Records- ಕಿವೀಸ್ 62 ರನ್​ಗೆ ಆಲೌಟ್; ಭಾರತ-ನ್ಯೂಜಿಲೆಂಡ್ ಪಂದ್ಯದಲ್ಲಿ ಬಂದ ದಾಖಲೆಗಳಿವು

India vs New Zealand Mumbai Test Match- ಮಯಂಕ್ ಅಗರ್ವಾಲ್ ಭರ್ಜರಿ ಆಟ, ಎಜಾಜ್ ಪಟೇಲ್ ದಾಖಲೆಯ ಬೌಲಿಂಗ್, ನ್ಯೂಜಿಲೆಂಡ್ ತಂಡದ ಅತಿ ಕಡಿಮೆ ಮೊತ್ತ, ಹೀಗೆ ದಾಖಲೆ, ಮೈಲಿಗಲ್ಲುಗಳು ಭಾರತ ನ್ಯೂಜಿಲೆಂಡ್ ಪಂದ್ಯದಲ್ಲಿ ಬಂದಿವೆ.

ಮಯಂಕ್ ಅಗರ್ವಾಲ್

ಮಯಂಕ್ ಅಗರ್ವಾಲ್

  • Share this:
    ಮುಂಬೈ, ಡಿ. 4: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿದ್ದ ಟೀಮ್ ಇಂಡಿಯಾ ಇದೀಗ ಟೆಸ್ಟ್ ಸರಣಿಯನ್ನೂ ಗೆಲ್ಲುವ ನಿಶ್ಚಿತ ಹಾದಿಯಲ್ಲಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ವೀರೋಚಿತವಾಗಿ ಡ್ರಾ ಮಾಡಿಕೊಂಡಿದ್ದ ನ್ಯೂಜಿಲೆಂಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಕುಸಿದಿದೆ. ಭಾರತದ ಮೊದಲ ಇನ್ನಿಂಗ್ಸ್ ಸ್ಕೋರಾದ 325 ರನ್​ಗೆ ಉತ್ತರವಾಗಿ ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸಲ್ಲಿ ಕೇವಲ 62 ರನ್​ಗೆ ಆಲೌಟ್ ಆಗಿದೆ. ಫಾಲೋ ಆನ್ ಹೇರುವ ಅವಕಾಶ ಇದ್ದರೂ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವ ನಿರ್ಧಾರಕ್ಕೆ ಬಂದರು.

    ಸತತವಾಗಿ ಬೌಲಿಂಗ್ ಮಾಡಿ ಹೈರಾಣಾಗಿರುವ ನ್ಯೂಜಿಲೆಂಡ್ ತಂಡದ ಬೌಲರ್​ಗಳು ಸುಧಾರಿಸಿಕೊಳ್ಳುವಷ್ಟರಲ್ಲಿ ಮತ್ತೆ ಬೌಲಿಂಗ್ ಮಾಡುವ ಪ್ರಮೇಯ ಬಂದೊದಗಿದೆ. ಅದರಲ್ಲೂ ಎಜಾಜ್ ಪಟೇಲ್ ಅವರು ಸುಸ್ತಾಗಿದ್ದದ್ದು ಮೇಲ್ನೋಟಕ್ಕೆ ಕಂಡುಬಂತು. ಭಾರತ 2ನೇ ದಿನಾಂತ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿದೆ. ಮಯಂಕ್ ಅಗರ್ವಾಲ್ ತಮ್ಮ ಮೊದಲ ಇನ್ನಿಂಗ್ಸ್​ನ ಭರ್ಜರಿ ಫಾರ್ಮ್ ಮುಂದುವರಿಸಿದ್ದಾರೆ. ಚೇತೇಶ್ವರ್ ಪೂಜಾರ ಲಯ ಕಂಡುಕೊಂಡಿದ್ದಾರೆ. ಭಾರತಕ್ಕೆ ಇಲ್ಲಿಂದ ಮುಂದಿನ ಹಾದಿ ಬಹುತೇಕ ಸುಲಭ ಇದ್ದಂತೆ ತೋರುತ್ತಿದೆ. ಇನ್ನೂ 3 ದಿನಗಳ ಆಟವಿದೆಯಾದರೂ ನಾಳೆಯೇ ಪಂದ್ಯ ಮುಗಿದರೆ ಅಚ್ಚರಿ ಇಲ್ಲ.

    ಪಂದ್ಯದಲ್ಲಿ ಬಂದ ದಾಖಲೆಗಳು:

    * ಭಾರತದ ವಿರುದ್ಧ ನ್ಯೂಜಿಲೆಂಡ್ ಅತಿ ಕಡಿಮೆ ಮೊತ್ತ: ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸಲ್ಲಿ ಕೇವಲ 62 ರನ್​ಗೆ ಆಲೌಟ್ ಆಗಿದೆ. ಇದು ಯಾವುದೇ ತಂಡ ಭಾರತದ ವಿರುದ್ಧ ಗಳಿಸಿದ ಅತಿ ಕಡಿಮೆ ಸ್ಕೋರ್ ಆಗಿದೆ. ಈ ಮುಂಚೆ ದಕ್ಷಿಣ ಆಫ್ರಿಕಾ ಗಳಿಸಿದ 79 ರನ್ ಸ್ಕೋರು ದಾಖಲೆಯಾಗಿತ್ತು.

    * ಭಾರತದ ನೆಲದಲ್ಲಿ ಯಾವುದೇ ತಂಡ ಗಳಿಸಿದ ಅತಿ ಕಡಿಮೆ ಸ್ಕೋರ್ ಕೂಡ ಆಗಿದೆ. ಭಾರತ ತಂಡ ಈ ಮುಂಚೆ ಗಳಿಸಿದ 75 ರನ್ ಸ್ಕೋರು ದಾಖಲೆಯಾಗಿತ್ತು.

    * ಭಾರತದ ವಿರುದ್ಧ ನ್ಯೂಜಿಲೆಂಡ್ ಗಳಿಸಿದ ಅತಿ ಕಡಿಮೆ ಸ್ಕೋರ್ ಇದಾಗಿದೆ. ಈ ಮುಂಚೆ 94 ರನ್ ಗಳಿಸಿದ್ದು ದಾಖಲೆಯಾಗಿತ್ತು.

    * ನ್ಯೂಜಿಲೆಂಡ್​ನ ಎಜಾಜ್ ಪಟೇಲ್ 119 ರನ್​ಗೆ 10 ವಿಕೆಟ್ ಪಡೆದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸಲ್ಲಿ 10 ವಿಕೆಟ್ ಪಡೆದ ಮೂರನೇ ಆಟಗಾರ ಎನಿಸಿದ್ದಾರೆ. ಜಿಮ್ ಲೇಕರ್ ಮತ್ತು ಅನಿಲ್ ಕುಂಬ್ಳೆ ನಂತರ ಈ ಮೈಲಿಗಲ್ಲು ಮುಟ್ಟಿದ ಕೀರ್ತಿ ಎಜಾಜ್ ಅವರಿಗೆ ಸಿಕ್ಕಿದೆ.

    * ಮಯಂಕ್ ಅಗರ್ವಾಲ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 150ಕ್ಕೂ ಹೆಚ್ಚು ರನ್ ಸ್ಕೋರ್ ಮಾಡಿದ ಎರಡನೇ ಟೆಸ್ಟ್ ಪ್ಲೇಯರ್ ಎನಿಸಿದ್ದಾರೆ.

    * ಟೆಸ್ಟ್ ಕ್ರಿಕೆಟ್​ನಲ್ಲಿ ಎರಡು ದಿನದಲ್ಲಿ ಎರಡನೇ ಇನ್ನಿಂಗ್ಸ್ ಬ್ಯಾಟ್ ಮಾಡಿ 300ಕ್ಕೂ ಹೆಚ್ಚು ರನ್​ಗಳ ಮುನ್ನಡೆ ಪಡೆದ ಏಕೈಕ ತಂಡ ಟೀಮ್ ಇಂಡಿಯಾ ಆಗಿದೆ.

    ಮಯಂಕ್ ಹೇಳಿದ್ದಿದು:

    ಎರಡನೇ ದಿನದ ಆಟದ ಬಳಿಕ ಮಯಂಕ್ ಅಗರ್ವಾಲ್ ಮಾತನಾಡಿ, ತಮ್ಮ ಇನಿಂಗ್ಸ್ ಬಗ್ಗೆ ಸಮಾಧಾನ ವ್ಯಕ್ತಪಡಿಸಿದರು. ನಾನು ಆಟದಲ್ಲಿ ಹೆಚ್ಚು ಬದಲಾವಣೆ ಮಾಡಿಕೊಳ್ಳಲಿಲ್ಲ. ಬ್ಯಾಟಿಂಗ್ ಎಂಬುದು ತಾಂತ್ರಿಕ ಅಂಶಕ್ಕಿಂತ ಮಾನಸಿಕ ಯುದ್ಧವಾಗಿತ್ತು. ಎಜಾಜ್ ಪಟೇಲ್ ಅದ್ಭುತವಾಗಿ ಬೌಲ್ ಮಾಡಿದರು. ಅವರನ್ನ ಒತ್ತಡಕ್ಕೆ ಸಿಲುಕಿಸಲಿಲ್ಲವೆಂದರೆ ಇನ್ನೂ ಡೇಂಜರಸ್ ಆಗಿ ಪರಿಣಮಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

    ಭಾರತದ ದೇಶೀಯ ಕ್ರಿಕೆಟ್​ನಲ್ಲಿ ಬಹಳ ಕಠಿಣ ಸ್ಪರ್ಧೆ ಇದೆ. ವಿಭಿನ್ನ ಪರಿಸ್ಥಿತಿಗಳಲ್ಲಿ ಆಡುವ ಅವಕಾಶ ಸಿಗುತ್ತದೆ. ಇದು ನಿಮ್ಮಲ್ಲಿನ ಆಟದ ಹಸಿವನ್ನು ಹೆಚ್ಚಿಸುತ್ತದೆ. ದೇಶೀಯ ಕ್ರಿಕೆಟ್​ನಲ್ಲಿನ ಲಯವನ್ನ ಅಂತರರಾಷ್ಟ್ರೀಯ ಕ್ರಿಕೆಟ್​ಗೂ ತೆಗೆದುಕೊಂಡು ಬಂದಿದ್ದೇನೆ ಎಂದು ಮಯಂಕ್ ಅಗರ್ವಾಲ್ ಹೇಳಿದರು.
    Published by:Vijayasarthy SN
    First published: