ಆಕ್ಲೆಂಡ್ (ಜ. 24): ಇಲ್ಲಿನ ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಕೊಹ್ಲಿ ಪಡೆಗೆ 204 ರನ್ಗಳ ಕಠಿಣ ಟಾರ್ಗೆಟ್ ನೀಡಿದೆ.
ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಭಾರತ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಹಿಟ್ಮ್ಯಾನ್ ಕೇವಲ 7 ರನ್ಗೆ ನಿರ್ಗಮಿಸಿದರು. ಬಳಿಕ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಈ ಜೋಡಿ ಬೌಂಡರಿಗಳ ಮಳೆಸುರಿಸಿತು. ಅದರಲ್ಲು ಸ್ಫೋಟಕ ಬ್ಯಾಟಿಂಗ್ ನಡೆಸಿದ ರಾಹುಲ್ ಅರ್ಧಶತಕ ಸಿಡಿಸಿ ಮಿಂಚಿದರು. ಕೇವಲ 27 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಿಡಿಸಿ 56 ರನ್ ಬಾರಿಸಿ ಔಟ್ ಆದರು.
ಇದರ ಬೆನ್ನಲ್ಲೆ ಕೊಹ್ಲಿ ಕೂಡ 32 ಎಸೆತಗಳಲ್ಲಿ 45 ರನ್ ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು. ಶಿವಂ ದುಬೆ ಆಟ 13 ರನ್ಗೆ ಅಂತ್ಯವಾಯಿತು.
ಇದಕ್ಕೂ ಮೊದಲು ಟಾಸ್ ಬ್ಯಾಟಿಂಗ್ಗೆ ಇಳಿದ ಕಿವೀಸ್ ಓಪನರ್ಗಳಾದ ಮಾರ್ಟಿನ್ ಗಪ್ಟಿಲ್ ಹಾಗೂ ಕಾಲಿನ್ ಮನ್ರೊ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ನಿಂದಲೇ ಅಬ್ಬರಿಸಲು ಶುರು ಮಾಡಿದ ಈ ಜೋಡಿ ಬೌಂಡರಿ-ಸಿಕ್ಸರ್ಗಳ ಮಳೆ ಸುರಿಸಿತು.
ಮೊದಲ ವಿಕೆಟ್ಗೆ ಈ ಜೋಡಿ 80 ರನ್ಗಳ ಕಾಣಿಕೆ ನೀಡಿತು. ಅದುಕೂಡ 7.5 ಓವರ್ನಲ್ಲಿ. ಮಾರ್ಟಿನ್ ಗಪ್ಟಿಲ್ ಅವರು ಶಿವಂ ದುಬೆ ಬೌಲಿಂಗ್ನಲ್ಲಿ ಚೆಂಡನ್ನು ಸಿಕ್ಸ್ಗೆ ಅಟ್ಟಲೋಗಿ ಔಟ್ ಆದರು. ಗಪ್ಟಿಲ್ 19 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ನೊಂದಿಗೆ 30 ಸಿಡಿಸಿದರು.
ಬಳಿಕ ನಾಯಕ ಕೇನ್ ವಿಲಿಯಮ್ಸನ್ ಜೊತೆಯಾದ ಮನ್ರೊ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿ ಅರ್ಧಶತಕ ಸಿಡಿಸಿದರು. ಬಳಿಕ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲದ ಮನ್ರೊ 42 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿ 59 ರನ್ಗೆ ನಿರ್ಗಮಿಸಿದರು. ಬಂದ ಬೆನ್ನಲ್ಲೆ ಕಾಲಿನ್ ಡಿ'ಗ್ರ್ಯಾಂಡ್ಹೋಮ್ ಸೊನ್ನೆ ಸುತ್ತಿದರು.
ಬಳಿಕ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಭಾರತೀಯ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಇಬ್ಬರೂ ಸ್ಫೋಟಕ ಆಟವಾಡಿ ತಂಡದ ಮೊತ್ತವನ್ನು ಮತ್ತಷ್ಟು ಏರಿಸಿದರು. ವಿಲಿಯಮ್ಸನ್ ಕೇವಲ 26 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಚಚ್ಚಿ 51 ರನ್ ಸಿಡಿಸಿ ಔಟ್ ಆದರು. ಟೇಲರ್ 27 ಎಸೆತಗಳಲ್ಲಿ 4 ಬೌಂಡರಿ-4 ಸಿಕ್ಸರ್ನೊಂದಿಗೆ ಅಜೇಯ 54 ರನ್ ಗಳಿಸಿದರು.
ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್ನಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಬಾರಿಸಿತು. ಭಾರತ ಪರ ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ ಹಾಗೂ ಶಿವಂ ದುಬೆ ತಲಾ 1 ವಿಕೆಟ್ ಪಡೆದರು.
ಟೀಂ ಇಂಡಿಯಾ ಪರ ಓಪನರ್ ಆಗಿ ರೋಹಿತ್ ಶರ್ಮಾ ಜೊತೆ ಕೆ ಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ. ಸಂಜು ಸ್ಯಾಮ್ಸನ್ ಮತ್ತೆ ಬೆಂಚ್ ಕಾಯಬೇಕಾಗಿ ಬಂದಿದ್ದು, ಮನೀಶ್ ಪಾಂಡೆ, ಶಾರ್ದೂಲ್ ಠಾಕೂರ್, ಶಿವಂ ದುಬೆ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ತನಗೆ ಸಿಕ್ಕ ಪಂದ್ಯಶ್ರೇಷ್ಠವನ್ನು ರಾಹುಲ್ ಏನು ಮಾಡಿದ್ರು ಗೊತ್ತಾ?; ಇಲ್ಲಿದೆ ಕನ್ನಡಿಗನ ಹೆಮ್ಮೆಯ ಸ್ಟೋರಿ!
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆ. ಎಲ್. ರಾಹುಲ್ (ವಿಕೆಟ್- ಕೀಪರ್), ಶ್ರೇಯಸ್ ಐಯರ್, ಮನೀಷ್ ಪಾಂಡೆ, ಶಿವಂ ದುಬೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಯಜುವೇಂದ್ರ ಚಹಾಲ್.
ಇತ್ತ ನ್ಯೂಜಿಲೆಂಡ್ ತಂಡ ಕೂಡ ಬಲಿಷ್ಠ ಆಟಗಾರರನ್ನೇ ಇಂದಿನ ಪಂದ್ಯಕ್ಕೆ ಆಯ್ಕೆ ಮಾಡಿದೆ.
ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೊ, ರಾಸ್ ಟೇಲರ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಕಾಲಿನ್ ಡಿ'ಗ್ರ್ಯಾಂಡ್ಹೋಮ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥೀ, ಹೇಮಿಶ್ ಬೆನೆಟ್, ಬ್ಲೇರ್ ಟಿಕ್ನರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ