ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಜಯದ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಜ್ಜಾಗಿ ನಿಂತಿದೆ. ಫೆಬ್ರವರಿ 5 ರಿಂದ ಚೆನ್ನೈನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ ಕನಿಷ್ಠ 2 ಪಂದ್ಯಗಳನ್ನು ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪ್ರವೇಶಿಸಲಿದೆ. ಹಾಗೆಯೇ 2 ಪಂದ್ಯಗಳಲ್ಲಿ ಸೋಲಬಾರದು. ಅಂದರೆ ಇಂಗ್ಲೆಂಡ್ ವಿರುದ್ಧ 4-0, ಅಥವಾ 3-0, ಅಥವಾ 3-1, ಅಥವಾ 2-0, ಅಥವಾ 2-1 ಫಲಿತಾಂಶದೊಂದಿಗೆ ಸರಣಿ ಜಯಿಸಿದರೆ ಮಾತ್ರ ಅರ್ಹತೆ ಪಡೆಯಬಹುದು. ಹೀಗಾಗಿ ಈ ಸರಣಿ ಮಹತ್ವ ಪಡೆದುಕೊಂಡಿದೆ.
ಇನ್ನೊಂದೆಡೆ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಯುವ ಪಡೆ ಟೀಮ್ ಇಂಡಿಯಾದಲ್ಲಿದೆ. ಹಾಗೆಯೇ ಆಸೀಸ್ ಪ್ರವಾಸದಿಂದ ಹೊರಗುಳಿದಿದ್ದ ಆಟಗಾರರು ಈಗ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ತಂಡದ ಆಯ್ಕೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ಅದರಲ್ಲೂ ಮೊದಲ ಟೆಸ್ಟ್ಗೆ 2ನೇ ವೇಗದ ಬೌಲರ್ ಆಗಿ ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲ ಏರ್ಪಟ್ಟಿದೆ. ಒಂದೆಡೆ ಹಿರಿಯ ಅನುಭವಿ ಬೌಲರ್ ಇಶಾಂತ್ ಶರ್ಮಾ ತಂಡಕ್ಕೆ ಮರಳಿದರೆ, ಇನ್ನೊಂದೆಡೆ ಆಸ್ಟ್ರೇಲಿಯಾ ವಿರುದ್ದ 3 ಟೆಸ್ಟ್ ಪಂದ್ಯಗಳಿಂದ 13 ವಿಕೆಟ್ ಉರುಳಿಸಿ ಮಿಂಚಿದ್ದ ಮೊಹಮ್ಮದ್ ಸಿರಾಜ್ ಪ್ರಬಲ ಸ್ಪರ್ಧಾಳುವಾಗಿ ಕಾಣಿಸಿಕೊಂಡಿದ್ದಾರೆ.
ಇಶಾಂತ್ ಶರ್ಮಾ ಕಳೆದ 1 ವರ್ಷದಿಂದ ಟೆಸ್ಟ್ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೀಗ 32ರ ಹರೆಯದ ವೇಗಿಯ ಫಾರ್ಮ್ ಬಗ್ಗೆ ಕೂಡ ಪ್ರಶ್ನೆ ಎದ್ದಿದೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ಜೊತೆ ಸಿರಾಜ್ ಉತ್ತಮ ಆಯ್ಕೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಪಿಚ್ ಸ್ಪಿನ್ ಸ್ನೇಹಿಯಾಗಿರುವ ಕಾರಣ ಮೂವರು ಸ್ಪಿನ್ನರ್ಗಳನ್ನು ಕಣಕ್ಕಿಳಿಸುವುದು ಬಹುತೇಕ ಖಚಿತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ