ನ್ಯೂಜಿಲೆಂಡ್ ಸರಣಿಯನ್ನು ಭರ್ಜರಿಯಾಗಿ ಆರಂಭಿಸಿರುವ ಟೀಂ ಇಂಡಿಯಾ ಐದು ಟಿ-20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಸದ್ಯ ನಾಳೆ ನಡೆಯಲಿರುವ ಮೂರನೇ ಟಿ-20 ಕದನಕ್ಕಾಗಿ ಕೊಹ್ಲಿ ಪಡೆ ಹ್ಯಾಮಿಲ್ಟನ್ಗೆ ಬಂದಿಳಿದಿದೆ.
ಉಳಿದಿರುವ ಮೂರು ಟಿ-20 ಪಂದ್ಯಗಳ ಪೈಕಿ ಭಾರತ ಒಂದರಲ್ಲಿ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇತ್ತ ಕೇನ್ ಪಡೆ ಉಳಿದ ಮೂರು ಪಂದ್ಯ ಗೆಲ್ಲ ಬೇಕಾದ ಒತ್ತಡದಲ್ಲಿದೆ. ಹೀಗಾಗಿ ಸೀಡನ್ ಪಾರ್ಕ್ನಲ್ಲಿ ನಡೆಯಲಿರುವ ಮೂರನೇ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
#TeamIndia have arrived in Hamilton 🚌🧳 #NZvIND pic.twitter.com/v6BCx0aDiC
— BCCI (@BCCI) January 27, 2020
ಈಗಾಗಲೇ ಉಭಯ ತಂಡದ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಜಿಮ್‌ನಲ್ಲಿ ಭರ್ಜರಿ ವರ್ಕೌಟ್ ಮಾಡಿ ಬೆವರು ಸುರಿಸುತ್ತಿದ್ದಾರೆ.
ಕೊಹ್ಲಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೊಹ್ಲಿ ಲಾಂಗ್ ಜಂಪಿಂಗ್ ಸೇರಿದಂತೆ ವಿವಿಧ ರೀತಿಯ ವರ್ಕೌಟ್ ಮಾಡಿದ್ದಾರೆ.
ಈಗಾಗಲೇ ಆಡಿರುವ ಎರಡೂ ಪಂದ್ಯಗಳಲ್ಲಿ ಗೆದ್ದು ಬೀಗಿರುವ ಭಾರತ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ನಾಳಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡುವ ಅಂದಾಜಿದೆ. ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿಯೇ ಇದೆ. ಬೌಲಿಂಗ್ನಲ್ಲಿ ಶಾರ್ದೂಲ್ ಠಾಕೂರ್ ಕೈಬಿಟ್ಟು ನವ್ದೀಪ್ ಸೈನಿ ತಂಡ ಸೇರಿಕೊಳ್ಳುವ ಅಂದಾಜಿದೆ.
View this post on Instagram
ಇತ್ತ ನ್ಯೂಜಿಲೆಂಡ್ ತಂಡ ಮೊದಲ ಟಿ-20 ಯಲ್ಲಿ ಸೋಲುಂಡಿದ್ದರೂ ಎರಡನೇ ಪಂದ್ಯಕ್ಕೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಮೂರನೇ ಟಿ-20 ಮಾಡು ಇಲ್ಲವೇ ಮಡಿ ಪಂದ್ಯ ಆಗಿರುವುದರಿಂದ ಕೇನ್ ಪಡೆಯಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ.
ಪಂದ್ಯ ಮಧ್ಯಾಹ್ನ 12:20 ಕ್ಕೆ ಆರಂಭವಾಗಲಿದ್ದು, 11:50ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಭಾರತ ಹಾಗೂ ನ್ಯೂಜಿಲೆಂಡ್ ಈವರೆಗೆ ಒಟ್ಟು 14 ಟಿ-20 ಪಂದ್ಯಗಳನ್ನಾಡಿದೆ. ಇದರಲ್ಲಿ ಕಿವೀಸ್ 8 ಪಂದ್ಯ ಗೆದ್ದರೆ, ಭಾರತ 5 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ