ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. 18 ಸದಸ್ಯರನ್ನು ಒಳಗೊಂಡಿರುವ ಭಾರತ ತಂಡದಲ್ಲಿ ಈ ಬಾರಿ ಇಬ್ಬರು ಕನ್ನಡಿಗರು ಕಾಣಿಸಿಕೊಂಡಿದ್ದಾರೆ. ಅಲ್ಲದೆ ಮೂವರು ಆಟಗಾರರು ಇದೇ ಮೊದಲ ಬಾರಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದ ಸೂರ್ಯಕುಮಾರ್ ಯಾದವ್, ಏಕದಿನ ತಂಡದಲ್ಲೂ ಅವಕಾಶ ಪಡೆಯುವಲ್ಲಿ ಸಫಲರಾಗಿದ್ದಾರೆ. ಹಾಗೆಯೇ ಈ ಹಿಂದೆ ಚುಟುಕು ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಲ್ರೌಂಡರ್ ಕೃನಾಲ್ ಪಾಂಡ್ಯ ಕೂಡ ಈ ಬಾರಿ ಒನ್ಡೇ ಟೀಮ್ನಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಕರ್ನಾಟಕದ ಯುವ ವೇಗಿ ಪ್ರಸಿದ್ಧ್ ಕೃಷ್ಣ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
ಇದರ ಹೊರತಾಗಿ ಆಸ್ಟ್ರೇಲಿಯಾ ಸರಣಿ ವೇಳೆ ಭಾರತ ತಂಡದಲ್ಲಿದ್ದ 7 ಆಟಗಾರರು ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಹೌದು, ಕಳೆದ ವರ್ಷಾಂತ್ಯದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದ ವೇಳೆ ತಂಡದಲ್ಲಿದ್ದ ಸಂಜು ಸ್ಯಾಮ್ಸನ್ ಮತ್ತು ಮನೀಶ್ ಪಾಂಡೆ ಅವರನ್ನು ಈ ಬಾರಿ ಕೈ ಬಿಡಲಾಗಿದೆ. ಹಾಗೆಯೇ ಮಾಯಂಕ್ ಅಗರ್ವಾಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಮತ್ತು ರವೀಂದ್ರ ಜಡೇಜಾ ಈ ಬಾರಿ ತಂಡಕ್ಕೆ ಆಯ್ಕೆಯಾಗಿಲ್ಲ.
ಇನ್ನು ಜಸ್ಪ್ರೀತ್ ಬುಮ್ರಾ ವೈಯುಕ್ತಿಕ ಕಾರಣಗಳಿಂದ ಹೊರಗುಳಿದರೆ, ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಗಾಯದ ಕಾರಣ ಆಯ್ಕೆಯಾಗಿಲ್ಲ. ಇನ್ನು ಮಾಯಾಂಕ್ ಅಗರ್ವಾಲ್ ಆಸ್ಟ್ರೇಲಿಯಾ ವಿರುದ್ದದ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದರು. ಹಾಗೆಯೇ ವೇಗದ ಬೌಲರ್ ನವದೀಪ್ ಸೈನಿ ಬೌಲಿಂಗ್‌ನಲ್ಲಿ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗಿರಲಿಲ್ಲ.
ಇದಲ್ಲದೆ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾಗಿಯಾಗಿರಲಿಲ್ಲ. ಇದೀಗ ಅವರು ಮತ್ತೆ ಏಕದಿನ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಮಾಯಾಂಕ್ ಸ್ಥಾನ ಕಳೆದುಕೊಂಡಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ ಅವಕಾಶ ಪಡೆಯುವುದರೊಂದಿಗೆ ಮನೀಷ್ ಪಾಂಡೆ ಅವಕಾಶ ಕೈತಪ್ಪಿದೆ. ಜಡೇಜಾ ಸ್ಥಾನದಲ್ಲಿ ಕೃನಾಲ್ ಪಾಂಡ್ಯ ಅವಕಾಶ ಪಡೆದಿದ್ದಾರೆ. ಹಾಗೆಯೇ ಜಸ್ಪ್ರೀತ್ ಬುಮ್ರಾ ಸ್ಥಾನದಲ್ಲಿ ಪ್ರಸಿದ್ಧ್ ಕೃಷ್ಣ ಅವಕಾಶ ಪಡೆದರೆ, ಶಮಿ ಅವರ ಜಾಗಕ್ಕೆ ಭುವನೇಶ್ವರ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಒಂದು ಸರಣಿ ಬಳಿಕ ಟೀಮ್ ಇಂಡಿಯಾ 7 ಬದಲಾವಣೆಗಳೊಂದಿಗೆ ಮತ್ತೊಂದು ಸರಣಿಗೆ ಸಜ್ಜಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ