ವೆಲ್ಲಿಂಗ್ಟನ್ (ಫೆ. 22): ಇಲ್ಲಿನ ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತಕ್ಕೆ ತಿರುಗೇಟು ನೀಡಿದೆ. ಕೊಹ್ಲಿ ಪಡೆಯನ್ನು 165 ರನ್ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಕಿವೀಸ್, ನಾಯಕ ಕೇನ್ ವಿಲಿಯಮ್ಸನ್ ಅವರ ಅಮೋಘ ಆಟದ ನೆರವಿನಿಂದ 2ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 216 ರನ್ ಕಲೆಹಾಕಿದೆ. 51 ರನ್ಗಳ ಮುನ್ನಡೆ ಸಾಧಿಸಿದೆ.
ಮೊದಲ ದಿನವೇ ವೈಫಲ್ಯ ಅನುಭವಿಸಿದ್ದ ಕೊಹ್ಲಿ ಪಡೆ, ದಿನದಾಟದ ಅಂತ್ಯಕ್ಕೆ 55 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತ್ತು. ಅಜಿಂಕ್ಯಾ ರಹಾನೆ(38) ಹಾಗೂ ರಿಷಭ್ ಪಂತ್(10) ಇಂದು ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
That's stumps on Day 2.
New Zealand score 216/5 and lead by 51 runs. @ImIshant picks three wickets. #NZvIND.
Will be an interesting Day 3 tomorrow.
Scorecard 👉👉 https://t.co/tW3NpQIHJT pic.twitter.com/t5nUKhU9FH
— BCCI (@BCCI) February 22, 2020
ಅದರಂತೆ 2ನೇ ದಿನದಾಟದ ಆರಂಭಿಸಿದ ಟೀಂ ಇಂಡಿಯಾ ಕನಿಷ್ಠ 200 ರನ್ಗಳ ಗಡಿ ದಾಟುವಲ್ಲೂ ವಿಫಲವಾಯಿತು. 53 ಎಸೆತಗಳಲ್ಲಿ 19 ರನ್ ಗಳಿಸಿದ ಪಂತ್ ಮೊದಲನೇಯವರಾಗಿ ಪೆವಿಲಿಯನ್ ಸೇರಿಕೊಂಡರು. ಆರ್. ಅಶ್ವಿನ್ ಬಂದ ಬೆನ್ನಲ್ಲೆ ಸೊನ್ನೆ ಸುತ್ತಿದರು. ರಹಾನೆ ಕೂಡ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲದೆ 138 ಎಸೆತಗಳಲ್ಲಿ 46 ರನ್ ಗಳಿಸಿದ್ದಾಗ ಔಟ್ ಆದರು.
ಅಂತಿಮ ಹಂತದಲ್ಲಿ ಮೊಹಮ್ಮದ್ ಶಮಿ 20 ಎಸೆತಗಳಲ್ಲಿ 21 ರನ್ ಬಾರಿಸಿದರು. ಭಾರತ 68.1 ಓವರ್ನಲ್ಲಿ 165 ರನ್ಗೆ ಆಲೌಟ್ ಆಯಿತು. ನ್ಯೂಜಿಲೆಂಡ್ ಪರ ಟಿಮ್ ಸೌಥೀ ಹಾಗೂ ಕೈಲ್ ಜೇಮಿಸನ್ ತಲಾ 4 ವಿಕೆಟ್ ಕಿತ್ತು ಮಿಂಚಿದರು. ಟ್ರೆಂಟ್ ಬೌಲ್ಟ್ 1 ವಿಕೆಟ್ ಪಡೆದರು.
ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಆರಂಭದಲ್ಲೇ ಟಾಮ್ ಲೇಥಮ್(11) ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್ಗೆ ಟಾಮ್ ಬ್ಲಂಡೆಲ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಜೋಡಿ ಕೊಂಚ ರನ್ ಕಲೆಹಾಕಿದರಷ್ಟೆ. ಬ್ಲಂಡೆಲ್ 30 ರನ್ ಗಳಿಸಿದ್ದಾಗ ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಈ ಸಂದರ್ಭ 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರಾಸ್ ಟೇಲರ್ ಹಾಗೂ ಕೇನ್ ಜೊತೆಯಾಗಿ ಎಚ್ಚರಿಕೆಯ ಆಟಕ್ಕೆ ಮುಂದಾದರು. 93 ರನ್ಗಳ ಅಮೋಘ ಕಾಣಿಕೆ ನೀಡಿದರು. ಚೆನ್ನಾಗಿಯೆ ಆಡುತ್ತಿದ್ದ ಟೇಲರ್ 44 ರನ್ಗೆ ಪೂಜಾರಗೆ ಕ್ಯಾಚಿತ್ತು ನಿರ್ಗಮಿಸಿದರೆ, ಇದರ ಬೆನ್ನಲ್ಲೆ 153 ಎಸೆತಗಳಲ್ಲಿ 89 ರನ್ ಗಳಿಸಿದ್ದ ವಿಲಿಯಮ್ಸನ್ ಕೂಡ ಔಟ್ ಆಗಿ ಆಘಾತ ಮೂಡಿಸಿದರು. ಹೆನ್ರಿ ನಿಕೋಲ್ಸ್ 17 ರನ್ಗೆ ಬ್ಯಾಟ್ ಕೆಳಗಿಟ್ಟರು.
ಅಂತಿಮವಾಗಿ ನ್ಯೂಜಿಲೆಂಡ್ ಎರಡನೇ ದಿನದಾದ ಅಂತ್ಯಕ್ಕೆ 71.1 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 216 ರನ್ ಕಲೆಹಾಕಿದೆ. 51 ರನ್ಗಳ ಮುನ್ನಡೆಯಲ್ಲಿದೆ. ಬಿಜೆ ವಾಟ್ಲಿಂಗ್ 14 ಹಾಗೂ ಕಾಲಿನ್ ಗ್ರ್ಯಾಂಡ್ಹೋಮ್ 4 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಇಶಾಂತ್ ಶರ್ಮಾ 3, ಮೊಹಮ್ಮದ್ ಶಮಿ ಹಾಗೂ ಆರ್. ಅಶ್ವಿನ್ ತಲಾ 1 ವಿಕೆಟ್ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ