ಬೆಂಗಳೂರು (ಮೇ. 25): ಲಂಡನ್ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲೇ ಭಾರತ ಹೀನಾಯ ಸೋಲು ಕಂಡಿದೆ. ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಿದ ಕಿವೀಸ್ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಕೇನ್ ಪಡೆ ಅಭ್ಯಾಸ ಪಂದ್ಯದಲ್ಲೇ ಗೆಲುವಿನ ಆರಂಭ ಪಡೆದಿದ್ದು, ಭಾರತ ಸೋಲಿನಿಂದ ಅಧ್ಯಾಯ ಆರಂಭಿಸಿದೆ.
ಭಾರತ ನೀಡಿದ್ದ 180 ರನ್ಗಳ ಸುಲಭ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭದಲ್ಲೇ ಮಾರ್ಟಿಕ್ ಗಪ್ಟಿಲ್(22) ಹಾಗೂ ಕಾಲಿನ್ ಮುನ್ರೊ(4) ವಿಕೆಟ್ ಕಳೆದುಕೊಂಡಿತಾದರು, ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ 3ನೇ ವಿಕೆಟ್ಗೆ ಭರ್ಜರಿ ಆಟವಾಡಿದರು. ಭಾರತೀಯ ಬೌಲರ್ಗಳನ್ನು ಕಾಡಿದ ಈ ಜೋಡಿ ತಲಾ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.
ತಂಡ ಗೆಲುವಿನ ಅಂಚಿನಲ್ಲಿರುವಾಗ ವಿಲಿಯಮ್ಸನ್ ಚಹಾಲ್ ಬೌಲಿಂಗ್ನಲ್ಲಿ ಔಟ್ ಆದರು. 87 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿ 67 ರನ್ಗೆ ಕೇನ್ ನಿರ್ಗಮಿಸಿದರು. ಇತ್ತ ಗೆಲುವಿಗೆ 1 ರನ್ ಬೇಕಿದ್ದಾಗ ಟೇಲರ್ 71 ರನ್ ಗಳಿಸಿ ವಿನ್ನಿಂಗ್ ಶಾಟ್ ಬಾರಿಸುವ ಮುನ್ನ ಬ್ಯಾಟ್ ಕೆಳಗಿಟ್ಟರು. ಅಂತಿಮವಾಗಿ ನ್ಯೂಜಿಲೆಂಡ್ 37.1 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕುವ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಭಾರತ ಪರ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಜಡೇಜಾ ಹಾಗೂ ಯಜುವೇಂದ್ರ ಚಹಾಲ್ ತಲಾ 1 ವಿಕೆಟ್ ಕಿತ್ತರು.
ಭಾರತ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲೇ ಕಳಪೆ ಪ್ರದರ್ಶನ ತೋರಿದ್ದು, ಮುಂದಿನ ಪಂದ್ಯದಲ್ಲಾದರು ತಪ್ಪುಗಳನ್ನು ಸರಿಪಡಿಸಿಕೊಳ್ಳ ಬೇಕಾಗಿದೆ. 4ನೇ ಕ್ರಮಾಂಕದ ಚಿಂತೆ ಮತ್ತಷ್ಟು ದುಪ್ಪಟ್ಟಾಗಿದ್ದು ಮೇ 29 ರಂದು ಆಡಲಿರುವ ಬಾಂಗ್ಲಾದೇಶ ವಿರುದ್ಧದ 2ನೇ ಅಭ್ಯಾಸ ಪಂದ್ಯದಲ್ಲಿ ಇದಕ್ಕೆಲ್ಲ ಉತ್ತರ ಹುಡುಕಬೇಕಿದೆ.
ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದರಂತೆ ಓಪನರ್ಗಳಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಆರಂಭದಲ್ಲೇ ಎಡವಿದರು. ಇಬ್ಬರೂ ತಲಾ 2 ರನ್ ಗಳಿಸಿ ಬೌಲ್ಟ್ ಎಸೆತದಲ್ಲಿ ಔಟ್ ಆದರು.
ತಂಡಕ್ಕೆ ಆಸರೆಯಾಗ ಬೇಕಿದ್ದ ನಾಯಕ ವಿರಾಟ್ ಕೊಹ್ಲಿ ಕೂಡ 18 ರನ್ಗೆ ಗ್ರ್ಯಾಂಡ್ಹೋಮ್ ಬೌಲಿಂಗ್ನಲ್ಲಿ ಬೌಲ್ಡ್ ಆಗಿದ್ದಾರೆ. 4ನೇ ಕ್ರಮಾಂಕದಲ್ಲಿ ಅಗ್ನಿ ಪರೀಕ್ಷೆಗೆ ಇಳಿದ ಕೆ ಎಲ್ ರಾಹುಲ್ ವಿಫಲರಾಗಿ 6 ರನ್ ಗಳಿಸಿರುವಾಗ ಬೌಲ್ಡ್ ಆದರು. ಈ ಸಂದರ್ಭ ಹಾರ್ದಿಕ್ ಪಾಂಡ್ಯ ಹಾಗೂ ಎಂ ಎಸ್ ಧೋನಿ ಒಂದಾಗಿ ಇನ್ನಿಂಗ್ಸ್ ಕಟ್ಟಲು ಹೊರಟರು.
ಇದನ್ನೂ ಓದಿ: ICC World Cup 2019 | ವಿಶ್ವಕಪ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ದೊಡ್ಡ ಆಘಾತ
ಹಾರ್ದಿಕ್ ಬಿರುಸಿನ ಆಟಕ್ಕೆ ಮುಂದಾದರೆ, ಧೋನಿ ನಿಧಾನಗರಿಯಲ್ಲಿ ರನ್ ಕಲೆಹಾಕಲು ಹೊರಟರು. ಚೆನ್ನಾಗಿಯೆ ಆಡುತ್ತಿದ್ದ ಹಾರ್ದಿಕ್ ನೀಶಮ್ ಬೌಲಿಂಗ್ನಲ್ಲಿ 30 ರನ್ ಗಳಿಸಿರುವಾಗ ಔಟ್ ಆಗಿ ಆಘಾತ ನೀಡಿದರು. ಸಿಕ್ಕ ಅವಕಾಶವನ್ನು ದಿನೇಶ್ ಕಾರ್ತಿಕ್(4) ಕೂಡ ಉಪಯೋಗಿಸಿಕೊಂಡಿಲ್ಲ. ಇತ್ತ ಧೋನಿ ಕೂಡ 42 ಎಸೆತಗಳಲ್ಲಿ 17 ರನ್ ಬಾರಿಸಿ ಬ್ಯಾಟ್ ಕೆಳಗಿಟ್ಟರು.
8 ವಿಕೆಟ್ ಕಳೆದುಕೊಂಡಿದ್ದು ಭಾರತಕ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ ಆಸರೆಯಾಗಿ ನಿಂತರು. ಬೊಂಬಾಟ್ ಆಟ ಪ್ರದರ್ಶಿಸಿದ ಜಡೇಜಾ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಜೊತೆಗೆ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಅರ್ಧಶತಕ ಬಾರಿಸಿದ ಬೆನ್ನಲ್ಲೆ ಕೆಟ್ಟ ಹೊಡೆತಕ್ಕೆ ಮಾರುಹೋಗಿ ಗಪ್ಟಿಲ್ ಹಿಡಿದ ಅದ್ಭುತ ಕ್ಯಾಚ್ಗೆ ಜಡೇಜಾ(54) ಬಲಿಯಾದರು.
ಅಂತಿಮವಾಗಿ ಭಾರತ 39.2 ಓವರ್ಗಳಲ್ಲಿ 179 ರನ್ಗೆ ಆಲೌಟ್ ಆಗಿದೆ. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 4 ವಿಕೆಟ್ ಕಿತ್ತರೆ, ಜೇಮ್ಸ್ ನೀಶಮ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಭಾರತ ಪರ ಹಾರ್ದಿಕ್ ಪಾಂಡ್ಯ 30 ಹಾಗೂ ಜಡೇಜಾ 53 ರನ್ ಗಳಿದ್ದೇ ಹೆಚ್ಚು.
ಇಂದಿನ ಪಂದ್ಯಕ್ಕೆ ಪ್ರಮುಖ ಅಲ್ರೌಂಡರ್ಗಳಾದ ವಿಜಯ್ ಶಂಕರ್ ಹಾಗೂ ಕೇದರ್ ಜಾಧವ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ನೆಟ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವ ವೇಳೆ ವೇಗಿ ಖಲೀಲ್ ಅಹ್ಮದ್ ಬೌಲಿಂಗ್ನಲ್ಲಿ ಶಂಕರ್ ಮೊಣ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಈ ಸಂದರ್ಭ ಅರ್ಧದಲ್ಲೇ ಅಭ್ಯಾಸವನ್ನು ನಿಲ್ಲಿಸಿ ಮೈದಾನ ತೊರೆದಿದ್ದಾರೆ. ಇತ್ತ ಜಾಧವ್ ಐಪಿಎಲ್ನಲ್ಲಿ ಗಾಯಗೊಂಡಿದ್ದರು. ವಿಶ್ವಕಪ್ನಲ್ಲಿ ಆಡುವುದು ಅನುಮಾನ ಎಲ್ಲಲಾಗಿತ್ತು. ಆದರೆ ವಿಶ್ವಕಪ್ಗೆ ಜಾಧವ್ ಫಿಟ್ ಆಗಿದ್ದಾರೆ ಎಂದು ಹೇಳಲಾಗಿದೆ ಆದರೂ ಇನ್ನಷ್ಟೆ ಚೇತರಿಸಿಕೊಳ್ಳುತ್ತಿದ್ದಾರೆ.