ಇದ್ಯಾವ ನ್ಯಾಯ...ಇದು ಆರಂಭಿಕ ಆಟಗಾರರಿಗೆ ಮಾಡಿದ ಅವಮಾನ: ಟೀಮ್ ಇಂಡಿಯಾ ನಡೆಗೆ ಕಪಿಲ್ ದೇವ್ ಕಿಡಿ

ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್, ಇದು ತಂಡದಲ್ಲಿರುವ ಇತರೆ ಆರಂಭಿಕ ಆಟಗಾರರಿಗೆ ಮಾಡಿದ ಅವಮಾನ ಎಂದಿದ್ದಾರೆ.

mayank-klrahul

mayank-klrahul

 • Share this:
  ಟೀಮ್ ಇಂಡಿಯಾ ಆರಂಭಿಕ ಆಟಗಾರ ಶುಭ್​ಮನ್ ಗಿಲ್ ಗಾಯಗೊಂಡಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ದದ ಟೆಸ್ಟ್​ ಸರಣಿಯ ಆರಂಭಿಕ ಪಂದ್ಯಗಳಲ್ಲಿ ಕಣಕ್ಕಿಳಿಯುವುದು ಅನುಮಾನ. ಇತ್ತ ಗಿಲ್ ಸ್ಥಾನದಲ್ಲಿ ಭಾರತದ ಪರ ಓಪನರ್ ಆಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಏಕೆಂದರೆ ತಂಡದಲ್ಲಿ ಅನುಭವಿ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ತಂಡದಲ್ಲಿದ್ದು, ಇವರಿಬ್ಬರಲ್ಲಿ ರೋಹಿತ್ ಶರ್ಮಾ ಜೊತೆ ಯಾರು ಕಣಕ್ಕಿಳಿಯಲ್ಲಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ. ಆದರೆ ಇದೀಗ ಶ್ರೀಲಂಕಾ ಪ್ರವಾಸದಲ್ಲಿರುವ ಪೃಥ್ವಿ ಶಾ ಅವರನ್ನು ಇಂಗ್ಲೆಂಡ್​ಗೆ ಕರೆಸಿಕೊಳ್ಳಲು ಟೀಮ್ ಇಂಡಿಯಾ ಬಯಸಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

  ಶುಭ್​ಮನ್ ಗಿಲ್ ಅವರ ಸ್ಥಾನಕ್ಕೆ ಲಂಕಾ ಸರಣಿಯಲ್ಲಿರುವ ಪೃಥ್ವಿ ಶಾ ಕರೆಸಿಕೊಳ್ಳುವಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಬಿಸಿಸಿಐಗೆ ಮನವಿ ಮಾಡಿದೆ ಎಂದು ವರದಿಯಾಗಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಹೊಸ ಚರ್ಚೆ ಕೂಡ ಶುರುವಾಗಿದೆ. ಈಗಾಗಲೇ ಇಂಗ್ಲೆಂಡ್​ನಲ್ಲಿರುವ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಇಬ್ಬರೂ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಈಗಿನ ತಂಡದಲ್ಲಿ ಗಿಲ್ ಇಲ್ಲದೇ ಹೋದರೂ ಆರಂಭಿಕ ಸ್ಥಾನಕ್ಕೆ ಆಟಗಾರರ ಕೊರತೆಯೇನೂ ಇಲ್ಲ. ಇದಾಗ್ಯೂ ಪೃಥ್ವಿ ಶಾ ಅವರನ್ನು ಕರೆಸಿಕೊಳ್ಳುವ ಅವಶ್ಯಕತೆಯೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

  ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್, ಇದು ತಂಡದಲ್ಲಿರುವ ಇತರೆ ಆರಂಭಿಕ ಆಟಗಾರರಿಗೆ ಮಾಡಿದ ಅವಮಾನ ಎಂದಿದ್ದಾರೆ. ಗಿಲ್ ಇಲ್ಲದೇ ಹೋದರೆ ರಾಹುಲ್ ಅಥವಾ ಮಯಾಂಕ್ ಗೆ ಅವಕಾಶ ನೀಡಬಹುದಿತ್ತು. ಇಬ್ಬರೂ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಅನುಭವ ಹೊಂದಿದ್ದಾರೆ. ಹಾಗಿದ್ದರೂ ಶ್ರೀಲಂಕಾ ಸರಣಿಯಲ್ಲಿರುವ ಪೃಥ್ವಿ ಶಾರನ್ನು ಕರೆಸಿಕೊಳ್ಳುವ ಅಗತ್ಯವೇನಿದೆ ಎಂಬ ಪ್ರಶ್ನೆಯನ್ನು ಕಪಿಲ್ ದೇವ್ ಮುಂದಿಟ್ಟಿದ್ದಾರೆ.

  ಒಟ್ಟಾರೆಯಾಗಿ ತಂಡದಲ್ಲಿ ಅನುಭವಿ ಆಟಗಾರರು ಅವಕಾಶಕ್ಕಾಗಿ ಕಾದು ಕುಳಿತಿದ್ದರೂ, ಶ್ರೀಲಂಕಾ ಪ್ರವಾಸದಲ್ಲಿರುವ ಪೃಥ್ವಿ ಶಾ ಅವರನ್ನು ಇಂಗ್ಲೆಂಡ್​ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಕರೆಸಿಕೊಂಡರೆ ಹೊಸ ವಿವಾದ ಸೃಷ್ಟಿಯಾಗುವುದಂತು ಸುಳ್ಳಲ್ಲ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:zahir
  First published: