IND vs ENG: ರೋಹಿತ್ ಶತಕದ ಹೋರಾಟ ವ್ಯರ್ಥ; ಟೂರ್ನಿಯಲ್ಲಿ ಮೊದಲ ಸೋಲುಂಡ ಭಾರತ

India Vs England Live Score: ಟೀಂ ಇಂಡಿಯಾ ಇಂದಿನ ಪಂದ್ಯ ಗೆದ್ದರೆ ಸೆಮಿ ಫೈನಲ್‌ಗೆ ಲಗ್ಗೆಯಿಡಲಿದೆ. ಆದರೆ ಇಂಗ್ಲೆಂಡ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

  • News18
  • Last Updated :
  • Share this:
ಬೆಂಗಳೂರು (ಜೂ. 30): ಬರ್ಮಿಂಗ್​ ಹ್ಯಾಮ್​​ನಲ್ಲಿ ನಡೆದ ವಿಶ್ವಕಪ್​ನ 38ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲುಕಂಡಿದೆ. ರೋಹಿತ್ ಶರ್ಮಾರ ಶತಕದ ಹೊರತಾಗಿಯು ಬೌಲರ್​ಗಳ ಸಂಘಟಿತ ಹೋರಾಟದ ನೆರವಿನಿಂದ ಇಂಗ್ಲೆಂಡ್ 31 ರನ್​ಗಳ ಗೆಲುವು ಸಾಧಿಸಿ ಸೆಮೀಸ್ ಹಾದಿಯನ್ನು ಜೀವಂತವಾಗಿರಿಸಿದೆ. ಇತ್ತ ಟೀಂ ಇಂಡಿಯಾ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದೆ.

ಜಾನಿ ಬೈರ್ಸ್ಟೋರ ಆಕರ್ಷಕ ಶತಕ, ಬೆನ್ ಸ್ಟೋಕ್ಸ್ಹಾಗೂ ಜೇಸನ್ ರಾಯ್​​ ಅರ್ಧಶತಕದ ನೆರವಿನಿಂದ ಆಂಗ್ಲರು ಭಾರತಕ್ಕೆ ಗೆಲ್ಲಲು 338 ರನ್ಗಳ ಬೃಹತ್ ಟಾರ್ಗೆಟ್ ನೀಡಿತು

ಈ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಕ್ರಿಸ್ ವೋಕ್ಸ್​ ಬೌಲಿಂಗ್​ನಲ್ಲಿ ಕೆ ಎಲ್ ರಾಹುಲ್ 9 ಎಸೆತಗಳಲ್ಲಿ ಶೂನ್ಯಕ್ಕೆ ಔಟ್ ಆದರು. ಬಳಿಕ ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ಎಚ್ಚರಿಕೆಯ ಇನ್ನಿಂಗ್ಸ್​ ಕಟ್ಟಿದರು.

ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಶತಕದ ಜೊತೆಯಾಟ ಆಡಿತು. ಜೊತೆಗೆ ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ, ಚೆನ್ನಾಗಿಯೆ ಆಡುತ್ತಿದ್ದ ಕೊಹ್ಲಿ ಪ್ಲಕೆಂಟ್ ಬೌಲಿಂಗ್​ನಲ್ಲಿ ದಿಢೀರ್ ಔಟ್ ಆಗಿದ್ದು ತಂಡಕ್ಕೆ ಹೊಡೆತ ಬಿದ್ದಂತಾಯಿತು. ಈ ಜೋಡಿಯ 138 ರನ್​ಗಳ ಅಮೋಘ ಜೊತೆಯಾಟಕ್ಕೆ ಬ್ರೇಕ್ ಬಿತ್ತು. 76 ಎಸೆತಗಳಲ್ಲಿ 7 ಬೌಂಡರಿಯೊಂದಿಗೆ 66 ರನ್ ಗಳಿಸಿ ಕೊಹ್ಲಿ ನಿರ್ಗಮಿಸಿದರು.

ಬಳಿಕ ರೋಹಿತ್ ಜೊತೆಯಾದ ರಿಷಭ್ ಪಂತ್ ಬಿರುಸಿನ ಆಟಕ್ಕೆ ಮುಂದಾದರು. ಅದರಂತೆ ರೋಹಿತ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಆದರೆ ಶತಕದ ಬೆನ್ನಲ್ಲೆ ರೋಹಿತ್ ಔಟ್ ಆಗಿದ್ದು, ತಂಡ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು. 109 ಎಸೆತಗಳಲ್ಲಿ 15 ಬೌಂಡರಿಯೊಂದಿಗೆ ರೋಹಿತ್ 102 ರನ್ ಗಳಿಸಿ ಔಟ್ ಆದರು. ಇದಾದ ಸ್ವಲ್ಪದರಲ್ಲೇ ಚೊಚ್ಚಲ ವಿಶ್ವಕಪ್ ಆಡಿದ ಪಂತ್ ಒಂದಿಷ್ಟು ರನ್ ಕಲೆಹಾಕಿ 29 ಎಸೆತಗಳಲ್ಲಿ 33 ರನ್ ಗಳಿಸಿ ಬ್ಯಾಟ್ ಕೆಳಗಿಟ್ಟರು.

ಬಳಿಕ ಒಂದಾದ ಹಾರ್ದಿಕ್ ಪಾಂಡ್ಯ ಹಾಗೂ ಎಂ ಎಸ್ ಧೋನಿ ತಂಡದ ರನ್ ಗತಿಯನ್ನು ಏರಿಸಲು ಹರಸಾಹಸ ಪಟ್ಟರು. ಆದರೆ, ಆಂಗ್ಲ ಬೌಲರ್​ಗಳ ಸಂಘಟಿತ ಹೋರಾಟ ಹಾಗೂ ಅತ್ಯುತ್ತಮ ಕ್ಷೇತ್ರ ರಕ್ಷಣೆಯಿಂದ ರನ್ ಕಲೆಹಾಕಲು ಪರದಾಡಿದರು. ಈ ಮಧ್ಯೆ ಹಾರ್ದಿಕ್ 33 ಎಸೆತಗಳಲ್ಲಿ 45 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ಕೊನೆಯಲ್ಲಿ ಧೋನಿ ಹಾಗೂ ಕೇದರ್ ಜಾಧವ್ ಗೆಲುವಿಗಾಗಿ ಹೋರಾಟ ನಡೆಸಿದರಾದರು ಅದು ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಭಾರತ 50 ಓವರ್​ನಲ್ಲಿ 5 ವಿಕೆಟ್ ಕಳೆದುಕೊಂಡು 306 ರನ್ ಕಲೆಹಾಕಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು. ಧೋನಿ 31 ಎಸೆತಗಳಲ್ಲಿ ಅಜೇಯ 42 ರನ್ ಬಾರಿಸಿದರು. ಇಂಗ್ಲೆಂಡ್ ಪರ ಲ್ಯಾಮ್ ಪ್ಲಂಕೆಟ್ 3 ವಿಕೆಟ್ ಕಿತ್ತರೆ, ಕ್ರಿಸ್ ವೋಕ್ಸ್​ 2 ವಿಕೆಟ್ ಪಡೆದರು.

31 ರನ್​ಗಳ ಜಯದೊಂದಿಗೆ ಇಂಗ್ಲೆಂಡ್ 10 ಅಂಕ ಸಂಪಾದಿಸಿ 4ನೇ ಸ್ಥಾನಕ್ಕೇರಿದೆ. ಇತ್ತ ಭಾರತ 11 ಅಂಕದೊಂದಿಗೆ 2ನೇ ಸ್ಥಾನದಲ್ಲೇ ಇದೆ. ಶತಕ ಗಳಿಸಿ ಮಿಂಚಿದ ಜಾನಿ ಬೈರ್​ಸ್ಟೋ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಇದಕ್ಕೂ ಮೊದಲು ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

ಅದರಂತೆ ಓಪನರ್​ಗಳಾಗಿ ಕಣಕ್ಕಿಳಿದ ಜೇಸನ್ ರಾಯ್ ಹಾಗೂ ಜಾನಿ ಬೈರ್​ಸ್ಟೋ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಟೀಂ ಇಂಡಿಯಾ ಬೌಲರ್​ಗಳ ಬೆವರಿಳಿಸಿದ ಈ ಜೋಡಿ ಶತಕದ ಜೊತೆಯಾಟ ಆಡಿತು. ಜೊತೆಗೆ ಇಬ್ಬರೂ ಅರ್ಧಶತಕ ಪೂರೈಸಿದರು. ಇವರಿಬ್ಬರ ಜೊತೆಯಾಟಕ್ಕೆ ಬ್ರೇಕ್ ಹಾಕಲು ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ.

ಆದರೆ, 23ನೇ ಓವರ್​ನ ಕುಲ್ದೀಪ್​ರ ಮೊದಲ ಎಸೆತದಲ್ಲೇ ಚೆಂಡನ್ನು ಸಿಕ್ಸ್​ಗೆ ಅಟ್ಟಲು ಹೋದ ಜೇಸನ್ ರಾಯ್ ಜಡೇಜಾ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾಗಬೇಕಾಯಿತು. ಈ ಮೂಲಕ ರಾಯ್-ಬೈರ್​ಸ್ಟೋ 160 ರನ್​ಗಳ ಅಮೋಘ ಜೊತೆಯಾಟಕ್ಕೆ ಬ್ರೇಕ್ ಬಿತ್ತು. 57 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್​ನೊಂದಿಗೆ 66 ರನ್ ಬಾರಿಸಿ ರಾಯ್ ಪೆವಿಲಿಯನ್ ಸೇರಿಕೊಂಡರು.

ಬಳಿಕ ಬೈರ್​ಸ್ಟೋ ಜೊತೆಯಾದ ಜೋ ರೂಟ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಈ ಮಧ್ಯೆ ಜಾನಿ ಬೈರ್​ಸ್ಟೋ 90 ಎಸೆತಗಳಲ್ಲಿ ಎಂಟನೇ ಶತಕ ಪೂರೈಸಿದರು. ಆದರೆ ಶತಕ ಸಿಡಿಸಿ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದ ಬೈರ್​ಸ್ಟೋ 111 ರನ್ ಚಚ್ಚಿ ಬ್ಯಾಟ್ ಕೆಳಗಿಟ್ಟರು. ಇವರ ಖಾತೆಯಿಂದ 10 ಬೌಂಡರಿ ಹಾಗೂ 6 ಅಮೋಘ ಸಿಕ್ಸ್​​ಗಳು ಮೂಡಿಬಂತು.

ಬೈರ್​ಸ್ಟೋ ಔಟ್ ಆದ ಬೆನ್ನಲ್ಲೆ ಕ್ರೀಸ್​ಗೆ ಬಂದ ನಾಯಕ ಇಯಾನ್ ಮಾರ್ಗನ್ ಈ ಬಾರಿ ಅಬ್ಬರಿಸದೆ ಶಮಿ ಎಸೆದ ಶಾರ್ಟ್​ ಬಾಲ್​ಗೆ ಕೇವಲ 1 ರನ್​ ಗಳಿಸಿ ನಿರ್ಗಮಿಸಿದರು. ಜೋ ರೂಟ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿ 54 ಎಸೆತಗಳಲ್ಲಿ 44 ರನ್​ಗಳ ಕಾಣಿಕೆ ನೀಡಿದರು.

ಕೊನೆ ಹಂತದಲ್ಲಿ ಅಬ್ಬರಿಸಿದ ಬೆನ್ ಸ್ಟೋಕ್ಸ್​ ತಂಡದ ಮೊತ್ತವನ್ನು 300ರ ಗಡಿ ದಾಟಿಸಿ ಭಾರತಕ್ಕೆ ಬೃಹತ್ ಟಾರ್ಗೆಟ್ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ಇಂಗ್ಲೆಂಡ್ 50 ಓವರ್​ಗೆ 7 ವಿಕೆಟ್ ಕಳೆದುಕೊಂಡು 337 ರನ್ ಕಲೆಹಾಕಿತು. ಸ್ಟೋಕ್ಸ್​ 54 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ 79 ರನ್ ಚಚ್ಚಿ ಕೊನೆಯ ಓವರ್​ನಲ್ಲಿ ಔಟ್ ಆದರು. ಭಾರತ ಪರ ಮೊಹಮ್ಮದ್ ಶಮಿ 5 ವಿಕೆಟ್ ಕಿತ್ತರೆ, ಬುಮ್ರಾ ಹಾಗೂ ಕುಲ್ದೀಪ್ ತಲಾ 1 ವಿಕೆಟ್ ಪಡೆದರು.

 
First published: