HOME » NEWS » Sports » CRICKET INDIA VS NEW ZEALAND LIVE SCORE WORLD CUP SEMI FINAL MATCH AT MANCHESTER KIWIS WIN BY 18 RUNS

India Vs New Zealand : 4ನೇ ಬಾರಿ ಫೈನಲ್​ಗೇರುವ ಟೀಂ ಇಂಡಿಯಾ ಕನಸು ಭಗ್ನ

India Vs New Zealand: ಇನ್ನು ಕೊನೆಯಲ್ಲಿ ಒವರ್​ನಲ್ಲಿ ಸ್ಯಾಂಟ್ನರ್​ ಬ್ಯಾಟ್​ನಿಂದ ಒಂದಷ್ಟು ರನ್​ಗಳು ಮೂಡಿ ಬಂದವು. ಪರಿಣಾಮ ನ್ಯೂಜಿಲೆಂಡ್ ತಂಡವು ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 239 ರನ್​ ಪೇರಿಸಿತು. ಭಾರತದ ಪರ ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಉರುಳಿಸಿ ಮಿಂಚಿದರೆ, ಬುಮ್ರಾ , ಪಾಂಡ್ಯ, ಜಡೇಜ, ಚಾಹಲ್ ತಲಾ ಒಂದು ವಿಕೆಟ್​ ಪಡೆದರು.

zahir | news18
Updated:July 10, 2019, 7:49 PM IST
India Vs New Zealand : 4ನೇ ಬಾರಿ ಫೈನಲ್​ಗೇರುವ ಟೀಂ ಇಂಡಿಯಾ ಕನಸು ಭಗ್ನ
.
  • News18
  • Last Updated: July 10, 2019, 7:49 PM IST
  • Share this:
ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಫರ್ಡ್​ ಮೈದಾನದಲ್ಲಿ ನಡೆದ ವಿಶ್ವಕಪ್ ಮೊದಲ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ​ 18 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಕೆಳ ಕ್ರಮಾಂಕದಲ್ಲಿ ರವೀಂದ್ರ ಜಡೇಜ ಅವರ 77 ರನ್​ಗಳ ಅಮೋಘ ಆಟದ ಹೊರತಾಗಿಯು ಕಿವೀಸ್ ಪಡೆಯ ಮುಂದೆ ಜಯ ಸಾಧಿಸುವಲ್ಲಿ ಟೀಂ ಇಂಡಿಯಾ ಎಡವಿತು. ಈ ಸೋಲಿನೊಂದಿಗೆ ಕೊಹ್ಲಿ ಪಡೆ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿತು.

ನ್ಯೂಜಿಲೆಂಡ್ ನೀಡಿದ​ 240 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಯಿತು. ಕೇವಲ ಒಂದು ರನ್​ಗಳಿಸಿ ರೋಹಿತ್ ಶರ್ಮಾ ಪೆವಿಲಿಯನ್​ಗೆ ಮರಳಿದ್ದರು. ಉಪನಾಯಕನ ಬೆನ್ನಲ್ಲೇ ಕ್ಯಾಪ್ಟನ್​ ಕೊಹ್ಲಿ 1 ರನ್​ಗಳಿಸಿ ಬೌಲ್ಟ್ ಎಸೆತದಲ್ಲಿ ಎಲ್​ಬಿಡಬ್ಲ್ಯೂಗೆ ಆಗಿ ನಿರ್ಗಮಿಸಿದರು. ಇನ್ನು 7 ಎಸೆತಗಳನ್ನು ಎದುರಿಸಿದ ರಾಹುಲ್ ಕೇವಲ 1 ರನ್​ ಗಳಿಸಿ ವಿಕೆಟ್ ಕೀಪರ್​ಗೆ ಕ್ಯಾಚ್​ ನೀಡಿ ಹೊರ ನಡೆದರು.
5 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡ  ಭಾರತ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು.  ಈ ಹಂತದಲ್ಲಿ ಜತೆಯಾದ ಪಂತ್-ಕಾರ್ತಿಕ್ ಕಿವೀಸ್ ದಾಳಿ ವಿರುದ್ಧ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗಳು ಮೊದಲ ಬೌಂಡರಿ ಬಾರಿಸಲು ತೆಗೆದುಕೊಂಡಿದ್ದು ಬರೋಬ್ಬರಿ 35 ಎಸೆತಗಳನ್ನಾಗಿತ್ತು. 25 ಎಸೆತಗಳಲ್ಲಿ 6 ರನ್​ ಬಾರಿಸಿದ ದಿನೇಶ್ ಕಾರ್ತಿಕ್ ಅವರನ್ನು ಅದ್ಭುತ ಕ್ಯಾಚ್ ಮೂಲಕ ಪೆವಿಲಿಯನ್ ಹಾದಿ ತೋರಿಸುವಲ್ಲಿ ಕೊನೆಗೂ ನೀಶಮ್ ಯಶಸ್ವಿಯಾದರು.ಈ ಸಂದರ್ಭದಲ್ಲಿ ಕ್ರೀಸ್​ಗೆ ಆಗಮಿಸಿದ ಪಾಂಡ್ಯ ಆಕ್ರಮಣಕಾರಿ ಆಟದ ಬದಲು ನಿಧಾನಗತಿಯಲ್ಲಿ ರನ್​ ಕಲೆಹಾಕುವಲ್ಲಿ ನಿರತರಾದರು. ಇದೇ ವೇಳೆ 12ನೇ ಒವರ್​ನಲ್ಲಿ ರಿಷಭ್ ಪಂತ್​ರ ಸುಲಭ ಕ್ಯಾಚನ್ನು ಕೈಚೆಲ್ಲಿದ ನೀಶಮ್ ಟೀಂ ಇಂಡಿಯಾ ಆಟಗಾರನಿಗೆ ಜೀವನದಾನ ನೀಡಿದರು. ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು  ವಿಫಲರಾದ ಪಂತ್ (32) ಸ್ಯಾಂಟ್ನರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬೌಂಡರಿಯಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಇನ್ನು ಏಕಾಂಗಿಯಾಗಿ ತಂಡಕ್ಕೆ ಆಸರೆಯಾಗಿದ್ದ ಪಾಂಡ್ಯ ಒಂದು ಹಂತದಲ್ಲಿ ನ್ಯೂಜಿಲೆಂಡ್​ ಬೌಲರುಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ್ದರು. 61 ಎಸೆತಗಳಲ್ಲಿ 32 ರನ್​ ಬಾರಿಸಿದ್ದ ಹಾರ್ದಿಕ್ ಸ್ಯಾಂಟ್ನರ್ ಎಸೆತವನ್ನು ಸಿಕ್ಸರ್ ಅಟ್ಟಲು ಮುಂದಾಗಿ ವಿಕೆಟ್ ಕೈ ಚೆಲ್ಲಿದರು. ಈ ಮೂಲಕ ನ್ಯೂಜಿಲೆಂಡ್​ ತಂಡದ 6ನೇ ಯಶಸ್ಸಾಗಿ ಇನಿಂಗ್ಸ್​ಗೆ ಅಂತ್ಯ ಹಾಡಿದರು.

ಈ ಹಂತದಲ್ಲಿ ಧೋನಿ ಜತೆಗೂಡಿದ ಜಡೇಜ ಬಿರುಸಿನ ಆಟದೊಂದಿಗೆ ಇನಿಂಗ್ಸ್ ಆರಂಭಿಸಿದರು. 3 ಭರ್ಜರಿ ಸಿಕ್ಸರ್ ಹಾಗೂ 3 ಆಕರ್ಷಕ ಬೌಂಡರಿಗಳೊಂದಿಗೆ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಜಡೇಜ ಕಿವೀಸ್​ ಬೌಲರುಗಳನ್ನು ಬೆಂಡೆತ್ತಿದರು. ಅಷ್ಟೇ ಅಲ್ಲದೆ ನಿರ್ಣಾಯಕ ಹಂತದಲ್ಲಿ 97 ಎಸೆತಗಳಲ್ಲಿ 100 ರನ್​ಗಳ ಜೊತೆಯಾಟ ಆಡಿದರು.

ಇನ್ನೇನು ಭಾರತ ಪಂದ್ಯವನ್ನು ಗೆಲ್ಲಲಿದೆ ಅಂದುಕೊಂಡಿರುವಾಗಲೇ  ಜಡೇಜ(77) ಬೌಲ್ಟ್​ ಎಸೆತದಲ್ಲಿ ಬಿರುಸಿನ ಹೊಡೆತಕ್ಕೆ ಕೈ ಹಾಕಿ ಕೇನ್ ವಿಲಿಯಮ್ಸನ್​ಗೆಡ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಮಾಜಿ ನಾಯಕ ಧೋನಿ ತಮ್ಮ ಅರ್ಧಶತಕ ಪೂರೈಸಿ ಗಪ್ಟಿಲ್​ ಅವರ ಅದ್ಭುತ ಫೀಲ್ಡಿಂಗ್​ಗೆ ಬಲಿಯಾದರು. ಅಲ್ಲಿಗೆ ಟೀಂ ಇಂಡಿಯಾ ಪರೋಕ್ಷವಾಗಿ ಸೋಲೊಪ್ಪಿಕೊಂಡಿತು.

ಒಂದು ಹಂತದಲ್ಲಿ ನ್ಯೂಜಿಲೆಂಡ್ ಕೈಯಲ್ಲಿದ್ದ ಪಂದ್ಯವನ್ನು ಜಡೇಜ-ಧೋನಿ ತಮ್ಮ ಅದ್ಭುತ ಆಟದಿಂದ ಭಾರತದ ಕಡೆ ವಾಲುವಂತೆ ಮಾಡಿದ್ದರು. ಆದರೆ ಒತ್ತಡದಲ್ಲಿ ವಿಕೆಟ್ ಕೈ ಚೆಲ್ಲಿದ ಭಾರತ ಕೊನೆಗೆ 221 ರನ್​ಗಳಿಗೆ ಸರ್ವಪತನ ಕಾಣುವಂತಾಯಿತು. ಈ ಮೂಲಕ ವಿಶ್ವಕಪ್​ನಲ್ಲಿ 4ನೇ ಬಾರಿ ಫೈನಲ್​ಗೇರುವ ಅವಕಾಶವನ್ನು ಭಾರತ ಕೈ ತಪ್ಪಿಸಿಕೊಂಡರು. ಹಾಗೆಯೇ 18 ರನ್​ಗಳ ಜಯದೊಂದಿಗೆ ಕಳೆದ ಬಾರಿಯ ರನ್ನರ್​ ಅಪ್ ನ್ಯೂಜಿಲೆಂಡ್ ಈ ಬಾರಿ ಕೂಡ ಫೈನಲ್ ಪ್ರವೇಶಿಸಿತು.  ಇನ್ನು ಕರಾರುವಾಕ್ ದಾಳಿ ಮೂಲಕ ಮ್ಯಾಟ್ ಹೆನ್ರಿ 3 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ 2 ವಿಕೆಟ್ ಉರುಳಿಸಿ ಮಿಂಚಿದರು.

ಇದಕ್ಕೂ ಮುನ್ನ ಟಾಸ್​ ಗೆದ್ದ ನ್ಯೂಜಿಲೆಂಡ್ ನಾಯಕ​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದರು. ಟಾಸ್​ ಸೋತರೂ ಭಾರತಕ್ಕೆ ಭರ್ಜರಿ ಆರಂಭ ಒದಗಿಸುವಲ್ಲಿ ಯಶಸ್ವಿಯಾದ ಭುವನೇಶ್ವರ್ ಕುಮಾರ್ ಹಾಗೂ ಜಸ್​ಪ್ರೀತ್ ಬುಮ್ರಾ ಮೊದೆಲೆರಡು ಮೇಡನ್ ಓವರ್​ಗಳನ್ನು ಎಸೆದರು. ಇದರಿಂದ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದ ಮಾರ್ಟಿನ್ ಗಪ್ಟಿಲ್ 14 ಎಸೆತಗಳಲ್ಲಿ ಕೇವಲ 1 ರನ್​ ಗಳಿಸಿ ಬುಮ್ರಾ ಎಸೆತದಲ್ಲಿ ಸ್ಲಿಪ್​ನಲ್ಲಿದ್ದ ಕೊಹ್ಲಿಗೆ ಕ್ಯಾಚ್​ ನೀಡಿ ಹೊರ ನಡೆದರು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ಕೇನ್ ವಿಲಿಯಮ್ಸನ್​ ತಂಡಕ್ಕೆ ಆಸರೆಯಾದರು. ಆರಂಭಿಕ ನಿಕೋಲ್ಸ್ ಜತೆ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಕೇನ್ ನಿಧಾನಗತಿಯಲ್ಲಿ ರನ್​ ಪೇರಿಸುವತ್ತ ಗಮನ ಹರಿಸಿದರು. ಅದರಂತೆ ನ್ಯೂಜಿಲೆಂಡ್ 15 ಓವರ್​ನಲ್ಲಿ ಕಲೆ ಹಾಕಿದ್ದು 55 ರನ್​ ಮಾತ್ರ.

ಇದೇ ವೇಳೆ 19ನೇ ಎಸೆಯಲು ಬಂದ ರವೀಂದ್ರ ಜಡೇಜಾ ನಿಕೋಲ್ಸ್​ರನ್ನು ಕ್ಲೀನ್ ಬೌಲ್ಡ್​ ಮಾಡುವ ಮೂಲಕ 68 ರನ್​ಗಳ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಆದರೆ ಜವಾಬ್ದಾರಿಯುತ ಬ್ಯಾಟಿಂಗ್ ಪದರ್ಶಿಸಿದ ಕೇನ್ ವಿಲಿಯಮ್ಸನ್ ಒಂಟಿ ರನ್​ಗಳನ್ನು ಕಲೆಹಾಕುತ್ತಾ ಸಂಕಷ್ಟದಲ್ಲಿದ್ದ ತಂಡವನ್ನು ಮೇಲೆಕೆತ್ತುವ ಪ್ರಯತ್ನ ಮಾಡಿದರು. ಇದರ ನಡುವೆ 79 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿ ಕೇನ್ ಬ್ಯಾಟ್ ಮೇಲೆಕೆತ್ತಿದರು.

ಆರು ಬೌಂಡರಿಗಳೊಂದಿಗೆ 67 ರನ್​ಗಳಿಸಿ ಅಪಾಯಕಾರಿಯಾಗುವತ್ತ ಸಾಗುತ್ತಿದ್ದ ವಿಲಿಯಮ್ಸನ್​ ಅವರನ್ನು ಕೊನೆಗೂ ಔಟ್ ಮಾಡುವಲ್ಲಿ ಚಹಾಲ್ ಯಶಸ್ವಿಯಾದರು. ಇನ್ನು ನಾಯಕನ ನಿರ್ಗಮನದ ಬೆನ್ನಲ್ಲೇ ನೀಶಮ್ (12) ಸಹ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿ ಹೊರನಡೆದರು.

ನ್ಯೂಜಿಲೆಂಡ್ ತಂಡದ ಮೊತ್ತ 121 ಆಗಿದ್ದ ವೇಳೆ ರಾಸ್​ ಟೇಲರ್(22) ನೀಡಿದ ಕ್ಯಾಚನ್ನು ಧೋನಿ ಕೈಚೆಲ್ಲುವ ಮೂಲಕ ಕಿವೀಸ್ ಆಟಗಾರನಿಗೆ ಜೀವದಾನ ನೀಡಿದರು. ಇದನ್ನು ಸಂಪೂರ್ಣವಾಗಿ ಬಳಸಿಕೊಂಡ ಟೇಲರ್ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು.

ಇನ್ನು ಗ್ರ್ಯಾಂಡ್​ಹೋಮ್ (16) ಸುಲಭವಾಗಿ ಧೋನಿಗೆ ಕ್ಯಾಚ್​ ನೀಡಿ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದರು. ಇದರ ನಡುವೆ ಮಳೆ ಸುರಿದ ಕಾರಣ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಯಿತು. ಅದರಂತೆ ಇಂದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್​ ತಂಡವನ್ನು ನಿಯಂತ್ರಿಸಲು ಭಾರತೀಯ ಬೌಲರುಗಳು ಯಶಸ್ವಿಯಾದರು.

ಕ್ರೀಸ್​ನಲ್ಲಿ ಅಪಾಯಕಾರಿಯಾಗಿ ಉಳಿದಿದ್ದ ರಾಸ್​ ಟೇಲರನ್ನು 48ನೇ ಓವರ್​ನಲ್ಲಿ ರವೀಂದ್ರ ಜಡೇಜ ರನೌಟ್​ ಮಾಡುವ ಮೂಲಕ 6ನೇ ಯಶಸ್ಸು ತಂದುಕೊಟ್ಟರು. 90 ಎಸೆತಗಳನ್ನು ಎದುರಿಸಿದ್ದ ಟೇಲರ್​ 74 ರನ್​ಗಳಿಸಿ ಹೊರ ನಡೆದರು. ಇದರ ಬೆನ್ನಲ್ಲೇ ಲಾಥಮ್(10) ಸಹ ಭುವಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಕೈ ಹಾಕಿ ಜಡೇಜ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಮ್ಯಾಟ್​ ಹೆನ್ರಿ ಕೂಡ 1 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು ಕೊನೆಯಲ್ಲಿ ಒವರ್​ನಲ್ಲಿ ಸ್ಯಾಂಟ್ನರ್​ ಬ್ಯಾಟ್​ನಿಂದ ಒಂದಷ್ಟು ರನ್​ಗಳು ಮೂಡಿ ಬಂದವು. ಪರಿಣಾಮ ನ್ಯೂಜಿಲೆಂಡ್ ತಂಡವು ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 239 ರನ್​ ಪೇರಿಸಿತು. ಭಾರತದ ಪರ ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಉರುಳಿಸಿ ಮಿಂಚಿದರೆ, ಬುಮ್ರಾ , ಪಾಂಡ್ಯ, ಜಡೇಜ, ಚಾಹಲ್ ತಲಾ ಒಂದು ವಿಕೆಟ್​ ಪಡೆದರು.

ಟೀಂ ಇಂಡಿಯಾ ಪಟ್ಟಿ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ರಿಷಭ್ ಪಂತ್, ಎಂ.ಎಸ್.ಧೋನಿ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್,  ಜಸ್​ಪ್ರೀತ್​ ಬುಮ್ರಾ, ಯಜುವೇಂದ್ರ ಚಹಾಲ್​ 

ನ್ಯೂಜಿಲೆಂಡ್ ತಂಡ:

ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಟಾಮ್ ಲಾಥಮ್, ಜೇಮ್ಸ್ ನೀಶಮ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.
First published: July 10, 2019, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories