ಬೆಂಗಳೂರು (ಅ. 04): ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಮೊದಲ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ತಿರುಗೇಟು ನೀಡಿದೆ. ಎಲ್ಗರ್ ಹಾಗೂ ಡಿಕಾಕ್ ಆಕರ್ಷಕ ಶತಕದ ನೆರವಿನಿಂದ ಮೂರನೇ ದಿನದಾಟದ ಅಂತ್ಯಕ್ಕೆ ಆಫ್ರಿಕಾ 8 ವಿಕೆಟ್ ಕಳೆದುಕೊಂಡು 385 ರನ್ ಕಲೆಹಾಕಿದ್ದು 117 ರನ್ಗಳ ಹಿನ್ನಡೆಯಲ್ಲಿದೆ.
ನಿನ್ನೆ 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು ಆಫ್ರಿಕಾ 39 ರನ್ ಕಲೆಹಾಕಿತ್ತು. ಡೇನ್ ಎಲ್ಗರ್ ಹಾಗೂ ತೆಂಬಾ ಬವುಮಾ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
ಇಂದು ದಿನದ ಆರಂಭದಲ್ಲೆ ಬವುಮಾ 18 ರನ್ ಗಳಿಸಿದ್ದಾಗ ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಸಿಲುಕಿದರು. ಈ ಸಂದರ್ಭ ಎಲ್ಗರ್ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ತಂಡಕ್ಕೆ ಆಸರೆಯಾಗಿ ನಿಂತರು.
ಎಚ್ಚರಿಕೆಯ ಆಟ ಪ್ರದರ್ಶಿಸಿದ ಈ ಜೋಡಿ 115 ರನ್ಗಳ ಅಮೋಘ ಜೊತೆಯಾಟ ಆಡಿತು. ಆದರೆ, ಡುಪ್ಲೆಸಿಸ್ಗೆ ಅಶ್ವಿನ್ ಮಾರಕವಾಗಿ ಪರಿಣಮಿಸಿದರು. 103 ಎಸೆತಗಳಲ್ಲಿ 55 ರನ್ ಗಳಿಸಿದ್ದ ವೇಳೆ ಫಾಪ್ ಔಟ್ ಆದರು.
ಬಳಿಕ ಕ್ವಿಂಟನ್ ಡಿಕಾಕ್ ಜೊತೆಯಾದ ಎಲ್ಗರ್ ಟೆಸ್ಟ್ ಕ್ರಿಕೆಟ್ನಲ್ಲಿ 13ನೇ ಶತಕ ಪೂರೈಸಿದರು. ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದ ಈ ಜೋಡಿ ಭಾರತೀಯ ಬೌಲರ್ಗಳ ಬೆವರಿಳಿಸಿದರು. ಡೇನ್ ಎಲ್ಗರ್ 287 ಎಸೆತಗಳಲ್ಲಿ 18 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 160 ರನ್ ಕಲೆಹಾಕಿದರು. ಡಿಕಾಕ್ ಹಾಗೂ ಎಲ್ಗರ್ ಖಾತೆಯಿಂದ ಅಮೋಘ 164 ರನ್ಗಳ ಜೊತೆಯಾಟ ಮೂಡಿಬಂತು
ಡಿಕಾಕ್ 111 ರನ್ಗಳಿಗಸಿ ಔಟ್ ಆದರು. ಮುಥುಸಾಮಿ 12 ಹಾಗೂ ಮಹರಾಜ್ 3 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 385 ರನ್ ಕಲೆಹಾಕಿದೆ. 117 ರನ್ಗಳ ಹಿನ್ನಡೆಯಲ್ಲಿದೆ.
ಭಾರತ ಪರ ಆರ್ ಅಶ್ವಿನ್ 5 ವಿಕೆಟ್ ಕಿತ್ತರೆ, ಜಡೇಜಾ 2 ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಪಡೆದಿದ್ದಾರೆ.
ಇದಕ್ಕೂ ಮೊದಲು ಟೀಂ ಇಂಡಿಯಾ ಪರ ಮಯಾಂಕ್ ಅಗರ್ವಾಲ್ 215 ಹಾಗೂ ರೋಹಿತ್ ಶರ್ಮಾ 176 ರನ್ಗಳ ಅಮೋಘ ಆಟದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 502 ರನ್ ಬಾರಿಸಿ ಆಫ್ರಿಕನ್ನರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ