India Vs South Africa: ಹರಿಣಗಳೆದರು ಘರ್ಜಿಸಿದ ವಿರಾಟ್; ಭಾರತಕ್ಕೆ 7 ವಿಕೆಟ್​ಗಳ ಭರ್ಜರಿ ಜಯ!

7 ವಿಕೆಟ್​ಗಳ ಗೆಲುವಿನೊಂದಿಗೆ ಕೊಹ್ಲಿ ಪಡೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.

Vinay Bhat | news18-kannada
Updated:September 18, 2019, 10:33 PM IST
India Vs South Africa: ಹರಿಣಗಳೆದರು ಘರ್ಜಿಸಿದ ವಿರಾಟ್; ಭಾರತಕ್ಕೆ 7 ವಿಕೆಟ್​ಗಳ ಭರ್ಜರಿ ಜಯ!
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ
  • Share this:
ಬೆಂಗಳೂರು (ಸೆ. 18): ಮೊಹಾಲಿಯ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ-20 ಕದನದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಅತ್ಯುತ್ತಮ ಬೌಲಿಂಗ್ ದಾಳಿ ಹಾಗೂ ನಾಯಕ ವಿರಾಟ್ ಕೊಹ್ಲಿಯ ಅರ್ಧಶತಕದ ನೆರವಿನಿಂದ ಭಾರತ 7 ವಿಕೆಟ್​ಗಳ ಜಯ ಸಾಧಿಸಿ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಹರಿಣಗಳು ನೀಡಿದ್ದ 150 ರನ್​ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭದಲ್ಲೇ ಎರಡು ಸಿಕ್ಸ್​ ಸಿಡಿಸಿದ್ದ ರೋಹಿತ್ ಶರ್ಮಾ(12) ವಿಕೆಟ್ ಕಳೆದುಕೊಂಡಿತು. ಬಳಿಕ 2ನೇ ವಿಕೆಟ್​ಗೆ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಅರ್ಧಶತಕದ ಜೊತೆಯಾಟ ಆಡಿದ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. 4 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ ಗಮನ ಸೆಳೆದ ಧವನ್ 40 ರನ್​ ಗಳಿಸಿರುವಾಗ ಮಿಲ್ಲರ್ ಹಿಡಿದ ಅದ್ಭುತ ಕ್ಯಾಚ್​ಗೆ ನಿರ್ಗಮಿಸಿ ಬೇಕಾಯಿತು. ಇದರ ಬೆನ್ನಲ್ಲೆ ರಿಷಭ್ ಪಂತ್(4) ಮತ್ತೆ ವೈಫಲ್ಯ ಅನುಭವಿಸಿದ್ದು ತಂಡಕ್ಕೆ ಹೊಡೆತ ಬಿದ್ದಂತಾಯಿತು.

ಈ ಸಂದರ್ಭ ಕೊಹ್ಲಿ ಹಾಗೂ ಶ್ರೇಯಸ್ ಐಯರ್ ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ಹೊತ್ತರು. ಅದರಂತೆ ಕೊಹ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದರೆ, ಐಯರ್ ಉತ್ತಮ ಸಾತ್ ನೀಡಿದರು. ಅಂತಿಮವಾಗಿ ಭಾರತ 19 ಓವರ್​ನಲ್ಲೇ 3 ವಿಕೆಟ್ ಕಳೆದುಕೊಂಡು 151 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಆಫ್ರಿಕಾ ಪರ ಆ್ಯಂಡಿಲ್ ಫೆಹ್ಲುಕ್ವಾಯೊ, ಜಾರ್ನ್​​ ಫಾರ್ಟ್ಯೂನ್ ಹಾಗೂ ತಬ್ರೈಸ್ ಶಂಸಿ ತಲಾ 1 ವಿಕೆಟ್ ಪಡೆದರು.

ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಚಚ್ಚಿ ಅಜೇಯ 72 ರನ್ ಬಾರಿಸಿದರೆ, ಐಯರ್ ಅಜೇಯ 16 ರನ್ ಗಳಿಸಿದರು. ಪಂದ್ಯಶ್ರೇಷ್ಠ ವಿರಾಟ್ ಪಾಲಾಯಿತು.

7 ವಿಕೆಟ್​ಗಳ ಗೆಲುವಿನೊಂದಿಗೆ ಕೊಹ್ಲಿ ಪಡೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.

 


ಇದಕ್ಕೂ ಮೊದಲು ಟಾಸ್ ಸೋತು ಇನ್ನಿಂಗ್ಸ್​ ಆರಂಭಿಸಿದ ದ. ಆಫ್ರಿಕಾ ಮೊದಲಿಗೆ ಬಿರುಸಿನ ಬ್ಯಾಟಿಂಗ್ ನಡೆಸಿತಾದರು ಮಧ್ಯಮ ಕ್ರಮಾಂಕದ ಆಟಗಾರರು ಅದೇ ರನ್​​ಗತಿಯಲ್ಲಿ ಆಡಲು ವಿಫಲರಾದರು.

ಓಪನರ್​ಗಳಾದ ನಾಯಕ ಕ್ವಿಂಟನ್ ಡಿಕಾಕ್ ಹಾಗೂ ರೀಜಾ ಹೆಂಡ್ರಿಕ್ಸ್ ಪೈಕಿ ಡಿಕಾಕ್ ಆರಂಭದಲ್ಲಿ​ ಬೌಂಡರಿಗಳ ಮಳೆ ಸುರಿಸಿದರು. ಆದರೆ, 4ನೇ ಓವರ್​ನ ದೀಪಕ್ ಚಹಾರ್ ಬೌಲಿಂಗ್​ನಲ್ಲಿ ರೀಜಾ ಹೆಂಡ್ರಿಕ್ಸ್(6) ಸುಂದರ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಈ ಸಂದರ್ಭ ಡಿಕಾಕ್ ಜೊತೆಯಾದ ತೆಂಬ ಬವುಮಾ ಅಮೋಘ ಆಟ ಪ್ರದರ್ಶಿಸಿದರು. ಅರ್ಧಶತಕದ ಜೊತೆಯಾಟ ಆಡಿದ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅದರಲ್ಲು ಅಬ್ಬರಿಸಿದ ಡಿಕಾಕ್ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ 3ನೇ ಅರ್ಧಶತಕ ಪೂರೈಸಿದ್ದಾರೆ.

ಅರ್ಧಶತಕ ಬೆನ್ನಲ್ಲೆ ಡಿಕಾಕ್ 37 ಎಸೆತಗಳಲ್ಲಿ 8 ಬೌಂಡರಿ ಬಾರಿಸಿ 52 ರನ್​ಗೆ ಔಟ್ ಆದರು. ಆದರೆ, ಚೊಚ್ಚಲಕ ಪಂದ್ಯದಲ್ಲಿ ತೆಂಬ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಆಸರೆಯಾದರು. 43 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ತೆಂಬ 49 ರನ್​ಗೆ ಇನ್ನಿಂಗ್ಸ್​ ಮುಗಿಸಿದರು. ಡೇವಿಡ್ ಮಿಲ್ಲರ್ ಆಟ 18 ರನ್​ಗೆ ಅಂತ್ಯವಾಯಿತು.

ಆದರೂ ಹರಿಣಗಳಿಗೆ ಹೆಚ್ಚು ಮೊತ್ತ ಕಲೆಹಾಕಲು ಸಾಧ್ಯವಾಗಿಲ್ಲ. ಪರಿಣಾಮ ಆಫ್ರಿಕಾ 20 ಓವರ್​ಗೆ 5 ವಿಕೆಟ್ ಕಳೆದುಕೊಂಡು 149 ರನ್ ಕಲೆಹಾಕಿತು. ಭಾರತ ಪರ ದೀಪಕ್ ಚಹಾರ್ 2 ವಿಕೆಟ್ ಕಿತ್ತರೆ, ನವ್​ದೀಪ್ ಸೈನಿ, ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.

 

First published:September 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ