ಬೆಂಗಳೂರು (ಜೂ. 16): ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ನ ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ರೋಹಿತ್ ಶರ್ಮಾ ಅವರ ಆಕರ್ಷಕ ಶತಕ ಹಾಗೂ ವಿರಾಟ್ ಕೊಹ್ಲಿಯ ಅರ್ಧಶತಕದ ನೆರವಿನಿಂದ ಪಾಕ್ಗೆ ಗೆಲ್ಲಲು ಭಾರತ 337 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಸದ್ಯ ಈ ಗುರಿ ಬೆನ್ನಟ್ಟಿರುವ ಪಾಕಿಸ್ತಾನ ತಂಡ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದೆ. ನಾಯಕ ಸರ್ಫರಾಜ್ ಅಹ್ಮದ್ ಕೂಡ ತಂಡಕ್ಕೆ ಆಸರೆಯಾಗದೆ 30 ಎಸೆತಗಳಲ್ಲಿ 12 ರನ್ ಗಳಿಸಿ ಶಂಕರ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಈ ಸಂದರ್ಭ 35 ಓವರ್ಗೆ ಪಾಕಿಸ್ತಾನ 6 ವಿಕೆಟ್ ಕಳೆದುಕೊಂಡು 166 ರನ್ ಕಲೆಹಾಕಿರುವಾಗ ಮಳೆರಾಯನ ಆಗಮನವಾಯಿತು. ಹೀಗಾಗಿ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು. ಬಳಿಕ ಡಕ್ವರ್ತ್ ನಿಯಮದ ಅನ್ವಯ ಪಾಕ್ಗೆ ಗೆಲ್ಲಲು 30 ಎಸೆತಗಳಲ್ಲಿ 136 ರನ್ಗಳ ಟಾರ್ಗೆಟ್ ನೀಡಲಾಗಿದೆ.
ವಿಜಯ್ ಶಂಕರ್ ಬೌಲಿಂಗ್ನಲ್ಲಿ ಆರಂಭದಲ್ಲೇ ಇಮಾಮ್ ಉಲ್ ಹಖ್(7) ಎಲ್ಗಿ ಬಲೆಗೆ ಸಿಲುಕಿ ಪೆವಿಲಿಯನ್ ಸೇರಿಕೊಂಡರು. ಐದನೇ ಓವರ್ನ ನಾಲ್ಕನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಗಾಯಕ್ಕೊಳಗಾದ ಕಾರಣ ಮೈದಾನ ತೊರೆಯಬೇಕಾಯಿತು. ಬಳಿಕ ಓವರ್ ಪೂರ್ಣಗೊಳಿಸಲು ಬಂದ ಶಂಕರ್ ತನ್ನ ಚೊಚ್ಚಲ ವಿಶ್ವಕಪ್ನ ಮೊದಲ ಎಸೆತದಲ್ಲೇ ಪಾಕ್ನ ಮೊದಲ ವಿಕೆಟ್ ಕಿತ್ತರು.
ಬಳಿಕ 2ನೇ ವಿಕೆಟ್ಗೆ ಫಖರ್ ಜಮಾನ್ ಜೊತೆಯಾದ ಬಾಬರ್ ಅಜಂ ಉತ್ತಮ ಜೊತೆಯಾಟ ಆಡಿದರು. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ 104 ರನ್ಗಳ ಕಾಣಿಕೆ ನೀಡಿತು. ಈ ಸಂದರ್ಭ ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ ಇಬ್ಬರು ಸೆಟ್ ಬ್ಯಾಟ್ಸ್ಮನ್ಗಳು ಬಲಿಯಾಗಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್ ಎಂಬಂತಾಗಿದೆ.
48 ರನ್ ಗಳಿಸಿದ್ದ ಬಾಬರ್ ಅಜಂ ಕುಲ್ದೀಪ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರೆ, ಇತ್ತ ಅರ್ಧಶತಕ ಬಾರಿಸಿ ಬ್ಯಾಟ್ ಬೀಸುತ್ತದ್ದ ಫಖರ್ ಜಮಾನ್ ಕೂಡ 68 ರನ್ ಗಳಿಸಿ ಕುಲ್ದೀಪ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೆ ಬೌಲಿಂಗ್ ಮಾಡಲು ಬಂದ ಹಾರ್ದಿಕ್ ಪಾಂಡ್ಯ ಮೊಹಮ್ಮದ್ ಹಫೀಜ್(9) ವಿಕೆಟ್ ಕಿತ್ತರೆ, ತನ್ನ ಮುಂದಿನ ಎಸೆತದಲ್ಲೇ ಅನುಭವಿ ಶೋಯೆಬ್ ಮಲಿಕ್ರನ್ನು ಕ್ಲೀನ್ ಬೌಲ್ಡ್ ಮಾಡಿ ಶಾಕ್ ನೀಡಿದ್ದಾರೆ. ನಾಯಕ ಸರ್ಫರಾಜ್ ಅಹ್ಮದ್ ಕೂಡ ತಂಡಕ್ಕೆ ಆಸರೆಯಾಗದೆ 30 ಎಸೆತಗಳಲ್ಲಿ 12 ರನ್ ಗಳಿಸಿ ಶಂಕರ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ಪರ ಓಪನರ್ಗಳಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಬಿರುಸಿನ ಆಟ ಪ್ರದರ್ಶಿಸುತ್ತಿದರು. ಪಾಕ್ ಬೌಲರ್ಗಳ ಬೆಂಡೆತ್ತಿದ ಈ ಜೋಡಿ ಶತಕದ ಜೊತೆಯಾಟವಾಡಿತು. ಜೊತೆಗೆ ಇಬ್ಬರೂ ಅರ್ಧಶತಕ ಪೂರೈಸಿ ಮಿಂಚಿದರು. ಆದರೆ ರಾಹುಲ್ 57 ರನ್ ಗಳಿಸಿ ಬಾಬರ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಮೂಲಕ ರೋಹಿತ್-ರಾಹುಲ್ರ 136 ರನ್ಗಳ ಅಮೋಘ ಜೊತೆಯಾಟ ಅಂತ್ಯವಾಯಿತು. ಜೊತೆಗೆ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆರಂಭದಲ್ಲಿಯೇ 100 ರನ್ ಗಳಿಸಿದ ವಿಶ್ವದ ಐದನೇ ಜೋಡಿ ಎಂಬುದು ರೋಹಿತ್-ರಾಹುಲ್ ಬರೆದಿರುವ ದಾಖಲೆಯಾಯಿತು.
ನಂತರ ರೋಹಿತ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದರು. ರೋಹಿತ್ ಸ್ಪೋಟಕ ಆಟಕ್ಕೆ ಮುಂದಾದರೆ, ಕೊಹ್ಲಿ ಸಾತ್ ನೀಡಿದರು. ಅದರಂತೆ ಹಿಟ್ಮ್ಯಾನ್ ಏಕದಿನ ಕ್ರಿಕೆಟ್ನಲ್ಲಿ 24ನೇ ಶತಕ ಬಾರಿಸಿದರು. ಈ ಬಾರಿ ಮತ್ತೆ ದ್ವಿಶತಕ ಬಾರಿಸುತ್ತಾರೆ ಎಂದು ಅಭಿಮಾನಿಗಳು ನಂಬಿಕೊಂಡಿದ್ದರು.
ಆದರೆ, 113 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್ ಚಚ್ಚಿ ರೋಹಿತ್ 140 ರನ್ಗೆ ಬ್ಯಾಟ್ ಕೆಳಗಿಟ್ಟರು. ಬಳಿಕ ಕೊಹ್ಲಿ ಜೊತೆಯಾದ ಹಾರ್ದಿಕ್ ಪಾಂಡ್ಯ 19 ಎಸೆತಗಳಲ್ಲಿ 26 ರನ್ ಬಾರಿಸಿ ಔಟ್ ಆದರೆ ಎಂ ಎಸ್ ಧೋನಿ ಕೇವಲ 1 ರನ್ಗೆ ಬ್ಯಾಟ್ ಕೆಳಗಿಟ್ಟು ನಿರಾಸೆ ಮೂಡಿಸಿದರು.
ಈ ಮಧ್ಯೆ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 51ನೇ ಅರ್ಧಶತಕ ಸಿಡಿಸಿ ದಾಖಲೆ ಬರೆದರು. ಅತಿ ವೇಗವಾಗಿ 11 ಸಾವಿರ ರನ್ಗಳ ಗಡಿ ಮುಟ್ಟಿದ ಸಾಧನೆ ಮಾಡಿದರು. ಆದರೆ 46.4 ಓವರ್ ಆಗುವ ಹೊತ್ತಿಗೆ ಪಂದ್ಯಕ್ಕೆ ಮಳೆರಾಯ ಅಡ್ಡಿ ಪಡಿಸಿದ. ಮಳೆ ನಿಂತ ಬಳಿಕ ಮತ್ತೆ ಪಂದ್ಯ ಶುರುವಾಯಿತಾದರು ಭಾರತ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ. ಅರ್ಧಶತಕ ಬಾರಿಸಿದ್ದ ಕೊಹ್ಲಿ ಕೂಡ 77 ರನ್ಗೆ ಔಟ್ ಆದರು.
India vs Pakistan: ಕಿಂಗ್ ಕೊಹ್ಲಿಯಿಂದ ಸಚಿನ್ರ ಮತ್ತೊಂದು ದಾಖಲೆ ಉಡೀಸ್
ಅಂತಿಮವಾಗಿ ಭಾರತ 50 ಓವರ್ಗೆ 5 ವಿಕೆಟ್ ಕಳೆದುಕೊಂಡು 336 ರನ್ ಕಲೆಹಾಕಿತು. ಪಾಕ್ ಪರ ಮೊಹಮ್ಮದ್ ಅಮೀರ್ 3 ವಿಕೆಟ್ ಕಿತ್ತರೆ, ಹಸನ್ ಅಲಿ ಹಾಗೂ ವಹಾಬ್ ರಿಯಾಜ್ ತಲಾ 1 ವಿಕೆಟ್ ಪಡೆದರು.
ಇಂದಿನ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದ್ದು, ಗಾಯಳು ಶಿಖರ್ ಧವನ್ ಬದಲು ತಂಡದಲ್ಲಿ ಆಲ್ರೌಂಡರ್ ವಿಜಯ್ ಶಂಕರ್ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ವಿಜಯ್ ಶಂಕರ್, ಎಂಎಸ್ ಧೋನಿ, ಕೇದರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.
ಪಾಕಿಸ್ತಾನ ತಂಡ: ಸರ್ಫರಾಜ್ ಅಹ್ಮದ್ (ನಾಯಕ), ಇಮಾಮ್ ಉಲ್ ಹಖ್, ಫಖರ್ ಜಮಾನ್, ಬಾಬರ್ ಅಜಾಮ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಇಮಾದ್ ವಾಸಿಮ್, ಶಬಾದ್ ಖಾನ್, ಹಸನ್ ಅಲಿ, ವಹಾಬ್ ರಿಯಾಜ್, ಮೊಹಮ್ಮದ್ ಅಮಿರ್.
ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಭರ್ಜರಿ ಜಯ ಸಾಧಿಸಿದರೆ, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ 5 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ. ಇತ್ತ ಪಾಕಿಸ್ತಾನ ಆಡಿರುವ 4 ಪಂದ್ಯಗಳಲ್ಲಿ ಕೇವಲ ಒಂದನ್ನು ಗೆದ್ದರೆ, ಎರಡು ಪಂದ್ಯ ಸೋಲುಂಡಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿ 3 ಅಂಕದೊಂದಿಗೆ 9ನೇ ಸ್ಥಾನದಲ್ಲಿದೆ.
2017ರ ಚಾಂಪಿಯನ್ಶಿಪ್ ಟ್ರೋಫಿಯಲ್ಲಿ ಭಾರತ ತಂಡ ಪಾಕ್ ವಿರುದ್ಧ ಸೋತಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ವಿರಾಟ್ ಕೊಹ್ಲಿ ಪಡೆ ತಯಾರಿ ನಡೆಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ