿರಾಟ್ ಕೊಹ್ಲಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಧವನ್ ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದರು. ಆದರೆ, ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದ ಶಿಖರ್ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸ್​ ಸಿಡಿಸಿ 36 ರನ್​ಗೆ ಔಟ್ ಆದರು.

ಧವನ್ ಬೆನ್ನಲ್ಲೆ ಕೊಹ್ಲಿ ಕೂಡ ಕೆಟ್ಟ ಹೊಡೆತಕ್ಕೆ ಮಾರುಹೋಗಿ ಕೇವಲ 9 ರನ್ ಗಳಿಸಿ ನಿರ್ಗಮಿಸಿದರು. ಈ ಸಂದರ್ಭ ಆಡಲೇ ಬೇಕಾದ ಪಂದ್ಯದಲ್ಲಿ ರಿಷಭ್ ಪಂತ್ ಕೆಲಹೊತ್ತು ಕ್ರೀಸ್​ನಲ್ಲಿದ್ದರಷ್ಟೆ. 19 ರನ್​ಗೆ ಔಟ್ ಆಗಿ ಮತ್ತೆ ನಿರಾಸೆ ಮೂಡಿಸಿದರು. ಪಂತ್ ಔಟ್ ಆಗಿದ್ದೆ ತಡ ಶ್ರೇಯಸ್ ಐಯರ್(5) ಇನ್ನಿಂಗ್ಸ್​ ಅಂತ್ಯಗೊಳಿಸಿದರು. ಕ್ರುನಾಲ್ ಪಾಂಡ್ಯ 4 ರನ್​ಗೆ ಸುಸ್ತಾದರು.

ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಪೈಕಿ ಜಡೇಜಾ 19 ರನ್ ಗಳಿಸಿದ್ದು ತಂಡಕ್ಕೆ ಉಪಯುಕ್ತವಾಯಿಷ್ಟೆ. ಅಂತಿಮವಾಗಿ ಭಾರತ 20 ಓವರ್​ಗೆ 9 ವಿಕೆಟ್ ಕಳೆದುಕೊಂಡು 134 ರನ್​ಗಳ ಸಾಧಾರಣ ಮೊತ್ತ ಕಲೆಹಾಕಿತು. ಆಫ್ರಿಕಾ ಪರ ರಬಾಡ 3 ಜಾರ್ನ್​​ ಫಾರ್ಟುನ್, ಹೆಂಡ್ರಿಕ್ಸ್ ತಲಾ 2 ವಿಕೆಟ್ ಕಿತ್ತರೆ, ಶಂಸಿ 1 ವಿಕೆಟ್ ಪಡೆದರು.

ಇಂದಿನ ಪಂದ್ಯಕ್ಕೆ ಕೊಹ್ಲಿ ಪಡೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಕಳೆದ ಗೆದ್ದ ತಂಡವನ್ನೇ ಕಣಕ್ಕಿಳಿಸಿತು. ಇತ್ತ ದಕ್ಷಿಣ ಆಫ್ರಿಕಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿತ್ತು.

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್, ಶ್ರೇಯಸ್ ಐಯರ್, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ನವ್​ದೀಪ್ ಸೈನಿ.

ದ. ಆಫ್ರಿಕಾ ತಂಡ: ಕ್ವಿಂಟನ್ ಡಿಕಾಕ್ (ನಾಯಕ), ರೀಜಾ ಹೆಂಡ್ರಿಕ್ಸ್​, ತೆಂಬ ಬವುಮಾ, ರಾಸ್ಸಿ ವಂಡರ್ ಡಸ್ಸೆನ್, ಡೇವಿಡ್ ಮಿಲ್ಲರ್, ಆ್ಯಂಡಿಲ್ ಫೆಹ್ಲುಕ್ವಾಯೊ, ಡ್ವೈನ್ ಪ್ರೆಟೋರಿಯಸ್, ಜಾರ್ನ್​​ ಫಾರ್ಟುನ್, ಕಗಿಸೊ ರಬಾಡ, ಬ್ಯೂರನ್ ಹೆಂಡ್ರಿಕ್ಸ್​​​​, ತಬ್ರೈಜ್ ಶಂಸಿ.
First published:September 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...