news18-kannada Updated:February 22, 2021, 6:24 PM IST
Pink Ball Test
ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್ನ ಮೊಟೆರಾ ಮೈದಾನವು ಪಿಂಕ್ ಬಾಲ್ ಟೆಸ್ಟ್ಗೆ ಸಿದ್ಧವಾಗಿದೆ. ಫೆಬ್ರವರಿ 24 ರಂದು ಭಾರತ ಮತ್ತು ಇಂಗ್ಲೆಂಡ್ ಚೊಚ್ಚಲ ಬಾರಿ ಪಿಂಕ್ ಬಾಲ್ ಟೆಸ್ಟ್ ಆಡಲಿದೆ. ಹಾಗೆಯೇ ಭಾರತಕ್ಕೆ ಇದು ತವರಿನಲ್ಲಿ 2ನೇ ಪಿಂಕ್ ಬಾಲ್ ಟೆಸ್ಟ್. ಈ ಹಿಂದೆ ಟೀಮ್ ಇಂಡಿಯಾ ಕೊಲ್ಕತ್ತಾ ಈಡನ್ ಗಾರ್ಡನ್ ಮೈದಾನದಲ್ಲಿ ಬಾಂಗ್ಲಾದೇಶದ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ಆಡಿತ್ತು. ಇದೀಗ 2ನೇ ಬಾರಿ ಭಾರತದಲ್ಲಿ ಪಿಂಕ್ ಬಾಲ್ ಟೆಸ್ಟ್ ನಡೆಯುತ್ತಿದೆ.
ಈ ಪಂದ್ಯವು ಡೇ ನೈಟ್ನಲ್ಲಿ ನಡೆಯಲಿದ್ದು, ಸಾಂಪ್ರದಾಯಿಕ ಕೆಂಪು ಚೆಂಡಿನ ಬದಲಾಗಿ ಗುಲಾಬಿ ಬಣ್ಣದ ಪಿಂಕ್ ಬಾಲ್ ಅನ್ನು ಬಳಕೆ ಮಾಡಲಾಗುತ್ತದೆ.
ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಕೆಂಪು ಬಣ್ಣದ ಬಾಲ್ಗಳನ್ನು ಬಳಸಲಾಗುತ್ತದೆ. ಹಾಗೆಯೇ ಒನ್ಡೇ, ಟಿ20 ಕ್ರಿಕೆಟ್ ನಲ್ಲಿ ಬಿಳಿ ಬಣ್ಣದ ಚೆಂಡನ್ನು ಬಳಸುತ್ತಾರೆ. ಇದಕ್ಕೆ ಮುಖ್ಯ ಕಾರಣ, ಟೆಸ್ಟ್ ಕ್ರಿಕೆಟ್ ನಲ್ಲಿ ಆಟಗಾರರು ಬಿಳಿ ಬಣ್ಣದ ಸಮವಸ್ತ್ರ ಧರಿಸಿರುತ್ತಾರೆ. ಈ ವೇಳೆ ಬಿಳಿ ಬಣ್ಣದ ಚೆಂಡು ಬಳಸಿದರೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಈ ಕಾರಣಕ್ಕಾಗಿ ಕೆಂಪು ಬಣ್ಣದ ಚೆಂಡನ್ನು ಬಳಸಲಾಗುತ್ತದೆ. ಹಾಗೆಯೇ ನಿಗದಿತ ಓವರ್ ಪಂದ್ಯದ ವೇಳೆ ಆಟಗಾರರು ಬಣ್ಣದ ಸಮವಸ್ತ್ರ ಧರಿಸುತ್ತಾರೆ. ಹೀಗಾಗಿ ಬಿಳಿ ಚೆಂಡು ಬಳಸಲಾಗುತ್ತದೆ.
ಇನ್ನು ಹೊನಲು ಬೆಳಕಿನಲ್ಲಿ ರೆಡ್ ಬಾಲ್ ಅನ್ನು ವೀಕ್ಷಿಸುವುದು ಆಟಗಾರರಿಗೆ ಕಷ್ಟವಾಗುವುದರಿಂದ ಪಿಂಕ್ ಬಾಲ್ ಅನ್ನು ಪರಿಚಯಿಸಲಾಗಿದೆ. ಇದೇ ಕಾರಣದಿಂದ ಡೇ ನೈಟ್ ಟೆಸ್ಟ್ನಲ್ಲಿ ಪಿಂಕ್ ಬಾಲ್ ಬಳಸಲಾಗುತ್ತದೆ.
ಕೆಂಪು, ಬಿಳಿ ಹಾಗೂ ಗುಲಾಬಿ ಬಣ್ಣದ ಚೆಂಡು ಸಿದ್ಧ ಪಡಿಸುವ ವಿಧಾನ ಒಂದೇ ರೀತಿಯದ್ದಾದರೂ, ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಕೆಲವು ಕ್ರಮದಲ್ಲಿ ಭಿನ್ನತೆ ಹೊಂದಿವೆ. ಬಿಳಿ ಬಣ್ಣದ ಚೆಂಡುಗಳಿಗಿಂತ ಪಿಂಕ್ಬಾಲ್ಗಳು ನಿಧಾನಗತಿ ಹೊಂದಿರುತ್ತವೆ. ಆದರೆ, ರಾತ್ರಿಯ ವೇಳೆ ಕೆಂಪು ಚೆಂಡಿಗಿಂತ ಹೆಚ್ಚಿನ ಸ್ಪಷ್ಟತೆ ಹೊಂದಿವೆ.
ಹಾಗೆಯೇ ಚೆಂಡು ವಾಟರ್ಫ್ರೂಫ್ ಆಗಲು, ಕೆಂಪು ಚೆಂಡುಗಳ ಮೇಲೆ ಹೊಳಪು ಬರುವಂಥ ಗ್ರೀಸ್ನ ಪದರವನ್ನು ಹಾಕಲಾಗುತ್ತದೆ. ಆದರೆ, ಪಿಂಕ್ ಬಾಲ್ಗೆ ಇಂಥ ಯಾವುದೇ ಗ್ರೀಸ್ಗಳನ್ನು ಬಳಸಲಾಗುವುದಿಲ್ಲ. ಯಾಕೆಂದರೆ ಪಿಂಕ್ ಬಾಲ್ ಹೊಳಪು ಕಳೆದುಕೊಂಡರೆ ಬಳಿಕ ಸ್ಪಷ್ಟವಾಗಿ ಕಾಣುವುದಿಲ್ಲ.
ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೂರು ಬಗೆಯ ಚೆಂಡುಗಳನ್ನು ಬಳಸಲಾಗುತ್ತಿದೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಡ್ಸೂಕ್ಸ್ ಬಾಲ್ ಗಳನ್ನು ಬಳಸಿದರೆ, ಆಸ್ಟ್ರೇಲಿಯಾ , ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕುಕಬೂರಾ ಚೆಂಡನ್ನು ಬಳಸುತ್ತಾರೆ. ಹಾಗೆಯೇ ಭಾರತ ಮತ್ತು ಏಷ್ಯಾದ ದೇಶಗಳು ಎಸ್ಜಿ ಬಾಲ್ನ್ನು ಬಳಸುತ್ತಾರೆ.ಭಾರತದಲ್ಲಿ ಟೆಸ್ಟ್ ಕ್ರಿಕೆಟ್ಗೆ ಎಸ್ಜಿ ಕಂಪನಿಯ ಚೆಂಡುಗಳನ್ನು ಉಪಯೋಗಿಸಲಾಗುತ್ತದೆ. ಪಿಂಕ್ ಬಾಲ್ ಅನ್ನು ಕೂಡ ಎಸ್ಜಿ ಕಂಪೆನಿಯೇ ನಿರ್ಮಿಸಲಿದೆ. ಇನ್ನು ಪಿಂಕ್ ಬಾಲ್ ಆರಂಭದಲ್ಲಿ ಕೆಂಪು ಚೆಂಡಿಗಿಂತ ಹೆಚ್ಚು ಸ್ವಿಂಗ್ ಆಗುತ್ತವೆ. ಹಾಗೆಯೇ ಕೆಂಪು ಚೆಂಡಿಗಿಂತ ಬೇಗ ಪಿಂಕ್ ಬಾಲ್ ಸ್ವಿಂಗ್ಅನ್ನು ಕಳೆದುಕೊಳ್ಳುತ್ತದೆ.
ಪಿಂಕ್ ಚೆಂಡಿನ ಸೀಮ್ ಅದ್ಭುತವಾಗಿದ್ದರೂ, ಚೆಂಡು ಮೃದುವಾದ ಬಳಿಕ ಸ್ವಿಂಗ್ ಕೂಡ ಮಾಯವಾಗುತ್ತದೆ. ಇನ್ನು ಈವರೆಗೆ ನಡೆದ ಪಿಂಕ್ಬಾಲ್ ಟೆಸ್ಟ್ನಲ್ಲಿ ಬೌಲರ್ಗಳು ಹೆಚ್ಚು ಯಶಸ್ಸು ಸಾಧಿಸಿದ್ದು ಸಂಜೆಯ ಹೊತ್ತಿಗೆ. ಇದಕ್ಕಾಗಿ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ಪಿಂಕ್ಬಾಲ್ನಲ್ಲಿ ಈ ಹೊತ್ತಿಗೆ ಹೆಚ್ಚು ಅಭ್ಯಾಸ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಟೆಸ್ಟ್ ಕ್ರಿಕೆಟ್ನ ಗತ ವೈಭವ ಮರಳಿ ತರುವ ಪ್ರಯತ್ನಗಳಲ್ಲಿ ಒಂದಾಗಿರುವ ಡೇ ನೈಟ್ ಟೆಸ್ಟ್ಗೆ ಭಾರತ ಮತ್ತೆ ಸಜ್ಜಾಗಿದೆ. ಬಲಿಷ್ಠ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕುವ ಮೂಲಕ 3ನೇ ಟೆಸ್ಟ್ ಗೆಲ್ಲುವ ಸಾಧಿಸುವ ಮೂಲಕ, ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಗೆಲುವು ದಾಖಲಿಸುವ ಇರಾದೆಯಲ್ಲಿದೆ ಟೀಮ್ ಇಂಡಿಯಾ.
Published by:
zahir
First published:
February 22, 2021, 6:24 PM IST