ಹುಯ್ಯೋ ಹುಯ್ಯೋ ಮಳೆರಾಯ..! ನ್ಯೂಜಿಲೆಂಡ್​ ವಿರುದ್ಧ ಸೋಲಿನ ಸುಳಿಯಲ್ಲಿರುವ ಭಾರತಕ್ಕಾಗಿ ಅಭಿಮಾನಿಗಳ ಪ್ರಾರ್ಥನೆ

ಅಭಿಮಾನಿಗಳ ಪ್ರಾರ್ಥನೆ ಏನೆಂದರೆ ಇಂದೂ ಮ್ಯಾಚ್​ ಸಂಪೂರ್ಣವಾಗಿ ನಡೆಯದಿದ್ದರೆ, ಐಸಿಸಿ ಕಾನೂನಿನ ಅನ್ವಯ ಪಾಯಿಂಟ್ಸ್​ ಪಟ್ಟಿಯಲ್ಲಿ ಮೇಲಿರುವ ಭಾರತ ಫೈನಲ್​ ಪ್ರವೇಶಿಸಲಿದೆ. ಅಂಕಪಟ್ಟಿಯಲ್ಲಿ 15 ಪಾಯಿಂಟ್ಸ್​ನೊಂದಿಗೆ ಭಾರತ ಮೊದಲ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್​ 11 ಅಂಕದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. 

Sharath Sharma Kalagaru | news18
Updated:July 10, 2019, 5:50 PM IST
ಹುಯ್ಯೋ ಹುಯ್ಯೋ ಮಳೆರಾಯ..! ನ್ಯೂಜಿಲೆಂಡ್​ ವಿರುದ್ಧ ಸೋಲಿನ ಸುಳಿಯಲ್ಲಿರುವ ಭಾರತಕ್ಕಾಗಿ ಅಭಿಮಾನಿಗಳ ಪ್ರಾರ್ಥನೆ
ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಸೆಮಿಫೈನಲ್​
  • News18
  • Last Updated: July 10, 2019, 5:50 PM IST
  • Share this:
ಸೆಮಿಫೈನಲ್​ ತನಕ ಕೇವಲ ಒಂದು ಮ್ಯಾಚನ್ನು ಮಾತ್ರ ಸೋತಿದ್ದ ಭಾರತ ಕ್ರಿಕೆಟ್​ ತಂಡ ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಲುವ ಭೀತಿಯಲ್ಲಿದೆ. ನಿನ್ನೆ ಅರ್ಧಕ್ಕೆ ನಿಂತಿದ್ದ ನ್ಯೂಜಿಲೆಂಡ್​ ವಿರುದ್ಧದ ಪಂದ್ಯವನ್ನು ಇಂದು ಮುಂದುವರೆಸಿದ್ದು ಭಾರತಕ್ಕೆ 240 ರನ್​ಗಳ ಸಾಧಾರಣ ಮೊತ್ತವನ್ನು ನ್ಯೂಜಿಲೆಂಡ್​ ನೀಡಿತ್ತು. ಆದರೆ ಭಾರತ ಆರಂಭದಲ್ಲೇ 5 ರನ್​ಗಳಿಗೆ ಮೂರು ವಿಕೆಟ್​ಗಳನ್ನು ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಎದುರಾಗಿದೆ.

ಅದಾದ ನಂತರ ಮತ್ತೆ ಎರಡು ವಿಕೆಟ್​ ಕಳೆದಿಕೊಂಡಿರುವ ಭಾರತ, 79 ರನ್​ಗಳಿಗೆ 5 ಪ್ರಮುಖ ವಿಕೆಟ್​ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದೆ (ಸ್ಕೋರ್​ ಈ ಸುದ್ದಿ ಪ್ರಕಟಿಸುವ ಸಮಯದಲ್ಲಿ). ಇದೀಗ ಭಾರತದ ಅಭಿಮಾನಿಗಳು ಮತ್ತೆ ಮಳೆರಾಯನ ಆರ್ಭಟ ಆರಂಭವಾಗಿ ಸೆಮಿ ಫೈನಲ್​ ಪಂದ್ಯ ರದ್ದಾಗಲಿ, ಆ ಮೂಲಕವಾದರೂ ಭಾರತ ವಿಶ್ವಕಪ್​ನ ಫೈನಲ್​ಗೆ ಕಾಲಿಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಇಂದು ನ್ಯೂಜಿಲೆಂಡ್​ನ 240 ರನ್​ ಬೆನ್ನತ್ತಿದ ಭಾರತದ ಆರಂಭಿಕರಾದ ರೋಹಿತ್​​ ಶರ್ಮ ವಿಕೆಟ್​ ಮೊದಲು ಕಳೆದುಕೊಂಡಿತು. ಅದಾದ ನಂತರ ಬ್ಯಾಟಿಂಗ್​ಗೆ ಬಂದ ನಾಯಕ ವಿರಾಟ್​ ಕೊಹ್ಲಿ ಕೂಡ ಕಡಿಮೆ ಒಂದಂಕಿಗೆ ಪೆವಿಲಿಯನ್​ ಹಾದಿ ಹಿಡಿದರು. ನಾಯಕ ಕೊಹ್ಲಿಯ ಹಿಂದೆಯೇ ಕರ್ನಾಟಕದ ದಾಂಡಿಗ ಕೆ.ಎಲ್​. ರಾಹುಲ್​ ಕೂಡ ಔಟ್​ ಆದರು. ನಂತರ ಜತೆಗೂಡಿದ ರಿಷಬ್​ ಪಂತ್​ ಮತ್ತು ದಿನೇಶ್​ ಕಾರ್ತಿಕ್​ ನಿಧಾನವಾಗಿ ಇನ್ನಿಂಗ್ಸ್​ ಕಟ್ಟಲು ಯತ್ನಿಸಿದರಾದರೂ, ಜಿಮ್ಮಿ ನೀಶಮ್​ರ ಅದ್ಭುತ ಫೀಲ್ಡಿಂಗ್​ಗೆ ಕಾರ್ತಿಕ್​ ಬಲಿಯಾಗಬೇಕಾಯಿತು.

ತಂಡ ನಾಲ್ಕು ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜತೆಯಾದ ಹಾರ್ದಿಕ್​ ಪಾಂಡ್ಯ ಮತ್ತು ರಿಷಬ್​ ಪಂತ್​ ಉತ್ತಮವಾಗಿ ಕಂಡುಬಂದರೂ 32 ರನ್​ಗಳಿಸಿದ್ದಾಗ ಪಂತ್​ ಸ್ಯಾಂಟನರ್​ ಬೌಲಿಂಗ್​ನಲ್ಲಿ ಸಿಕ್ಸ್​ ಹೊಡೆಯಲು ಹೋಗಿ ವಿಕೆಟ್​ ಒಪ್ಪಿಸಿದರು. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಭಾರತದ ಅಭಿಮಾನಿಗಳು ನಿನ್ನೆಯಂತೆಯೇ ಮಳೆ ಬಂದು ಮ್ಯಾಚ್​ ಸಂಪೂರ್ಣ ರದ್ದಾಗಲಿ, ಆ ಮೂಲಕ ಭಾರತ ಪಾಯಿಂಟ್ಸ್​ ಪಟ್ಟಿ ಮತ್ತು ರನ್​ ರೇಟ್​ ಸರಾಸರಿಯಿಂದ ಫೈನಲ್​ಗೆ ಲಗ್ಗೆಯಿಡಲು ಎಂದು ಬೇಡಿಕೊಳ್ಳುತ್ತಿದ್ದಾರೆ.

 

ಅಭಿಮಾನಿಗಳ ಪ್ರಾರ್ಥನೆ ಏನೆಂದರೆ ಇಂದೂ ಮ್ಯಾಚ್​ ಸಂಪೂರ್ಣವಾಗಿ ನಡೆಯದಿದ್ದರೆ, ಐಸಿಸಿ ಕಾನೂನಿನ ಅನ್ವಯ ಪಾಯಿಂಟ್ಸ್​ ಪಟ್ಟಿಯಲ್ಲಿ ಮೇಲಿರುವ ಭಾರತ ಫೈನಲ್​ ಪ್ರವೇಶಿಸಲಿದೆ. ಅಂಕಪಟ್ಟಿಯಲ್ಲಿ 15 ಪಾಯಿಂಟ್ಸ್​ನೊಂದಿಗೆ ಭಾರತ ಮೊದಲ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್​ 11 ಅಂಕದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಆದರೆ ಈಗ ಅದೂ ಕೂಡ ಅಸಾಧ್ಯ ಎಂಬ ಹಂತಕ್ಕೆ ತಲುಪಿದೆ. ಏಕೆಂದರೆ ಭಾರತ ಈಗಾಗಲೇ 20 ಓವರ್​ಗಳನ್ನು ಆಡಿದೆ. ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ 20 ಓವರ್​ಗಳ ನಂತರ ಡಕ್​ವರ್ತ್​ ಲೂಯಿಸ್​ ಕಾರ್ಯ ಆರಂಭಿಸುತ್ತದೆ. ಜತೆಗೆ ಮ್ಯಾಂಚೆಸ್ಟರ್​ನ ಹವಾಮಾನ ವರದಿಯ ಪ್ರಕಾರ ಮುಂದಿನ ಕೆಲ ಗಂಟೆಗಳ ಕಾಲ ಮಳೆ ಬರುವುದಿಲ್ಲ. ಒಟ್ಟಿನಲ್ಲಿ ಲೀಗ್​ ಹಂತದಲ್ಲಿ ಪಂದ್ಯಗಳ ಮೇಲೆ ಪಂದ್ಯಗಳನ್ನು ಗೆದ್ದುಕೊಂಡು ಬಂದ ಭಾರತ, ಸೆಮಿಫೈನಲ್​ನಲ್ಲಿ ಒದ್ದಾಡುತ್ತಿದೆ.
First published: July 10, 2019, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading